ಕರ್ನಾಟಕದ ನಿರ್ಗಮಿತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಬಳಿಕ ಇದೀಗ ಕುಟುಂಬ ಸದಸ್ಯರ ಜತೆ ಹೋಟೆಲ್ಗೆ ತೆರಳಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಕುಟುಂಬದ ಸದಸ್ಯರು ಕೂಡ ಬೆಂಗಳೂರಿಗೆ ಆಗಮಿಸಿ ಜೊತೆಯಾಗಿದ್ದರು. ಇದೀಗ ಕುಟುಂಬದವರೆಲ್ಲರೂ ಹೊಟೇಲ್ಗೆ ತೆರಳಿದ್ದಾರೆ. ಹೀಗಾಗಿ ಸಿಎಂ ನಿವಾಸದಲ್ಲಿ ಇದ್ದ ಎಲ್ಲಾ ಮಾಜಿ ಸಚಿವರು, ಶಾಸಕರು ತೆರಳಿದ್ದಾರೆ.
ತಮ್ಮ ವಿದೇಶ ಪ್ರಯಾಣವನ್ನು ಮೊಟಕುಗೊಳಿಸಿ ಶಾಸಕ ಶ್ರೀರಾಮುಲು ಬೆಂಗಳೂರಿಗೆ ಬಂದಿಳಿದಿದ್ದಾರೆ. ಮಾಲೆ ದೇಶದ ಪ್ರವಾಸದಲ್ಲಿದ್ದ ಅವರು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಸಿಎಂ ಆಯ್ಕೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ಪಕ್ಷದ ಎಲ್ಲಾ ಹಿರಿಯರು ಕುಳಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಉತ್ತರ ಪ್ರದೇಶ ರಾಜ್ಯದ ಸಚಿವ ನಂದಗೋಪಾಲ್ ಗುಪ್ತಾ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಸೋಮವಾರ ಬೆಂಗಳೂರಿಗೆ ಬಂದಿದ್ದಾರೆ.
ಬೆಂಗಳೂರು: ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ಹಲವು ನಾಯಕರು ಸೋಮವಾರ ಸಂಜೆ ಭೇಟಿ ನೀಡಿದರು. ಹಿರಿಯ ನಾಯಕರಾದ ಉಮೇಶ್ ಕತ್ತಿ, ಜಗದೀಶ್ ಶೆಟ್ಟರ್, ಎಂ.ಪಿ.ರೇಣುಕಾಚಾರ್ಯ, ಶಂಕರ್ ಪಾಟೀಲ್ ಮುನೇನಕೊಪ್ಪ, ಹನುಮಂತ ನಿರಾಣಿ, ಆರ್.ಅಶೋಕ್, ಬಿ.ಸಿ.ಪಾಟೀಲ್, ಬಾಲಚಂದ್ರ ಜಾರಕಿಹೊಳಿ, ಪ್ರೀತಂ ಗೌಡ, ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರನ್ನು ಭೇಟಿಯಾದರು.
ದೆಹಲಿಯಿಂದ ಬೆಂಗಳೂರಿಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಗಮಿಸಲಿದ್ದಾರೆ. ಸಿಎಂ ಹುದ್ದೆ ರೇಸ್‌ನಲ್ಲಿ ಬಿ.ಎಲ್. ಸಂತೋಷ್ ಹೆಸರು ಇರುವ ಹಿನ್ನೆಲೆಯಲ್ಲಿ ಅವರ ಭೇಟಿ ಕುತೂಹಲ ಹುಟ್ಟಿಸಿದೆ.
ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಮತ್ತು ಸಚಿವರನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಾಸಕ ಅಂಗಾರ ಹೇಳಿದರು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತು ಸುಳ್ಯ ಶಾಸಕ ಅಂಗಾರ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದರು.
ಬ್ರಾಹ್ಮಣ ಸಮುದಾಯದವರು ಸಿಎಂ ಆಗಿ ಆಯ್ಕೆಯಾದರೆ ಎಸ್ಟಿ ಸಮುದಾಯದವರು ಉಪ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಹಾಗಾದಲ್ಲಿ ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರಿಗೂ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ.
ಬ್ರಾಹ್ಮಣ ಸಮುದಾಯದ ನಾಯಕರನ್ನು ಸಿಎಂ ಮಾಡುವತ್ತ ಬಿಜೆಪಿ ಹೈಕಮಾಂಡ್ ಒಲವು?#KarnatakaPolitics #BSYediyurappa #BJP #Karnataka
https://t.co/RPmRldzElW— TV9 Kannada (@tv9kannada) July 26, 2021
ಅರುಣ್ ಸಿಂಗ್ ರಾಜ್ಯ ಭೇಟಿ, ಅಭಿಪ್ರಾಯ ಸಂಗ್ರಹವೂ ನಾಯಕತ್ವದ ಬದಲಾವಣೆ ಭಾಗವೇ ಆಗಿತ್ತು ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.
ಕೊನೆಗೂ ಯಡಿಯೂರಪ್ಪ ಕೆಳಗಿಳಿಸುವಲ್ಲಿ ಯಶಸ್ಸು ಸಾಧಿಸಿದ ವಿರೋಧಿ ಬಣ; ಸ್ವಾತಂತ್ರ್ಯ ದಿನಾಚರಣೆಗೆ ಕರ್ನಾಟಕಕ್ಕೆ ನವ ಮುಖ್ಯಮಂತ್ರಿ#bsyediyurappa #chiefminister #karnatakabjp #corruption #allegation https://t.co/ldtaYAmrBI
— TV9 Kannada (@tv9kannada) July 26, 2021
ಚಿಕ್ಕಬಳ್ಳಾಪುರ: ರಾಜೀನಾಮೆ ನೀಡುವಂತೆ ಸೂಚಿಸುವ ಮೂಲಕ ಬಿಜೆಪಿ ಹೈಕಮಾಂಡ್ ಯಡಿಯರಪ್ಪ ಅವರನ್ನು ಅವಮಾನಿಸಿದೆ ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್.ಯಡಿಯೂರಪ್ಪ ತಮ್ಮದೇ ಅದ ಶಕ್ತಿಯಲ್ಲಿ ಬೆಳೆದು ಬಂದವರು. ರಾಜ್ಯದಲ್ಲಿ ನೆರೆ ಹಾವಳಿ ಇರುವ ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾಗಿದ್ದು ದುರಾದೃಷ್ಟಕರ ಬೆಳವಣಿಗೆ ಎಂದು ಅವರು ವಿಶ್ಲೇಷಿಸಿದರು.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂತರ ಬಿಜೆಪಿ ಕರ್ನಾಟಕ ಘಟಕದ ಬೆಳವಣಿಗೆಗಳನ್ನು ಗಮನಿಸಲೆಂದು ಬಿಜೆಪಿ ಹೈಕಮಾಂಡ್ ವೀಕ್ಷಕರನ್ನು ನೇಮಿಸಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿಯ ಕರ್ನಾಟಕ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್ ಅವರನ್ನು ನೇಮಿಸಲಾಗಿದ್ದು, ಹೈಕಮಾಂಡ್ನಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಎಸ್ವೈ ತವರು ಕ್ಷೇತ್ರ ಶಿಕಾರಿಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಶಿಕಾರಿಪುರದ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಕಪ್ಪು ಕುದುರೆ (ಡಾರ್ಕ್ ಹಾರ್ಸ್) ರೂಪದಲ್ಲಿ ಮತ್ತಿಬ್ಬರ ಹೆಸರು ಕೇಳಿಬರುತ್ತಿದೆ. ಸಂಸದ ಶಿವಕುಮಾರ ಉದಾಸಿ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರುಗಳು ಕೇಳಿಬರುತ್ತಿವೆ. ಉದಾಸಿ ಅವರು ಕೇಂದ್ರದಲ್ಲಿ ಮಂತ್ರಿಯಾಗುವ ನಿರೀಕ್ಷೆಯಿತ್ತು. ಆದರೆ ಆಗಲಿಲ್ಲ. ಹೀಗಾಗಿ ಅವರು ರಾಜೀನಾಮೆ ನೀಡಿದರೂ ಅಚ್ಚರಿಯಿಲ್ಲ ಎಂಬ ಚರ್ಚೆಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿವೆ.
ಅನಿರೀಕ್ಷಿತ ರೀತಿಯಲ್ಲಿ ಸ್ಪರ್ಧೆಯಲ್ಲಿ ಮೇಲೆದ್ದು ಬರುವ ಹೆಸರುಗಳು, ಅನಿರೀಕ್ಷಿತ ಆಯ್ಕೆಗಳನ್ನು ರಾಜಕಾರಣದಲ್ಲಿ ಡಾರ್ಕ್ ಹಾರ್ಸ್ ಎಂದು ಕರೆಯುತ್ತಾರೆ.
ದೆಹಲಿ: ಮುಂದಿನ ಮುಖ್ಯಮಂತ್ರಿ ಯಾರು ಅಂತ ಬಿ.ಎಸ್.ಯಡಿಯೂರಪ್ಪ ಅವರೇ ಹೇಳುತ್ತಾರೆ. ಮುಂದಿನ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಸಂಸದೀಯ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ಮಾಹಿತಿ ರವಾನಿಸಿದ್ದಾರೆ.
ದಾವಣಗೆರೆ: ಬಿಜೆಪಿ ಅಂದ್ರೆ ಲಿಂಗಾಯತರ ಪಾರ್ಟಿ ಅಂತ ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ನಾನು ಬಿಜೆಪಿಯಲ್ಲಿ ಇದ್ದೆ. ಯಡಿಯೂರಪ್ಪ ಅವರ ಕೆಜೆಪಿ ಪಕ್ಷ ಗೆದ್ದಿದ್ದು ಕೇವಲ ಆರು ಸ್ಥಾನ ಮಾತ್ರ ಎಂದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರ ಹಿರಿಯ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ ಹೇಳಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವುದರಿಂದ ಬಿಜೆಪಿಗೆ ಹಿನ್ನಡೆ ಆಗಲಿದೆ ಎನ್ನುವುದು ತಪ್ಪು. ಈ ಹಿಂದೆ ಹೈಕಮಾಂಡ್ಗೆ ಮಾತು ಕೊಟ್ಟಿದ್ದ ಪ್ರಕಾರ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ನಾನು ಸಹ ಹಿರಿಯ ನಾಯಕ. 1980ರಿಂದ ವಾಜಪೇಯಿ, ಅಡ್ವಾಣಿ ಸೇರಿದಂತೆ ಪ್ರಮುಖರ ಜೊತೆ ಕೆಲಸ ಮಾಡಿರುವೆ. ಸಚಿವ ಸ್ಥಾನ ಕೊಟ್ಟರೆ ನಿರ್ವಹಿಸುವೆ ಎಂದ ಅವರು, ಶಿವಮೊಗ್ಗಕ್ಕೆ ಕೊಟ್ಟಷ್ಟು ಅನುದಾನ ದಾವಣಗೆರೆಗೆ ಕೊಟ್ಟಿಲ್ಲ ಎಂದು ಪರೋಕ್ಷವಾಗಿ ಬಿಎಸ್ವೈ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹಾಸನ: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎ.ಮಂಜು, ಇದು ಯಾವುದೇ ಹೊಸ ಬೆಳವಣಿಗೆ ಅಲ್ಲ. ಪಕ್ಷದ ನಿರ್ಧಾರವನ್ನು ಯಡಿಯೂರಪ್ಪ ಪಾಲಿಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ಸಿಎಂ ಆಯ್ಕೆಯಾಗಲಿದೆ. ಪಕ್ಷದ ಸಂಘಟನೆಗೆ ಯಡಿಯೂರಪ್ಪ ಶಕ್ತಿ ಬೇಕಾಗಿದೆ ಎಂದರು.
ಬಾಗಲಕೋಟೆ: ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ನ ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಬಾಗಲಕೋಟೆ ಜಿಲ್ಲೆ ಚೊಳಚಗುಡ್ಡ ಸೇತುವೆ ಬಳಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಸಾಧ್ಯತೆಯಿಲ್ಲ. ಮಧ್ಯಂತರ ಚುನಾವಣೆ ಬರುತ್ತೆ ಅಂತಾ ನನಗನಿಸಲ್ಲ ಎಂದು ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಅಪ್ಪ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ನಿರ್ಧಾರದಿಂದ ನಮ್ಮ ಕುಟುಂಬದ ಯಾರಿಗೂ ಬೇಸರವಾಗಿಲ್ಲ ಎಂದು ಟಿವಿ9ಗೆ ಯಡಿಯೂರಪ್ಪ ಪುತ್ರಿ ಅರುಣಾದೇವಿ ಪ್ರತಿಕ್ರಿಯಿಸಿದ್ದಾರೆ. ನಗುಮುಖದಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ರೈತರು, ಬಡವರ ಪರ ನಿರಂತರ ಹೋರಾಟ ಮಾಡ್ತಿದ್ದಾರೆ ಎಂದು ಅವರು ನೆನಪಿಸಿಕೊಂಡರು.
ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ವಿ.ಶ್ರೀನಿವಾಸ ಪ್ರಸಾದ್, ಇದು ಬಿಜೆಪಿಯ ಆಂತರಿಕ ನಿರ್ಧಾರ. 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಈ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿಲುವಿದೆ. ಆದರೆ, ವಿಶೇಷ ಪ್ರಕರಣವಾಗಿರುವ ಕಾರಣ ಯಡಿಯೂರಪ್ಪರಿಗೆ ಅಧಿಕಾರ ಕೊಡಲಾಗಿತ್ತು. ಈ ವಿಚಾರ ಎಲ್ಲರಿಗು ಗೊತ್ತಿದೆ. ವಯಸ್ಸಿನ ಕಾರಣದಿಂದಲೇ ಅಡ್ವಾಣಿಯಂತವರಿಗೆ ಅಧಿಕಾರ ಕೊಡಲಿಲ್ಲ. ಯಡಿಯೂರಪ್ಪ ಉತ್ತಮ ಆಡಳಿತ ನೀಡಿದ್ದಾರೆ. ಅವರು ಭಾವುಕರಾಗುವುದು ಸಹಜ. ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ಉತ್ತಮವಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಯಡಿಯೂರಪ್ಪನವರೆ ಹೇಳಿದ್ದಾರೆ. ಮೂರನೇ ವ್ಯಕ್ತಿಗಳು ಈ ಬಗ್ಗೆ ಮಾತನಾಡಬಾರದು. ಕಾಂಗ್ರೆಸ್ ನವರು ಕೂಡ ಈ ಬಗ್ಗೆ ಮಾತನಾಡಬಾರದು ಎಂದು ಶ್ರೀನಿವಾಸ ಪ್ರಸಾದ್ ಮೈಸೂರಿನಲ್ಲಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ನೂತನ ಸಿಎಂ ಬಗ್ಗೆ ಬಿಜೆಪಿ ಪಾಳಯದಲ್ಲಿ ಚರ್ಚೆ ಆರಂಭವಾಗಿದ್ದು, ಹೊಸಮುಖ, ಶುದ್ಧಹಸ್ತ ರಾಜಕಾರಣಿಗೆ ಸಿಎಂ ಸ್ಥಾನ ನೀಡಲು ಹೈಕಮಾಂಡ್ ಒಲವು ತೋರಿದೆ. ಆದರೂ ಲಿಂಗಾಯತ ಸಮುದಾಯದಕ್ಕೇ ಸಿಎಂ ಸ್ಥಾನ ನೀಡಲು ಆರ್‌ಎಸ್‌ಎಸ್ ನಾಯಕರು ಮತ್ತು ಪ್ರಧಾನಿ ಮೋದಿ ಒಲವು ತೋರಿಸಿದ್ದು, ಮಹಾರಾಷ್ಟ್ರ, ಗೋವಾ ಮಾದರಿಯಲ್ಲಿ ಹೊಸಬರ ಆಯ್ಕೆ ಆಗುವ ಸಾಧ್ಯತೆ ಇದೆ. ಲಿಂಗಾಯತರಿಗೆ ಅವಕಾಶ ನೀಡಿದರೆ ಮುರುಗೇಶ್ ನಿರಾಣಿ, ಅರವಿಂದಬೆಲ್ಲದ್, ಬಸವರಾಜ ಬೊಮ್ಮಾಯಿ ಸಿಎಂ ರೇಸ್‌ನಲ್ಲಿ ಬರಲಿದ್ದಾರೆ. ಲಿಂಗಾಯತರಲ್ಲೇ ಹೊಸಮುಖದ ಲೆಕ್ಕಾಚಾರಕ್ಕೆ ಆದ್ಯತೆ ಸಿಕ್ಕರೆ ಶಾಸಕ ಅರವಿಂದ ಬೆಲ್ಲದ್‌ಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ಇದೆ. ಆದರೆ, ಮುರುಗೇಶ್ ನಿರಾಣಿ ಬೆಂಬಲಕ್ಕೆ ಅಮಿತ್ ಶಾ ಹಾಗೂ ಬಸವರಾಜ ಬೊಮ್ಮಾಯಿ ಪರವಾಗಿ ಯಡಿಯೂರಪ್ಪ ಒಲವು ತೋರಿಸುವ ಸಾಧ್ಯತೆ ಕಾಣಿಸುತ್ತಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಗೀಕರಿಸಿದ್ದು, ರಾಜೀನಾಮೆ ಅಂಗೀಕಾರ ಹಿನ್ನೆಲೆ ಸಚಿವ ಸಂಪುಟ ವಿಸರ್ಜನೆಯಾಗಿದೆ.
ಕರ್ನಾಟಕದ ರಾಜ್ಯದ ನೂತನ ಮುಖ್ಯಮಂತ್ರಿ ಹೆಸರನ್ನು ನಾಳೆಯೇ ಘೋಷಿಸುವ ಸಾಧ್ಯತೆ ಇದ್ದು, ಇದೇ ಗುರುವಾರ ಹೊಸ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ನಾಳೆಯೊಳಗೆ ಹೊಸ ಸಿಎಂ ಹೆಸರು ಘೋಷಣೆ ಮಾಡಲು ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಯಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಇಂದು ರಾಜೀನಾಮೆ ಘೋಷಿಸಿರುವರಾದರೂ ಕಳೆದೊಂದು ವಾರದಿಂದಲೇ ಅವರ ಡಾಲರ್ಸ್ ಕಾಲೋನಿ ನಿವಾಸ ಖಾಲಿಯಿತ್ತು ಎಂದು ತಿಳಿದುಬಂದಿದೆ. ಇಂದು ರಾಜೀನಾಮೆ ಹಿನ್ನೆಲೆ ನಿವಾಸಕ್ಕೆ ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಎರಡು ಕಡೆ ರಸ್ತೆಗೆ ಮೂವತ್ತಕ್ಕೂ ಹೆಚ್ಚು ಬ್ಯಾರಿಕೇಡ್ ಅಳವಡಿಸಲಾಗಿದೆ. ಕಳೆದೊಂದು ವಾರದಿಂದ ಸಿ.ಎಂ ಕುಟುಂಬಸ್ಥರು ಯಾರೂ ಡಾಲರ್ಸ್ ಕಾಲೋನಿ ನಿವಾಸದಲ್ಲಿಲ್ಲ, ಅಡುಗೆ ಭಟ್ಟರು ಡ್ರೈವರ್ ಹಾಗೂ ಮನೆಕೆಲಸದವರು ಮಾತ್ರ ಇದ್ದಾರೆ ಎನ್ನಲಾಗಿದೆ.
ಬಿಜೆಪಿ ಸರ್ಕಾರದ ಎರಡು ವರ್ಷಗಳ ಸಂಭ್ರಮಾಚರಣೆ ದಿನವೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದು, ನಾವು ಯಾರು ಕೂಡಾ ಸಿಎಂ ರಾಜೀನಾಮೆ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. ಸಹಜವಾಗಿ ಈ ನಡೆಯಿಂದ ಬೇಸರ ಆಗಿದೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ತಲೆ ಬಾಗಬೇಕು. ಪಕ್ಷ ಅವರನ್ನು ಮುಂದೆ ಕೂಡಾ ಬಳಸಿಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನೀರವ ಮೌನ ಆವರಿಸಿದೆ.
ದೆಹಲಿಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಜೆ.ಪಿ.ನಡ್ಡಾ ಚರ್ಚೆ ಮಾಡುತ್ತಿದ್ದು, ಮುಂದಿನ ಮುಖ್ಯಮಂತ್ರಿಯನ್ನು ಆರಿಸುವ ಬಗ್ಗೆ ಸಂಸತ್ ಭವನದನಲ್ಲಿ ಇಬ್ಬರು ನಾಯಕರು ಸಮಾಲೋಚನೆ ನಡೆಸುತ್ತಿದ್ದಾರೆ. ಸಿಎಂ ಆಯ್ಕೆಗೆ ಕೇಂದ್ರ ನಾಯಕರಿಂದ ವೀಕ್ಷಕರ ನಿಯೋಜನೆಯಾಗಲಿದ್ದು, ಕೇಂದ್ರ, ರಾಜ್ಯ ಮಟ್ಟದ ನಾಯಕರ ಜತೆ ಚರ್ಚೆ
ಬಳಿಕ ಈ ವಾರದೊಳಗೆ ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆ ಮಾಡುವ ಸಾಧ್ಯತೆ ಇದೆ.
ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ಇಂದು ಅಥವಾ ನಾಳೆಯೊಳಗೆ ರಾಜ್ಯಕ್ಕೆ ಬಿಜೆಪಿ ವೀಕ್ಷಕರು ಆಗಮಿಸುವ ಸಾಧ್ಯತೆ ಇದೆ. ರಾಜನಾಥ್ ಸಿಂಗ್, ಭೂಪೇಂದ್ರ ಯಾದವ್ ಅಥವಾ ಧರ್ಮೇಂದ್ರ ಪ್ರಧಾನ್ ಬಿಜೆಪಿ ವೀಕ್ಷಕರಾಗಿ ಬರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಯುಗಾಂತ್ಯ ಆಯಿತು ಎಂದು ಆ ಕ್ಷಣದಲ್ಲಿ ಅನಿಸಿತು. ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇ ಬಿ.ಎಸ್ ಯಡಿಯೂರಪ್ಪ. ಅವರಿಗೆ 50ವರ್ಷ ರಾಜಕೀಯ ಅನುಭವ ಇದೆ. ಬಹಳಷ್ಟು ದುಖಃದಿಂದ ಯಡಿಯೂರಪ್ಪ ಭಾಷಣ ಮಾಡಿದರು. 2023ರ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್, ಬಿಜೆಪಿಯ ಬೆಳವಣಿಗೆಯನ್ನು ಕಾತುರದಿಂದ ನೋಡುತ್ತಿದೆ. ಯಡಿಯೂರಪ್ಪ ಹೋರಾಟ, ಧೈರ್ಯದ ಬಗ್ಗೆ ಅಭಿಮಾನ ಇದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಡಿಯೂರಪ್ಪ ಪಕ್ಷಾತೀತವಾಗಿ ಲೆಜೆಂಡ್ ನಾಯಕ. ದುಖಃದಿಂದ ರಾಜೀನಾಮೆ ನೀಡಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ. ರಾಜ್ಯದಲ್ಲಿ ಕೊವಿಡ್, ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ ಎಂದಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿರುವ ಕಟೀಲ್, ಕೆಲವೇ ಕ್ಷಣಗಳಲ್ಲಿ ದೆಹಲಿಗೆ ಹಾರಲಿದ್ದಾರೆ. ಇಂದು ಸಂಜೆ ಭೋಪೇಂದ್ರ ಯಾದವ್ ಹಾಗೂ ಇತರ ನಾಯಕರ ಭೇಟಿಯಾಗಲಿದ್ದು, ನಾಳೆ ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್ ಮೊದಲು ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಲಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದ ಬದಲಾವಣೆಗಳು ಭಾರೀ ಕುತೂಹಲ ಮೂಡಿಸುತ್ತಿದ್ದು, ನಿರೀಕ್ಷೆಯಂತೆಯೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧಾರೆ. ಆದರೆ, ಕರ್ನಾಟಕ ಬಿಜೆಪಿ ಪಾಳಯದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿರುವ ಕಾರಣ ನೂತನ ಮುಖ್ಯಮಂತ್ರಿ ಯಾರಾಗುತ್ತಾರೆ? ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆಬಾಗುತ್ತಾರಾ ಅಥವಾ ಮತ್ತೊಮ್ಮೆ ಅಸಮಾಧಾನದ ಬುಗ್ಗೆ ಏಳಲಿದೆಯಾ? ಎನ್ನುವ ಬಗ್ಗೆ ಭಾರೀ ಚರ್ಚೆಗಳೆದ್ದಿವೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದ ಕ್ಷಣಕ್ಷಣದ ಬೆಳವಣಿಗೆಗಳು, ಕುತೂಹಲಕಾರಿ ತಿರುವುಗಳ ಮಾಹಿತಿ ಇಲ್ಲಿ ಲಭ್ಯ.
Published On - 1:18 pm, Mon, 26 July 21