ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ನಾಳೆ (ಜೂನ್ 10) ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಜೆಡಿಎಸ್ (JDS) ದಳಪತಿಗಳು ಅಡ್ಡ ಮತದಾನದ ಆತಂಕದಲ್ಲಿದ್ದಾರೆ. ಕಾಂಗ್ರೆಸ್ (Congress) ನಾಯಕರು ಜೆಡಿಎಸ್ ನಮಗೆ ಬೆಂಬಲ ನೀಡಲಿ ಎಂದು ಹೇಳಿಕೆ ನೀಡುತ್ತಿದ್ದರೆ, ಜೆಡಿಎಸ್ನವರು ಹಲವು ಬಾರಿ ನಾವು ಬೆಂಬಲ ನಿಡಿದ್ದೇವೆ. ಈ ಬಾರಿ ಕಾಂಗ್ರೆಸ್ ಬೆಂಬಲ ಕೊಡಲಿ ಅಂತ ಹೇಳುತ್ತಿದ್ದಾರೆ. ಆದರೆ ಯಾರು ಯಾರಿಗೆ ಬೆಂಬಲ ಕೊಡುತ್ತಾರೆ ಅಂತ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ನಿನ್ನೆ ಮಾಧ್ಯಮದೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ವಾಪಸ್ ತೆಗೆಯುವ ಪ್ರಶ್ನೆಯೇ ಇಲ್ಲ ಅಂತ ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ.
ಜೆಡಿಎಸ್ ನಾಯಕರ ನಡವಳಿಕೆ ಗಮನಿಸಿದರೆ ಜೆಡಿಎಸ್ ಈ ಬಾರಿ ಕಾಂಗ್ರೆಸ್ನ ಬೆಂಬಲಿಸುವುದು ದೂರದ ಮಾತು. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ನ ಬೆಂಬಲಿಸುವಂತೆ ಮುಸ್ಲಿಂ ಮುಖಂಡರು ಹೆಚ್ಡಿ ದೇವೇಗೌಡರಿಗೆ ಪತ್ರ ಬರೆದಿದ್ದಾರೆ. ಆದರೆ ಪತ್ರ ಬರೆದವರು ಯಾರು ಎನ್ನುವ ಬಗ್ಗೆ ಪತ್ರದಲ್ಲಿ ಹೆಸರು ಉಲ್ಲೇಖವಾಗಿಲ್ಲ.
ಕುಮಾರಸ್ವಾಮಿ ಕಾಂಗ್ರೆಸ್ಗೆ ಬೆಂಬಲಿಸುವ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಕಾಂಗ್ರೆಸ್ ನಮಗೆ ಬೆಂಬಲ ಕೊಡಲಿ ಅಂತ ಹೇಳುತ್ತಿದ್ದಾರೆ. ಹೀಗಿದ್ದರೂ ಮಾಜಿ ಪ್ರಧಾನಿ ದೇವೇಗೌಡರಿಗೆ ಬೆಂಬಲ ನೀಡುವಂತೆ ಪತ್ರ ಬರೆದಿದ್ದಾರೆ. ಪತ್ರ ಬರೆದವರು ಯಾರು? ಪತ್ರ ಬರೆದು ಹೆಸರು ಉಲ್ಲೇಖಿಸದೇ ಇರಲು ಕಾರಣವೇನು? ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ನಿಮ್ ಜೊತಿ ಮಾತಾಡದೇ ಬ್ಯಾಡ, ನಾ ಹೇಳಾದೊಂದು ನೀವ್ ಬರ್ಯಾದು ಮತ್ತೊಂದು ಅಂದರು ಯತ್ನಾಳ್
ಜೆಡಿಎಸ್ನಿಂದ ಮಹತ್ವದ ನಿರ್ಧಾರ ಸಾಧ್ಯತೆ:
ನಾಳೆ ಚುನಾವಣೆ ನಡೆಯುತ್ತಿರುವುದರಿಂದ ಜೆಡಿಎಸ್ ಶಾಸಕರು ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಹೋಟೆಲ್ಗೆ ಶಿಫ್ಟ್ ಆಗುತ್ತಿದ್ದಾರೆ. ಶಾಸಕರ ಜೊತೆ ನಿನ್ನೆ ರಾತ್ರಿಯಿಂದ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ. ಹೆಚ್ಡಿಕೆ ಜೊತೆ ಹೋಟೆಲ್ನಲ್ಲಿ 10ಕ್ಕೂ ಹೆಚ್ಚು ಶಾಸಕರು ವಾಸ್ತವ್ಯ ಹೀಡಿದ್ದಾರೆ. ಉಳಿದ ಶಾಸಕರು ಇಂದು ಮಧ್ಯಾಹ್ನದ ಒಳಗೆ ಬರುವಂತೆ ಸೂಚನೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಇಂದು ಸಂಜೆ ಹೋಟೆಲ್ನಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆಯುತ್ತದೆ. ಶಾಸಕಾಂಗ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಜೆಡಿಎಸ್ ಆಫರ್ ತಿರಸ್ಕರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ:
ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಜೆಡಿಎಸ್ ಬೆಂಬಲಿಸಲಿ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಾತ್ಯತೀತ ತತ್ವದ ಮೇಲೆ ನಂಬಿಕೆ ಇದ್ದರೆ ನಮಗೆ ಬೆಂಬಲಿಸಲಿ. ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿಗೊಳಿಸಬೇಕು. ಅಲ್ಪಸಂಖ್ಯಾತರ ಮೇಲೆ ಜೆಡಿಎಸ್ಗೆ ಕಾಳಜಿ ಇದ್ದರೆ, ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಲಿ. ಈಗಲೂ ನನಗೆ ಜೆಡಿಎಸ್ ಮೇಲೆ ನಂಬಿಕೆ ಇದೆ. ಕೊನೆ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ವಾಪಸ್ ಪಡೀತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Thu, 9 June 22