Karnataka Assembly Election: ಕಡೂರು ಕ್ಷೇತ್ರದಿಂದ ಸಿಎಂ ಧನಂಜಯ್ ಜೆಡಿಎಸ್ ಅಭ್ಯರ್ಥಿ
ಹಾಸನ ಸಂಸದರ ನಿವಾಸದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆ ನಡೆಯಿತು. ಮಾಜಿ ಸಚಿವ ಎಚ್ಡಿ ರೇವಣ್ಣ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಹಾಸನ: ಮುಂಬರುವ ವಿಧಾನಸಭೆ ಚುನಾವಣೆಗೆ ಕಡೂರು (Kadur) ಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿಯನ್ನಾಗಿ ಸಿಎಂ ಧನಂಜಯ್ (CM Dhananjay) ಅವರನ್ನು ಪಕ್ಷ ಆಯ್ಕೆ ಮಾಡಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾಗಿರುವ ಧನಂಜಯ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಎಂಎಲ್ಸಿ ಭೋಜೇಗೌಡ ಸೋಮವಾರ ಘೋಷಣೆ ಮಾಡಿದರು. ಹಾಸನ ಸಂಸದರ ನಿವಾಸದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆ ನಡೆಯಿತು. ಮಾಜಿ ಸಚಿವ ಎಚ್ಡಿ ರೇವಣ್ಣ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಕಡೂರು ಕ್ಷೇತ್ರದ ಅಭ್ಯರ್ಥಿ ಬಗ್ಗೆ ಇಂದು ಪ್ರಮುಖರ ಸಭೆ ಕರೆದು ಚರ್ಚೆ ಮಾಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ವರಿಷ್ಠರ ಜೊತೆಗೂ ಚರ್ಚಿಸಲಾಗಿದೆ. ಕುಮಾರಣ್ಣ, ದೇವೇಗೌಡರು, ರಾಜ್ಯ ಅದ್ಯಕ್ಷರ ಅನುಮತಿ ಪಡೆಯಲಾಗಿದೆ. ಒಮ್ಮತದ ಅಭ್ಯರ್ಥಿಯಾಗಿ ಧನಂಜಯ್ ಅವರ ಹೆಸರನ್ನು ಅಂತಿಮ ಗೊಳಿಸಲಾಗಿದೆ. ಇದಕ್ಕೆ ಎಚ್ಡಿ ಕುಮಾರಸ್ವಾಮಿ ಕೂಡ ಅನುಮತಿ ಕೊಟ್ಟಿದ್ದಾರೆ ಎಂದು ಸಂಸದ ಪ್ರಜ್ವಲ್ ತಿಳಿಸಿದ್ದಾರೆ.
ಕಡೂರು ಕ್ಷೇತ್ರದಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ವೈಸ್ವಿ ದತ್ತಾ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಈ ವಿಚಾರವಾಗಿ ದತ್ತಾ ವಿರುದ್ಧ ಇತ್ತೀಚೆಗೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಮತ್ತೊಂದೆಡೆ, ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಗೊಂದಲ ಮುಂದುವರಿದಿದೆ. ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಪಕ್ಷದಲ್ಲಿ ಭಿನ್ನಮತ ಇನ್ನೂ ಪೂರ್ಣ ಶಮನವಾಗಿಲ್ಲ. ಈ ಮಧ್ಯೆಯೇ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಖಚಿತ ಎಂದು ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕಡೂರು ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ