ಲಿಂಗಸುಗೂರು: ‘ಮಾಂಸ ತಿಂದಿದ್ದು ನಿಜ ಅಂತ ಶಾಸಕ ಸಿಟಿ ರವಿ (CT Ravi) ಅವರೇ ಹೇಳಿದ್ದಾರೆ. ಆದರೆ, ಮಾಂಸ ತಿಂದು ದೇಗುಲದ ಒಳ ಪ್ರವೇಶಿಸಿಲ್ಲ. ನಾಗಬನದ ಹೊರಗಡೆ ನಿಂತು ಕೈಮುಗಿದಿರುವುದಾಗಿ ಹೇಳಿದ್ದಾರೆ. ಆದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾಗಲ್ಲ. ಮಾಂಸ ತಿಂದು ನೇರವಾಗಿ ದೇಗುಲಕ್ಕೆ ಹೋಗಿದ್ದರು. ಅದರಲ್ಲೂ, ಮಾಂಸ ಸೇವಿಸಿ ಧರ್ಮಸ್ಥಳ ಕ್ಷೇತ್ರದ ಒಳಗಡೆ ತೆರಳಿದ್ದರು. ಇದುವೇ ಸಿದ್ದರಾಮಯ್ಯಗೂ ರವಿಗೂ ಇರುವ ವ್ಯತ್ಯಾಸ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಮಾತನಾಡಿದ ಅವರು, ಸಿಟಿ ರವಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಟಿ ರವಿ ಅವರು ಇತ್ತೀಚೆಗೆ ಶಾಸಕ ಸುನೀಲ್ ನಾಯ್ಕ ಅವರ ಮನೆಗೆ ಭೇಟಿ ನೀಡಿ ನಂತರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ ಇರುವ ಹನುಮ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಅವರು ಮಾಂಸ ತಿಂದು ದೇಗುಲಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ್ದ ಅವರು, ನಾನು ಮಾಂಸ ಸೇವಿಸಿದ್ದು ನಿಜ. ಆದರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ. ಮಾಂಸ ಸೇವಿಸುತ್ತೇನೆ. ಆದರೆ ಮಾಂಸ ತಿಂದು ನಾನು ದೇವಸ್ಥಾನಕ್ಕೆ ಹೋಗಿಲ್ಲ. ಹೊಸದಾಗಿ ದೇವಸ್ಥಾನ ಕಟ್ಟಡ ಕಟ್ಟಲಾಗಿತ್ತು, ಬೀಗ ಕೂಡ ಹಾಕಿದ್ದರು ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: Siddaramaiah Press Meet: ಸದನದಲ್ಲಿ ಬೊಮ್ಮಾಯಿ ಸುಳ್ಳು ಹೇಳಿದ್ದಾರೆ; ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಈ ವಿಚಾರವಾಗಿ ಸಿದ್ದರಾಮಯ್ಯ ಕೂಡ ರವಿ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ನನ್ನ ವಿರುದ್ಧ ಅಂದು ಮೀನು ತಿಂದು ದೇಗುಲಕ್ಕೆ ಹೋದೆ ಎಂದು ಅಪಪ್ರಚಾರ ಮಾಡಿದ್ದವರೆಲ್ಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೃತ್ಯದಿಂದ ತಮ್ಮ ವಾಂತಿಯನ್ನು ತಾವೇ ತಿನ್ನುವಂತಾಗಿದೆ. ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು ಎಂದು ಅವರು ಹೇಳಿದ್ದರು.
ಜನಾರ್ದನ ರೆಡ್ಡಿ ಅವರ ನೂತನ ಪಕ್ಷದ ಬಗ್ಗೆ ಆ ಪಕ್ಷದ ವಿಚಾರ ತಮಗೆ ಬಿಡಿ ಅಂತಾ ಅಮಿತ್ ಶಾ ಹೇಳಿದ್ದಾರೆ ಎನ್ನಲಾದ ವದಂತಿಯನ್ನು ಅವರು ನಿರಾಕರಿಸಿದ್ದಾರೆ. ಇದೆಲ್ಲಾ ತಪ್ಪು ಮಾಹಿತಿ. ರೆಡ್ಡಿ ಪಕ್ಷವನ್ನು ನೋಡಿಕೊಳ್ಳುತ್ತೇನೆಂದು ಅಮಿತ್ ಶಾ ಹೇಳಿಲ್ಲ. ಜನಾರ್ದನರೆಡ್ಡಿ ಕೆಆರ್ಪಿಪಿಯ ಬಗ್ಗೆ ವರದಿ ಉಲ್ಲೇಖವಾಯಿತು. ಯೋಚನೆ ಮಾಡೋಣ ಅಂತ ಅಷ್ಟೇ ಅಮಿತ್ ಶಾ ಹೇಳಿದ್ದಾರೆ. ನೀವೇನು ತಲೆಕೆಡಿಸಿಕೊಳ್ಳಬೇಡಿ, ಕೆಲಸ ಮಾಡಿ ಅಂತಷ್ಟೇ ಹೇಳಿದ್ದಾರೆ. ಬದಲಿಗೆ, ರೆಡ್ಡಿ ಪಾರ್ಟಿ ವಿಚಾರ ತಮಗೆ ಬಿಡಿ ಅಂತ ಹೇಳಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ