ಚುನಾವಣೆ ಹೊಸ್ತಿಲಲ್ಲಿ ಕೋಲಾರ ಬಿಜೆಪಿಯಲ್ಲಿ ಮೂಲ-ವಲಸಿಗರ ನಡುವೆ ಗುಂಪುಗಾರಿಗೆ, ಸಂಸದ-ಸಚಿವರ ನಡುವೆ ಹೊಂದಾಣಿಕೆ ಕೊರತೆ

|

Updated on: Mar 03, 2023 | 10:25 PM

2023ರ ವಿಧಾನಸಭಾ ಚುನಾವಣೆ ದಿನಾಂಕ ಇನ್ನೇನು ಹತ್ತಿರವಾಗುತ್ತಿದ್ದಂತೆ ಕೋಲಾರ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯ ಹಾಗೂ ಗುಂಪುಗಾರಿಕೆ ಬಿಸಿ ಹೊಗೆಯಾಡುತ್ತಿದೆ. ಮೂಲ ಹಾಗೂ ವಲಸಿಗರ ನಡುವಿನ ಗುಂಪುಗಾರಿಕೆ ಹಾಗೂ ಸಂಸದ ಎಸ್​.ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವರ ಬೆಂಬಲಿಗರ ನಡುವಿನ ಹೊಂದಾಣಿಕೆ ಕೊರತೆ ಕಾಣುತ್ತಿದೆ.

ಚುನಾವಣೆ ಹೊಸ್ತಿಲಲ್ಲಿ ಕೋಲಾರ ಬಿಜೆಪಿಯಲ್ಲಿ ಮೂಲ-ವಲಸಿಗರ ನಡುವೆ ಗುಂಪುಗಾರಿಗೆ, ಸಂಸದ-ಸಚಿವರ ನಡುವೆ ಹೊಂದಾಣಿಕೆ ಕೊರತೆ
ಸಾಂದರ್ಭಿಕ ಚಿತ್ರ
Follow us on

ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ದಿನಾಂಕ ಇನ್ನೇನು ಹತ್ತಿರವಾಗುತ್ತಿದ್ದಂತೆ ಕೋಲಾರ ಜಿಲ್ಲಾ ಬಿಜೆಪಿಯಲ್ಲಿ (Kolar BJP) ಬಂಡಾಯ ಹಾಗೂ ಗುಂಪುಗಾರಿಕೆ ಬಿಸಿ ಹೊಗೆಯಾಡುತ್ತಿದೆ, ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕೋಲಾರ, ಮಾಲೂರು, ಕೆಜಿಎಫ್​ ಹಾಗೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ, ಮೂಲ ಹಾಗೂ ವಲಸಿಗರ ಗುಂಪುಗಳ ನಡುವೆ ಹೊಗೆಯಾಡುತ್ತಿದೆ. ಇಷ್ಟು ದಿನ ಕೋಲಾರ ಜಿಲ್ಲಾ ಕಾಂಗ್ರೇಸ್​ನಲ್ಲಿ ಮಾಜಿ ಸಂಸದ ಕೆ.ಹೆಚ್​.ಮುನಿಯಪ್ಪ (KH Muniyappa) ಹಾಗೂ ಮಾಜಿ ಸ್ಪೀಕರ್ ರಮೇಶ್​ ಕುಮಾರ್ (Ramesh Kumar)​ ಅವರ ಗುಂಪುಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿತ್ತು. ಆದರೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಮಾಡುತ್ತಾರೆ ಅನ್ನೋ ಕಾರಣದಿಂದಾಗಿ ಕಾಂಗ್ರೇಸ್​ನಲ್ಲಿದ್ದ ಭಿನ್ನಮತವನ್ನು ಶಮನ ಮಾಡುವ ಕೆಲಸ ನಡೆಯಿತು. ಈಗ ಒಳಗೊಳಗೆ ವೈಶಮ್ಯವಿದ್ದರೂ ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶನವಾಗುತ್ತಿದೆ. ಇದೀಗ ಬಿಜೆಪಿಯಲ್ಲಿ ಗುಂಪುಗಾರಿಕೆ, ಟಿಕೆಟ್​ಗಾಗಿ ಸ್ವಪಕ್ಷೀಯರಲ್ಲೇ ಭಿನ್ನಮತ ಉಂಟಾಗಿದ್ದು, ಅದೆಲ್ಲದಕ್ಕಿಂತ ಹೆಚ್ಚಾಗಿ ಮೂಲ ಹಾಗೂ ವಲಸಿಗರ ನಡುವೆ ಗುಂಪುಗಾರಿಕೆ ಶುರುವಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ನೆಲೆಯಿಲ್ಲ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಒಂದಷ್ಟು ಸಂಘಟನೆ ಇದೆಯಾದರೂ ಅಲ್ಲಿರುವ ಮೂಲ ಹಾಗೂ ವಲಸಿಗರ ನಡುವಿನ ಗುಂಪುಗಾರಿಕೆ ಹಾಗೂ ಸಂಸದ ಎಸ್​.ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವರ ಬೆಂಬಲಿಗರ ನಡುವಿನ ಹೊಂದಾಣಿಕೆ ಕೊರತೆಯಿಂದ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಬಿಜೆಪಿ ಈಬಾರಿ ನಿರೀಕ್ಷೆಗೂ ಮೀರಿದ ಹಿನ್ನಡೆ ಅನುಭವಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈನಡುವೆ ಕ್ಷೇತ್ರದಲ್ಲಿರುವ ಗುಂಪುಗಾರಿಕೆಯನ್ನು ಶಮನ ಮಾಡುವ ಚುನಾವಣೆಗೆ ವೇದಿಕೆ ಸಿದ್ದಮಾಡುವ ಕೆಲಸವೂ ನಡೆಯುತ್ತಿಲ್ಲ.

ಕೋಲಾರದಲ್ಲಿ ಬಿಜೆಪಿಗೆ ಬಿಜೆಪಿಯೇ ವಿರೋಧ ಪಕ್ಷ!

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟನೆ ಚೆನ್ನಾಗಿದೆ. ಗೆಲ್ಲುವ ವಾತಾವರಣವಿದೆ ಎನ್ನುವಂತ ಕ್ಷೇತ್ರಗಲ್ಲೇ ಬಿಜೆಪಿ ಮುಖಂಡರ ನಡುವೆ ಎರಡು ಎರಡು ಗುಂಪುಗಳ ತಲೆ ಎತ್ತಿವೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಲಸಿಗರು ಹಾಗೂ ಮೂಲ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳ ನಡುವೆ ಪೈಟ್​​ ಜೋರಾಗಿ ನಡೆಯುತ್ತಿದೆ. ಒಂದೆಡೆ ಮೂಲ ಬಿಜೆಪಿ ಹಾಗೂ ಸಂಸದ ಮುನಿಸ್ವಾಮಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ಓಂಶಕ್ತಿ ಚಲಪತಿ ಇದ್ದರೆ, ಸಚಿವ ಮುನಿರತ್ನ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಇತ್ತೀಚೆಗಷ್ಟೇ ಬಿಜೆಪಿಗೆ ವಲಸೆ ಬಂದ ವರ್ತೂರ್​ ಪ್ರಕಾಶ್​ ನಡುವೆ ಬಿಜೆಪಿಯಲ್ಲೇ ಟಿಕೆಟ್​ಗಾಗಿ ಪೈಪೋಟಿ ಇದೆ. ಆದರೆ ಇಬ್ಬರ ನಡುವೆ ಸೌಹಾರ್ಧಯುತ ಪೈಪೋಟಿ ಇಲ್ಲದೆ ಒಬ್ಬರ ಜೊತೆಗೆ ಮತ್ತೊಬ್ಬರು ಗುರುತಿಸಿಕೊಳ್ಳದಷ್ಟರ ಮಟ್ಟಿಗೆ ಗುಂಪುಗಾರಿಕೆ ಇದೆ. ಆದರೆ ಇದನ್ನು ಶಮನ ಮಾಡುವ ಕೆಲಸ ಸಂಸದರಾಗಲಿ ಅಥವಾ ಸಚಿವರಾಗಲೀ ಮಾಡುವ ಪ್ರಯತ್ನ ನಡೆಯುತ್ತಿಲ್ಲ.

ಮಾಲೂರಿನಲ್ಲಿ ಪಕ್ಷ ಸಂಘಟನೆಗಿಂದ ಕಿತ್ತಾಡಿದ್ದೇ ಹೆಚ್ಚು

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಹಾಗೂ ವಲಸಿಗ ಬಿಜೆಪಿಯ ಗುಂಪುಗಳ ನಡುವೆ ಪೈಪೋಟಿ ಜೋರಾಗಿದೆ. ಮೂಲ ಬಿಜೆಪಿಯ ಗುಂಪಿನಲ್ಲಿ ಬಿಜೆಪಿ ಟಿಕೆಟ್​ ಪ್ರಭಲ ಆಕಾಂಕ್ಷಿ ಹೂಡಿ ವಿಜಯ್​ ಕುಮಾರ್ ಗುರುತಿಸಿಕೊಂಡಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಲೂರಿನಲ್ಲಿ ಪಕ್ಷ ಸಂಘಟನೆ ಹಾಗೂ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈ ನಡುವೆ ಜೆಡಿಎಸ್​ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ಮಾಜಿ ಶಾಸಕ ಮಂಜುನಾಥಗೌಡ ಅವರು ಸಚಿವ ಮುನಿರತ್ನ ಹಾಗೂ ಸಂಸದ ಮುನಿಸ್ವಾಮಿ ಎರಡೂ ಗುಂಪಿನಲ್ಲೂ ಗುರುತಿಸಿಕೊಂಡಿದ್ದಾರೆ. ಆದರೂ ಮಾಲೂರಿನಲ್ಲಿ ಪಕ್ಷದಲ್ಲಿ ಎರಡು ಗುಂಪಾಗಿದ್ದು ಟಿಕೆಟ್​ ಯಾರಿಗೇ ಸಿಕ್ಕರೂ ಬಿಜೆಪಿ ಎರಡು ಹೋಳಾಗುವ ಎಲ್ಲಾ ಲಕ್ಷಣವಿದೆ.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಬಿಜೆಪಿಗಿಂತ ಕಾಂಗ್ರೆಸ್​ನವರೇ ಸೋಲಿಸ್ತಾರೆ: ಈಶ್ವರಪ್ಪ ಬಾಂಬ್

ಇಲ್ಲಿ ಇಬ್ಬರು ಟಿಕೆಟ್​ ಆಕಾಂಕ್ಷಿಗಳಾದ ಹೂಡಿ ವಿಜಯ್​ ಕುಮಾರ್ ಮತ್ತು ಮಂಜುನಾಥಗೌಡ ನಡುವೆ ಸೌಹಾರ್ಧ ಮಾತುಕತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಯಾವುದೇ ರೀತಿಯ ಸಂಬಂಧವಿಲ್ಲ. ಕಳೆದ ಕೆಂಪೇಗೌಡ ರಥಯಾತ್ರೆ ವೇಳೆ ಈ ಇಬ್ಬರು ಟಿಕೆಟ್​ ಆಕಾಂಕ್ಷಿಗಳ ನಡುವೆ ಬೀದಿಯಲ್ಲಿ ದೊಡ್ಡ ಮಾರಾಮರಿಯೇ ನಡೆದು ಹೋಗಿತ್ತು. ಹಾಗಾಗಿ ಇಲ್ಲೂ ಬಿಜೆಪಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿದೆ.

ಕೆಜಿಎಫ್​ನಲ್ಲೂ ಬಿಜೆಪಿಗೆ ಬಿಜೆಪಿಯೇ ಪ್ರಭಲ ಪೈಪೋಟಿ!

ಕೆಜಿಎಫ್​ ವಿಧಾನಸಭಾ ಕ್ಷೇತ್ರದ ವಿಚಾರಕ್ಕೆ ಬರುವುದಾದರೇ, ಇಲ್ಲೂ ಮೂಲ ಹಾಗೂ ವಲಸಿಗರ ಗುಂಪಿನ ಜೊತೆಗೆ, ಸಂಸದ ಮುನಿಸ್ವಾಮಿ ಮತ್ತು ಸಚಿವ ಮುನಿರತ್ನ ಬೆಂಬಲಿಗರ ನಡುವೆ ತಿಕ್ಕಾಟ ಇದೆ. ಮೂಲ ಬಿಜೆಪಿ ಗುಂಪಿನಲ್ಲಿ ಹಾಗೂ ಸಚಿವ ಮುನಿರತ್ನ ಬೆಂಬಲಿಗರಾಗಿ ಮಾಜಿ ಶಾಸಕ ವೈ.ಸಂಪಂಗಿ ಗುರುತಿಸಿಕೊಂಡಿದ್ದಾರೆ. ಆದರೆ ಇಲ್ಲಿ ಸಂಸದ ಮುನಿಸ್ವಾಮಿ ಬೆಂಬಲಿಗನಾಗಿ ಮತ್ತೊಬ್ಬ ಬಿಜೆಪಿ ಟಿಕೆಟ್​ ಆಕಾಂಕ್ಷಿ ಮತ್ತು ಬೈರತಿ ಬಸವರಾಜು ಹೆಸರೇಳಿಕೊಂಡು ಮೋಹನ್​ ಕೃಷ್ಣ ಎಂಬುವರು ಬಿಜೆಪಿ ಪ್ರಭಲ ಟಿಕೆಟ್​ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲೂ ಕೂಡಾ ಇಬ್ಬರು ಟಿಕೆಟ್​ ಆಕಾಂಕ್ಷಿಗಳ ನಡುವೆ ಸೌಹಾರ್ಧ ಪೈಪೋಟಿ ಇಲ್ಲ, ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದ ಸ್ಥಿತಿ ಇದ್ದು ಕೆಜಿಎಫ್ ಕ್ಷೇತ್ರದಲ್ಲೂ ಕೂಡಾ ಬಿಜೆಪಿಗೆ ಪಕ್ಷಕ್ಕೆ ಬಿಜೆಪಿ ಪಕ್ಷವೇ ವಿರೋಧ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಇಲ್ಲೂ ಬಿಜೆಪಿ ಆಕಾಂಕ್ಷಿಗಳನ್ನು ಬೆಸೆಯುವ ಕೆಲಸ ನಡೆಯುತ್ತಿಲ್ಲ.

ಬಂಗಾರಪೇಟೆಯಲ್ಲಿ ಭಿನ್ನಮತ ಶಮನ ಮಾಡಿದ ಆಣೆ ಪ್ರಮಾಣ

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ಈಗಾಗಲೇ ನಾಲ್ಕು ಜನ ಟಿಕೆಟ್​​ ಆಕಾಂಕ್ಷಿಗಳಿದ್ದಾರೆ. ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹಾಗೂ ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್​ ಹಾಗೂ ಶೇಷು ಎಂಬ ನಾಲ್ಕು ಜನ ಟಿಕೆಟ್​ ಆಕಾಂಕ್ಷಿಗಳಿದ್ದರು. ಆದರೆ ಇಲ್ಲಿ ಸಚಿವ ಮುನಿರತ್ನ ಪಕ್ಷಕ್ಕೆ ಹಿನ್ನಡೆಯಾಗದಂತೆ ನಾಲ್ಕು ಜನ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿ ಪಕ್ಷದ ನಿರ್ಧಾರಕ್ಕೆ ಬದ್ದರಾಗಿ ಪಕ್ಷ ಯಾರಿಗೆ ಟಿಕೆಟ್​ ಕೊಟ್ಟರೂ ಒಟ್ಟಾಗಿ ಕೆಲಸ ಮಾಡುವುದಾಗಿ ಕೋಲಾರಮ್ಮ ದೇವರ ಮೇಲೆ ಆಣೆ ಮಾಡಿಸಿದ್ದಾರೆ. ಪರಿಣಾಮ ಬಂಗಾರಪೇಟೆ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳ ನಡುವೆ ಸೌಹಾರ್ಧ ಪೈಪೋಟಿ ಏರ್ಪಟ್ಟಿದ್ದು, ಎಲ್ಲರೂ ಒಟ್ಟಾಗಿಯೇ ಪಕ್ಷ ಸಂಘಟನೆ ಹಾಗೂ ಪ್ರಚಾರ ಮಾಡುತ್ತಿದ್ದಾರೆ. ಈ ಯಾತ್ರೆಗೂ ಒಗ್ಗಟ್ಟಿನ ಯಾತ್ರೆ ಎಂಬ ಹೆಸರಿನಲ್ಲೇ ನಾಲ್ಕು ಜನ ಟಿಕೆಟ್​​ ಆಕಾಂಕ್ಷಿಗಳು ಪ್ರಚಾರ ಮಾಡುತ್ತಿದ್ದಾರೆ.

ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣವಿದ್ದರೂ ಗೆಲ್ಲುವ ಅವಕಾಶವನ್ನು ನಿರ್ಮಾಣ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಕೋಲಾರ ಜಿಲ್ಲಾ ಬಿಜೆಪಿ ತಲುಪಿದ್ದು, ಜಿಲ್ಲೆಯ ಬಿಜೆಪಿಯಲ್ಲಿನ ಗುಂಪುಗಾರಿಕೆಯನ್ನು ಸರಿದೂಗಿಸಿಗೊಂಡು ಹೋಗುವ ನಾಯಕರು ಯಾರು? ಚುನಾವಣೆ ಹೊತ್ತಿಗೆ ಬಿಜೆಪಿಯ ಭಿನ್ನಮತ ಬಗೆಯರಿಯುತ್ತಾ? ಕಾಂಗ್ರೇಸ್​ ಜೆಡಿಎಸ್​ ಪಕ್ಷವನ್ನು ಎದುರಿಸುವ ಬದಲು ಬಿಜೆಪಿಗೆ ಬಿಜೆಪಿಯೇ ವಿರೋಧವಾಗುತ್ತಾ? ಇಂತಹ ಹಲವು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ.

ವರದಿ : ರಾಜೇಂದ್ರ ಸಿಂಹ, ಟಿವಿ9 ಕೋಲಾರ

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Fri, 3 March 23