ಕೆಂಪಣ್ಣ ಭ್ರಷ್ಟಾಚಾರ ಆರೋಪಕ್ಕೆ ಕಾಂಗ್ರೆಸ್ ನಾಯಕರ ತಿರುಗೇಟು: ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು
40% commission: ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಅದೇ ಆರೋಪ ಮಾಡಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್ ನಾಯಕರ ಕೋಪಕ್ಕೆ ಗುರಿಯಾಗಿದೆ. ಸಚಿವರಾದ ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 9: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿಯೂ (Congress Government) ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ (D Kempanna) ಆರೋಪಕ್ಕೆ ಕಾಂಗ್ರೆಸ್ ನಾಯಕರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) , ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಬಿಜೆಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇದ್ದ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿತ್ತು. ನನ್ನ ಜೀವನದಲ್ಲೇ ಅಂತಹ ಸರ್ಕಾರ ನೋಡಿರಲಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇದ್ದಾಗ ಅತಿಹೆಚ್ಚು ಭ್ರಷ್ಟಾಚಾರ ನಡೆದಿತ್ತು. 3 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದರು. ಬಿಜೆಪಿಯವರು ಸಾಲದ ಗ್ಯಾರಂಟಿಯನ್ನು ಕೊಟ್ಟಿದ್ದರು ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.
ಕೆಂಪಣ್ಣ ದಾಖಲೆ ನೀಡಲಿ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ನಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಂಪಣ್ಣ ಆರೋಪ ಮಾಡಿದ್ದಾರೆ. ಹಾಗೇನಾದರೂ ಇದ್ದರೆ ದಾಖಲೆ ನೀಡಲಿ. ಈಗಾಗಲೇ ನಾವು ಆಯೋಗ ರಚನೆ ಮಾಡಿದ್ದೇವೆ. ದಯವಿಟ್ಟು ಕೆಂಪಣ್ಣ ಅವರ ಹತ್ತಿರ ದಾಖಲೆ ಇದ್ದರೆ ಆಯೋಗಕ್ಕೆ ನೀಡಲಿ ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಾವು ಪಾರರ್ಶಕ ಆಡಳಿತ ಮಾಡುತ್ತಿದ್ದೇವೆ. ಸಣ್ಣ ತಪ್ಪು ಆಗಿದ್ದರೂ ದಾಖಲೆ ನೀಡಲಿ. ಜನ ಮತ್ತೊಮ್ಮೆ ವಿಧಾನಸೌಧಕ್ಕೆ ಬಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದರು ಎಂದು ಅವರು ಟೀಕಿಸಿದ್ದಾರೆ.
ತೆರಿಗೆ ವಿಚಾರದಲ್ಲಿ ಬಿಜೆಪಿಯವರು ಕನ್ನಡಿಗರ ಪರ ಮಾತನಾಡುತ್ತಿಲ್ಲ. ಪ್ರಧಾನಿ ಮೋದಿ ಅವರನ್ನು ಮೆಚ್ಚಿಸಲು ಹೋಗುತ್ತಿದ್ದಾರೆ. ಪ್ರಧಾನಿ ಮೋದಿಯವರು ಹಿಂದೆ ಸಿಎಂ ಆಗಿದ್ದಾಗ ಏನೇನು ಮಾತನಾಡಿದ್ದರು? ದಯವಿಟ್ಟು ಬಿಜೆಪಿಯವರು ತಿಳಿದುಕೊಳ್ಳಲಿ. ಅವಾಗ ಮೋದಿಯವರು ನಮಗೂ ಟ್ಯಾಕ್ಸ್ ಕೇಳಬೇಡಿ, ನಿಮ್ಮನ್ನ ನಾವು ಕೇಳಲ್ಲ ಎಂದಿದ್ದರು. ಅದು ದೇಶ ವಿಭಜನೆ ಹೇಳಿಕೆ ಆಗುವುದಿಲ್ಲವಾ? ನಾವು ಗ್ಯಾರೆಂಟಿ ನೀಡಿದ್ದು ಜನರಿಗೆ ನೇರವಾಗಿ ಹೋಗುತ್ತಿದೆ. ಆರ್ಥಿಕ ದಿವಾಳಿ ಇದ್ದರೆ ಜನರಿಗೆ ಗ್ಯಾರೆಂಟಿ ಕೊಡೋಕೆ ಹೇಗೆ ಸಾಧ್ಯವಾಗ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಏನು ಹೇಳಿದ್ದರು ಕೆಂಪಣ್ಣ?
ಈಗಿನ ಕಾಂಗ್ರೆಸ್ ಸರ್ಕಾರದಲ್ಲಿಯೂ 40 ಪರ್ಸೆಂಟ್ ಕಮಿಷನ್ ಇದೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಕೆಂಪಣ್ಣ ಹೇಳಿದ್ದರು. ಈ ಹಿಂದೆ ಶಾಸಕರು, ಸಚಿವರು ಕಮಿಷನ್ ಕೇಳುತ್ತಿದ್ದರೆ ಈಗ ಅಧಿಕಾರಿಗಳ ಸರದಿ. ನಾವು ಶಾಸಕರು, ಸಚಿವರಿಗೆ ಕೊಡಬೇಕಾಗುತ್ತದೆ ಕಮಿಷನ್ ನೀಡಿ ಎಂದು ಅವರೇ ಕೇಳುತ್ತಾರೆ ಎಂದು ಕೆಂಪಣ್ಣ ಆರೋಪಿಸಿದ್ದರು.
ಇದನ್ನೂ ಓದಿ: ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್ ನಾಯಕತ್ವ ಪಟ್ಟು
ಪ್ಯಾಕೇಜ್ ಟೆಂಡರ್ ಕರೆಯಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸೂಚಿಸಿದ್ದಾರೆ. ಬಿಬಿಎಂಪಿ ಆಯುಕ್ತರ ಮಾತಿಗೂ ಬೆಲೆ ಇರುವುದಿಲ್ಲ. ಎಂಜಿನಿಯರ್ಗಳೆಲ್ಲ ಟೆಂಡರ್ ಕರೆಯುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ