ಬೆಂಗಳೂರು: ಕೊರೊನಾ ಸಮಯದಲ್ಲಿ ಪ್ರತಿನಿತ್ಯ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇವೆ. ನಾವು ಮಾಲೀಕರಲ್ಲ, ಜನ ಸೇವಕರು. ನಮ್ಮ ಕ್ಷೇತ್ರದಲ್ಲಿ ನಾವು ಮಾಡಿರುವ ಕೆಲಸವನ್ನು ಸಿಎಂ ಯಡಿಯೂರಪ್ಪರಿಗೆ ತಿಳಿಸಿದ್ದೇವೆ. ನಿಮ್ಮ ಜೊತೆಗೆ ನಾವಿದ್ದೇವೆಂದು ಭರವಸೆ ತುಂಬಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ನಾವು 18 ಶಾಸಕರು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ನಮ್ಮ ಕ್ಷೇತ್ರಗಳ ಕೊವಿಡ್ ನಿರ್ವಹಣೆಯನ್ನು ಸಮರ್ಥವಾಗಿ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದೇವೆ. ಕೊವಿಡ್ ಸೋಂಕಿತರು ಇರುವ ವಾರ್ಡ್ ಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಅಂತಹ ಸಂದರ್ಭದಲ್ಲಿ ನಾವು ಯಾರೂ ಬೆಂಗಳೂರಿಗೆ ಬಂದಿರಲಿಲ್ಲ. ನಮ್ಮ ಕ್ಷೇತ್ರದಲ್ಲಿ ಆಕ್ಸಿಜನ್ ಘಟಕ ವ್ಯವಸ್ಥೇ ಮಾಡಿದ್ದೇವೆ. ಆಕ್ಸಿಜನ್ ಸಾಂದ್ರಕ ತರಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಕೊವಿಡ್ ಎರಡೂ ಅಲೆಯನ್ನು ಎದುರಿಸಿದ್ದೇವೆ. ಹೀಗಾಗಿ ನಾವು ಮಾಲೀಕರಲ್ಲ, ಜನರ ಸೇವಕರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಾಖ್ಯಾನಿಸಿದರು.
ಸರ್ಕಾರ ಒಳ್ಳೆ ಕೆಲಸ ಮಾಡಿದೆ ಎಂಬ ಒಳ್ಳೆ ಅಭಿಪ್ರಾಯ ಜನರಲ್ಲಿದೆ. ಸಿಎಂ ಯಡಿಯೂರಪ್ಪರ ವರ್ಚಸ್ಸು ಹಿಂದೆ 2008ರಲ್ಲಿ ಹೇಗಿತ್ತೋ ಈಗಲೂ ಹಾಗೇ ಇದೆ. ಇನ್ನಷ್ಟು ಜನಪರ ಯೋಜನೆ ಮಾಡಿ, ಸ್ಕೀಂ ಕೊಡಬೇಕು ಅಂತ ಸಿಎಂ ಯಡಿಯೂರಪ್ಪರಿಗೆ ವಿನಂತಿ ಮಾಡಿದ್ದೇವೆ. ನಿಮ್ಮ ಜೊತೆಗೆ ನಾವಿದ್ದೇವೆ ಅಂತ ಯಡಿಯೂರಪ್ಪರಿಗೆ ಹೇಳಿದ್ದೇವೆ ಎಂದು ಅವರು ತಿಳಿಸಿದರು.
ನಮಗೆ ಸಿಕ್ಸರ್, ಬೌಂಡರಿ ಬಾರಿಸೋದು ಗೊತ್ತು. ಕ್ಯಾಚ್ ಹಿಡಿಯುವುದು ಕೂಡ ನಮಗೆ ಗೊತ್ತಿದೆ. ಕೊರೊನಾ ಮುಗಿಯಲಿ ಎಲ್ಲಾ ಶಾಸಕರ ಬಗ್ಗೆ ತಿಳಿಯಲಿದೆ. ಇಲ್ಲಿ ಯಾರೂ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡುತ್ತಿಲ್ಲ. ಚನ್ನಪಟ್ಟಣದಲ್ಲಿ ಸೋತಿರುವ ವ್ಯಕ್ತಿಗೆ ನಾಚಿಕೆ ಆಗಬೇಕು. ತಾಕತ್ತಿದ್ದರೆ ನನ್ನ ವಿರುದ್ಧ ತೊಡೆ ತಟ್ಟಿ ಬರಲಿ. ಅರಣ್ಯ ಸಚಿವರಾಗಿ ಲೂಟಿ ಹೊಡೆದಿರುವುದುನ್ನು ಕೊರೊನಾ ಮುಗಿದ ಬಳಿಕ ಎಲ್ಲ ಬಹಿರಂಗ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ಇದನ್ನೂ ಓದಿ: ಕೊರೊನಾ ಗೆದ್ದ ಬಳ್ಳಾರಿಯ ಶತಾಯುಷಿ ದಂಪತಿ; ಹದಿನೈದು ದಿನಗಳಲ್ಲಿ ಕೊವಿಡ್ನಿಂದ ಗುಣಮುಖ
(MLA Renukacharya supports BS Yediyurappa as CM Karnataka BJP govt leader)