ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ (Lok Sabha Election 2024) ಸಿದ್ಧತೆ ದೃಷ್ಟಿಯಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (AICC) ಕರ್ನಾಟಕ ಕಾಂಗ್ರೆಸ್ ನಾಯಕರ ಜತೆ ದೆಹಲಿಯಲ್ಲಿ ಮೊದಲ ಹಂತದ ಸಭೆಯನ್ನು ಬುಧವಾರ ನಡೆಸಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ, 2024ರ ಲೋಕಸಭೆ ಚುನಾವಣೆ ಗೆಲ್ಲುವುದಕ್ಕಾಗಿ ಸೂತ್ರವೊಂದನ್ನು ಎಐಸಿಸಿ ಪಕ್ಷದ ನಾಯಕರ ಮುಂದಿಟ್ಟಿದೆ.
5 ಉಚಿತ ಗ್ಯಾರಂಟಿಗಳು ಸರಿಯಾಗಿ ಜಾರಿಯಾಗಬೇಕು. ಅದಕ್ಕಾಗಿ ಫಲಾನುಭವಿಗಳ ಸಭೆ ನಡೆಸಬೇಕು. ಫಲಾನುಭವಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಪರ್ಕ ಮಾಡಬೇಕು. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ತಡವಾಗಬಾರದು. ಸೂಕ್ತವಾದ ಅಭ್ಯರ್ಥಿಗಳನ್ನು ಗುರುತಿಸಿ ಆದಷ್ಟು ಬೇಗ ಅಖಾಡಕ್ಕೆ ಬಿಡಬೇಕು. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಕಾರ್ಯಕ್ರಮ ರೂಪಿಸಬೇಕು. ಬಿಜೆಪಿಯ ಹಿಂದೂ ಮುಸ್ಲಿಂ ವಿಭಜನೆ ತಂತ್ರಕ್ಕೆ ಪ್ರತಿತಂತ್ರ ರೂಪಿಸಬೇಕು. ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಹೋರಾಡಬೇಕು ಎಂದು ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕರಿಗೆ ಎಐಸಿಸಿ ನಾಯಕರು ಸೂಚನೆ ನೀಡಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಕಚೇರಿ ಇರಬೇಕು ಎಂದು ಕಾಂಗ್ರೆಸ್ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಸೂಚನೆ ನೀಡಿದರು. ಪಕ್ಷದ ಕಾರ್ಯಕರ್ತರ ಜತೆ ಎಲ್ಲಾ ಸಚಿವರು ಸಂಪರ್ಕದಲ್ಲಿರಬೇಕು. ಯಾವ ಸಚಿವರ ವಿರುದ್ಧವೂ ದೂರು ಬರದಂತೆ ನೋಡಿಕೊಳ್ಳಬೇಕು. ಕಾಂಗ್ರೆಸ್ ಗ್ಯಾರಂಟಿಗಳನ್ನು ಕೊಟ್ಟಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು. ಕಾಂಗ್ರೆಸ್ ಪಕ್ಷವನ್ನೇ ಮುನ್ನೆಲೆಯಲ್ಲಿಟ್ಟುಕೊಂಡು ಪ್ರಚಾರ ಮಾಡಬೇಕು ಎಂದು ರಾಹುಲ್ ಗಾಂಧಿ ಸೂಚನೆ ನೀಡಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಯಿಂದ ರಾಜ್ಯದ ಖಜಾನೆ ಖಾಲಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು
ಜನರ ಪರವಾಗಿದ್ದರೆ ಜನ ನಮ್ಮ ಪರವಾಗಿರುತ್ತಾರೆ ಎನ್ನುವುದಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶವೇ ಉದಾಹರಣೆ. ಈ ನಿಟ್ಟಿನಲ್ಲಿ ಕಾರ್ಯ ಮುಂದುವರಿಸಿ. ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿ. ಜನರು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಹಣಕಾಸು ಇಕ್ಕಟ್ಟು ಎಂದು ಟೀಕೆ ಮಾಡುತ್ತಾರೆ. ಆರ್ಥಿಕ ದಿವಾಳಿ ಬಗ್ಗೆ ಪ್ರತಿ ಪಕ್ಷಗಳು ವಾದಿಸುತ್ತವೆ. ಸರಿಯಾಗಿ ಸಂಪನ್ಮೂಲ ಹೊಂದಿಸಿದರೆ ಯಾವುದೇ ಸಮಸ್ಯೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ರಾಜ್ಯ ಬಿಜೆಪಿ ನಾಯಕತ್ವ ಇಲ್ಲದ ಪಕ್ಷವಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ನಾವು ಪಕ್ಷ ಕಟ್ಟಬೇಕು. ಬಿಜೆಪಿ ಪಕ್ಷವು ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾತ್ರ ನಂಬಿಕೊಂಡಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಪ್ರತಿಕ್ರಿಯೆ ಚೆನ್ನಾಗಿದೆ. ಹೀಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಲಕ್ಷ್ಮಣ ಸವದಿ ಮತ್ತು ಶೆಟ್ಟರ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಾದರೆ ರಣತಂತ್ರ ಬದಲಿಸಬೇಕು ಎಂದು ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ವರಿಷ್ಠರು ಸೂಚನೆ ನೀಡಿದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಒಲವು ತೋರುತ್ತಿದೆ. ಎರಡೂ ಪಕ್ಷಗಳು ಒಂದಾಗಿ ಸ್ಪರ್ಧೆ ಮಾಡುವ ಸೂಚನೆ ತೋರಿವೆ. ಹೀಗಾಗಿ ಪ್ಲ್ಯಾನ್ ಎ & ಬಿ ಸಿದ್ಧವಾಗಿರಬೇಕೆಂದು ನಾಯಕರು ಸಲಹೆ ನೀಡಿದರು. ಚುನಾವಣೆ ಅಸ್ತ್ರವಾಗಿ ಬೆಲೆ ಏರಿಕೆ ವಿರುದ್ಧ ಹೋರಾಟ ರೂಪಿಸಬೇಕು. ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವೆಂದು ಹೋರಾಟ ರೂಪಿಸಿ. ಗ್ಯಾಸ್ ಸಬ್ಸಿಡಿ, ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಆಗ್ರಹಿಸಿ ಹೋರಾಟ ನಡೆಸಿ ಎಂದು ರಾಜ್ಯ ನಾಯಕರಿಗೆ ಹೈಕಮಾಂಡ್ ನಾಯಕರು ಸೂಚನೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Wed, 2 August 23