ಶ್ರೀರಾಮುಲು 200 ಕೋಟಿ ಹಣ ಖರ್ಚು ಮಾಡಿದರೂ ಗೆಲ್ಲುವುದಿಲ್ಲ: ಶಾಸಕ ಬಿ ನಾಗೇಂದ್ರ

|

Updated on: Mar 19, 2023 | 3:58 PM

ಶ್ರೀರಾಮುಲು 200 ಕೋಟಿ ಹಣ ಖರ್ಚು ಮಾಡಿದರೂ ಗೆಲ್ಲುವುದಿಲ್ಲ. ನನ್ನ ವ್ಯಕ್ತಿತ್ವ, ಕೆಲಸ, ಸರಳತೆಯ ಮೇಲೆ ಜನರು ಮತ ನೀಡಲಿದ್ದಾರೆ ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿದರು.

ಶ್ರೀರಾಮುಲು 200 ಕೋಟಿ ಹಣ ಖರ್ಚು ಮಾಡಿದರೂ ಗೆಲ್ಲುವುದಿಲ್ಲ: ಶಾಸಕ ಬಿ ನಾಗೇಂದ್ರ
ಶ್ರೀರಾಮುಲು, ಬಿ ನಾಗೇಂದ್ರ
Follow us on

ಬಳ್ಳಾರಿ: ಶ್ರೀರಾಮುಲು (Sriramulu) 200 ಕೋಟಿ ಹಣ ಖರ್ಚು ಮಾಡಿದರೂ ಗೆಲ್ಲುವುದಿಲ್ಲ. ನನ್ನ ವ್ಯಕ್ತಿತ್ವ, ಕೆಲಸ, ಸರಳತೆಯ ಮೇಲೆ ಜನರು ಮತ ನೀಡಲಿದ್ದಾರೆ ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ನನ್ನ ವಿರುದ್ಧ ಸ್ಪರ್ಧೆ ಮಾಡಿದರೆ ಸ್ವಾಗತ ಮಾಡುತ್ತೇನೆ. ಶ್ರೀರಾಮುಲು, ನಾನು ಒಟ್ಟಿಗೆ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸಿದರೆ ನನಗೆ ಬೇಜಾರಿಲ್ಲ. ರಾಮುಲು ವಿಚಾರಧಾರೆಗಳೇ ಬೇರೆ, ನಮ್ಮ ವಿಚಾರಧಾರೆಗಳೇ ಬೇರೆ. ಸ್ನೇಹಿತರಾದ್ರೂ ರಾಜಕೀಯವಾಗಿ ಯಾವುದೇ ಹೊಂದಾಣಿಕೆಯಿಲ್ಲ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನನ್ನ ರಣತಂತ್ರ ಬೇರೆಯೇ ಇದೆ. ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ಕೇವಲ ಕಣ್ಣೊರೆಸುವ ತಂತ್ರ. ರಾಮುಲು ಸಚಿವರಾದ ನಂತರ ಉತ್ತಮವಾಗಿ ಕೆಲಸ‌ ಮಾಡಬಹುದಿತ್ತು. ಆದರೆ ರಾಮುಲು ಜಿಲ್ಲೆಯ ಶಾಸಕರನ್ನು ಒಗ್ಗೂಡಿಸಿ ಕೆಲಸ‌ ಮಾಡಲಿಲ್ಲ. ನಾನು ಕ್ಷೇತ್ರದ ಮತದಾರರ ಬೆಂಬಲದಿಂದ ಗೆಲುವು ಸಾಧಿಸುತ್ತೇನೆ. ಗೆದ್ದ ಬಳಿಕ ಪಕ್ಷ ನನಗೆ ದೊಡ್ಡ ಸ್ಥಾನಮಾನ ನೀಡುವ ವಿಶ್ವಾಸ ಇದೆ ಎಂದರು.

ಕೋಮುವಾದಿಗಳಿಗೆ ಮತ ನೀಡಬಾರದು ಅಂತಾ ಜನರು ನಿರ್ಧರಿಸಿದ್ದಾರೆ

BJP ಗೆದರೆ ಕೋಮುಗಲಭೆ ಆಗುವ ಸಾಧ್ಯತೆ ಇದೆ ಅಂತಾ ಜನರಿಗೆ ಭಯವಿದೆ. ಕೋಮುವಾದಿಗಳಿಗೆ ಮತ ನೀಡಬಾರದು ಅಂತಾ ಜನರು ನಿರ್ಧರಿಸಿದ್ದಾರೆ. ಜನಾರ್ದನ ರೆಡ್ಡಿ ಯಾವುದೇ ಪಕ್ಷದಲ್ಲಿರಲಿ, ಅವರು ರಾಜಕೀಯ ಗುರು. ಅವರನ್ನು ನಾನು ಯಾವತ್ತೂ ಮರೆಯಲ್ಲ. ನನ್ನ ವಿರುದ್ಧ ಅವರ ಪಕ್ಷದ ಅಭ್ಯರ್ಥಿ ಹಾಕುತ್ತಾರೋ ಇಲ್ವೋ ಗೊತ್ತಿಲ್ಲ. ಪರೋಕ್ಷವಾಗಿ ಸಹಾಯ ಮಾಡಿದರೆ ಶ್ರೀರಾಮುಲು ಸೋಲಿಸಬಹುದು ಎಂದು ಹೇಳಿದರು.

ಇದನ್ನೂ ಓದಿ: ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ವಾಪಸ್​ ಬಿಜೆಪಿಗೆ, ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ

ಗ್ರಾಮೀಣ ಕ್ಷೇತ್ರದಿಂದ‌ ಕಣಕ್ಕೆ‌ ಇಳಿಯುವೆ ಎಂದ ರಾಮುಲು

ಬಳ್ಳಾರಿ ನಗರ ಅಸೆಂಬ್ಲಿ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದರೆ. ಇದೀಗ ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣದಿಂದ ಕಣಕ್ಕೆ ಇಳಿಯುವುದಾಗಿ  ಪ್ರಕಟಿಸಿದ್ದಾರೆ. ರಾಮುಲು ಹಾಲಿ ಮೊಳಕಾಲ್ಮೂರು ಕ್ಷೇತ್ರವನ್ನು ಬಿಟ್ಟು ಸಂಡೂರು ಕ್ಷೇತ್ರವನ್ನು ಪ್ರತಿನಿಧಿಸುವುದಾಗಿ ಈ ಹಿಂದೆ ಹೇಳಿದ್ದರು ಎಂಬುದು ಗಮನಾರ್ಹ. ಇದೀಗ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಸಚಿವ ಶ್ರೀರಾಮುಲು ಅದಕ್ಕೆ ನೀಡಿರುವ ಕಾರಣವೂ ಕುತೂಹಲಕಾರಿಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆಂದು ಬಳ್ಳಾರಿ ಗ್ರಾಮಾಂತರದಿಂದ ಅಸೆಂಬ್ಲಿಗೆ ಸ್ಪರ್ಧಿಸುವುದಾಗಿ ಶ್ರೀರಾಮುಲು ವಿಶ್ವಾಸದ ಮಾತು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನ​, ಅಫ್ಘಾನಿಸ್ಥಾನ​, ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧಿಸಲಿ: ಆರ್​ ಅಶೋಕ್​

ಇತ್ತೀಚೆಗೆ ಸಂಡೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶ್ರೀರಾಮುಲು, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ಬರುತ್ತಿದೆ. ನಾನು ಬಳ್ಳಾರಿಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ಹೊಂದಿದ್ದೇನೆ. ನಾನು ಸಂಡೂರು ಕ್ಷೇತ್ರದಿಂದ ಸಹ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ನನ್ನ ಮೇಲೆ ಇದೆ. ಒಂದು ವೇಳೆ ಹೈ ಕಮಾಂಡ್ ಬಯಸಿದರೆ ಇಲ್ಲಿ ಸ್ಪರ್ಧೆ ಮಾಡುವೆ ಎಂದು ಹೇಳುವ ಮೂಲಕ ಬಳ್ಳಾರಿ ಗ್ರಾಮೀಣ ಹಾಗೂ ಸಂಡೂರು ಎರಡು ಕಡೆಯಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:56 pm, Sun, 19 March 23