ಹಾಸನ: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಹೇಳಿದ್ದೆಲ್ಲವನ್ನೂ ಮಾಡಿದ್ದಾರಾ? ಬಿಜೆಪಿಯವರಿಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ ಎಂದು ಹಾನಸದಲ್ಲಿ (Hassan) ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ. 10 ಕೆಜಿ ಅಕ್ಕಿ ನೀಡದಿದ್ದರೆ ಜುಲೈ ಒಂದರಿಂದ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿ (BJP) ನಾಯಕರಿಗೆ ಹಾಸನದಲ್ಲಿ ಸವಾಲು ಹಾಕಿದ ಸಿದ್ದರಾಮಯ್ಯ, ಬಿಜೆಪಿಯವರು ಪ್ರತಿಭಟನೆ ಮಾಡುವ ಬದಲು ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಕೊಡಿಸಲಿ ಎಂದರು.
ರಾಜಕೀಯ ಗಿಮಿಕ್ ಮಾಡಬಾರದು ಎಂದು ಹೇಳಿದ ಸಿದ್ದರಾಮಯ್ಯ, ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಅಕ್ಕಿಯನ್ನು ಖರೀದಿ ಮಾಡುತ್ತೇವೆ. ಬಿದಿಗಿಳಿದು ಹೋರಾಟ ಮಾಡುವ ಬದಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅಕ್ಕಿ ಕೊಡಿಸಲಿ. ಬಡವರಿಗೆ ಅಕ್ಕಿ ಕೊಡಬೇಕನ್ನುವುದು ನಮ್ಮ ನಿಲುವಾಗಿದೆ ಎಂದರು. ಕೇಂದ್ರ ಸರ್ಕಾರದವರು ಈಗ ರಾಜಕೀಯ ಮಾಡುತ್ತಿದ್ದಾರಲ್ವಾ, ದ್ವೇಷದ ರಾಜಕಾರಣ ಮಾಡುತ್ತೀರಲ್ವಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿ ನಿಮ್ಮ ಬಳಿ ಕೇಳಿದರೆ ಅಕ್ಕಿ ಕೊಡಿಸಿ ಅಂತ ನೀವು ದಯಮಾಡಿ ಹೇಳಿ ಎಂದು ಮಾಧ್ಯಮದವರಿಗೆ ಸೂಚಿಸಿದರು.
ಕೇಂದ್ರ ಸರ್ಕಾರವನ್ನು ಕೇಳಿ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೀರಾ ಎಂಬ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅಶೋಕ್, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಕೇಳಿ ಘೋಷಣೆ ಮಾಡಬೇಕಿತ್ತಾ? ನಾವು ಘೋಷಣೆ ಮಾಡಿದ್ದೆವು. ಆರಂಭದಲ್ಲಿ ಎಫ್‌ಸಿಐ ಹೆಚ್ಚುವರಿ ಅಕ್ಕಿ ಕೊಡಲು ಒಪ್ಪಿತ್ತು. ನಂತರ ಕೊಡುವುದಿಲ್ಲ ಎಂದು ಪತ್ರ ಬರೆದಿದೆ. ಇದರ ಅರ್ಥ ಏನು? ರಾಜಕೀಯ ಅಲ್ಲವೇ ಇದು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Anna Bhagya Scheme: 3 ಏಜನ್ಸಿಗಳಿಂದ ಅಕ್ಕಿ ವಿತರಣೆಗೆ ತಾತ್ವಿಕ ಒಪ್ಪಿಗೆ: ವಾರದಲ್ಲಿ ಅನ್ನಭಾಗ್ಯ ಯೋಜನೆ ಭವಿಷ್ಯ ನಿರ್ಧಾರ
ಬಡವರಿಗೆ ಅಕ್ಕಿ ವಿತರಣೆಯಲ್ಲೂ ರಾಜಕೀಯ ಮಾಡುವುದು ನೀಚತನ. ನಾವೇನು ಪುಕ್ಕಟೆ ಅಕ್ಕಿ ಕೇಳಿಲ್ಲ, ಹಣ ಕೊಡುತ್ತೇವೆ ಎಂದರೂ ಕೊಡುತ್ತಿಲ್ಲ. ಏನೇ ಆಗಲಿ ನಾವು 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ವಿರೋಧ ಪಕ್ಷದ ಮಾತಿಗೆ ಯಾರೂ ಕಿವಿಗೊಡಬೇಡಿ. ನಾವು ಹೇಳಿದ 5 ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಈ ಹಿಂದೆ ನಾವು 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೆವು ಎಂದರು.
2022-23 ರಲ್ಲಿ ತೇರ್ಗಡೆಹೊಂದಿರುವ ಪದವಿ ವಿದ್ಯಾರ್ಥಿಗಳು, ಡಿಪ್ಲೊಮಾ ಓದಿದವರಿಗೆ 24 ತಿಂಗಳು ಯುವನಿಧಿ ಯೋಜನೆ ಕೊಡುತ್ತೇವೆ. ಅಷ್ಟರೊಳಗೆ ಅವರು ಕೆಲಸ ಹುಡುಕಿಕೊಳ್ಳಬೇಕು. ಒಂದು ವೇಳೆ ಕೆಲಸ ಸಿಕ್ಕಿದರೆ ಅವರಿಗೆ ಯುವನಿಧಿ ಕೊಡುವುದನ್ನು ನಿಲ್ಲಿಸಲಾಗುವುದು ಎಂದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ಮಾತನಾಡಿದ ಸಿಎಂ, ಆಗಸ್ಟ್ 16ರಂದು ಯೋಜನೆ ಜಾರಿಯಾಗಲಿದೆ. ಇದರಿಂದ 1.28 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದರು. ಈ ವೇಳೆ ಹಿರಿಯ ನಾಗರಿಕರಿಗೆ ಏನು ಕೊಡುತ್ತೀರಾ ಎಂದು ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ‘ಏಯ್ ಕೂತ್ಕೊಳಯ್ಯಾ’ ಎಂದರು.
ಈ ಘಟನೆ ಆಗುತ್ತಿದ್ದಂತೆ, ಶಿವಲಿಂಗೇಗೌಡರನ್ನು ಮಂತ್ರಿ ಮಾಡುವಂತೆ ಬೆಂಬಲಿಗರು ಘೋಷಣೆ ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮುಂದೆ ಶಿವಲಿಂಗೇಗೌಡರನ್ನು ಮಂತ್ರಿ ಮಾಡಲಾಗುವುದು ಎಂದರು. ಇದಕ್ಕೆ ಬೆಂಬಲಿಗರು ಸಿಳ್ಳೆ ಚಪ್ಪಾಳೆ ಹೊಡೆದರು.
ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಐದೂವರೆ ಲಕ್ಷ ಹುದ್ದೆಗಳನ್ನು ಒಂದೇ ಬಾರಿ ಭರ್ತಿ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದರು. 5 ಗ್ಯಾರಂಟಿ ಅನುಷ್ಠಾನಕ್ಕೆ ವರ್ಷಕ್ಕೆ 59 ಸಾವಿರ ಕೋಟಿ ಹಣ ಬೇಕಾಗಿರುವುದರಿಂದ ಈ ವರ್ಷ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದರು.
ಇಂದು ಬೆಂಗಳೂರು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರೆ ಅದಕ್ಕೆ ಕಾರಣ ಕೆಂಪೇಗೌಡರು. ಚಿಕ್ಕಂದಿನಲ್ಲೇ ವಿಜಯನಗರ ಸಾಮ್ರಾಜ್ಯ ನೋಡಿ ಅಂತಹ ಸುಂದರ ನಗರ ಕಟ್ಟಬೇಕು ಎಂದು ಕನಸು ಕಟ್ಟಿದವರು. 21 ನೇ ವಯಸ್ಸಿಗೆ ಗದ್ದುಗೆ ಏರಿದ ಕೆಂಪೇಗೌಡರು ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ದೂರ ದೃಷ್ಟಿ ಇಲ್ಲದವರು ಒಳ್ಳೆ ನಾಡು, ಒಳ್ಳೆಯ ದೇಶ ಕಟ್ಟಲು ಸಾದ್ಯವಿಲ್ಲ. ಕೆಂಪೇಗೌಡರಿಗೆ ದೂರ ದೃಷ್ಟಿ ಇದ್ದಿದ್ದರಿಂದಲೇ ಈಗಿನ ಬೆಂಗಳೂರು ನಿರ್ಮಾಣ ಆಗಿದೆ. ಸಮಾಜ ಸುದಾರಕರು ಜಾತಿಗೆ ಸೀಮಿತ ಆಗಬಾರದು ಅವರು ಸಮಾಜದ ಸ್ವತ್ತಾಗಬೇಕು. ಹಾಗಾಗಿಯೇ ಅನೇಕ ಮಹನೀಯರ ಜಯಂತಿಯನ್ನು ಮಾಡಿದೆ. ಅದರಲ್ಲಿ ಕೆಂಪೇಗೌಡ ಜಯಂತಿ ಕೂಡ ಒಂದು. ಕೆಂಪೇಗೌಡ ಅವರು ನಾಡಿನ ಏಳು ಕೋಟಿ ಜನರ ಆಸ್ತಿ ಎಂದರು.
ರಾಯಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ