ಕೊಪ್ಪಳ: ರಾಜ್ಯದಲ್ಲಿ ಪಕ್ಷ ಕಟ್ಟಿದ ಪ್ರಮುಖ ನಾಯಕರಲ್ಲಿ ನಾನೂ ಒಬ್ಬನಾಗಿದ್ದು, ರಾಜ್ಯಾದ್ಯಂತ ಹಗಲಿರುಳು ಓಡಾಡಿ ಪಕ್ಷವನ್ನು ಕಟ್ಟಿಬೆಳೆಸಿದ್ದೇವೆ. ಹೀಗಾಗಿ ಪಕ್ಷದಲ್ಲಿ ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ಸ್ಪಷ್ಟನೆ ನೀಡಿದ್ದಾರೆ. ಕೊಪ್ಪಳ (Koppala)ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ಪಕ್ಷವನ್ನ ನೋಡಿಕೊಳ್ಳಲಿ. ನಮ್ಮ ಬಗ್ಗೆ ಅವರಿಗೇಕೆ ಚಿಂತೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ. ರಾಜ್ಯ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದೇವೆ, ಯಾವುದೇ ಗೊಂದಲಗಳಿಲ್ಲ. ನಾನು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು. ನಿನ್ನೆಯವರೆಗೂ ಕಾರ್ಯಕ್ರಮಕ್ಕೆ ಬಿಎಸ್ವೈ ಅವರಿಗೆ ಆಹ್ವಾನ ಇರಲಿಲ್ಲ. ಕೊನೇ ಕ್ಷಣದಲ್ಲಿ ನಿನ್ನೆ ಆಹ್ವಾನಿಸಿದ ಹಿನ್ನಲೆ ಹೆಲಿಕಾಪ್ಟರ್ ಮೂಲಕ ಯಡಿಯೂರಪ್ಪ ಅವರು ಕೊಪ್ಪಳಕ್ಕೆ ಬಂದಿಳಿದರು. ಈ ವೇಳೆ ಸ್ಥಳೀಯ ಬಿಜೆಪಿ ಮುಖಂಡರು ತಮ್ಮ ನಾಯಕನಿಗೆ ಸ್ವಾಗತ ಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾಜಿ ಮುಖ್ಯಮಂತ್ರಿಯವರು ಮಾತನಾಡಿದರು.
ಇದನ್ನೂ ಓದಿ: ವರ್ಚ್ಯೂವಲ್ ಮೂಲಕ ಜಿಲ್ಲಾ ಬಿಜೆಪಿ ಕಾರ್ಯಾಲಯಗಳ ಉದ್ಘಾಟನೆ; ಮಧ್ಯಾಹ್ನ ಕೊಪ್ಪಳಕ್ಕೆ ಜೆಪಿ ನಡ್ಡಾ ಆಗಮನ
ಹಗುರವಾಗಿ ಮಾತನಾಡಿ ಪ್ರಚಾರ ಪಡೆಯುತ್ತೇನೆಂಬುದು ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ನಲ್ಲಿ ಬಣಗಳನ್ನು ಕೂಡಿಸಲು ಹರಸಾಹಸ ಪಡುತ್ತಿದ್ದಾರೆ. ಭಿನ್ನಮತ ಶಮನ ಮಾಡಲು ಮಲ್ಲಿಕಾರ್ಜುನ ಖರ್ಗೆ ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ನವರು ಹೀಗೆ ಹಗುರವಾಗಿ ಮಾತನಾಡುತ್ತಲೇ ಇರಲಿ ಎಂದು ಮನೆಯೊಂದು ನೂರು ಬಾಗಿಲಾಗಿದೆ ಎಂಬ ಹೇಳಿಕೆ ನೀಡಿದ ಖರ್ಗೆಗೆ ಬಿಎಸ್ವೈ ತಿರುಗೇಟು ನೀಡಿದರು.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತೇವೆ. ಪಕ್ಷದೊಳಗೆ ಕಡೆಗಣನೆ ಮಾಡಿದ್ದಾರೆ ಎಂಬುವುದು ಸುಳ್ಳು. ಜನಾರ್ಧನರಡ್ಡಿ ನನಗೆ ಸಿಕ್ಕಿದ್ದರೂ ಅವರನ್ನು ಕಡೆಗಣನೆ ಮಾಡುವ ಪ್ರಶ್ನೆ ಇಲ್ಲ. ಅವರ ಪ್ರಕರಣಗಳಿವೆ, ಅವುಗಳು ಮುಗಿದ ನಂತರ ಅವರು ಬಿಜೆಪಿಯಲ್ಲಿರುತ್ತಾರೆ. ಅವರನ್ನು ಕರೆದುಕೊಳ್ಳುತ್ತೇವೆ. ಈಗ ಗಂಗಾವತಿಯಲ್ಲಿ ಮನೆ ಮಾಡಿದ್ದರಿಂದ ಈ ಗೊಂದಲವಿದೆ. ಆದರೆ ಅವರು ನಮ್ಮೊಂದಿಗೆ ಇರುತ್ತಾರೆ ಎಂದರು.
ಇದನ್ನೂ ಓದಿ: ಜನಾರ್ಧನ ರೆಡ್ಡಿ ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ, ಪಕ್ಷದ ಟಿಕೆಟ್ನಿಂದಲೇ ಸ್ಪರ್ಧಿಸುತ್ತಾರೆ: ಬಿ ಎಸ್ ಯಡಿಯೂರಪ್ಪ
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೊಂದಿಗೆ ನನ್ನ ಆಸೆಯಾಗಿದೆ. ವಿಜಯೇಂದ್ರ ಎಲ್ಲಿ ಸ್ಪರ್ಧಿಸಬೇಕು ಎನ್ನುವುದು ಪಕ್ಷ ನಿರ್ಧರಿಸುತ್ತದೆ. ಕಾಂಗ್ರೆಸ್ ಪ್ರತ್ಯೇಕ ಯಾತ್ರೆ ಬಗ್ಗೆ ನಾನೇನು ಹೇಳುವುದಿಲ್ಲ, ಅದು ಅವರ ಪಕ್ಷದ ವಿಚಾರ ಎಂದರು.
ಬಿಎಸ್ವೈ ಕಡೆಗಣನೆ; ಶಿಷ್ಯ ಬಳಗದಿಂದ ಹೈಕಮಾಂಡ್ಗೆ ದೂರು ಸಾಧ್ಯತೆ
ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈ ಅವರನ್ನು ರಾಜ್ಯ ಬಿಜೆಪಿ ನಾಯಕರು ನಡೆದುಕೊಳ್ಳುವ ರೀತಿ ವಿರುದ್ಧ ಯಡಿಯೂರಪ್ಪ ಶಿಷ್ಯ ಬಳಗ ಹೈಕಮಾಂಡ್ಗೆ ದೂರು ನೀಡುವ ಸಾಧ್ಯತೆ ಇದೆ. ಕೊಪ್ಪಳದಲ್ಲಿ ಕಾರ್ಯಕ್ರಮಕ್ಕೆ ಕೊನೇ ಕ್ಷಣದವರೆಗೆ ಆಹ್ವಾನ ನೀಡದಿರುವ ಹಿನ್ನಲೆ ಎಚ್ಚೆತ್ತ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ತಂಡ ಭಾನುವಾರದಂದು ದೆಹಲಿಗೆ ತೆರಳಿ ವರಿಷ್ಠರ ಗಮನಕ್ಕೆ ತರಲು ಮುಂದಾಗಿದ್ದಾರೆ. ಚುನಾವಣೆ ಹತ್ತಿರಕ್ಕೆ ಬಂದಾಗ ನಾಯಕರ ಈ ರೀತಿಯ ವರ್ತನೆಯು ಪಕ್ಷಕ್ಕೆ ತೀವ್ರ ಪೆಟ್ಟು ಕೊಡುವ ಬಗ್ಗೆ ಹೈಕಮಾಂಡಗೆ ಮನವರಿಕೆ ಮಾಡಿಕೊಡುವ ಸಾದ್ಯತೆ ಇದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ದೆಹಲಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಅಭಿವೃದ್ಧಿ ವಿಚಾರದ ಬಗ್ಗೆ ಪಕ್ಷದ ವರಿಷ್ಠರನ್ನ ಭೇಟಿ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಸಹೋದರನ ಪುತ್ರನ ಸಾವು ಸಂಭವಿಸಿದ ದಿನದಿಂದ ಹೊನ್ನಾಳಿಯಲ್ಲಿಯೇ ಇರುವ ರೇಣುಕಾಚಾರ್ಯ, ದಿಢೀರ್ ದೆಹಲಿ ಪ್ರವಾಸ ಕೈಗೊಂಡ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ