ಬೆಂಗಳೂರು: ಅಮಾನತುಗೊಂಡ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಹಿಂದೆ ಮಾನಸಿಕವಾಗಿ ನೊಂದಿರುವ ಶಂಕೆ ಇದೆ. ಹೀಗಾಗಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಒತ್ತಾಯಿಸಿದ್ದಾರೆ. ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಅಧಿವೇಶನದ ನಂತರ ಹೇಳಿಕೆ ನೀಡಿದ ಕುಮಾರಸ್ವಾಮಿ, ಒಬ್ಬ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇದಕ್ಕೆ ಕಾರಣ ಏನೂ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ನಂದೀಶ್ ಎಂಬ ಪೊಲೀಸ್ ಮಾನಸಿಕವಾಗಿ ನೊಂದು ಈ ರೀತಿಯಾಗಿದೆ ಎಂದು ಅವರ ಪತ್ನಿ ಹೇಳಿದ್ದಾರೆ. ಹೀಗಾಗಿ ಪ್ರಕರಣವನ್ನು ತನಿಖೆ ನಡೆಸಬೇಕು ಎಂದರು.
ತನ್ನ ಪತಿ ಮಾನಸಿಕವಾಗಿ ನೊಂದಿದ್ದಾರೆ ಎಂದು ಮೃತ ನಂದೀಶ್ ಪತ್ನಿ ಹೇಳುತ್ತಿದ್ದರು. ನನಗೆ ಕೆಸಲ ಬೇಡ ನನ್ನ ಗಂಡನನ್ನು ತಂದು ಕೊಡಿ ಎಂದು ಹೇಳುತ್ತಿದ್ದರು. ವಿರೋಧ ಪಕ್ಷದವರ ಬಳಿ ಹೋಗಿ ಅಮಾನತು ರದ್ದುಪಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಅಮಾನತು ರದ್ದುಪಡಿಸುತ್ತೇವೆ ಆದರೆ ಅಲ್ಲೇ ಪೋಸ್ಟಿಂಗ್ ಕೊಡಲು ಸಾಧ್ಯವಿಲ್ಲ ಎಂದಿರುವುದಾಗಿ ಹೇಳಿದರು.
ರಾತ್ರಿ 12 ರಿಂದ 1 ಗಂಟೆ ತನಕ ಬಾರ್ ಓಪನ್ ಮಾಡಲು ಅವಕಾಶ ಕೊಟ್ಟಿರುವ ಆರೋಪದ ಮೇಲೆ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ರಾತ್ರಿ 1 ಗಂಟೆಗೆ ತನಕ ಸರ್ಕಾರವೇ ರೆಸ್ಟೋರೆಂಟ್ ತೆಗೆಯಲು ಅವಕಾಶ ಕೊಡುತ್ತಿದೆ. ಅಲ್ಲಿ ಯಾರು ಪಾರ್ಟಿ ಮಾಡಿದ್ದರು ಎಂದು ಗೊತ್ತಾಗಬೇಕು. ಅಲ್ಲಿ ಬೇರೆ ಪೊಲೀಸ್ ಅಧಿಕಾರಿಗಳು ಡ್ಯಾನ್ಸ್ ಮಾಡಿದ್ದಾರೆ. ಮಟ್ಕ, ಪಾರ್ಟಿ ನಡೆಸಲು ಅಕ್ರಮವಾಗಿ ಪೊಲೀಸ್ ಹಿರಿಯ ಅಧಿಕಾರಗಳೇ ಅವಕಾಶ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಹುದ್ದೆಗೆ 70 ಲಕ್ಷ ಕೊಡಬೇಕು. ಅವರು ಹೇಗೆ ಕೊಡುತ್ತಾರೆ ಮತ್ತು ಹೇಗೆ ಸಂಪಾದನೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮಾನಸಿಕವಾಗಿ ನೊಂದ ಹಿನ್ನೆಲೆ ಅವರಿಗೆ ಹೃದಯಾಘಾತವಾಗಿದೆ. ಬೇರೆ ರಾಜ್ಯಗಳಿಂದ ಬಂದ ಹಿರಿಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ರಕ್ಷಣೆ ಕೊಡುತ್ತೀರಾ, ಆದರೆ ನಮ್ಮ ರಾಜ್ಯದ ಸಣ್ಣ ಪುಟ್ಟ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ಕೊಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿ ನಂದೀಶ್ ತಪ್ಪು ಮಾಡಿದ್ದರೆ ತನಿಖೆ ಮಾಡಬೇಕು. ನಾನು ರಸ್ತೆಯಲ್ಲಿ ಹೋಗುವಾಗ ರಾತ್ರಿ ತನಕ ರೆಸ್ಟೋರೆಂಟ್ ನಡೆಸುತ್ತಿರುವುದನ್ನು ನೋಡಿದ್ದೇನೆ. ನೀವೇ ಎಣ್ಣೆ ಕುಡಿಯಿರಿ ಎಂದು ಪ್ರೋತ್ಸಾಹ ಕೊಟ್ಟು ಬಾರ್ನಿಂದ ಹೊರಗಡೆ ಬಂದ ತಕ್ಷಣ ದಂಡ ಹಾಕುತ್ತೀರಾ. ನಿನ್ನೆ ಹೃದಯಾಘಾತದಿಂದ ಆಗಿರುವುದು ಸಾವು ಅಲ್ಲ, ಸರ್ಕಾರದ ನಡತೆಯಿಂದ ಆಗಿರುವ ಕೊಲೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಿಬೇಕು ಎಂದರು.
ಮೂರು ನಿರ್ಣಯಗಳ ಬಗ್ಗೆ ಚರ್ಚೆ
ನಿನ್ನೆ ನಡೆದ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಆಯ್ಕೆ ಮಾಡಿದ್ದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಿನ್ನೆ ದಿನ ಮೂರು ನಿರ್ಣಯಗಳನ್ನ ಚರ್ಚೆ ಮಾಡಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಈ ನಿರ್ಣಯಗಳಿಗೆ ಅನುಮೋದನೆ ನೀಡುವ ಕಾರ್ಯಕ್ರಮ ಇದೆ. ಕರ್ನಾಟಕ ಮತ್ತು ಕೇರಳದಲ್ಲಿ ನಮ್ಮ ಶಕ್ತಿ ಉಳಿಸಿಕೊಂಡು ಬಂದಿದ್ದೇವೆ. 13 ರಾಜ್ಯದ ರಾಜ್ಯಾಧ್ಯಕ್ಷರು ಈ ಸಭೆಯಲ್ಲಿ ಭಾಗಿಯಾಗಿದ್ದೀರಿ. ಸಮಸ್ಯೆ ಏನೇ ಇದ್ದರೂ ತಮ್ಮ ತಮ್ಮ ರಾಜ್ಯಗಳಲ್ಲಿ ಪಕ್ಷ ಉಳಿಸುವ ಕೆಲಸ ಮಾಡಿದ್ದೀರಿ ಎಂದು ಪಕ್ಷದ ಅಧಿವೇಶನದಲ್ಲಿ ಕುಮಾರಸ್ವಾಮಿ ಹೇಳಿದರು.
ಜನರ ಬದುಕು ಕಟ್ಟಿಕೊಳ್ಳಲು ಪಂಚರತ್ನ ಯಾತ್ರೆ
ಜನರ ಬದುಕು ಕಟ್ಟಿಕೊಳ್ಳಲು ಪಂಚರತ್ನ ಎಂಬ 5 ಯೋಜನೆ ಕಾರ್ಯಕ್ರಮ ರಥಯಾತ್ರೆಗೆ ನವೆಂಬರ್ 1ರಂದು ಚಾಲನೆ ನೀಡುತ್ತಿದ್ದೇವೆ. ನಿನ್ನೆ ಸಾಂಕೇತಿಕವಾಗಿ ಪಂಚರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. 1ನೇ ತಾರೀಕಿನಿಂದ 35 ತಾಲ್ಲೂಕಿನಲ್ಲಿ 35 ದಿನ ರಥಯಾತ್ರೆ ಮಾಡುತ್ತೇವೆ. ಮುಳಬಾಗಿಲಿನಲ್ಲಿ ಗಣಪತಿ ಮತ್ತು ಹನುಮಂತ ದೇವಸ್ಥಾನದಲ್ಲಿ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ಪ್ರತಿ ಹಳ್ಳಿ ಹಳ್ಳಿಗೂ ಕಾರ್ಯಕರ್ತರು ಭೇಟಿ ನೀಡಿ ಕಾರ್ಯಕ್ರಮ ಬಗ್ಗೆ ತಿಳಿಸಬೇಕು. ವೃದ್ಧರಿಗೆ 5 ಸಾವಿರ ಮಾಶಸನ, ವಿಧವೆಯರಿಗೆ 2,500 ಸಾವಿರ ಜಾರಿಗೆ ತರುವ ಕಾರ್ಯಕ್ರಮ, ಕೃಷ್ಣ ಮತ್ತು ಮಹಾದಾಯಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಪಾದಯಾತ್ರೆ, 5 ದಿನ ಸರ್ಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಏನ್ ಮಾಡಿತು ಎಂದು ಹೇಳಬೇಕು ಎಂದರು.
ಮೀಸಲಾತಿ ವಿಚಾರದ ಬಗ್ಗೆ ಚರ್ಚೆಗೆ ಸಿದ್ಧ
ಮೀಸಲಾತಿ ವಿಚಾರವಾಗಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ದೇವೇಗೌಡ ಅವರು ಎಸ್ಟಿ ಸಮುದಾಯದವರಿಗೆ ಕೊಟ್ಟಿರುವ ಮೀಸಲಾತಿ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಲು ನಾನು ಸಿದ್ಧನಾಗಿದ್ದೇನೆ. ರಾಷ್ಟ್ರೀಯ ಪಕ್ಷಗಳ ಪೂರ್ವ ಸಮೀಕ್ಷೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಳಿದುಬಂದಿದೆ. ಜೆಡಿಎಸ್ಗೆ 20-25 ಸೀಟ್ ಬರುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಅದನ್ನು ಬಿಟ್ಟುಬಿಡಿ. ನನ್ನ ಜೊತೆ ನೀವು ಕೈ ಸೇರಿಸಿ ಜನರ ಮುಂದೆ ನಮ್ಮ ಯೋಜನೆ ಬಗ್ಗೆ ತಿಳಿಸಿ. ನೀವು ಎಷ್ಟು ಜನರ ಮುಂದೆ ಹೋಗುತ್ತೀರೋ ಅಷ್ಟು ನಮ್ಮ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬರುತ್ತದೆ. ಈ ರಾಜ್ಯದಲ್ಲಿ ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಕರೆ ನೀಡಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Fri, 28 October 22