ಕೇಂದ್ರ ಸರ್ಕಾರ ಕೊಡದಿದ್ದರೂ ಲಭ್ಯವಿದ್ದಲ್ಲಿಂದ ಪಡೆದು 10 ಕೆಜಿ ಅಕ್ಕಿ ವಿತರಿಸುತ್ತೇವೆ: ಲಕ್ಷ್ಮಣ್ ಸವದಿ

|

Updated on: Jun 14, 2023 | 8:41 PM

ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡದಿದ್ದರೂ ಲಭ್ಯವಿದ್ದಲ್ಲಿಂದ ಪಡೆದು ಪ್ರಣಾಳಿಯಲ್ಲಿ ನೀಡಿದಂತೆ 10 ಕೆಜಿ ಅಕ್ಕಿಯನ್ನು ವಿತರಿಸುತ್ತೇವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೊಡದಿದ್ದರೂ ಲಭ್ಯವಿದ್ದಲ್ಲಿಂದ ಪಡೆದು 10 ಕೆಜಿ ಅಕ್ಕಿ ವಿತರಿಸುತ್ತೇವೆ: ಲಕ್ಷ್ಮಣ್ ಸವದಿ
10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಬೆಳಗಾವಿಯಲ್ಲಿ ಲಕ್ಷ್ಮಣ್ ಸವದಿ ಹೇಳಿದ್ದಾರೆ
Follow us on

ಬೆಳಗಾವಿ: ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡದಿದ್ದರೂ ಲಭ್ಯವಿದ್ದಲ್ಲಿಂದ ಪಡೆದು ಪ್ರಣಾಳಿಯಲ್ಲಿ ನೀಡಿದಂತೆ 10 ಕೆಜಿ ಅಕ್ಕಿಯನ್ನು ವಿತರಿಸುತ್ತೇವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ಹೇಳಿದ್ದಾರೆ. ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಬರಬೇಕಾದ ಐದು ಕೆಜಿ ಅಕ್ಕಿ ಬಂದೆ ಬರುತ್ತದೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ಕೊಡಬೇಕು. ಈ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿಯೇ‌ ಹೇಳಿದ್ದೆವು ಎಂದರು.

ಬೇರೆ ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ಲಭ್ಯತೆ ಇದೆ ಅದನ್ನು ಪಡೆದುಕೊಂಡಾದರೂ ಅಕ್ಕಿ ಕೊಡುವ ಕೆಲಸ ಮಾಡುತ್ತೇವೆ ಅಂತ ಆಹಾರ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಕೊಡಲ್ಲ ಎಂಬ ಕಾರಣಕ್ಕೆ ನಾವು ಯೋಜನೆ ನಿಲ್ಲಿಸುವುದಿಲ್ಲ. ಖಂಡಿತ ಆ ಯೋಜನೆಯನ್ನು ಪ್ರಾರಂಭ ಮಾಡೆ ಮಾಡುತ್ತೇವೆ ಎಂದರು.

ಅಕ್ಕಿ ಬೆಳೆಯುವ ರಾಜ್ಯಗಳು ಕಡಿಮೆ ಇವೆ, ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಆರೋಪ‌ ವಿಚಾರವಾಗಿ ಮಾತನಾಡಿದ ಲಕ್ಷ್ಮಣ್ ಸವದಿ, ಅವರೇನು‌ ಮಾಹಿತಿ ತೆಗೆದುಕೊಂಡು ಹೇಳಿದ್ದರೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ಹೇಳಿದ್ದಕ್ಕೆ ನಾವು ಪರಾಮರ್ಶೆ ಮಾಡುವುದು ಸರಿಯಲ್ಲ ಎಂದರು.

ಮುಂದೆ ಒಳ್ಳೆಯ ದಿನಗಳು ಕಾದಿವೆ: ಸವದಿ

ಲಕ್ಷ್ಮಣ್ ಸವದಿಯವರು ಕಾಂಗ್ರೆಸ್​ನಿಂದ ಗೆದ್ದಿದ್ದರೂ ಮಂತ್ರಿ ಸ್ಥಾನ ಲಭ್ಯವಾಗಿಲ್ಲ. ಈ ಬಗ್ಗೆ ಮಾತನಾಡಿದ ಅವರು, ನಾನು ಇನ್ನೂ 22 ವರ್ಷದ ರಾಜಕಾರಣಲ್ಲಿ ಇರುತ್ತೇನೆ. ರಾಜಕೀಯದಲ್ಲಿದ್ದವರಿಗೆ ತಾಳ್ಮೆ ದೂರದೃಷ್ಟಿ ಎರಡೂ ಬೇಕು. ಮುಂದೆ ಒಳ್ಳೆಯ ದಿನಗಳು ಕಾದಿವೆ ಎನ್ನುವುದನ್ನು ನಾನು ನಂಬಿದ್ದೇನೆ. ನಾನು ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ‌ಕೆಲಸಗಳು ನೆನೆಗುದಿಗೆ ಬಿದ್ದಿವೆ. ಇದನ್ನೆಲ್ಲಾ ಪೂರ್ಣಗೊಳಿಸುತ್ತೇನೆ. ಕ್ಷೇತ್ರದ ಜನ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡಿದ ಮೇಲೆ ರಾಜ್ಯ ರಾಜಕಾರಣದ ವಿಚಾರ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಉಚಿತ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ

ಕಳೆದ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರು ಹೊಂದಾಣಿಕೆಯಿಂದ ಪಕ್ಷಕ್ಕೆ ಸೋಲಾಯ್ತು ಎಂದು ನಿಮ್ಮ ಹಳೆಯ ಮಿತ್ರರು (ಬಿಜೆಪಿ‌ ನಾಯಕರು) ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಲಕ್ಷ್ಮಣ್ ಸವದಿ, ಯಾರು ನನ್ನ ಹಳೆಯ ಮಿತ್ರರು ಎಂದು ಮರು ಪ್ರಶ್ನಿಸಿದರು. ರಾಜ್ಯ ನಾಯಕರ ಮಧ್ಯೆ ಹೊಂದಾಣಿಕೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅಷ್ಟು ಕೆಳಗಡೆ ಹೋಗಿ ಅಧ್ಯಯನ ಮಾಡಿಲ್ಲ. ಸಿಟಿ ರವಿ, ಪ್ರತಾಪ್ ಸಿಂಹ ಹೇಳಿಕೆಯನ್ನು ನಾನೂ ಮಾಧ್ಯಮದಲ್ಲಿ ಗಮನಿಸಿದ್ದೆನೆ. ಅದರ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿ ಅದರ ಬಗ್ಗೆ ಮಾತಾಡುತ್ತೇನೆ ಎಂದರು.

ಸಂಘ ಪರಿವಾರದಿಂದಲ್ಲ ಜನತಾ ಪರಿವಾರದಿಂದ ಬಂದವನು: ಸವದಿ

ಸುದೀರ್ಘವಾಗಿ ಬಿಜೆಪಿಯಲ್ಲಿದ್ದ ನೀವು ಏಕಾಏಕಿ ಕಾಂಗ್ರೆಸ್‌ಗೆ ಬಂದಿದ್ದೀರಿ, ಹೊಂದಾಣಿಕೆ ಆಗುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ, ನಾನು ಮೂಲತಃ ಸಂಘ ಪರಿವಾರದಿಂದ ಬಂದವನಲ್ಲ. ಜನತಾ ಪರಿವಾರದಿಂದ ಬಂದವನು. ಜನತಾ ಪರಿವಾದಿಂದ ಬಂದವರಿಗೆ ಜಾತ್ಯಾತೀತ ಮನೋಭಾವನೆ ಇಟ್ಟುಕೊಂಡಿರುತ್ತಾರೆ. ನನಗೆ ಆ ಮನೆ ಈ ಮನೆ ಬಹಳ ವ್ಯತ್ಯಾಸ ಕಾಣುತ್ತಿಲ್ಲ. ಕಾಂಗ್ರೆಸ್​ನಲ್ಲಿ ಜಾತ್ಯಾತೀತ ಮನೋಭಾವನೆ ಇದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:33 pm, Wed, 14 June 23