ಬೆಳಗಾವಿ, ಫೆ.9: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರನ್ನು ಬೆಳಗಾವಿ (Belagavi) ಲೋಕಸಭಾ ಕ್ಷೇತ್ರದ ಮೂಲಕ ರಾಷ್ಟ್ರ ರಾಜಕಾರಣದತ್ತ ಕಳುಹಿಸಲು ಹೈಕಮಾಂಡ್ ಮಟ್ಟದಲ್ಲಿ ರಣತಂತ್ರ ನಡೆಯುತ್ತಿದೆ. ಆದರೆ, ಇದಕ್ಕೆ ಬೆಂಬಲಿಗರ ಬಣ ವಿರೋಧ ವ್ಯಕ್ತಪಡಿಸುತ್ತಿದ್ದರೆ, ವಿರೋಧಿ ಬಣ ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸುತ್ತಿದೆ.
ಸತೀಶ್ ಜಾರಕಿಹೊಳಿ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲದಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರ ಗೆಲ್ಲುವ ಉದ್ದೇಶದಿಂದ ಅವರಿಗೆ ಹೈಕಮಾಂಡ್ ಸ್ಪರ್ಧಿಸಲು ಸೂಚನೆ ನೀಡುವ ಲಕ್ಷಣ ಕಾಣುತ್ತಿದೆ. ಕಳೆದ ಬಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಐದು ಸಾವಿರ ಮತಗಳ ಅಂತರದಿಂದ ಸತೀಶ್ ಸೋತಿದ್ದರು. ಈ ಬಾರಿ ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುಲು ಸತೀಶ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಸತೀಶ್ ಜಾರಕಿಹೊಳಿಗೆ ಟಿಕೆಟ್ ಕೊಡಿಸುವುದರಲ್ಲಿ ಕೆಲವರ ರಣತಂತ್ರವೂ ಇದೆ. ಪ್ರಭಾವಿ ನಾಯಕ ಸತೀಶ್ ಸ್ಪರ್ಧೆಯಿಂದ ಬಿಜೆಪಿ ಭದ್ರ ಕೋಟೆ ಛಿದ್ರ ಮಾಡಬಹುದು ಎನ್ನುವ ಲೆಕ್ಕಾಚಾರ ಅವರದ್ದಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದರೆ ತಮ್ಮ ಪಕ್ಷದಿಂದಲೂ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕೆಪಿಸಿಸಿ ಪ್ಲಾನ್ ಮಾಡಿಕೊಂಡಿದೆ. ಅಂಗಡಿ ಕುಟುಂಬದಿಂದ ಮಂಗಲಾ ಅಂಗಡಿ ಅಥವಾ ಇವರ ಪುತ್ರಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ಇತ್ತ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಪ್ರಿಯಾಂಕಾ ಅವರಿಗೆ ಟಿಕೆಟ್ ಕೊಟ್ಟರೆ ಸತೀಶ್ ಜಾರಕಿಹೊಳಿ ವರ್ಚಸ್ಸಿನ ಮೇಲೆ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಒಂದೆಡೆಯಾದರೆ, ಇನ್ನೊಂದೆಡೆ, ಪ್ರಿಯಾಂಕಾ ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಜಾರಕಿಹೊಳಿ ಸಹೋದರರು ಬೆಂಬಲಿಸಿ ಗೆಲ್ಲಿಸುತ್ತಾರೆ ಎನ್ನುವ ಲೆಕ್ಕಾಚಾರವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿಸಲು ಪ್ಲಾನ್ ನಡೆಯುತ್ತಿದೆ. ಇದರ ಹಿಂದೆ ಪಕ್ಷಕ್ಕೆ ನಾಲ್ಕು ಲಾಭಗಳು ಆಗಲಿವೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಒಂದೇ ಕಲ್ಲಿನಲ್ಲಿ ನಾಲ್ಕು ಹಕ್ಕಿ ಹೊಡೆಯಲು ಸ್ವಪಕ್ಷೀಯರಿಂದಲೇ ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ.
ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದರೆ ಕೆಲ ನಾಯಕರಿಗೆ ರಾಜಕೀಯ ಲಾಭವೂ ಇದೆ. ಇದರ ಹೊರತಾಗಿ ಆಗುವ ನಾಲ್ಕು ಲಾಭಗಳೆಂದರೆ- ಲೋಕಸಭೆಗೆ ಸ್ಪರ್ಧೆ ಮಾಡಿದರೆ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಲಿದೆ, ಸತೀಶ್ ಸಚಿವ ಸ್ಥಾನ ತೆಗೆದು ಲಕ್ಷ್ಮಣ ಸವದಿಗೆ ಕೊಡುವುದು, ಬೆಳಗಾವಿ ಜಿಲ್ಲೆ ಲಕ್ಷ್ಮೀ ಹೆಬ್ಬಾಳ್ಕರ್ ಹಿಡಿತಕ್ಕೆ ನೀಡುವುದು, ರಾಜ್ಯದಲ್ಲಿ ಮೂರನೇ ಪವರ್ ಸೆಂಟರ್ ಆಗಿರುವ ಸತೀಶ್ ದೆಹಲಿಗೆ ಶಿಪ್ಟ್ ಆದರೆ ಎಲ್ಲವೂ ಕಂಟ್ರೋಲ್ ಆಗಲಿದೆ ಎಂಬ ತಂತ್ರಗಾರಿಗೆ ಇದೆ.
ಸತೀಶ್ ಜಾರಕಿಹೊಳಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ವಿರೋಧಿ ಬಣ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ಕೂಡ ನಡೆಸುತ್ತಿದೆಯಂತೆ. ಆದರೆ, ಯಾವುದೇ ಕಾರಣಕ್ಕೂ ಸತೀಶ್ ಜಾರಕಿಹೊಳಿಗೆ ಟಿಕೆಟ್ ನೀಡಬಾರದು ಅಂತಾ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಟಿಕೆಟ್ ಕೊಟ್ಟರೆ ಬೆಳಗಾವಿಯಿಂದ ಬೆಂಗಳೂರು ಚಲೋ ಮಾಡುತ್ತೇವೆ, ಅವಶ್ಯ ಬಿದ್ದರೆ ದೆಹಲಿಗೂ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸತೀಶ್ ಬೆಂಬಲಿಗರಾಗಿರುವ ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ, ಕಾಂಗ್ರೆಸ್ ಹೈಕಮಾಂಡ್ಗೆ ಸಂದೇಶ ರವಾನಿಸಲು ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಹೇಳಿದರು. ಹೈಕಮಾಂಡ್ ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡುತ್ತಿದೆ ಎಂಬ ಮಾಹಿತಿ ಇದೆ. ಆದರೆ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅಭಿವೃದ್ಧಿಗಾಗಿ ಅವರು ಇಲ್ಲೇ ಇರಬೇಕು ಎಂದಿದ್ದರು.
ಇದನ್ನೂ ಓದಿ: ಬೆಳಗಾವಿ: ಕಾಂಗ್ರೆಸ್ ಕಚೇರಿಯೊಳಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು; 27 ಜನರ ವಿರುದ್ಧ ಎಫ್ಐಆರ್.
ಹನ್ನೊಂದು ಶಾಸಕರನ್ನ ಜಿಲ್ಲೆಯಿಂದ ಕೊಟ್ಟಿದ್ದಾರೆ, ಸರ್ಕಾರ ಬರಲು ನಮ್ಮ ಸಾಹೇಬರು ಕೂಡ ಕಾರಣಕರ್ತರಾಗಿದ್ದಾರೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಆಗಿದ್ದು, ಇವರು ರಾಜ್ಯದಲ್ಲಿ ಇರಬೇಕು, ಕೇಂದ್ರಕ್ಕೆ ಹೋಗಬಾರದು. ಅವರಿಗೆ ಲೋಕಸಭಾ ಟಿಕೆಟ್ ಹೈಕಮಾಂಡ್ ನೀಡಬಾರದು ಎಂದು ಒತ್ತಾಯಿಸಿದ್ದರು.
ಜಿಲ್ಲೆಯ ಮತ್ತೊಬ್ಬ ಪ್ರಭಾವಿ ನಾಯಕಿಯೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಕೊಡಲಿ. ಅವರನ್ನು ಕಿತ್ತೂರು ಚನ್ನಮ್ಮ ಅಂತಾ ಕರೆಯುತ್ತಾರೆ. ಅಂಜಲಿ ನಿಂಬಾಳ್ಕರ್ ಇದ್ದಾರೆ. ಅವರಿಗೆ ಟಿಕೆಟ್ ಕೊಡಿ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತರೆ ನಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ. ಆದರೆ, ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಟ್ಟರೆ ನಾವು ಹೋರಾಟ ಮಾಡುತ್ತೇವೆ ಎಂದಿದ್ದರು.
ಜಾರಕಿಹೊಳಿ ಕುಟುಂಬದಿಂದಲೇ ಟಿಕೆಟ್ ಕೊಡಬೇಕು ಅಂದರೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲಿ. ಇದರ ಹೊರತಾಗಿಯೂ ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಟ್ಟರೆ ಮುಂದಿನ ದಿನಗಳಲ್ಲಿ ಬೆಳಗಾವಿಯಿಂದ ಬೆಂಗಳೂರು ಚಲೋ ಮಾಡುತ್ತೇವೆ. ನಮ್ಮ ಸರ್ಕಾರಕ್ಕೆ ಮನವಿ ಮಾಡಿ ಮನವೊಲಿಸಲು ಬೆಂಗಳೂರು ಹೋಗುತ್ತೇವೆ ಎಂದಿದ್ದರು.
ಒಟ್ಟಾರೆಯಾಗಿ, ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜಿಲ್ಲೆಯನ್ನು ತನ್ನ ಹತೋಟಿಗೆ ತರಲು ಕಾಂಗ್ರೆಸ್ ಜಿಲ್ಲೆಯ ಪ್ರಬಲ ನಾಯಕನಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ. ಇದಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದ್ದು, ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ ಎನ್ನುವ ಚಿಂತೆ ಕೈ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ