ಯೂ ಟ್ಯೂಬ್ ಪಾಡ್ಕಾಸ್ಟ್ ಒಂದರಲ್ಲಿ ಮಾತಾಡಿರುವ ಜೋಷಿ, ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬಳಕೆಯಾಗುತ್ತಿರುವ ಭಾಷೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ ಮತ್ತು ಒಗ್ಗುವುದೂ ಇಲ್ಲ ಎಂದು ಹೇಳಿದ್ದಾರೆ.
‘‘ಓಟಿಟಿ ಪ್ಲಾಟ್ಫಾರ್ಮ್ಗಳು ನಿಜಕ್ಕೂ ಅದ್ಭುತವಾಗಿವೆ, ಅದರಲ್ಲಿ ಸಂದೇಹವೇ ಬೇಡ. ವೆಬ್ ಸಿರೀಸ್ಗಳಲ್ಲಿ ಕಾಣಿಸಿಕೊಳ್ಳುವ ಕಲಾವಿದರ ನಟನೆ ತುಂಬಾ ಇಂಪ್ರೆಸಿವ್ ಆಗಿದೆ. ಆದರೆ ಇಲ್ಲಿ ಬಳಸಲಾಗುತ್ತಿರುವ ಭಾಷೆ ಹೇವರಿಕೆ ಹುಟ್ಟಿಸುತ್ತದೆ. ಅಶ್ಲೀಲ ಭಾಷೆ ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ,’’ ಅಂತ ಜೋಷಿ ಹೇಳಿದ್ದಾರೆ.
ರಾಜ್ ಕಪೂರ್, ಹೃಷಿಕೇಶ್ ಮುಖರ್ಜಿ, ಶ್ಯಾಮ್ ಬೆನಗಲ್ ಮೊದಲಾದವರ ಚಿತ್ರಗಳನ್ನು ಬಹಳ ಇಷ್ಟಪಡುವ ಜೋಷಿ ಸೀರಿಯಲ್ಗಳಲ್ಲಿ ನೈಜ್ಯತೆ ತರಲು ಅಶ್ಲೀಲ ಭಾಷೆಯನ್ನು ಬಳಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.
‘‘ಸೀರಿಯಲ್ಗಳಲ್ಲಿ ನೈಜ್ಯತೆ ತರಲು ಅಶ್ಲೀಲ ಭಾಷೆಯನ್ನು ಬಳಸುವುದು ಅನಿವಾರ್ಯ ಅಂತ ಕೆಲ ನಿರ್ಮಾಪಕರು ಹೇಳುತ್ತಾರೆ. ಅದರೆ ಅದು ಸಮಜಾಯಿಷಿ ಅನಿಸಲಾರದು. ಹಾಗಾದರೆ, ಟಾಯ್ಲೆಟ್ಗೆ ಹೊಗುವುದನ್ನು, ಸ್ನಾನ ಮಾಡುವುದನ್ನು ಯಾಕೆ ತೋರಿಸಬಾರದು, ನೈಜ್ಯತೆ ಹೆಸರಲ್ಲಿ ಅದನ್ನೂ ತೋರಿಸಿ. ವೀಕ್ಷಕರಿಗೆ ನೀವು ಏನು ಉಣಬಡಿಸುತ್ತೀರಿ ಎನ್ನುವುದು ಮುಖ್ಯ. ಅವರು ಟಿವಿ ತೆರೆಯ ಮೇಲೆ ನೋಡುವುದು ಮನಸ್ಸಿನಲ್ಲಿ ಉಳಿದುಬಿಡುತ್ತದೆ. ನಾವು ಯಾವ ಬಗೆಯ ಸಮಾಜವನ್ನು ನಿರ್ಮಿಸ ಹೊರಟಿದ್ದೇವೆ? ಹೊಲಸು ಭಾಷೆಯನ್ನಾಡುವ ಸಮಾಜವನ್ನೇ? ಕೆಲವರು ಬದಲಾವಣೆ ಮುಖ್ಯ ಮತ್ತು ಅನಿವಾರ್ಯ ಅನ್ನುತ್ತಾರೆ. ಅವರ ಪ್ರಕಾರ ಕೆಟ್ಟ ಭಾಷೆಯನ್ನು ಮಾತಾಡುವುದು ಬದಲಾವಣೆಯ ಸಂಕೇತವೇ? ವಿಷಯ ಯಾವುದೇ ಆಗಿದ್ದರೂ ಅದಕ್ಕೊಂದು ಮಿತಿ ಇರುತ್ತದೆ, ಮಿತಿ ದಾಟಿದರೆ ಎಲ್ಲವೂ ಅಪಾಯವೇ,’’ ಎಂದು ಜೋಷಿ ಹೇಳುತ್ತಾರೆ.
‘‘ಪಾಶ್ಚಾತ್ಯ ದೇಶಗಳಲ್ಲಿ ‘F’ ಶಬ್ದದ ಬಳಕೆ ಸಾಮಾನ್ಯ ಮತ್ತು ಅಲ್ಲಿನ ಜನಕ್ಕೆ ಅದು ಅಶ್ಲೀಲವೆನಿಸದು. ಆದರೆ ನಮ್ಮ ಸಂಸ್ಕೃತಿಯಲ್ಲಿ ಅಂಥ ಪದಗಳಿಗೆ ಆಸ್ಪದವಿಲ್ಲ. ನಮ್ಮ ತಂದೆ–ತಾಯಿಗಳೊಂದಿಗೆ ನಾವು ಹಾಗೆ ಮಾತಾಡುವುದು ಸಾಧ್ಯವೇ? ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ–ವಿಚಾರ ಬೇರೆಯವರಿಗೆ ಮಾದರಿಯಾಗಿವೆ, ಪಾಶ್ಚಾತ್ಯ ರಾಷ್ಟ್ರಗಳು ನಮ್ಮನ್ನು ಅನುಕರಿಸುತ್ತಿವೆ. ಪರಿಸ್ಥಿತಿ ಹಾಗಿರಬೇಕಾದರೆ, ನಮ್ಮದಲ್ಲದ ಸಂಸ್ಕೃತಿಯನ್ನು ನಾವು ಆಲಂಗಿಸುವುದು ಸರಿಯೇ?’’ ಎಂದು ಜೋಷಿ ಪ್ರಶ್ನಿಸಿದ್ದಾರೆ.