“ಅಧಿಕಾರ ಬೇಕಾದವರು ಡಿಕೆಶಿ ಜತೆ ಹೋಗಿ, ಪಕ್ಷ ಕಟ್ಟುವವರು ನನ್ನೊಂದಿಗೆ ಬನ್ನಿ”: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಮಾತು

ಹೊಸ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅಧಿಕಾರ ವಹಿಸಿಕೊಂಡಿದ್ದು, ಅಧಿಕಾರಾಕಾಂಕ್ಷಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಮನವಿ ಮಾಡಿರುವ ಹರಿಪ್ರಸಾದ್, ರಾಹುಲ್ ಗಾಂಧಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ. ಇದು ಕೇವಲ ಹುದ್ದೆಯಲ್ಲ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಜಯ ಎಂದು ಬಣ್ಣಿಸಿದ್ದಾರೆ. ಸಿದ್ಧಾಂತಕ್ಕೆ, ಜನರ ಹಿತಕ್ಕೆ ಆದ್ಯತೆ ನೀಡುವ ಮೂಲಕ ಪಕ್ಷವನ್ನು ಬಲಪಡಿಸಲು ಶ್ರಮಿಸುವುದಾಗಿ ತಿಳಿಸಿದ್ದಾರೆ.

ಅಧಿಕಾರ ಬೇಕಾದವರು ಡಿಕೆಶಿ ಜತೆ ಹೋಗಿ, ಪಕ್ಷ ಕಟ್ಟುವವರು ನನ್ನೊಂದಿಗೆ ಬನ್ನಿ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಮಾತು
ಬಿ.ಕೆ. ಹರಿಪ್ರಸಾದ್
Edited By:

Updated on: Jun 04, 2026 | 11:18 AM

ಬೆಂಗಳೂರು, ಜೂ.4: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದ ಸಚಿವ ಸ್ಥಾನ ವಂಚಿತರಿಗೆ ಹಾಗೂ ಅಧಿಕಾರ ಆಸೆ ಉಳ್ಳವರಿಗೆ ಅತ್ಯಂತ ಖಡಕ್ ಸಂದೇಶ ರವಾನಿಸಿದ್ದಾರೆ. “ಯಾರಿಗೆ ಅಧಿಕಾರ ಮತ್ತು ಸ್ಥಾನಮಾನ ಬೇಕೋ ಅವರು ಡಿ.ಕೆ. ಶಿವಕುಮಾರ್ ಜೊತೆಗೆ ಹೋಗಿ, ಪಕ್ಷವನ್ನು ಸದೃಢವಾಗಿ ಬೆಳೆಸಬೇಕು ಅನ್ನೋರು ನಮ್ಮ ಜೊತೆಗೆ ಬನ್ನಿ” ಎಂದು ಹೇಳುವ ಮೂಲಕ ಕಾಂಗ್ರೆಸ್​​​​ ನಾಯಕರಿಗೆ ಹಾಗೂ ಸಚಿವ ಆಕ್ಷಾಂಕಿಗಳಿಗೆ ಖಡಕ್​​​​​​ ಮಾತುಗಳನ್ನು ಹೇಳಿದ್ದಾರೆ. ಈ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಿ.ಕೆ. ಹರಿಪ್ರಸಾದ್, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ನಾಯಕರಿಗೆ ಕಳಕಳಿಯ ವಿನಂತಿ ಮಾಡಿದರು. “ಸರ್ಕಾರದಲ್ಲಿ ಈಗಾಗಲೇ ಬೇರೆ ಬೇರೆ ಕೆಲಸ ಮಾಡಿದವರು ಈಗ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು. ನಾವೆಲ್ಲರೂ ಸೇರಿ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಸಂಘಟನೆ ಮತ್ತು ಸರ್ಕಾರ ಎರಡನ್ನೂ ಸಮತೋಲನವಾಗಿ ಹಂಚಿಕೊಂಡು ಮುಂದೆ ಹೋಗೋಣ. ನನ್ನ ಪೂರ್ವಜರು ಮಾಡಿದ ಪುಣ್ಯದಿಂದಾಗಿ ಈ ಪವಿತ್ರ ಪಕ್ಷದ ಅಧ್ಯಕ್ಷ ಹುದ್ದೆ ನನಗೆ ಸಿಕ್ಕಿದೆ. ಸಾಮಾನ್ಯ ಕಾರ್ಯಕರ್ತರಿಗೆ ಏನೇ ತೊಂದರೆಯಾದರೂ ನಾನು ಸದಾ ಅವರ ಜೊತೆ ಇರುತ್ತೇನೆ” ಎಂದು ಭರವಸೆ ನೀಡಿದರು.

ಇಲ್ಲಿದೆ ನೋಡಿ ಎಕ್ಸ್​​​​​ ಪೋಸ್ಟ್​​:

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಎಐಸಿಸಿ (AICC) ಹೈಕಮಾಂಡ್ ನಾಯಕರಿಗೆ ಧನ್ಯವಾದ ತಿಳಿಸಿ ಬಿ.ಕೆ. ಹರಿಪ್ರಸಾದ್ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. “ಹೈಕಮಾಂಡ್‌ನ ಈ ನಿರ್ಧಾರ ಕೇವಲ ಒಬ್ಬ ವ್ಯಕ್ತಿಗೆ ನೀಡಿರುವ ಹುದ್ದೆಯಲ್ಲ. ಇದು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ದುರ್ಬಲ ವರ್ಗಗಳ ಸಬಲೀಕರಣಕ್ಕೆ ಸಂದ ಜಯ. ನನ್ನ ಜೀವನ ಪೂರ್ತಿ ಕಾಂಗ್ರೆಸ್ ತತ್ವಗಳಿಗಾಗಿ ಮೀಸಲಿಟ್ಟಿದ್ದೇನೆ. ನನಗೆ ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯದ ಖಡಕ್ ಎಚ್ಚರಿಕೆ: 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿ ಏನೂ ಎಂಬುದನ್ನ ತೋರಿಸುತ್ತೇವೆ

ಪ್ರಸ್ತುತ ದೇಶದಲ್ಲಿ ದ್ವೇಷದ ರಾಜಕಾರಣ ಮತ್ತು ಧರ್ಮದ ಹೆಸರಿನಲ್ಲಿ ಧ್ರುವೀಕರಣ ನಡೆಯುತ್ತಿದೆ. ಸಂವಿಧಾನ ವಿರೋಧಿ ಪ್ರವೃತ್ತಿಗಳು ಹೆಚ್ಚಾಗುತ್ತಿರುವ ಇಂತಹ ಕಾಲದಲ್ಲಿ ನನಗೆ ರಾಜ್ಯ ಕಾಂಗ್ರೆಸ್‌ನ ನೇತೃತ್ವ ಸಿಕ್ಕಿರುವುದು ದೊಡ್ಡ ಸವಾಲಾಗಿದೆ. ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ರೈತರು ಮತ್ತು ಯುವಜನರ ಆಶೋತ್ತರಗಳನ್ನು ನಾನು ಬಲ್ಲೆ. ಸಂವಿಧಾನವೇ ನಮ್ಮ ದಾರಿ, ಸಾಮಾಜಿಕ ನ್ಯಾಯವೇ ನಮ್ಮ ಗುರಿ. ಈ ಸವಾಲನ್ನು ಕಾರ್ಯಕರ್ತರ ಬಲದಿಂದ ಯಶಸ್ವಿಯಾಗಿ ಎದುರಿಸುತ್ತೇನೆ. ಎಲ್ಲಾ ನಾಯಕರು ಹಾಗೂ ಪ್ರಜಾಪ್ರಭುತ್ವವಾದಿಗಳು ನನ್ನೊಂದಿಗೆ ಕೈಜೋಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ” ಎಂದು ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us