ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​​​-ಜೆಡಿಎಸ್​ ನಡುವೆ ವಾರ್; ಹಲವರ ವಿರುದ್ಧ ಎಫ್​ಐಆರ್

ಜೆಡಿಎಸ್​​ನಿಂದ ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್ ಉಚ್ಚಾಟನೆಗೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಬೆಂಬಲಿಗರು ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ವಾಕ್ಸಮರ ಆರಂಭಗೊಂಡಿದೆ.

ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​​​-ಜೆಡಿಎಸ್​ ನಡುವೆ ವಾರ್; ಹಲವರ ವಿರುದ್ಧ ಎಫ್​ಐಆರ್
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ (ಎಡ ಚಿತ್ರ)
Updated By: Rakesh Nayak Manchi

Updated on: Jan 12, 2023 | 9:24 AM

ತುಮಕೂರು: ಜೆಡಿಎಸ್​​ನಿಂದ ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್ (S.T.Srinivas) ಉಚ್ಚಾಟನೆಗೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಬೆಂಬಲಿಗರು ಮತ್ತು ಜೆಡಿಎಸ್ (JDS) ಬೆಂಬಲಿಗರ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ತಾರಕಕ್ಕೇರಿದ ವಾಕ್ಸಮರ ಗುಬ್ಬಿ ಠಾಣೆ ಮೆಟ್ಟಿಲೇರಿದೆ. ಉಭಯ ಬೆಂಬಲಿಗರ ನಡುವೆ ಪರಸ್ಪರ ನಿಂದನೆ ಆರೋಪ ಸಂಬಂಧ ಠಾಣೆಯಲ್ಲಿ 10 ಜನರ ಮೇಲೆ FIR ದಾಖಲಾಗಿದೆ. ಶಾಸಕ ಎಸ್​.ಆರ್​.ಶ್ರೀನಿವಾಸ್ ಅವರ ಮೂವರು ಬೆಂಬಲಿಗರು ಹಾಗೂ ಜೆಡಿಎಸ್​​​​ನ 7 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಗೊಂಡ ಕುಮಾರಸ್ವಾಮಿ ಮತ್ತು ಶ್ರೀನಿವಾಸ್ ಮುನಿಸು ಇದೀಗ ಈ ಹಂತಕ್ಕೆ ಬಂದು ತಲುಪಿದೆ. ಜೆಡಿಎಸ್ ಜೊತೆ ಮುನಿಸಿಕೊಂಡಿದ್ದ ಶ್ರೀನಿವಾಸ್, ರಾಜ್ಯಸಭೆಯಲ್ಲಿ ಅಡ್ಡಮತ ಚಲಾಯಿಸಿದ್ದರು. ಬಿಜೆಪಿಗೆ ಅಡ್ಡಮತದಾನ ಮಾಡಿರುವುದನ್ನು ಶ್ರೀನಿವಾಸ್ ಅವರು ರೇವಣ್ಣ ಅವರಿಗೆ ತೋರಿಸಿದ್ದರು. ಈ ಬೆಳವಣಿಗೆ ನಂತರ ಶ್ರೀನಿವಾಸ್ ಅವರು ಜೆಡಿಎಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಎಚ್‌.ಡಿ ಕುಮಾರಸ್ವಾಮಿ ಸೇರಿದಂತೆ ಕಾರ್ಯಕರ್ತರು ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಚರ್ಚೆಗಳು ಆರಂಭವಾದವು.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವುದು ಯುವಜನೋತ್ಸವ ಅಲ್ಲ, ಯುವ ವಿನಾಶೋತ್ಸವ: ಸಿದ್ದರಾಮಯ್ಯ ವ್ಯಂಗ್ಯ

ಮಾತ್ರವಲ್ಲದೆ, ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಬದುಕಿರುವಾಗಲೇ ತಿಥಿ ಕಾಡ್೯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿ ವಿಕೃತಿ ಮೆರೆದಿದ್ದರು. ಜೆಡಿಎಸ್ ಪಕ್ಷದಲ್ಲಿದ್ದ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಹಿನ್ನಲೆ ತಿಥಿ ಕಾರ್ಡ್ ವೈರಲ್ ಮಾಡಲಾಗಿತ್ತು. ಪ್ರಚಂಡ ಭೈರವ ಹೆಸರಿನಿಂದ ಈ ಪೊಸ್ಟ್​ ಮಾಡಿದ್ದು, ಜೆಡಿಎಸ್ ಗ್ರೂಪ್​ಗಳಿಗೆ ಶೇರ್ ಮಾಡಲಾಗಿತ್ತು.

ಜೂನ್​ 10ರಂದು ನಿಧನರಾಗಿದ್ದಾರೆ, ಜೂನ್​ 21ರಂದು ಸ್ವಕ್ಷೇತ್ರ ಗುಬ್ಬಿಯಲ್ಲಿ ಕೈಲಾಸ ಸಮಾರಾಧಾನೆ ನಡೆಯಲಿದೆ ಎಂದು ಜೆಡಿಎಸ್ ಅಭಿಮಾನಿಗಳು ತಿಥಿ ಕಾರ್ಡ್​ನಲ್ಲಿ ಬರೆದಿದ್ದರು. ಶ್ರೀನಿವಾಸ್​ರ ಅಭಿಮಾನಿಗಳು ಇದನ್ನು ನೋಡಿ ವಿಕೃತಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅತ್ತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೂ ಶ್ರದ್ದಾಂಜಲಿ ಕಾರ್ಡ್ ಸಲ್ಲಿಸಲಾಗಿದೆ. ಎಂಎಲ್‌ಎ ಶ್ರೀನಿವಾಸ್ ಫ್ರಾನ್ಸ್ ಪೇಜ್​ನಲ್ಲಿ ಎಚ್.ಡಿ. ಕುಮಾರಸ್ವಾಮಿ ಪೋಸ್ಟರ್ ಹಾಕಲಾಗಿದ್ದು, ತಿಥಿ ಕಾರ್ಡ್‌ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 am, Thu, 12 January 23