ಕಲಬುರಗಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನಿತ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿರುವ ವಿಚಾರವಾಗಿ ಆಳಂದ ಶಾಸಕ ಬಿಆರ್ ಪಾಟೀಲ್ (BR Patil) ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿಗೆ ಬರೆಯಲಾಗಿದೆ ಎಂಬ ಪತ್ರ ನಕಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕಲಬುರಗಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಹಳೆಯ ಲೆಟರ್‌ಹೆಡ್ ಬಳಸಿ ಪತ್ರ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಶಾಸಕನಾಗಿದ್ದಾಗ ಬರೆದಿದ್ದ ಲೆಟರ್‌ಹೆಡ್ ಬಳಸಿ ಈಗ ವೈರಲ್ ಮಾಡಿದ್ದಾರೆ. ವೈರಲ್ ಮಾಡಲಾಗಿರುವ ಪತ್ರದಲ್ಲಿ ಶಾಂತಿನಗರದ ಮನೆಯ ವಿಳಾಸವಿದೆ. ಹೊಸ ಲೆಟರ್‌ಹೆಡ್‌ನಲ್ಲಿ ಅಕ್ಕಮಹಾದೇವಿ ಕಾಲೋನಿ ನಿವಾಸದ ವಿಳಾಸವಿದೆ. ನನ್ನ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಲು ನಕಲಿ ಪತ್ರ ಸೃಷ್ಟಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಲೆಟರ್‌ಹೆಡ್ ನಕಲಿ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ನಾವು ಸಿಎಂಗೆ ಪತ್ರ ಬರೆದಿರುವುದು ನಿಜ. ಪ್ರಿಯಾಂಕ್ ಖರ್ಗೆ ಅವರ ತಂದೆಗೆ ನೀಡುವಷ್ಟು ಗೌರವ ನನಗೂ ನೀಡ್ತಾರೆ ಎಂದು ಪಾಟೀಲ್ ಹೇಳಿದ್ದಾರೆ.
ನಕಲಿ ಪತ್ರವನ್ನು ಬಿಜೆಪಿಯವರೇ ವೈರಲ್ ಮಾಡಿಸಿರಬಹುದು ಎಂದು ಅವರು ಆರೋಪಿಸಿದ್ದಾರೆ. ಈ ವಿಚಾರವಾಗಿ ಎಸ್‌ಪಿಗೆ ದೂರು ನೀಡುತ್ತೇನೆ ಎಂದೂ ಅವರು ತಿಳಿಸಿದ್ದಾರೆ. ಉಸ್ತುವಾರಿ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಕಲಬುರಗಿಯ ಶಾಸಕರ ಸಹಿಯುಳ್ಳ ಪತ್ರವನ್ನು ಬಿಆರ್ ಪಾಟೀಲ್ ಮುಖ್ಯಮಂತ್ರಿಗೆ ಬರೆದಿದ್ದಾರೆ ಎನ್ನಲಾಗಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: BR Patil: ಮೂರನೇ ವ್ಯಕ್ತಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಸಚಿವರು; ಆಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಗಂಭೀರ ಆರೋಪ
ಕಾಂಗ್ರೆಸ್ ಶಾಸಕರೇ ಸಚಿವರ ವಿರುದ್ಧ ನೀಡಿದ್ದಾರೆ ಎನ್ನಲಾದ ದೂರನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಿದ್ದರಾಮಯ್ಯನವರೇ, ನಿಮ್ಮ ಶಾಸಕರೇ ವರ್ಗಾವಣೆ ದಂಧೆ ಹಾಗೂ ಸಚಿವರ ದುರ್ವರ್ತನೆ ವಿರುದ್ಧ ಪತ್ರ ಬರೆದು ಇದೀಗ ಅದು ಋಜುವಾತಾಗಿದೆ. ಪತ್ರದಲ್ಲಿ ಮೂರನೇ ವ್ಯಕ್ತಿ ಎಂದು ಪ್ರಸ್ತಾಪಿಸಿರುವುದು ಶ್ಯಾಡೋ ಸಿಎಂರವರ ಬಗ್ಗೆಯೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ