ಲೋಕಾಯುಕ್ತ ದಾಳಿಯಿಂದ ಬಿಜೆಪಿ ಭ್ರಷ್ಟಾಚಾರಕ್ಕೆ ಸಾಕ್ಷಿ ಸಿಕ್ಕಿದೆ; ಡಿಕೆ ಶಿವಕುಮಾರ್

|

Updated on: Mar 02, 2023 | 11:04 PM

ಇಷ್ಟು ದಿನ ಬಿಜೆಪಿಯವರು ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳುತ್ತಿದ್ದರು. ಈಗ ಲೋಕಾಯುಕ್ತದವರೇ ಸಾಕ್ಷಿ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರು: ಲೋಕಾಯುಕ್ತ ದಾಳಿಯಿಂದ ಬಿಜೆಪಿ (BJP) ಭ್ರಷ್ಟಾಚಾರಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್‌ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಬೆನ್ನಲ್ಲೇ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮಾತನಾಡಿದ ಅವರು, ಇಷ್ಟು ದಿನ ಬಿಜೆಪಿಯವರು ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳುತ್ತಿದ್ದರು. ಈಗ ಲೋಕಾಯುಕ್ತದವರೇ ಸಾಕ್ಷಿ ಕೊಟ್ಟಿದ್ದಾರೆ. ಈಗ ಯಾರು ರಾಜೀನಾಮೆ ಕೊಡುತ್ತಾರೆ? ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರಾ? ಸಚಿವರು ಕೊಡುತ್ತಾರಾ ಅಥವಾ ನಿಗಮ ಮಂಡಳಿ ಅಧ್ಯಕ್ಷರು ಕೊಡುತ್ತಾರಾ ಎಂದು ಪ್ರಶ್ನಿಸಿದರು.

‘10 ಲಕ್ಷ 20 ಲಕ್ಷಕ್ಕೆಲ್ಲ ಐಟಿ, ಇಡಿಯವರು ಓಡಿ ಬರುತ್ತಾರೆ’

ರಾಜ್ಯದಲ್ಲಿ ಎಲ್ಲಿ ನೋಡಿದರೂ ಲಂಚಾವತಾರ ತಾಂಡವವಾಡುತ್ತಿದೆ. 10 ಲಕ್ಷ ಅಥವಾ 20 ಲಕ್ಷಕ್ಕೆಲ್ಲ ಐಟಿ, ಇಡಿಯವರು ಓಡಿ ಬರುತ್ತಾರೆ. ಶಾಸಕರ ಪುತ್ರ ಪ್ರಶಾಂತ್​ ಕಚೇರಿಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಎಲ್ಲಿ ಹೋಗಿದೆ ಎಂದು ಡಿಕೆಶಿ ಪ್ರಶ್ನಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು. ಸಿದ್ದರಾಮಯ್ಯ, ನಾನು ಅಂದು ವಿಧಾನಸೌಧದಲ್ಲಿ ಧರಣಿ ಮಾಡುತ್ತಿದ್ದಾಗ ಗೋಡೆ ಬಡಿದಿದ್ದೆವು. ಆಗ ವಿಧಾನಸೌಧದ ಗೋಡೆಗೆ ಬಡಿದಾಗ ಕಾಸು ಕಾಸು ಎನ್ನುತ್ತಿತ್ತು. ಡಿ. ಕೆಂಪಣ್ಣ 40%, ಮಠಾಧೀಶರು 30%, ವಿಶ್ವನಾಥ್ 20% ಆರೋಪ ಮಾಡಿದ್ದರು ಎಂದು ಡಿಕೆಶಿ ಹೇಳಿದರು.

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಪ್ರಶಾಂತ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆಎಸ್​ಡಿಎಲ್​ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚ ಪಡೆಯುತ್ತಿದ್ದರು ಎನ್ನಲಾಗಿದೆ. ಬೇರೆ ಟೆಂಡರ್​​ಗೆ ಸಂಬಂಧಿಸಿ ಇತರೆ ಮೂವರು ಕಚೇರಿಯಲ್ಲಿದ್ದರು. ಅವರೂ ಸಹ ಪ್ರಶಾಂತ್​​ಗೆ ಹಣ ನೀಡಲುಬಂದಿದ್ದರು. ಅವರನ್ನೂ ಬಂಧಿಸಲಾಗಿದೆ. ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ; ಹೀಗಿತ್ತು ಕಾರ್ಯಾಚರಣೆ

ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ಜೋರಾಗಿರುವ ಸಂದರ್ಭದಲ್ಲೇ ಬಿಜೆಪಿ ಶಾಸಕರ ಪುತ್ರ ಲಂಚ ಪಡೆಯುತ್ತಿದ್ದಾಗ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಸಾಧನೆ ತೋರಿಸಿ ಮತ ಕೇಳುತ್ತೇವೆ; ಜಮೀರ್ ಅಹ್ಮದ್

ನಾವು ಸಾಧನೆ ತೋರಿಸಿ ಮತ ಕೇಳುವವರು. ಬಿಜೆಪಿಯವರಂತೆ ಹಿಂದೂ – ಮುಸ್ಲಿಂ ಜಗಳ ಸೃಷ್ಟಿಸಿ ಮತ ಕೇಳುವುದಿಲ್ಲ. ಅವರ ಸಾಧನೆ 40 ಪರ್ಸಂಟ್ ಕಮಿಷನ್ ಹೊಡೆಯುವುದು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಟೀಕಿಸಿದ್ದಾರೆ. ಹುಕ್ಕೇರಿಯಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ರಾಜ್ಯದ ಜನರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅನ್ನುತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 pm, Thu, 2 March 23