ಸಚಿವರ ಪಕ್ಷಾಂತರ ವದಂತಿ: ಇದಕ್ಕೆಲ್ಲ ಉತ್ತರ ಕೊಡಲ್ಲ ರೀ ಎಂದು ಗರಂ ಆದ ಸಿಎಂ ಬೊಮ್ಮಾಯಿ

|

Updated on: Mar 07, 2023 | 2:58 PM

ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಸಚಿವರ ಪಕ್ಷಾಂತರ ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ವಾರ್ ಜೋರಾಗಿದೆ. ಸಚಿವರ ಪಕ್ಷಾಂತರ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ ಬೊಮ್ಮಾಯಿ, ಇದರ ಕ್ರೆಡಿಟ್ ಕಾಂಗ್ರೆಸ್​ಗೆ ಹೇಗೆ ಸಲ್ಲುತ್ತದೆ ಎಂದು ಪ್ರಶ್ನಿಸಿದ್ದಾರೆ.

ಸಚಿವರ ಪಕ್ಷಾಂತರ ವದಂತಿ: ಇದಕ್ಕೆಲ್ಲ ಉತ್ತರ ಕೊಡಲ್ಲ ರೀ ಎಂದು ಗರಂ ಆದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಸಚಿವರಾದ ವಿ.ಸೋಮಣ್ಣ (V Somanna), ಕೆಸಿ ನಾರಾಯಣಗೌಡ (KC Narayana Gowda) ಅವರು ಮರಳಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮೈಸೂರಿನಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ ಗರಂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸುದ್ದಿಗಳಿಗೆಲ್ಲ ಉತ್ತರ ಕೊಡಲ್ಲ ರೀ ಎಂದು ಹೇಳಿದರು. ಇನ್ನು, ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ವೇ (Bengaluru-Mysuru Expressway) ಕ್ರೆಡಿಟ್​ ವಾರ್​ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಕ್ರೆಡಿಟ್ ಕಾಂಗ್ರೆಸ್​ಗೆ ಹೇಗೆ ಸಲ್ಲುತ್ತದೆ? ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಪ್ರಸ್ತಾಪ ಆಗಿದ್ದಲ್ಲ. ರಸ್ತೆ ವಿಸ್ತೀರ್ಣ ಪ್ರಸ್ತಾವನೆ 20 ವರ್ಷಗಳ ಹಿಂದೆಯೇ ಆಗಿತ್ತು. ಪ್ರಸ್ತಾಪ ಮಾಡುವುದಕ್ಕೂ ಹಣ ಬಿಡುಗಡೆ ಮಾಡಿ ಕೆಲಸ ಮಾಡಿಸುವುದಕ್ಕೂ ವ್ಯತ್ಯಾಸ ಇದೆ. ಹೈವೇಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದೆ. ಕಾಂಗ್ರೆಸ್ ನಾಯಕರ ಮಾತನ್ನು ಕೇಳಿದರೆ ಜನರು ನಗುತ್ತಾರೆ. ಸಿದ್ದರಾಮಯ್ಯ (Siddaramaiah) ಅವರು ರಸ್ತೆ ಪರಿಶೀಲನೆಗೆ ನಮ್ಮ ತಕರಾರು ಇಲ್ಲ. ಹೆದ್ದಾರಿಯಲ್ಲಿ ಸಾವಿರಾರು ಜನರು ಈಗಾಗಲೇ ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದರು.

2 ಗಂಟೆಗಳ ಕಾಲ ಬಂದ್, ಗಹಗಹಿಸಿ ನಕ್ಕ ಸಿಎಂ ಬೊಮ್ಮಾಯಿ

ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ಮಾರ್ಚ್​ 9ರಂದು 2 ಗಂಟೆಗಳ ಕಾಲ ಬಂದ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, 2 ಗಂಟೆ ಬಂದ್ ಅಂದರೆ ಅರ್ಥವೇನು ಎಂದು ಗಹಗಹಿಸಿ ನಕ್ಕರು. ಯಾವತ್ತಾದರೂ ಇಂತಹ ಬಂದ್ ಬಗ್ಗೆ ಕೇಳಿದ್ದೀರಾ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ಬಂದ್​ಗೆ ಕರೆ ಕೊಟ್ಟರೆ ನಡೆಯುತ್ತಾ? ಈ ಬಂದ್​​ಗೆ ಯಾವುದೇ ಬೆಲೆಯೂ ಇಲ್ಲ, ಬಂದ್​ನಿಂದ ಜನರಿಗೆ ತೊಂದರೆ ಆಗುತ್ತದೆ, ಇದು ಅವರಿಗೆ ಅರ್ಥವಾಗಲ್ಲ. ಬಂದ್ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಇದೆ ಎಂದರು.

ಇದನ್ನೂ ಓದಿ: ನಾಲ್ಕು ದಿಕ್ಕುಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ -ಸಿಎಂ ಬೊಮ್ಮಾಯಿ

ಎಚ್‌3ಎನ್2: ಔಷಧ ಸಂಗ್ರಹಕ್ಕೆ ಸಿಎಂ ಸೂಚನೆ

ಎಚ್‌3ಎನ್2 ವೈರಸ್ ಭೀತಿ ವಿಚಾರವಾಗಿ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಯಿ, ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಅಂತ ಹೇಳಿದೆ. ಇಡೀ ರಾಜ್ಯಕ್ಕೆ ಮಾರ್ಗಸೂಚಿಯನ್ನು ಅತೀ ಶೀಘ್ರದಲ್ಲೇ ಕೊಡಲಿದ್ದಾರೆ. ಅದಕ್ಕೆ ಔಷಧಿಗಳನ್ನು ಸಂಗ್ರಹ ಮಾಡಿ ಜಿಲ್ಲಾ ಕೇಂದ್ರಗಳಲ್ಲಿ ಇಡಲು ಸೂಚನೆ ಕೊಟ್ಟಿದ್ದೀನೆ. ಕರ್ನಾಟಕದಲ್ಲಿ ಅಂತಹ ತೊಂದರೆ ಏನಿಲ್ಲ. ಎಚ್ಚರಿಕೆ ವಹಿಸಬೇಕು, ಮಾಸ್ಕ್ ಕಡ್ಡಾಯವಲ್ಲ. ಇವತ್ತು ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Tue, 7 March 23