ಕುಡಿದು ಮನೆಗೆ ಬರುವ ಪತಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿಕೊಡಿ, ಮನೆಯಲ್ಲೇ ಇರುತ್ತಾರೆ: ರೇವಣ್ಣ ವ್ಯಂಗ್ಯ
ಅಂದು ಸಾರಾಯಿಗೆ 12 ರೂ. ಇತ್ತು, ಈಗ ಕ್ವಾರ್ಟರ್ ಬೆಲೆ 80 ರೂ. ಆಗಿದೆ. ಜೀವನ ಸಾಗಿಸಲು ರೈತರು ಹಸು ಸಾಕಿ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ. ಆ ಹಣದಲ್ಲಿ ಸಾರಾಯಿ ಕುಡಿದು ಬಂದರೆ ಗಂಡನಿಗೆ ಹಾಲಿನಲ್ಲಿ ಜಪಾಳ ಮಾತ್ರೆ (ಭೇದಿ ಮಾತ್ರೆ) ಹಾಕಿಕೊಡಿ, ಕುಡಿಯಲು ಹೋಗಲ್ಲ, ಮನೆಯಲ್ಲೇ ಇರುತ್ತಾರೆ ಎಂದು ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.
ಹಾಸನ: ಹಸು ಸಾಕಿಕೊಂಡು ಅದರಿಂದ ಸಿಗುವ ಹಾಲನ್ನು ಡೈರಿಗೆ ಹಾಕಿ ಬಂದ ಹಣದಲ್ಲಿ ಕೆಲವರು ಮದ್ಯಪಾನ (Alcohol) ಮಾಡಿ ಬರುತ್ತಾರೆ. ಈ ಬಗ್ಗೆ ಮಾತನಾಡುತ್ತಾ ವ್ಯಂಗ್ಯವಾಡಿದ ಮಾಜಿ ಸಚಿವರೂ ಆಗಿರುವ ಶಾಸಕ ಹೆಚ್.ಡಿ.ರೇವಣ್ಣ (HD Revanna), ಮದ್ಯಪಾನ ಮಾಡಿ ಮನೆಗೆ ಬರುವ ಪತಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ (ಭೇದಿ ಮಾತ್ರೆ) ಹಾಕಿಕೊಡಿ ಎಂದು ಹೇಳಿದ್ದಾರೆ. ಹಾಸನ ತಾಲೂಕಿನ ಕುದುರುಗುಂಡಿ ಗ್ರಾಮದಲ್ಲಿ 157 ಕೋಟಿ ರೂ ವೆಚ್ಚದ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಹಾಲಿನಲ್ಲಿ ಜಾಪಾಳ ಮಾತ್ರೆ (Dysentery pills) ಹಾಕಿಕೊಟ್ಟರೆ ಅವರು ಕುಡಿಯಲು ಹೋಗುವುದಿಲ್ಲ, ಮನೆಯಲ್ಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾರಾಯಿ ಬಂದ್ ಮಾಡಿ ಎಂದು ಮಹಿಳೆಯರು ಕೇಳಿದ್ದರು. ಅದರಂತೆ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಿದ್ದರು. ಈಗ ಏನಾಯಿತು? ಅಂದು 12 ರೂಪಾಯಿಗೆ ಸಾರಾಯಿ ಸಿಗುತ್ತಿತ್ತು. ಈಗ ಒಂದು ಕ್ವಾರ್ಟರ್ಗೆ 80 ರೂಪಾಯಿ ಆಗಿದೆ ಎಂದು ಬೈಯುತ್ತಿದ್ದಾರೆ. ರೈತರು ನಿಮ್ಮ ಮಕ್ಕಳು, ಮರಿ, ನೀವೆಲ್ಲ ಕುಡಿದು ಹೆಚ್ಚಾದ ಹಾಲನ್ನು ಡೈರಿಗೆ ಹಾಕಬೇಕು. ದುಡ್ಡಿಗೋಸ್ಕರ ಹಾಲನ್ನು ಡೈರಿಗೆ ಜಾಸ್ತಿ ಹಾಕುತ್ತೀರಿ. ಆ ದುಡ್ಡು ಇಟ್ಟುಕೊಂಡು ಮನೆಗೆ ಬಂದವರಿಗೆ ಒಂದು ಕ್ವಾಟರ್ ಹಾಕಂಡು ಬರೋಗಿ ಅಂತ ಕಳುಸ್ತಿರಾ, ಹಾಲಿನ ಜೊತೆಗೆ ಒಂದೆರಡು ಜಾಪಾಳ ಮಾತ್ರೆನೂ ಹಾಕಿ ಕುಡಿದುಕೊಂಡು ಅಲ್ಲೇ ಮಲಗಿರಬೇಕು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಹೊಳೆನರಸೀಪುರದ ರಥೋತ್ಸವ ನಡೆಯುವಾಗ ಸ್ಥಳೀಯ ಯುವಕರಿಂದ ಬಣ್ಣ ಹಚ್ಚಿಸಿಕೊಳ್ಳಲು ಪ್ರಜ್ವಲ್ ರೇವಣ್ಣ ನಿರಾಕರಿಸಿದರು
ಆ ಶರಾಬು ಕುಡಿಯುವುದನ್ನು ಸ್ವಲ್ಪ ಕಡಿಮೆ ಮಾಡಿಸಿ. ಈಗ ಯಾವ ಊರಿಗೆ ಹೋದರೂ ಯಾವ ಬ್ರಾಂಡ್ ಸಿಗುವುದಿಲ್ಲ ಎಂದು ಹೇಳುವಹಾಗಿಲ್ಲ. ಯಾವ ಪೆಟ್ಟಿಗೆ ಅಂಗಡಿ ಹೋದರೂ ಬಾರ್ ತರ ಎಣ್ಣೆ ಸಿಗುತ್ತದೆ ಎಂದು ಆಕ್ರೊಶ ಹೊರಹಾಕಿದ ರೇವಣ್ಣ, ನಾನು ಮಹಿಳೆಯರು, ಪುರುಷರಿಗೆ ಹೇಳುವುದು ಇಷ್ಟೆ, ಇದೆಲ್ಲ ಆಗಬಾರದು. ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ. ನಾಲ್ಕು ಜನರ ಮುಂದೆ ನಿಮ್ಮ ಗಂಡು, ಹೆಣ್ಣು ಮಕ್ಕಳು ನಿಲ್ಲಬೇಕು ಎಂದು ಸಲಹೆ ನೀಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Tue, 7 March 23