Bharat Jodo Yatra: ಭಾರತ್ ಜೋಡೋ ಯಾತ್ರೆ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಭಾವಚಿತ್ರ

| Updated By: Rakesh Nayak Manchi

Updated on: Oct 07, 2022 | 11:01 AM

ಕೇರಳದ ನಂತರ ಇದೀಗ ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಫೋಟೋ ಕಾಣಿಸಿಕೊಂಡಿದೆ. ಆ ಮೂಲಕ ವೀರ ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.

Bharat Jodo Yatra: ಭಾರತ್ ಜೋಡೋ ಯಾತ್ರೆ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಭಾವಚಿತ್ರ
ಭಾರತ್ ಜೋಡೋ ಯಾತ್ರೆ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಭಾವಚಿತ್ರ
Follow us on

ಮಂಡ್ಯ: ಹಿಂದುತ್ವ ಸಿದ್ಧಾಂತವಾದ ವೀರ ಸಾವರ್ಕರ್ (Veer Savarkar) ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ದೇಶಾದ್ಯಂತ ಟೀಕಿಸುತ್ತಾ ನಡೆಯುತ್ತಿದ್ದ ಕಾಂಗ್ರೆಸ್ (Congress) ಇದೀಗ ಸಾವರ್ಕರ್ ವಿಚಾರದಲ್ಲಿ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ. ಈ ಹಿಂದೆ ಭಾರತ್ ಜೋಡೋ ಯಾತ್ರೆಯಲ್ಲಿ ವೀರ ಸಾವರ್ಕರ್ ಭಾವಚಿತ್ರ ಇರುವ ಬ್ಯಾನರ್ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತಿದ್ದ ಕಾಂಗ್ರೆಸ್, ಗಾಂಧೀಜಿ ಅವರ ಭಾವಚಿತ್ರವನ್ನು ಅಂಟಿಸಿತ್ತು. ಇದೀಗ ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatra)ಗೆ ಸಂಬಂಧಿಸಿ ಹಾಕಿದ್ದ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಅವರ ಫೋಟೋ ಕಾಣಿಸಿಕೊಂಡಿದೆ. ಈ ಬ್ಯಾನರ್​ನಲ್ಲಿ ರಾಹುಲ್ ಗಾಂಧಿ (Rahul Gandhi), ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (D.K.Shivakumar) ಅವರ ಫೋಟೋ ಕೂಡ ಇದೆ. ಆದರೆ ಇದು ದುಷ್ಕರ್ಮಿಗಳ ಕೈವಾಡ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಮುನ್ನಡೆಸುತ್ತಿದ್ದು, ಮೈಸೂರು ನಂತರ ಇದೀಗ ಮಂಡ್ಯಕ್ಕೆ ಯಾತ್ರೆ ತಲುಪಿದೆ. ಅದರಂತೆ ರಾಹುಲ್ ಗಾಂಧಿಯನ್ನು ಸ್ವಾಗತಿಸುವ ಹಾಗೂ ಯಾತ್ರೆಗೆ ಸಂಬಂಧಿಸಿದ ಅನೇಕ ಬ್ಯಾನರ್​ಗಳನ್ನು ಅಳವಡಿಸಲಾಗಿತ್ತು. ಈ ಪೈಕಿ ಶಾಂತಿನಗರ ಶಾಸಕ ನಲಪಾಡ್ ಅಹಮದ್ ಹ್ಯಾರಿಸ್​ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿರುವ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಅವರ ಫೋಟೋ ಕಾಣಿಸಿಕೊಂಡಿದೆ. ಇದು ಕಾಂಗ್ರೆಸ್ ನಾಯಕರನ್ನು ಎರಡನೇ ಬಾರಿ ಮುಜುಗರಕ್ಕೀಡು ಮಾಡಿದೆ.

ಈ ವಿಚಾರವಾಗಿ ಮಾತನಾಡಿದ ಹ್ಯಾರಿಸ್, ಇದು ಕೆಲವು ಕಿಡಿಗೇಡಿಗಳು ಮಾಡಿದ ಕೃತ್ಯವಾಗಿದೆ. ಇದು ನಮ್ಮ ಕಡೆಯಿಂದ ಹಾಕಿದ ಬ್ಯಾನರ್ ಅಲ್ಲ. ಈ ರೀತಿ ಕೃತ್ಯ ಎಸಗಿದವರ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ದೂರು ದಾಖಲಿಸುವುದಾಗಿ ಹ್ಯಾರಿಸ್ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಸೆಪ್ಟೆಂಬರ್ 21 ರಂದು ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯ ಪೋಸ್ಟರ್‌ನಲ್ಲಿ ಸಾವರ್ಕರ್ ಇತರ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಗಾಂಧೀಜಿ ಭಾವಚಿತ್ರ ಕಾಣೆಯಾಗಿತ್ತು. ಇದರ ಫೋಟೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೈ ನಾಯಕರು ಸಾವರ್ಕರ್ ಭಾವಚಿತ್ರದ ಮೇಲೆ ಗಾಂಧಿಯವರ ಚಿತ್ರವನ್ನು ಅಂಟಿಸಿದ್ದರು. 

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 am, Fri, 7 October 22