ಬೆಂಗಳೂರು: ಜೀವ, ಪ್ರಾಣ ಕೊಡುತ್ತೇವೆ ಆದರೆ ಮೀಸಲಾತಿ ಮುಟ್ಟಿದರೆ ಸಹಿಸಲ್ಲ, ಶಾಸಕರ ಮನೆಗಳಿಗೆ ನುಗ್ಗುವಂತಹ ಕೆಲಸ ಕೂಡ ಆಗುತ್ತದೆ ಎಂದು ಕಾಂಗ್ರೆಸ್ (Congress) ಸರ್ಕಾರಕ್ಕೆ ಮಾಜಿ ಸಚಿವ ಶ್ರೀರಾಮುಲು (B Sriramulu) ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿ ಮುಟ್ಟಿದರೆ ಜನರು ಮುಂದೆ ಬೀದಿಗಿಳಿಯುತ್ತಾರೆ. ಎಂತಹ ಪರಿಸ್ಥಿತಿಯಾದರೂ ಸರಿ ಜೀವ, ಪ್ರಾಣ ಬೇಕಾದರೆ ಕೊಡುತ್ತೇವೆ. ಆದರೆ ಮೀಸಲಾತಿ (Resurvation) ಮುಟ್ಟುವವರನ್ನು, ತೆಗೆಯುವವರನ್ನು ಸಹಿಸಲ್ಲ ಎಂದು ಹೇಳಿದ್ದಾರೆ.
ಜಾತಿ ಜನಗಣತಿ ಬಹಳ ಹಳೆಯದ್ದು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಅದನ್ನು ಸ್ವೀಕಾರ ಮಾಡಲು ಒಪ್ಪಿರಲಿಲ್ಲ. ಅವರೇ ಸಿಎಂ ಆಗಿದ್ದರು, ಅವರೇ ಯಾರನ್ನೋ ಚೇರ್ಮನ್ ಕೂಡಾ ಮಾಡಿಕೊಂಡಿದ್ದರು. ಅವರು ಕೊಟ್ಟ ವರದಿಯನ್ನೇ ಸ್ವೀಕಾರ ಮಾಡಲು ರೆಡಿ ಇರಲಿಲ್ಲ. ಇವತ್ತು ಜಾತಿ ಜನಗಣತಿ ಬಗ್ಗೆ ಮಾತಾಡಿದರೆ ಎಲ್ಲಿಗೆ ಹೋಗಿ ನಿಲ್ಲುತ್ತದೆ? ಅಧಿಕಾರದಲ್ಲಿ ಇರುವಾಗ ಒಂದು ಮಾತು, ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು ಮಾತು ಎಂದು ಟೀಕಿಸಿದರು.
ಇದನ್ನೂ ಓದಿ: ಉಚಿತ ಗ್ಯಾರಂಟಿ ಚುನಾವಣಾ ಗಿಮಿಕ್ ಅಷ್ಟೇ ಎಂದ ಸಚಿವ ಚೆಲುವರಾಯಸ್ವಾಮಿ; ಇನ್ನೂ ಏನೇನಂದ್ರು? ವಿಡಿಯೋ ನೋಡಿ
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್ಗೆ ಕಷ್ಟ ಆಗುತ್ತಿದೆ. ಸರ್ಕಾರದ ಖಜಾನೆ ಖಾಲಿ ಆಗುತ್ತಿದೆ. ಉಚಿತ ಕರೆಂಟ್ ಸಿಗುತ್ತದೆ ಅಂತ ನಂಬಿದ ಬಡವರಿಗೆ ಮೋಸ ಮಾಡಿದ್ದಾರೆ. ಇದನ್ನೆಲ್ಲಾ ಜನ ಗಮನಿಸುತ್ತಿದ್ದಾರೆ. ಗ್ಯಾರಂಟಿಗಳಲ್ಲಿ ಷರತ್ತುಗಳನ್ನು ಹಾಕಿದ್ದಾರೆ. ಇವರ ಗ್ಯಾರಂಟಿಗಳು ಜಾರಿಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮುಂದಿನ ದಿನಗಳಲ್ಲಿ ಜನ ಸುಮ್ಮನಿರುವುದಿಲ್ಲ. ಜನ ಬೀದಿಗೆ ಇಳಿದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಶಾಸಕರ ಮನೆಗಳಿಗೂ ಜನ ನುಗ್ಗುವ ಕೆಲಸ ಮಾಡುತ್ತಾರೆ. ಆ ಮೂಲಕ ಕಾಂಗ್ರೆಸ್ನವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ