ಶಿವಮೊಗ್ಗ, ಸೆ.9: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ (BJP JDS alliance) ಮಾತುಕತೆ ನಡೆಯುತ್ತಿದೆ. ಜೆಡಿಎಸ್ಗೆ ನಾಲ್ಕು ಸೀಟು ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ಮನಸ್ಸು ಮಾಡಿದೆ. ಆದರೆ, ರಾಜ್ಯ ಬಿಜೆಪಿ ನಾಯಕರಲ್ಲಿ ನಾಲ್ಕು ಸೀಟುಗಳನ್ನು ನೀಡಲು ಒಲವು ಹೊಂದಿಲ್ಲ. ಗರಿಷ್ಠ ಮೂರು ಸೀಟುಗಳನ್ನು ನೀಡಲು ಒಲವು ಹೊಂದಿದ್ದಾರೆ. ಇದರ ಹೊರತಾಗಿ, ಮೈತ್ರಿ ಬಗ್ಗೆ ಯಾವ ನಾಯಕರು ಏನಂದ್ರು ಎಂಬ ಮಾಹಿತಿ ಇಲ್ಲಿದೆ.
ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ, ಜೆಡಿಎಸ್ನವರು ಒಂದಾಗುವ ಪ್ರಯತ್ನ ಮಾಡುತ್ತಿದ್ದಾರೆ. ದೇವೇಗೌಡರು, ಮೋದಿ ಕೈಕೈ ಹಿಡಿದುಕೊಂಡಿದ್ದನ್ನು ನೋಡಿದ್ದೇನೆ. ಎಷ್ಟು ಸ್ಥಾನ ಕೇಳುತ್ತಾರೆ ಎಷ್ಟು ಸ್ಥಾನ ಕೊಡ್ತಾರೆಂಬುದು ಕ್ಲಿಯರ್ ಆಗಿಲ್ಲ. 28 ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಲು ಮುಂದಾಗಿದ್ದೇವೆ. ನಾವು 60% ಮತಗಳನ್ನು ಪಡೆಯಬೇಕು ಅಂತಾ ಲೆಕ್ಕಾಚಾರ ಇದೆ. ಇಂಡಿಯಾ ಮೈತ್ರಿಕೂಟ ನಾಲ್ಕನೇ ಮೀಟಿಂಗ್ ಕೂಡ ಮಾಡುತ್ತಿದ್ದೇವೆ. ಜೆಡಿಎಸ್ ಐಡಿಯಾಲಜಿ ಚೇಂಜ್ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತ್ಯಾತೀತ ಅಂತ ಹೆಸರಿಟ್ಟುಕೊಂಡಿರೋವ್ರು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ದೇವೇಗೌಡರು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಎಂದಿದ್ದರು. ಆದರೆ ಇದೀಗ ಬಿಜೆಪಿವರ ಜೊತೆ ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಯಾದರೂ ಜೆಡಿಎಸ್ನವರು ಸೇರಿಕೊಳ್ಳುತ್ತಾರೆ ಎಂದರು.
ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಈ ಬಾರಿ 28 ಸ್ಥಾನವನ್ನೂ ಗೆಲ್ಲುತ್ತೇವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆದ್ದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದರು.
ಲೋಕಸಭಾ ಚುನಾವಣಾ ದೃಷ್ಟಿಯಿಂದ ಹೊಂದಾಣಿಕೆ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಸುವ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ನಿರ್ನಾಮ ಮಾಡುವ ದೃಷ್ಟಿಯಿಂದ ಒಂದಾಗಿದ್ದೇವೆ. ದೇಶವನ್ನು ಉಳಿಸುವ ಸಲುವಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ: ಮತ್ತಷ್ಟು ಸೀಟ್ಗಳಿಗಾಗಿ ಜೆಡಿಎಸ್ ಒತ್ತಡ ಸಾಧ್ಯತೆ, ಬಿಜೆಪಿಯಿಂದ ಮೆಗಾ ಪ್ಲಾನ್
ಮೈತ್ರಿ ಬಗ್ಗೆ ವಿಜಯಪುರ ನಗರದಲ್ಲಿ ಮಾತನಾಡಿದ ಸಂಸದ ರಮೇಶ್ ಜಿಗಜಿಣಗಿ, ಮೈತ್ರಿಯಾದರೆ ಪಕ್ಷಕ್ಕೆ ಒಳ್ಳೆಯದು. ಹಿಂದೆ ದೇವೇಗೌಡರ ಜೊತೆ ನಾವಿದ್ದೆವು, ನಮ್ಮ ಜೊತೆ ಅವರು ಇದ್ದರು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ಜೆಡಿಎಸ್ ಜೊತೆ ಮೈತ್ರಿಯಾದರೆ ನಮ್ಮ ಪಕ್ಷಕ್ಕೆ ಒಳ್ಳೆಯದು. ನಮಗೆ ಅವರಾಗಿಯೇ ಬೆಂಬಲ ನೀಡುತ್ತಿದ್ದಾರೆ, ಬನ್ನಿ ಎನ್ನುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸಿಎನ್ ಅಶ್ವತ್ಥ ನಾರಾಯಣ, NDA ಬಲಪಡಿಸಲು ಪ್ರಾದೇಶಿಕ ಪಕ್ಷಗಳು ಬೆಂಬಲ ಕೊಡುತ್ತಿವೆ. ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಬೇಕೆಂಬ ಚರ್ಚೆ ಆಗುತ್ತಿದೆ. ಮೈತ್ರಿಗೆ ಜೆಡಿಎಸ್ ನಾಯಕರು ಕೂಡ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಮೈತ್ರಿ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಕ್ಷೇತ್ರದ ಕೇಳಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಾವು ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರ ಕಳೆದುಕೊಂಡಿದ್ದೆವು. ಆ ಕ್ಷೇತ್ರಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬಹುದು ಎಂದರು.
ಕಾಂಗ್ರೆಸ್ ಅಪ್ರಸ್ತುತ ಪಕ್ಷ. ರಾಜ್ಯದಲ್ಲಿ ಯಾವ ರೀತಿ ಅಧಿಕಾರಕ್ಕೆ ಬಂದಿದ್ದಾರೆ ಅಂತ ವಿಶ್ಲೇಷಣೆ ಮಾಡಲ್ಲ. 100 ದಿನಗಳಲ್ಲಿ 100 ಲೋಪಗಳಿವೆ. ಕುಡಿಯುವ ನೀರಿಗೆ ಸಮಸ್ಯೆ ತಂದಿಟ್ಟಿದ್ದಾರೆ. ಭ್ರಷ್ಟಾಚಾರ ತಾಂಡವವಾಡಿದ್ದು ಲೂಟಿ ಮಾಡುತ್ತಿದ್ದಾರೆ ಎಂದರು.
ಮೈತ್ರಿಯಾದರೆ ಆ ಭಾಗದ ಬಿಜೆಪಿ ಮುಖಂಡರ ಪಕ್ಷ ಸಂಘಟನೆಗೆ ಸವಾಲು ಬರಲಿದೆ. ನಮ್ಮಲ್ಲಿ ಚುನಾವಣೆ ಸ್ಪರ್ಧೆ ಮಾಡಿದವರು ಇದ್ದಾರೆ ಮತ್ತು ಹಲವರು ಕೆಲಸ ಮಾಡಿದ್ದಾರೆ. ಅವರ ಭವಿಷ್ಯದ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಇನ್ನೂ ಅಧಿಕೃತವಾಗಿ ಯಾವುದೂ ಆಗಿಲ್ಲ. ಲೋಕಸಭೆಯಲ್ಲಿ ನಮಗೇನೂ ಸಮಸ್ಯೆ ಇಲ್ಲ. ಜನರ ಆಶೀರ್ವಾದ ಯಾವ ರೀತಿ ಇದೆ ಅಂತ ಕಾದು ನೋಡೋಣ ಎಂದರು.
ಮೈತ್ರಿ ಬಗ್ಗೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಅಸ್ಥಿರತೆ ಹೋಗಲಾಡಿಸಲು ವರಿಷ್ಠರು ನಿರ್ಧಾರ ಮಾಡಿರಬಹುದು. ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸರಿಯಾದ ಮಾಹಿತಿ ನನಗೆ ಇಲ್ಲ. ಲೋಕಸಭೆಗೆ ಸ್ಪರ್ಧಿಸುವ ಕುರಿತು ಇನ್ನೂ ಯೋಚನೆ ಮಾಡಿಲ್ಲ. ಹಲವು ವಿಚಾರಗಳನ್ನು ನಾನು ರಾಷ್ಟ್ರೀಯ ನಾಯಕರಿಗೆ ತಿಳಿಸಿದ್ದೇನೆ. ಅದನ್ನೆಲ್ಲಾ ಸರಿಪಡಿಸುವ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹೈಕಮಾಂಡ್ ಸರಿಪಡಿಸದಿದ್ದರೂ ನನಗೆ ಯಾವುದೇ ನಷ್ಟ ಇಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಒಂದು ಕ್ಷಣವೂ ನಾನು ಯೋಚಿಸಿಲ್ಲ ಎಂದರು.
ಕೊಪ್ಪಳದಲ್ಲಿ ಮಾತನಾಡಿದ ಸಂಸದ ಕರಡಿ ಸಂಗಣ್ಣ, ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ಸ್ವಾಗತಿಸುತ್ತೇನೆ. ಜೆಡಿಎಸ್- ಬಿಜೆಪಿ ಮೈತ್ರಿ ಕುರಿತು ಬಿಎಸ್ ಯಡಿಯೂರಪ್ಪ ಅವರು ಹೇಳಿರುವುದನ್ನು ಮಾದ್ಯಮದಲ್ಲಿ ಕೇಳಿದ್ದೇನೆ. ಯಡಿಯೂರಪ್ಪ ನಮ್ಮ ಸರ್ವೋಚ್ಚ ನಾಯಕರು. ಅಮಿತ್ ಶಾ ಅವರು ಹೇಳಿದ್ದಾರೆ ಎನ್ನುವುದನ್ನು ಕೇಳಿದ್ದೇನೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಒಂದೊಂದು ಚುನಾವಣೆಯಲ್ಲಿ ಒಂದೊಂದು ರಿಸಲ್ಟ್ ನಾವು ನೋಡುತ್ತೇವೆ. ಅವತ್ತಿನ ಸನ್ನಿವೇಶ, ಸಂದರ್ಭದ ಮೇಲೆ ಫಲಿತಾಂಶ ಬರುತ್ತದೆ. ಇವತ್ತಿನ ಸಂದರ್ಭದಲ್ಲಿ ನಮ್ಮ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ನಮ್ಮ ಪಕ್ಷಕ್ಕೆ ಒಳ್ಳೇಯದು ಆಗಬಹುದು. ಮೈತ್ರಿ ಎಲ್ಲವೂ ವರಿಷ್ಠರಿಗೆ ಬಿಟ್ಟದ್ದು. ಪಕ್ಷದ ವರಿಷ್ಠರು ಪಕ್ಷಕ್ಕೆ ಒಳ್ಳೇಯದು ಆಗುವ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ಜೆಡಿಎಸ್ ಮೈತ್ರಿ ಈ ಭಾಗದಲ್ಲಿ ಲಾಭ ಆಗುವ ವಿಚಾರವಾಗಿ ಮಾತನಾಡಿದ ಸಂಸದರು, ನಮ್ಮ ಭಾಗದಲ್ಲಿ ಪ್ಲಸ್ ಆಗುತ್ತೋ ಮೈನಸ್ ಆಗುತ್ತೋ ಅದು ಬೇರೆ ವಿಷಯ. ವರಿಷ್ಠರ ಲೆಕ್ಕಾಚಾರದಲ್ಲಿ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆನ್ನುವ ವಿಚಾರದ ಮೇಲೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಇದರಲ್ಲಿ ನನ್ನ ವ್ಯಕ್ತಿಗತ ಅಭಿಪ್ರಾಯ ಹೇಳಲು ಸಾಧ್ಯವಿಲ್ಲ. ಹೇಳಿದರೆ ಅದು ಅಪಹಾಸ್ಯವಾಗುತ್ತದೆ. ಅದು ಹೇಳುವುದು ಸೂಕ್ತವಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Sat, 9 September 23