ಮೈಸೂರು: ಅಧಿಕಾರದಲ್ಲಿರಲಿ ಬಿಡಲಿ, ನಾನು ಬದುಕಿರುವವರೆಗೂ ಆರ್ಎಸ್ಎಸ್ ವಿರೋಧಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಹೇಳಿದರು. ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿ, ಆರ್ಎಸ್ಎಸ್ ಸಮಾಜ ನಿರ್ಮಾಣದ ವಿರೋಧಿ. ಇದಕ್ಕಾಗಿ ನಾನು ಆರ್ಎಸ್ಎಸ್ ವಿರೋಧಿಸುತ್ತೇನೆ. ಅಸಮಾನತೆ ಇದ್ದ ಕಾರಣ ಬಸವಣ್ಣ ಅವತ್ತು ಅನುಭವ ಮಂಟವನ್ನು ಕಟ್ಟಿದ್ದರು. ಅವತ್ತಿನ ಅನುಭವ ಮಂಟವೇ ಇವತ್ತಿನ ಸಂಸತ್. ಆರ್ಎಸ್ಎಸ್, ಹಿಂದೂ ಮಹಾಸಭಾ ಸಂವಿಧಾನವನ್ನು ವಿರೋಧಿಸಿದೆ. ಬಿಜೆಪಿ ಸಂವಿಧಾನದ ವಿರುದ್ಧ ಇರುವ ಪಕ್ಷ. ಸಂವಿಧಾನವನ್ನು ವಿರೋಧಿಸಿದ್ರೆ ಡಾ.ಅಂಬೇಡ್ಕರ್ ವಿರೋಧಿಸಿದಂತೆ. ಹಿಂದೂ ಬೇರೆ ಹಿಂದುತ್ವ ಬೇರೆ ಎಂದು ಪುನರುಚ್ಚರಿಸಿದರು. ನಾನು ಹಿಂದೂ, ನನ್ನ ಅಪ್ಪ ಅಮ್ಮ ಸಹ ಹಿಂದೂಗಳೇ. ನಾನು ಹಿಂದೂ ದೇವರನ್ನು ಪೂಜಿಸುತ್ತೇನೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಶಾಸಕ ಸಿ.ಟಿ.ರವಿ ನನ್ನನ್ನು ಸಿದ್ದರಾಮುಲ್ಲಾ ಖಾನ್ ಅಂತಾ ಕರೀತಾನೆ. ಅವರಿಗೆ ಮಾನ ಮಾರ್ಯದೆ ಇದೆಯಾ ಎಂದು ಪ್ರಶ್ನಿಸಿದರು. ಶೂದ್ರರು ಅವನ ಭಾಷಣಕ್ಕೆ ಚಪ್ಪಾಳೆ ತಟ್ಟುತ್ತಾರೆ ಎಂದು ಕಿಡಿಕಾರಿದರು.
ಸಭೆಯಲ್ಲಿ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಬಿಜೆಪಿ ಅವರು ನೇರವಾಗಿ ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ವಿರೋಧಿಗಳು. ಸಿದ್ದರಾಮಯ್ಯನವರು ಕೋಮುವಾದಿಗಳು, ಸಂವಿಧಾನ ವಿರೋಧಿಗಳ ಎದುರು ಸದಾ ತೊಡೆ ತಟ್ಟುತ್ತಾರೆ. ಹೀಗಾಗಿ, ಸಿದ್ದರಾಮಯ್ಯರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಅಂತಾ ಬಿಜೆಪಿ ಸಚಿವ ಹೇಳುತ್ತಾನೆ. ಸಿದ್ದರಾಮಯ್ಯರಿಗೆ ಹೀಗೆ ಭಯ ಬೀಳಿಸುತ್ತಾರೆ. ಇನ್ನೂ ಜನ ಸಾಮಾನ್ಯರನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲೇ ಬಿಜೆಪಿಗೆ ಬಿಗ್ ಶಾಕ್, ಮತ್ತೋರ್ವ ಮಾಜಿ ಶಾಸಕ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಸಿದ್ದರಾಮಯ್ಯರ ಧ್ವನಿ ಅಡಗಿಸಲು ಕೋಮುವಾದಿಗಳು ಸದಾ ಯತ್ನಿಸುತ್ತಾರೆ. ಸಿದ್ದರಾಮಯ್ಯ ಮುಗಿಸಿದರೆ ಕಾಂಗ್ರೆಸ್ ಮುಗಿಸಿದಂತೆ ಎಂದು ಅವರ ಮೇಲೆ ಎಲ್ಲರೂ ಆಟ್ಯಾಕ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ದಲಿತರ ವಿರೋಧಿ ಅಂತಾ ಈಗ ಅಪ್ರಚಾರ ಶುರು ಮಾಡುತ್ತಾರೆ. ದಲಿತ ನಾಯಕರನ್ನು ಮುಗಿಸಿದರು ಎಂದು ಕೆಲವರು ಸುಳ್ಳು ಹೇಳುತ್ತಾರೆ. ಸಿದ್ದರಾಮಯ್ಯರಂಥ ಪ್ರಾಮಾಣಿಕ ವ್ಯಕ್ತಿ ಈ ರಾಜ್ಯಕ್ಕೆ ಬೇಕು. ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಯಾರಿಗೂ ಸಿದ್ದರಾಮಯ್ಯ ಅರ್ಥವಾಗುವುದಿಲ್ಲವೋ ಅವರ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಮುಂಬರುವ ಚುನಾವಣೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಎಂದು ಭಾವಿಸಿ ಕೆಲಸ ಮಾಡಿ ಎಂದು ಹೇಳಿದರು.
ಕಾರವಾರ: ದೇಶದ ಯಾವುದೇ ಮೂಲೆಗೆ ತೆರಳಿ ಕರ್ನಾಟಕದಲ್ಲಿ ಯಾವ ಸರ್ಕಾರ ಇದೆಯೆಂದು ಕೇಳಿದರೆ 40 ಪರ್ಸೆಂಟ್ ಸರ್ಕಾರ ಎನ್ನುತಾರೆ. ಬಸವರಾಜ ಬೊಮ್ಮಾಯಿ ಯಾರು ಎಂದು ಕೇಳಿದ್ರೆ ಪೇಸಿಎಂ ಎನ್ನುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ವಾಗ್ದಾಳಿ ಮಾಡಿದರು. ಹಳಿಯಾಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜಿಲ್ಲಾ ಮಟ್ಟದ ಕಾರ್ಯಕಾರಿಣಿ, ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಧಾನಿ ಮೋದಿ 8 ಬಾರಿ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ್ದಾರೆ. ಆದರೆ ಎಲ್ಲಿಯೂ 40 ಪರ್ಸೆಂಟ್ ಆರೋಪದ ಬಗ್ಗೆ ಉತ್ತರಿಸಿಲ್ಲ. ಬಿಜೆಪಿ ಕಾರ್ಯಕರ್ತರೇ ಆಗಿದ್ದ ಮೃತ ಸಂತೋಷ ಪಾಟೀಲ್ ಅವರ ಮನೆಗೆ ಭೇಟಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಅವರು ಬಿಜೆಪಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದರು ಎಂದರು.
ಇದನ್ನೂ ಓದಿ: ನಾರಾಯಣಗೌಡ ಪಕ್ಷ ಸೇರ್ಪಡೆಗೆ ತೊಂದರೆ ಏನೆಂದು ಗೊತ್ತಿಲ್ಲ, ನಾವು ಡೀಲ್ ಮಾಡುತ್ತೇವೆ: ಡಿಕೆ ಶಿವಕುಮಾರ್
ಬಿಜೆಪಿಯಂತಹ ಬೆಕ್ಕನ್ನು ಹಾಲು ಕಾಯಲು ನಿಯೋಜಿಸಿರುವುದರಿಂದ ಇದೀಗ ನಮ್ಮ ಮಕ್ಕಳ ಭವಿಷ್ಯವನ್ನ ಕಸಿಯುತ್ತಿದ್ದಾರೆ. ಗುತ್ತಿಗೆ ಕಾಮಗಾರಿ, ಹುದ್ದೆಗಳ ವರ್ಗಾವಣೆ, ಉದ್ಯೋಗಗಳನ್ನೂ ಬಿಜೆಪಿ ಸರ್ಕಾರ ಹಣ ಮಾಡಲು ಬಳಸಿಕೊಳ್ಳುತ್ತಿದೆ. ನಾವೆಲ್ಲರೂ ಒಟ್ಟಾಗಿ ನಿಂತುಕೊಳ್ಳದಿದ್ದಲ್ಲಿ ಬಿಜೆಪಿ ಇಡೀ ಕರ್ನಾಟಕವನ್ನೇ ಮಾರಾಟ ಮಾಡಲಿದೆ. ಇದೀಗ ಬಿಜೆಪಿಯಲ್ಲಿ ಹಿಂಸೆಯ ರಾಜಕಾರಣ ಪ್ರಾರಂಭವಾಗಿದೆ.
ಇಂದಿರಾಗಾಂಧಿ, ರಾಜೀವ್ ಗಾಂಧಿಯಂತಹ ಹಲವಾರು ಮುಖಂಡರು ಹಿಂಸೆಯ ರಾಜಕಾರಣಕ್ಕೆ ಬಲಿಯಾಗಿದ್ದಾರೆ. ಆದರೆ ಇಷ್ಟೆಲ್ಲ ಬಲಿದಾನಗಳಾಗಿದ್ದರೂ ಭಾರತ ಇನ್ನೂ ಜೀವಂತವಾಗಿದೆ. ನಾಳೆ ಸಿದ್ಧರಾಮಯ್ಯ, ಡಿಕೆಶಿವಕುಮಾರ, ಆರ್.ವಿ.ದೇಶಪಾಂಡೆ ಸೇರಿ ಎಲ್ಲ ಮುಖಂಡರನ್ನೂ ಹತ್ಯೆಗೈದರೂ ದೇಶ ಜೀವಂತವಾಗಿರಲಿದೆ. ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳಿಗೆ ಹೆದರಿ ಬಿಜೆಪಿಯವರು ಕಾಂಗ್ರೆಸ್ ಮುಖಂಡರನ್ನು ಹತ್ಯೆಗೈಯುವ ಮಾತನ್ನಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕಕ್ಕಾಗಿ ಎಲ್ಲರೂ ಒಟ್ಟಾಗಿ ಕಾಂಗ್ರೆಸ್‌ನೊಂದಿಗೆ ನಿಂತುಕೊಳ್ಳಿ ಎಂದು ಸುರ್ಜೆವಾಲಾ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:27 pm, Mon, 6 March 23