Siddaramaiah Press Meet: ಸದನದಲ್ಲಿ ಬೊಮ್ಮಾಯಿ ಸುಳ್ಳು ಹೇಳಿದ್ದಾರೆ; ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ನಿನ್ನೆ(ಫೆ.23) ಸದನದಲ್ಲಿ ಬಜೆಟ್ ಮೇಲೆ ಚರ್ಚೆಗೆ ಸಿಎಂ ಬಸವರಾಜ್ ಬೊಮ್ಮಾಯಿ ವೀರಾವೇಷದಲ್ಲಿ ಉತ್ತರ ನೀಡಿದ್ದಾರೆ. ನನ್ನ ಮೇಲೆ ಎರಡು ಆರೋಪ ಮಾಡಿದ್ದಾರೆ. -ಸಿದ್ದರಾಮಯ್ಯ
ಬೆಂಗಳೂರು: ನಗರದ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ(Siddaramaiah) ಸುದ್ದಿಗೋಷ್ಠಿ ನಡೆಸಿ ಸಿಎಂ ಬೊಮ್ಮಾಯಿ(Basavaraj Bommai) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೆಂಪಣ್ಣ ಆಯೋಗದ ವರದಿ ಪ್ರಸ್ತಾಪಿಸಿದ್ದರು. ಅರ್ಕಾವತಿ ಬಡಾವಣೆ ಡಿನೋಟಿಫೈ ಬಗ್ಗೆ ಸಿಎಂ ಪ್ರಸ್ತಾಪ ಹಿನ್ನೆಲೆ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ.
ನಿನ್ನೆ(ಫೆ.23) ಸದನದಲ್ಲಿ ಬಜೆಟ್ ಮೇಲೆ ಚರ್ಚೆಗೆ ಸಿಎಂ ಬಸವರಾಜ್ ಬೊಮ್ಮಾಯಿ ವೀರಾವೇಷದಲ್ಲಿ ಉತ್ತರ ನೀಡಿದ್ದಾರೆ. ನನ್ನ ಮೇಲೆ ಎರಡು ಆರೋಪ ಮಾಡಿದ್ದಾರೆ. ಅದರಲ್ಲಿ ಒಂದು ಎಸಿಬಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಲೋಕಯುಕ್ತ ಮುಚ್ಚಿ, ಎಸಿಬಿ ಮಾಡಿದ್ದರು ಎಂದು ಬೊಮ್ಮಾಯಿ ಹೇಳಿದ್ದಾರೆ. ದೇಶದ 16 ರಾಜ್ಯಗಳಲ್ಲಿ ಎಸಿಬಿ, ಲೋಕಾಯುಕ್ತ ಎರಡೂ ಇದೆ. ಹಾಲಿ ಸರ್ಕಾರದ ಎಜಿ ಇದನ್ನ ಕೋರ್ಟ್ ನಲ್ಲಿ ಹೇಳಿದ್ದಾರೆ.
ನಾನು ಇದನ್ನ ಹೇಳ್ತಿಲ್ಲ. ಎಸಿಬಿ ಪ್ರತ್ಯೇಕ ವಿಭಾಗ. ಲೋಕಾಯುಕ್ತಕ್ಕೂ, ಎಸಿಬಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನ ಸರ್ಕಾರದ ಅಡ್ವೋಕೆಟ್ ಜನರಲ್ ಹೇಳಿದ್ದಾರೆ. ಎಸಿಬಿ ಸರಿ ಮಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರದಲ್ಲಿ ಲೋಕಾಯುಕ್ತ ಮುಚ್ಚಿರಲಿಲ್ಲ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾದಲ್ಲಿ ಎಸಿಬಿ ಇದೆ. ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಅದನ್ನ ಯಾಕೆ ಮುಚ್ಚಿಲ್ಲ. ಚೌಕಿದಾರ್ ಅನ್ನೋರು ಯಾಕೆ ಇನ್ನು ಲೋಕಪಾಲ್ ಯಾಕೆ ಮಾಡಿಲ್ಲ. ಆದರೂ ನಿನ್ನೆ ಸಿಎಂ ಸದನದಲ್ಲಿ ಹಸಿ ಸುಳ್ಳು ಹೇಳಿದ್ದಾರೆ. ಸರ್ಕಾರ ಬಂದ ಕೂಡಲೇ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಇವರು ಎಸಿಬಿ ರದ್ದು ಮಾಡಿಲ್ಲ. ಕೋರ್ಟ್ ಹೇಳಿದ ಮೇಲೆ ಎಸಿಬಿ ರದ್ದು ಆಗಿದೆ. ಸತ್ಯ ಹರಿಶ್ಚಂದ್ರ ಮೊಮ್ಮಕ್ಕಳ ರೀತಿ ಮಾತನಾಡ್ತಾರೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: VISL ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ; ಭದ್ರಾವತಿ ಬಂದ್ಗೆ ಕರೆ
ಅರ್ಕಾವತಿ ಲೇಔಟ್ ಬಗ್ಗೆ ನಿನ್ನೆ ಸಿಎಂ ಮಾತನಾಡಿದ್ದಾರೆ. ನಾನು ಅಧಿಕಾರಕ್ಕೆ ಬರುವ ಮುನ್ನ ಅರ್ಕಾವತಿ ಲೇಔಟ್ ಡಿನೋಟಿಫೈ ಆಗಿತ್ತು. ಇದರ ವಿರುದ್ಧ ಸುಪ್ರೀಕೋರ್ಟ್ ಗೆ ಕೇಸ್ ಹೋಯ್ತು. ನಾವು ಅಧಿಕಾರಕ್ಕೆ ಬರುವ ಮುನ್ನ ಇದು ನಡೆದಿತ್ತು. ನಾನು ಸಿಎಂ ಬಂದ್ಮೇಲೆ ಮತ್ತೆ ಹೈಕೋರ್ಟ್ ಹೋಗಿದ್ದರು. ನಾನು ಮಾಡಿದ್ದು ರೀಡೂ ಅಲ್ಲ. ಸುಪ್ರೀಂ ಕೋರ್ಟ್ ಮಾನದಂಡ ಮೇಲೆ ನಾನು ಅನುಮೋದನೆ ಮಾಡಿದೆ. ಇದರ ವಿರುದ್ಧ ಆಗಿನ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಭ್ರಷ್ಟಚಾರ ಆರೋಪ ಮಾಡಿದ್ದರು. ಆಗಲೇ ನಾನು ಕೆಂಪಣ್ಣ ಆಯೋಗ ರಚನೆ ಮಾಡಿದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕುಮಾರಸ್ವಾಮಿ ಕಾಲದಲ್ಲಿ ಡಿನೋಟಿಫೈ ಮಾಡಿದ್ದಾರ?
2021ರಲ್ಲಿ ಮತ್ತೆ ಕೋರ್ಟ್ ಗೆ ಹೋಗಿದ್ದರು. ಆಗ ಬೊಮ್ಮಾಯಿಯವರೇ ಸಿಎಂ ಆಗಿದ್ದರು. ನಾನು ನಿನ್ನೆ ಸದನದಲ್ಲಿ ಸರಿಯಾಗಿ ಉತ್ತರ ಕೊಡುತ್ತಿದೆ. ಎಲ್ಲ ಪ್ರಕರಣಗಳನ್ನ ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ ದೊಡ್ಡ ಮಟ್ಟದ ಭ್ರಷ್ಟಾಚಾರ ಆಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೆಂಪಣ್ಣ ವರದಿ ಆಯೋಗವನ್ನ ಸದನದಲ್ಲಿ ಸರ್ಕಾರ ಮಂಡಿಸಬಹುದಿತ್ತು. ಆದ್ರೆ ಅವ್ರಿಗೆ ಬೇಕಾದ ರೀತಿಯಲ್ಲಿ ಹೇಳಿದ್ದಾರೆ. ಬೊಮ್ಮಾಯಿಯವರು ಪ್ರಾಮಾಣಿಕರಾಗಿದ್ರೆ ತನಿಖೆಗೆ ಕೊಡಿ. ನಾನು ಎಂಟು ಪ್ರಕರಣಗಳನ್ನ ಸಿಬಿಐ ಕೊಟ್ಟಿದ್ದೆ. ಇವರು ಒಂದೇ ಒಂದು ಪ್ರಕರಣ ಸಿಬಿಐಗೆ ಕೊಟ್ಟಿಲ್ಲ.
ಭ್ರಷ್ಟಾಚಾರ ತಡೆಗೆ ನಮ್ಮ ಅವಧಿಯಲ್ಲಿ ಎಸಿಬಿ ರಚನೆ ಮಾಡಿದ್ದೆವು
2016ರ ಮಾರ್ಚ್ 14ರಲ್ಲಿ ನಾವು ಎಸಿಬಿ ರಚನೆ ಮಾಡಿದ್ದೆವು. ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಸುಳ್ಳು ಹೇಳಿದ್ದಾರೆ. ನಮ್ಮ ಕಾಲದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ರಚನೆ ಎಂದಿದ್ದಾರೆ. 1984ರ ಕಾಯ್ದೆ ಅನ್ವಯ ಲೋಕಾಯುಕ್ತ ಸಂಸ್ಥೆ ರಚನೆಯಾಗಿದೆ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಪುತ್ರನಿಂದ ಭ್ರಷ್ಟಾಚಾರ ತಡೆಗೆ ನಮ್ಮ ಅವಧಿಯಲ್ಲಿ ಎಸಿಬಿ ರಚನೆ ಮಾಡಿದ್ದೆವು. ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲೂ ಎಸಿಬಿ ಅಸ್ತಿತ್ವದಲ್ಲಿದೆ. ಹಾಲಿ ಸರ್ಕಾರ ಭ್ರಷ್ಟಾಚಾರ ತಡೆಗೆ ಯಾವುದೇ ಕ್ರಮಕೈಗೊಂಡಿಲ್ಲ. ನಾನು ತಿನ್ನಲ್ಲ, ತಿನ್ನಲು ಬಿಡಲ್ಲವೆಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. 2018ರ ಚುನಾವಣೆ ವೇಳೆ ಎಸಿಬಿ ಮುಚ್ಚುತ್ತೇವೆಂದು ಬಿಜೆಪಿ ಹೇಳಿತ್ತು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿ ಮುಚ್ಚುತ್ತೇವೆಂದು ಹೇಳಿದ್ರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಸಿಬಿ ಯಾಕೆ ಮುಚ್ಚಲಿಲ್ಲ. ಎಸಿಬಿ ಮುಚ್ಚುವಂತೆ ಹೈಕೋರ್ಟ್ ಆದೇಶಿಸಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:47 am, Fri, 24 February 23