ಅಮುಲ್ ಜೊತೆ ನಂದಿನಿ ವಿಲೀನ, ಇದು ಕಾಂಗ್ರೆಸ್​ ಹಬ್ಬಿಸಿರುವ ಸುಳ್ಳುಸುದ್ದಿ ಎಂದ ತೇಜಸ್ವಿ ಸೂರ್ಯ

|

Updated on: Apr 08, 2023 | 9:38 PM

ಅಮುಲ್ ಜೊತೆ ನಂದಿನಿ ವಿಲೀನ ಎಂಬುವುದು ಕಾಂಗ್ರೆಸ್​ ಪಕ್ಷ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಕಲಬುರಗಿ: ಅಮುಲ್ (Amul) ಜೊತೆ ನಂದಿನಿ (Nandini) ವಿಲೀನ ಎಂಬುವುದು ಕಾಂಗ್ರೆಸ್​ ಪಕ್ಷ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಮುಲ್ ಔಟ್​ಲೆಟ್​ಗಳು ದಶಕಗಳಿಂದ ಕರ್ನಾಟಕದಲ್ಲಿ ಇವೆ. ಅಮುಲ್​ಗೆ ನಂದಿನಿ ಕಾಂಪಿಟೇಷನ್ ಮಾಡುತ್ತಾ ಮುಂದೆ ಬರುತ್ತಿದೆ. ಮೊನ್ನೆಯಿಂದ ಕಾಂಗ್ರೆಸ್ ಪಕ್ಷ ಹೊಸ ವಿವಾದ ಶುರು ಮಾಡಿದೆ. ಅಮುಲ್ ತಮಿಳುನಾಡು, ಆಂಧ್ರ ಬ್ರ್ಯಾಂಡ್ ಆಗಿದ್ದರೆ ಸುಮ್ಮನಿರುತ್ತಿದ್ದರು. ತಮಿಳುನಾಡು ಬ್ರ್ಯಾಂಡ್ ಆಗಿದ್ದರೆ ಕಾಂಗ್ರೆಸ್​ಗೆ ಸಮಸ್ಯೆ ಇರುತ್ತಿರಲಿಲ್ಲ. ಮೋದಿರನ್ನು ವಿರೋಧ ಮಾಡುವುದಕ್ಕಾಗಿ ಈ ವಿಷಯ ಹಿಡಿದಿದ್ದಾರೆ. ಅಮುಲ್ ಯಾವ ರಾಜ್ಯದ್ದೋ ಮೋದಿ ಅದೇ ರಾಜ್ಯದಿಂದ ಬಂದವರು. ಅವರನ್ನು  ವಿರೋಧಿಸಲು ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೆಎಂಎಫ್​ಗೆ ಎಷ್ಟು ಲಾಭ ಇತ್ತು? ಈಗ ಕೆಎಂಎಫ್ ಎಷ್ಟು ಲಾಭ ಮಾಡಿಕೊಳ್ಳುತ್ತಿದೆ ನೋಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ತೇಜಸ್ವಿ ಸೂರ್ಯ ಕಿಡಿ 

ಬಿಜೆಪಿ ಇನ್ನು ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ ನವರು ಟಿಕೆಟ್ ಪ್ರಕಟ ಮಾಡೋದು ಬಹಳ ಸುಲಭ. ಕುಮಾರಸ್ವಾಮಿ ಅವರು ತಮ್ಮ ಅಡುಗೆ ಮನೆಯಲ್ಲಿ ಕೂತು ಚರ್ಚೆ ಮಾಡಿ ಕೊಡಬಹುದು. ಸೊಸೆಗೆ ಕೊಡಬೇಕಾ, ಮಗನಿಗೆ ಕೊಡಬೇಕಾ ಇನ್ಯಾರಿಗೆ ಕೊಡಬೇಕಾ ಅನ್ನೋದು ಅವರೇ ತೀರ್ಮಾನ ಮಾಡುತ್ತಾರೆ. ಈಗ ಅದೂ ಅವರಿಗೆ ಕಷ್ಟ ಆಗುತ್ತಿದೆ. ಹಾಸನದಲ್ಲಿ ಸೊಸೆಗೆ ಕೊಟ್ಟರೆ ಮಗ ಬೇಡ ಅಂತಾನೆ, ಮಗನಿಗೆ ಕೊಟ್ಟರೆ ಇತ್ತ ಗಂಡ ಬೇಡ ಅಂತಾನೆ. ಅವರ ಕಷ್ಟ ಯಾರಿಗೂ ಬೇಡ ಎಂದರು.

ಇದನ್ನೂ ಓದಿ: ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್​, ಕಾಂಗ್ರೆಸ್​ನಿಂದ ಅಮುಲ್ ವಿಚಾರದಲ್ಲಿ ರಾಜಕೀಯ; ಸಿಎಂ ಬೊಮ್ಮಾಯಿ

ನಮ್ಮ ಪಕ್ಷ ಕಾರ್ಯಕರ್ತರ ಆಧಾರಿತ ಪಾರ್ಟಿ

ಕಾಂಗ್ರೆಸ್​ನಲ್ಲಿ ಆ ಬಣಕ್ಕೆ ಒಂದಿಷ್ಟು ಟಿಕೆಟ್, ಈ ಬಣಕ್ಕೆ ಒಂದಿಷ್ಟು ಟಿಕೆಟ್ ಕೊಟ್ಟು ಬಿಟ್ಟರೆ ಮುಗಿತು. ಈಗ ಅವರು ಇದೇ ರೀತಿ ಮಾಡಿರುವುದರಿಂದ ಆ ಪಕ್ಷದವರು ರಸ್ತೆ ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಪಕ್ಷ ಕಾರ್ಯಕರ್ತರ ಆಧಾರಿತ ಪಾರ್ಟಿ. ಶಕ್ತಿ ಕೇಂದ್ರಗಳ ಸದಸ್ಯರು, ಜಿಲ್ಲಾ ಕೋರಕಮಿಟಿ ಸದಸ್ಯರು ಮತ್ತು ರಾಜ್ಯ ಕೋರಕಮಿಟಿ ಸದಸ್ಯರ ಅಭಿಪ್ರಾಯ ಆಧರಿಸಿ ರಾಷ್ಟ್ರೀಯ ಕೋರಕಮಿಟಿ ಟಿಕೆಟ್ ನಿರ್ಣಯ ಮಾಡುತ್ತದೆ.

ಇದನ್ನೂ ಓದಿ: ಅಮುಲ್​ನಲ್ಲಿ ಕೆಎಂಎಫ್​​ ವಿಲೀನ ವಿಚಾರ: ಪ್ರಧಾನಿ ಮೋದಿ, ಅಮಿತ್​ ಶಾ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಕೋರಕಮಿಟಿ ಸಭೆಯಲ್ಲಿ ಏ.10 ರಂದು ನಿರ್ಣಯ ಆಗಲಿದೆ. ಇದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ನಮ್ಮ ಪಕ್ಷದ ಕ್ರಮಗಳನ್ನು ಬೇರೆಯವರು ಅನುಸರಿಸಬೇಕೇ ಹೊರತು ಅವರು ಬೇಗ ಟಿಕೆಟ್ ಅನೌನ್ಸ ಮಾಡಿದರೂ ಅಂತ ನಾವು ಅನೌನ್ಸ ಮಾಡಲು ಆಗಲ್ಲ ಎಂದು ಹೇಳಿದರು.

ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ?

ನಂದಿನಿ ಬ್ರ್ಯಾಂಡ್ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವ ಸುಧಾಕರ್, ಹಾಲಿಗೆ ಪ್ರೋತ್ಸಾಹ ಧನ‌ ಕೊಟ್ಟಿದ್ದರೆ‌ ಅದು‌ ಬಿಜೆಪಿ ಸರ್ಕಾರ. ಪ್ರತಿ‌ ಲೀಟರ್​ಗೆ 5 ರೂ. ಪ್ರೋತ್ಸಾಹ ಧನ ಬಿಜೆಪಿ ಸರ್ಕಾರ ಕೊಟ್ಟಿದೆ. ಕೆಎಂಎಫ್ ಆದಾಯದಲ್ಲಿ ಹಾಲು ಉತ್ಪಾದಕರಿಗೆ‌ ಕೊಡುವ ವ್ಯವಸ್ಥೆ ಮಾಡಲಾಗಿದೆ. ನಂದಿನಿ‌ ಹಾಲನ್ನು ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ ಸೇನೆಗೆ, ತಿರುಪತಿ ತಿರುಮಲ,‌ ಮಹಾರಾಷ್ಟ್ರಕ್ಕೆ ನಮ್ಮ ಹಾಲು ಪೂರೈಕೆಯಾಗುತ್ತಿದೆ.

ಇತರೆ ಬ್ರ್ಯಾಂಡ್​ನ ಹಾಲುಗಳನ್ನು ರಾಜ್ಯದಲ್ಲಿ ಹಿಂದಿನಿಂದಲೂ ಮಾರಾಟ ಮಾಡುತ್ತಿದ್ದಾರೆ. ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ ಎಂದು ಸುಧಾಕರ್​ ಪ್ರಶ್ನಿಸಿದ್ದಾರೆ. ಈ ರೀತಿಯ ರಾಜಕೀಯ ಮಾಡುವುದನ್ನು ಬಿಡಬೇಕು, ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಿ ಎಂದು ಕಾಂಗ್ರೆಸ್​ ಅನ್ನು ಉದ್ದೇಶಿಸಿ ಸುಧಾಕರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:38 pm, Sat, 8 April 23