ಮಾರ್ಚ್ 10 ರಿಂದ ಹಾಸನ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಆರಂಭ: ಹೆಚ್. ಡಿ ರೇವಣ್ಣ
ಮಾರ್ಚ್ 10 ರಿಂದ ಜಿಲ್ಲೆಯ ಬೇಲೂರಿನಿಂದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಪ್ರಾರಂಭವಾಗುತ್ತದೆ ಎಂದು ಮಾಜಿ ಸಚಿವ ಹೆಚ್. ಡಿ ರೇವಣ್ಣ ಹೇಳಿದ್ದಾರೆ.
ಹಾಸನ: ಮಾರ್ಚ್ 10 ರಿಂದ ಜಿಲ್ಲೆಯ ಬೇಲೂರಿನಿಂದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ (HD Kuamrswamy), ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ನೇತೃತ್ವದಲ್ಲಿ ಪಂಚರತ್ನ ಯಾತ್ರೆ (Pancharatna Yatre) ಪ್ರಾರಂಭವಾಗುತ್ತದೆ ಎಂದು ಮಾಜಿ ಸಚಿವ ಹೆಚ್. ಡಿ ರೇವಣ್ಣ (HD Revanna) ಹೇಳಿದ್ದಾರೆ. 13 ಚನ್ನರಾಯಪಟ್ಟಣ, 14 ಅರಸೀಕೆರೆ, 15 ಹೊಳೆನರಸೀಪುರ, 16 ಅರಕಲಗೂಡು, 17 ಸಕಲೇಶಪುರ ದಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಹಾಸನದ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಾಸನ ಕ್ಷೇತ್ರದ ಪಂಚರತ್ನ ಯಾತ್ರೆ ಪ್ರತ್ಯೇಕವಾಗಿ ನಡೆಯಲಿದೆ. ಈ ಜಿಲ್ಲೆಗೆ ಕಳೆದ 4 ವರ್ಷದಿಂದ ಬಿಜೆಪಿ ಸರ್ಕಾರ ಏನೆಲ್ಲ ತಡೆ ಹಿಡಿದಿದೆ ಎನ್ನೋದು ಗೊತ್ತಿದೆ. ಈ ಜಿಲ್ಲೆಗೆ ಈ ಸರ್ಕಾರ ಯಾವುದೆ ಸೌಲಭ್ಯ ಕೊಟ್ಟಿಲ್ಲ. ನಮ್ಮ ಜಿಲ್ಲೆಗೆ ಜಾರಿಯಾಗಿದ್ದ ತೋಟಗಾರಿಕೆ ಕಾಲೇಜು, ತಾಂತ್ರಿಕ ವಿವಿ ಬಜೆಟ್ನಲ್ಲಿ ಘೋಷಣೆ ಆಗಿತ್ತು. ಆದರೆ ಬಿಜೆಪಿ ಸರ್ಕಾರ ಎಲ್ಲ ಯೋಜನೆಗಳನ್ನು ರದ್ದು ಮಾಡಿದೆ ಎಂದು ಆರೋಪ ಮಾಡಿದರು.
ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಆಗುತ್ತೆ ಯಾರು ಗಾಬರಿ ಆಗಬೇಕಿಲ್ಲ
ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಆಗುತ್ತೆ ಯಾರು ಗಾಬರಿ ಆಗಬೇಕಿಲ್ಲ. ಕುಮಾರಣ್ಣ, ದೇವೇಗೌಡರು, ಜಿಲ್ಲೆಯ ಮುಖಂಡರ ವಿಶ್ವಾಸಕ್ಕೆ ತಗೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಕುಮಾರಣ್ಣ ಏನು ಹೇಳಿದಾರೆ, ರಾಜ್ಯದ ಎಲ್ಲ 224 ಬಿ ಫಾರಂ ದೇವೇಗೌಡರ ಕೈಲಿ ಕೊಡುತ್ತೇನೆ, ಅವರೇ ಟಿಕೇಟ್ ಹಂಚಲಿ ಎಂದಿದ್ದಾರೆ. ಕೊಟ್ಟಮಾತು ಉಳಿಸಿಕೊಳ್ಳುವ ಮುಖ್ಯಮಂತ್ರಿ ಎಂದರೇ ಅದು ಕುಮಾರಸ್ವಾಮಿ ಎಂದು ಹೇಳಿದರು.
ಸ್ವಾತಂತ್ರ್ಯ ಸರ್ಕಾರ ರಚನೆಗೆ ಜನರ ಬಳಿ ಕುಮಾರಸ್ವಾಮಿ ಬೆಂಬಲ ಕೇಳುತ್ತಿದ್ದಾರೆ. ಕಾಂಗ್ರೆಸ್ನವರು ಎರಡು ವರ್ಷದಿಂದ ಅಭ್ಯರ್ಥಿ ಆಯ್ಕೆಗೆ ಅವರ ಮನೆ ಇವರ ಮನೆ ಬಾಗಿಲು ತಿರುಗುತ್ತಿದ್ದಾರೆ. ದೇವೇಗೌಡರ ಮೇಲೆ ಈ ದೇಶದಲ್ಲಿ ಯಾವುದಾದರು ಆರೋಪ ಇದೆಯಾ ? ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಸೇವೆಸಲ್ಲಿಸಿದ್ದಾರೆ. ಆದರೆ ಯಾವುದೇ ಆರೋಪವಿಲ್ಲದ ನಾಯಕ ದೇವೇಗೌಡರು ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಈ ಪಕ್ಷ 15 ವರ್ಷ ಎಲ್ಲ ಸಕಲ ಸವಲತ್ತು ಕೊಟ್ಟಿದೆ. ಈಗ ಹೊರಟಿದ್ದಾರೆ ಅವರಿಗೆ ಒಳ್ಳೆಯದಾಗಲಿ. ಅವರಿಗೆ ಅನುಕೂಲ ಆಗಲಿ ಎಂದು ಎಲ್ಲ ತ್ಯಾಗ ಮಾಡಿದೆವು. ಅವರು ಇಲ್ಲೇ ಇರುತ್ತೇವೆ ಎಂದು ಹೇಳಿದರು. ರಾಗಿ ಕಳ್ಳ ಅಂತಾ ಯಾರೋ ಟೀಕೆ ಮಾಡಿದಾಗ ಧರ್ಮಸ್ಥಳಕ್ಕೆ ಹೋಗಿ ಅಣೆ ಮಾಡಿದರು. ಹಾಗೆ ಕುಮಾರಸ್ವಾಮಿ ಮುಂದೆಯೇ ಪಕ್ಷ ಬಿಡಲ್ಲ, ಎಂದು ಹೇಳಿದ್ದರು ಹೇಳಿಲ್ಲ ಎಂದು ಆಣೆಮಾಡಲಿ ನೋಡೊಣಾ ಎಂದು ವಾಗ್ದಾಳಿ ಮಾಡಿದರು.
ಅರಸೀಕೆರೆಗೆ ಕುಡಿಯೊ ನೀರು ಯೋಜನೆ ಕೊಟ್ಟಿದ್ದು ನಾವು. ನಾವು ಶಾಸಕರನ್ನಾಗಿ ಮಾಡದೆ ಇದ್ದರೇ ಅವರು ಹೇಗೆ ಅಭಿವೃದ್ಧಿ ಮಾಡುತ್ತಿದ್ದರು. ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಎಂದ ಶಿವಲಿಂಗೇಗೌಡ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು. ಇವರು ಶಾಸಕರಾಗೊ ಮೊದಲೆ ನಾವು ಸಾಕಷ್ಟು ಕೆಲಸ ಆ ಕ್ಷೇತ್ರಕ್ಕೆ ಮಾಡಿದ್ದೇವೆ ಎಂದು ಮಾತನಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Mon, 6 March 23