ಅನ್ನ (ಆಹಾರ) ಮಾತ್ರವಲ್ಲ ಅದನ್ನು ಬೆಳೆಯುವ ರೈತನೂ ಪರಬ್ರಹ್ಮ ಎಂದ ದೇಶ ನಮ್ಮದು. ರೈತರ ಬದುಕು ಸಂಕಷ್ಟದಲ್ಲಿದೆ ಎನ್ನುವುದು ನಮ್ಮ ದೇಶದ ಮಟ್ಟಿಗೆ ಹಳೆಯ ಮಾತು. ಇದೀಗ ‘ದೆಹಲಿ ಚಲೋ’ ಚಳವಳಿಯ ನಂತರ ಇದೇ ಮಾತು ವಿಶ್ವಮಟ್ಟದಲ್ಲಿಯೂ ದೊಡ್ಡ ಸುದ್ದಿಯಾಯಿತು. ಇದನ್ನೇ ನೆಪವಾಗಿಸಿಕೊಂಡು ಸೃಜನಶೀಲ ಕಲೆಗಳಲ್ಲಿ ಅನ್ನದಾತನ ಬದುಕು ಹೇಗೆ ಬಿಂಬಿತವಾಗಿದೆ ಎಂಬುದನ್ನು ಶೋಧಿಸುವ ಪ್ರಯತ್ನವನ್ನು ಗಂಭೀರ ಓದುಗರು, ಲೇಖಕರು ಇಲ್ಲಿ ಮಾಡಿದ್ದಾರೆ. ಬೇಸಾಯ ಮತ್ತು ರೈತರನ್ನು ಕನ್ನಡ ಪರಂಪರೆ ಕಂಡ ಬಗೆಯ ಬಗ್ಗೆ ಲೇಖನ ಸರಣಿಯನ್ನು ‘ಟಿವಿ9 ಕನ್ನಡ ಡಿಜಿಟಲ್’ ಆರಂಭಿಸಿದ್ದು ಇಂದು ಕಲಾ ಇತಿಹಾಸ ಪ್ರಾಧ್ಯಾಪಕ, ಲೇಖಕ ಎಚ್.ಎ. ಅನಿಲ್ಕುಮಾರ್ ಅವರ ಲೇಖನ ಎರಡು ಭಾಗಗಳಲ್ಲಿ ನಿಮ್ಮ ಓದಿಗೆ.
ನಿಮ್ಮ ಪ್ರತಿಕ್ರಿಯೆಗಳೂ ನಮಗೆ ಅಮೂಲ್ಯ. ಇ-ಮೇಲ್ tv9kannadadigital@gmail.com
ಭಾಗ – 2
ಕಾಡು, ಹೊಲಗದ್ದೆ, ನಿಸರ್ಗ, ತೋಟ, ಪಾರ್ಕು, ಇತ್ಯಾದಿಗಳನ್ನು ಚಿತ್ರಕಲೆಯಲ್ಲಿ ಮೊದಲೆಲ್ಲ ಕೇವಲ ‘ಹಿನ್ನೆಲೆ’ ಅಥವಾ ‘ಬ್ಯಾಗ್ರೌಂಡ್’ ಎಂದು ಮಾತ್ರ ಬಳಸುತ್ತಿದ್ದರು. ದೃಶ್ಯಕಲೆಯನ್ನು ನಾಟಕ, ರಂಗಭೂಮಿ ಹಾಗೂ ಸಿನೆಮಾದ ಹಿನ್ನೆಲೆಯಾಗಿ ಮಾತ್ರ ಬಳಸುತ್ತಿದ್ದಂತೆ. ಇಂದು ಇದೇ ನಿಸರ್ಗವು ಬಾಲಿವುಡ್ಡಿನ ಮಿಲಿಯನ್ ಡಾಲರ್ ವ್ಯವಹಾರ ಎಂದು ಹೇಳಬಹುದು: ಏಕೆಂದರೆ ಸ್ವಿಟ್ಜರ್ಲೆಂಡ್ ಎಂಬ ಒಂದು ದೊಡ್ಡ ತೋಟದಲ್ಲಿ, ಬೆಟ್ಟದಲ್ಲಿ ‘ತಿತ್ಲಿ’ ಎಂದು ತಿತ್ಲಿಸ್ ಬೆಟ್ಟದ ಹಿನ್ನೆಲೆಯಲ್ಲಿ ಒಂದೆರೆಡು ಹಾಡನ್ನು ಚಿತ್ರೀಕರಿಸದಿದ್ದರೆ, ಆ ಸಿನೆಮಾಕ್ಕೆ ಸಾಕಷ್ಟು ಮಸಾಲೆ ಇರುತ್ತಿರಲಿಲ್ಲ. ಇಂತಹ ಪಾಶ್ಚಾತ್ಯ ಹಾಡುಗಳು ಲೈಂಗಿಕ ಆಕರ್ಷಣೆಯನ್ನು ಸಮಾಜ ಒಪ್ಪಿ, ಸಿಳ್ಳೆ ಹೊಡೆವಂತೆ ದೃಶ್ಯಾತ್ಮಕವಾಗಿ ಪ್ರಸ್ತುತಪಡಿಸುವ ಒಂದು ಉಪಾಯ (ಸಿನೆಮಾದಲ್ಲಿ ನಿಸರ್ಗಚಿತ್ರಣ) ಎಂದು ಡಿ.ಆರ್. ನಾಗರಾಜ್ ಒಂದೆಡೆ ವಾದಿಸಿದ್ದಾರೆ. ಸ್ವಿಟ್ಸರ್ಲೆಂಡಿನಲ್ಲಿ ರೈತರಿಗೆ ಎರಡು ಮೂರು ತೆರನಾದ ಆದಾಯವಿದೆಯಂತೆ: 1. ಸಹಜ ಕೃಷಿ, 2. ಚಳಿಗಾಲಕ್ಕೆ ಬೆಟ್ಟದ ಮೇಲೊಂದು ಹೈನುಗಾರಿಕೆ ಮತ್ತು 3. ಮಂಜು ಮುಸುಕಿದ ವೇಳೆಗೆ ವಾಹನಗಳಿಗೆ ರಸ್ತೆ ತೆರವುಗೊಳಿಸುವ ಕೆಲಸ. ಆದ್ದರಿಂದ ಅಲ್ಲಿನ ರಾಜಕಾರಣದ ಶಕ್ತಿಪ್ರದರ್ಶನದಲ್ಲಿ ರೈತರದ್ದೇ ಮೇಲುಗೈ. ರೈತನಾಗಿದ್ದ ನನ್ನ ತಾತ, ‘ಬೇಸಾಯ ನೀ ಸಾಯ’ ಎಂಬುದು ಈಗ ಸ್ವಲ ಸ್ವಲ್ಪವೇ ಅರಿವಾಗುತ್ತಿದೆ.
ಶಾಂತಿನಿಕೇತನದಲ್ಲಿ ಮೊದಲ ಆಧುನಿಕ ಕಲೆಯ ಶಾಲೆ ಹುಟ್ಟಿಕೊಂಡದ್ದು (1919ರಲ್ಲಿ) ಕೊಲ್ಕೊತ್ತಾ ಆಚೆಯ ಬಿರ್ಭುಮ್ ಎಂಬ ಬರಡು ತಾಲ್ಲೂಕಿನಲ್ಲಿ. ಅಲ್ಲಿನ ನೆಲದ ನೀರು ಅದೆಷ್ಟು ಮೇಲಕ್ಕಿದೆ ಎಂದರೆ, ಭಾರೀ ತೂಕದ ವಾಹನಗಳಿಗೆ ಅಲ್ಲಿ ನಿಷೇಧವಿದೆ, ಕುಸಿಯದಿರಲಿ ಎಂದು! ಅಲ್ಲಿನ ಪ್ರಮುಖ ಶಿಲ್ಪಿ ಹಾಗೂ ಶಿಕ್ಷಕ ರಾಮ್ಕಿಂಕರ್ ಬೈಜ್, ರೈತಾಪಿ ಜನರ ಕುರಿತ ಅನೇಕ ಚಿತ್ರ, ಶಿಲ್ಪಗಳನ್ನು ರಚಿಸಿದ್ದಾರೆ. ಇಂದಿಗೂ ರೈತರ ಕುರಿತಾದ ಒಂದು ಭಾರತೀಯ ಆಧುನಿಕ ಶಿಲ್ಪವನ್ನು ಹೆಸರಿಸಿ ಎಂದರೆ, ಅದು ಶಾಂತಿನಿಕೇತನದ ಕಲಾಭವನ ಕಲಾಶಾಲೆಯ ಆವರಣದಲ್ಲಿರುವ ಬೈಜರ ‘ಹಾರ್ವೆಸ್ಟ್’ ಎಂಬ ಶಿಲ್ಪ. ಒಣಹುಲ್ಲಿನ ಕಟ್ಟನ್ನು ಎರಡೂ ಕೈಗಳಲ್ಲಿ ಮೇಲೆತ್ತಿ, ಬೆನ್ನನ್ನು ಹಿಂದಕ್ಕೆ ಬಾಗಿಸಿರುವ ಒಂದೇ ಆಕಾರವು, ದೇಹ-ಹುಲ್ಲಿನ ಕಟ್ಟು ಒಂದಾಗುವಂತೆ, ಅದೇ ಒಂದು ಯೋಗದ ಭಂಗಿ ಎಂಬಂತೆ ಏಕತ್ರವಾಗಿದೆ. ಕೇವಲ ಇನ್ನೂರು ರೂಪಾಯಿಯಲ್ಲಿ ರಚಿಸಲಾದ ಈ ಶಿಲ್ಪವನ್ನು ಬೈಜ್ ಚಿತ್ರಿಸಿರುವ ರೀತಿಗೂ ರೈತ ಹೊಲದಲ್ಲಿ ಕೆಲಸ ಮಾಡುವ ಕ್ರಮಕ್ಕೂ ಅನೇಕ ಸಾಮ್ಯತೆಗಳಿವೆ. ಕಬ್ಬಿಣದ ಆರ್ಮೇಚರ್ (ಮೂಲ ಬೆನ್ನೆಲುಬು, ದೇಹಕ್ಕೆ ಮೂಲೆಗಳಿದ್ದಂತೆ ಶಿಲ್ಪಕ್ಕೆ ಕಬ್ಬಿಣದ ಕೇಂದ್ರ ಆಸರೆಯನ್ನು ಆರ್ಮೇಚರ್ ಎನ್ನುತ್ತಾರೆ) ಬದಲಿಗೆ ಬೊಂಬನ್ನು ಬಳಸಿ, ವೈರ್ ಮೆಶ್ ಬಳಕೆಯ ಬದಲು ಅಗ್ಗದ ಹಗ್ಗವನ್ನು ಸುತ್ತಿ, ಮಾರ್ಟರ್ ಸಿಮೆಂಟಿನ ಬದಲು ಕೈಗೆ ಸಿಕ್ಕ ಅಲ್ಲಿನ ಬಿಡಿಬಿಡಿ ಮಣ್ಣನ್ನು ನೀರಿನೊಂದಿಗೆ ಬಳಸಿ, ಆರ್ಮೇಚರಿನ ಸುತ್ತಲೂ ಮೆತ್ತಿ, ಕೆರೆದು, ತಟ್ಟಿ ಒಟ್ಟಾರೆ ಬೀಳದಂತೆ, ಆ ಆಕಾರವೂ ಸಹ ತನ್ನ ಕೈಗಳಲ್ಲಿರುವ ಹುಲ್ಲಿನ ಹೊರೆಯನ್ನೂ ಸಹ ಬೀಳಿಸದಂತೆ ರಚಿಸಲಾದ ಈ ಕಲಾಕೃತಿಯು ಗುಣಾತ್ಮಕವಾಗಿ 20ನೇ ಶತಮಾನದ, ಆಧುನಿಕ ಭಾರತೀಯ ಶಿಲ್ಪಗಳಲ್ಲೇ ಮೊದಲನೆಯ ಸಾಲಿನಲ್ಲಿ ನಿಲ್ಲುತ್ತದೆ.
ಇದನ್ನು ಬೈಜ್ ರಚಿಸಿದ ರೀತಿಯನ್ನು ಒಬ್ಬ ಶಿಲ್ಪಿಯ ರಚನೆಯ ತಂತ್ರಗಾರಿಕೆಗಿಂತಲೂ, ಒಬ್ಬ ರೈತ ತನ್ನ ಹೊಲವನ್ನು ಒಪ್ಪಓರಣ ಮಾಡುವ, ಒಡ್ಡು ಕಟ್ಟುವ, ಕಣವನ್ನು ಅಣಿಗೊಳಿಸುವ ರೀತಿಯಲ್ಲಿ ನಿರ್ಮಾಣಗೊಂಡದ್ದಾಗಿದೆ. ಅನಾಥ ಶಿಶುವಾಗಿದ್ದ ಬೈಜ್ ರೈತಾಪಿ ಕುಲದ ಕೂಸೇ? ಆಗ ಕೇವಲ ಇನ್ನೂರು ರೂಪಾಯಿಗಳಿಗೆ ನಿರ್ಮಾಣಗೊಂಡ ಈ ಕೃತಿಯನ್ನು ಈಗ, ನಾಶವಾಗದಂತೆ ಸಂಸ್ಕರಿಸಿ, ಅದರ ಪ್ರತಿಯೊಂದನ್ನು ಕಂಚು ಅಥವಾ ಪಂಚಲೋಹದಲ್ಲಿ ನಿರ್ಮಿಸಲು ಭಾರತ ಸರ್ಕಾರವು ಮಾಡಿರುವ ಖರ್ಚು ಕೇವಲ ಎರಡು ಕೋಟಿ ರೂಪಾಯಿಗಳು, ಅದೂ ಇತ್ತೀಚಿಗೆ, ಎರಡು ದಶಕದ ಹಿಂದೆ!
ಬೈಜರ ಸುತ್ತಮುತ್ತಲಿನ ಸಹವರ್ತಿಗಳು, ಶಾಂತಿನಿಕೇತನದ ಸುತ್ತಲಿನ ಗ್ರಾಮೀಣ ಜೀವನವನ್ನು ಪಟಪಟನೆ ಸೃಷ್ಟಿಸಿದ್ದಿದೆ. ಸುತ್ತಲೂ ಇದ್ದದ್ದು ಗ್ರಾಮಗಳೂ ಹೌದು, ಸಂತಾಲಿ ಬುಡಕಟ್ಟಿನ ಜನರೂ ಹೌದು. ಯಾರದಾದರೂ ವಿದ್ಯಾರ್ಥಿಗಳದ್ದೋ ಸಹವರ್ತಿಗಳದ್ದೋ ಹುಟ್ಟುಹಬ್ಬವಿದ್ದಲ್ಲಿ, ನಂದಲಾಲ್ ಬೋಸರಂತಹ ಶಿಕ್ಷಕರು ಕೂಡಲೇ ಅಂಚೆ ಕಾಗದದ ಮೇಲೊಂದು ಚಿತ್ರವನ್ನು ಗೀಚಿ ಉಡುಗೊರೆಯಾಗಿ ಕೊಟ್ಟುಬಿಡುತ್ತಿದ್ದರು. ಆ ಚಿತ್ರದಲ್ಲಿ ಒಂದು ಮೇಕೆ, ಬಾಳೆ ಹಣ್ಣು ತಿನ್ನುತ್ತಿರುವ ಹುಡುಗ, ಬಣಿವೆಯಲ್ಲಿ ಬಿಸಿಲು ಕಾಯಿಸಿಕೊಳ್ಳುತ್ತಿರುವ ಶ್ರಮಿಕವರ್ಗ, ಇವರೆಲ್ಲರ ಚಿತ್ರಗಳೂ ಕಂಡುಬರುತ್ತವೆ. ಆದರೆ ಬೈಜ್ ಮಾತ್ರ ಕುರೋಸಾವನ ‘ಸೆವೆನ್ ಸಮುರಾಯ್’ ಸಿನೆಮಾದ ರೈತ-ಯೋಧನಿದ್ದಂತೆ. ಇತರೆ ಕಲಾವಿದರುಗಳು ಶೆರ್ಲಾಕ್ ಹೋಮ್ಸನಂತೆ, ಮನೆಯೊಳಗಿನ ಬಾಲ್ಕನಿಯ ಕಿಟಕಿಯಿಂದ ರೈತಾಪಿ ಬದುಕನ್ನು ಅನುಭವಿಸಿ ಚಿತ್ರಿಸಿದಂತಲ್ಲದೆ, ಸ್ವತಃ ತಾನೇ ಬುದುರೆ ಮಣ್ಣನ್ನು ಕಾಲಲ್ಲಿ ತುಳಿದು, ಹಣಿಸಿ ವ್ಯವಸಾಯಕ್ಕೆ ಹಸನಾಗಿಸುವಂತೆ ಮಾಡಿರುವಂತಹದ್ದು ಬೈಜರ್ ಚಿತ್ರಗಳು. ಈ ಅರ್ಥದಲ್ಲಿ ಶಾಂತಿನಿಕೇತನದಲ್ಲಿ ಜನಿತವಾಗಿರುವ ಸಾವಿರಾರು ರೈತಾಪಿ ಬದುಕಿನ, ಗ್ರಾಮೀಣತೆಯ ದೃಶ್ಯಗಳು ಒಂದು ತೆರನಾದ ಪ್ರವಾಸಿ ತಾಣಕ್ಕೆ ಭೇಟಿ ನೀಡುವಂತಹ ಮುದ ನೀಡುತ್ತವೆ.
ಶಂಕರಗೌಡ ಬೆಟ್ಟದೂರ, ಸೋಮನಾಥ್ ಹೋರ್ ಮತ್ತು ರಾಮ್ಕಿಂಕರ್ ಬೈಜ್ ಅವರುಗಳು ರೈತರ ಚಳವಳಿಯಲ್ಲಿ ಅಕ್ಷರಶಃ ಭಾಗವಹಿಸಿದವರು, ಅವರೊಂದಿಗೆ ಒಡನಾಡಿದವರು, ಅವರ ಹಾಗೆ ದೃಶ್ಯಗಳನ್ನು ಸಚಿತ್ರಶಿಲ್ಪಗಳಲ್ಲಿ ಭಾವಿಸಿದವರು. ಶಾಂತಿನಿಕೇತನದ ಆಧುನಿಕ ಕಲೆಯ ಆಗುಹೋಗುಗಳನ್ನೂ ಸಹ, ಕಾಲು ಶತಮಾನದ ನಂತರ ಮುಂಬಯಿಯಲ್ಲಿ ಉದಿಸಿದ ಪ್ರಗತಿಪರ ಕಲಾ ಗುಂಪು ಗ್ರಾಮೀಣ ಕಲೆ ಎಂದೇ ಭಾವಿಸಿತ್ತು. ರೈತರ ಹೋರಾಟಗಳಿಗೆ, ಭಾವನೆಗಳಿಗೆ ಕಲಾತ್ಮಕವಾಗಿ ಸ್ಪಂದಿಸಿದವರು ಒಂದು ಮುಖ್ಯ ಸಮಸ್ಯೆಯನ್ನು ವಿಮರ್ಶಕರಿಂದ ಎದುರಿಸಬೇಕಾಯಿತು. ರೈತರ ಬದುಕನ್ನು ಚಿತ್ರಿಸಿದರೆ, ಅದು ಅವರ ಬದುಕಿನ ಸೊಬಗನ್ನು ಅಥವಾ ದುರಂತವನ್ನು ಮಾತ್ರ ಚಿತ್ರಿಸಬೇಕಿತ್ತು. ಕರ್ನಾಟಕದ ಎಂ.ಎಸ್. ಚಂದ್ರಶೇಖರ್ ಅಂಥವರು, ಐ.ಟಿ.ಕಂಪನಿಯ ಉದ್ಯೋಗಿಗಳು ನಾಲ್ಕು ಗೋಡೆಯಲ್ಲಿ ತಿಂಗಳಾದ್ಯಂತ ಕಂಪ್ಯೂಟರ್ ಪರದೆ ನೋಡಿ ಸಾಕಾಗಿ, ತಿಂಗಳ ಕೊನೆಯ ಭಾನುವಾರ ದುಬಾರಿ ಕ್ಯಾಮರಾ ಹಿಡಿದು ಸುತ್ತಲಿನ ಗ್ರಾಮೀಣ ಬೆಂಗಳೂರಲ್ಲಿ ಪಶು, ಪಕ್ಷಿ, ಗುಡಿಸಲು, ಬಡವ, ಸೈಕಲ್, ಎತ್ತಿನಬಂಡಿ, ಮೂಟೆ, ವಾಮೆ, ಕೆರೆ ಕುಂಟೆಗಳನ್ನು ಶೂಟ್ ಮಾಡಲು ಹೋದಂತೆ, ಗ್ರಾಮಜೀವನವನ್ನು ಸಿಹಿಲೇಪಿತವಾಗಿ ಜಲವರ್ಣದಲ್ಲಿ ಬಿಡಿಸಿದ್ದಾರೆ.
ಅಜಂತಾ-ಎಲ್ಲೋರಾ ಗುಹಾಚಿತ್ರಗಳನ್ನು ಸುಮಾರು ನಾಲ್ಕೈದು ದಶಕಗಳ ಕಾಲ ಅನವರತ ಪ್ರತಿಕೃತಿ ತೆಗೆವ ಕೆಲಸದಲ್ಲೇ ಮುಳುಗಿದ್ದ ಚಂದ್ರಶೇಖರ್, ಥೇಟ್ ಐ.ಟಿ.ಕೆಲಸಗಾರರಂತೆ, ದಣಿವಿನಿಂದಲೋ, ಕೆಲಸದ ಏಕತಾನತೆಯಿಂದಲೋ ಗ್ರಾಮೀಣ ನಿಸರ್ಗಚಿತ್ರಣದಲ್ಲಿ ತೊಡಗಿಕೊಂಡರು. ಇಂಥವರಿಗೆ ‘ಏರು ಪೇರಿನ ಜೊತೆಯಲ್ಲೇ ಜೀವನ’ ಎಂದು ಹಾಡುತ್ತ ಬಂದು ಹಳ್ಳಿಯ ಬದುಕಿನೊಂದಿಗೆ ಲೀನವಾಗುವ ರಾಜೀವನ ಮಾದರಿ ಒಪ್ಪಿಗೆಯಾಗಲಿಲ್ಲ (ಬಂಗಾರದ ಮನುಷ್ಯ). ನಿಸರ್ಗವು ಇವರಿಗೆಲ್ಲ ‘ಜಾನ್ರ ಚಿತ್ರ’ಗಳಾಗಿಬಿಟ್ಟವು. ಬೀದಿಗೆ ಬಿದ್ದ, ಕಷ್ಟ ಸುಖಗಳೆಂಬ ಬೇಧವಿಲ್ಲದೆ ಹಲ್ಲುಕಿರಿದು ನಗುವ ಗ್ರಾಮೀಣ ಬಡವರ ಚಿತ್ರಗಳು ಹದಿನಾರು-ಹದಿನೇಳನೇ ಶತಮಾನದ ನವ-ಶ್ರೀಮಂತ ವರ್ಗದಲ್ಲಿ ಬಹು ಪ್ರಸಿದ್ಧವಾಗಿದ್ದವು. ಕಲಾವಿದರಿಗೂ ಸಹ ಅಂತಹದ್ದೇ ಚಿತ್ರಗಳನ್ನು ರಚಿಸುವಂತೆ ಒತ್ತಡ ಹಾಕಲಾಗುತ್ತಿತ್ತು. ಅಂದು ‘ಜಾನ್ರ ಚಿತ್ರ’ಗಳು ಎಂದು ಕರೆಸಿಕೊಂಡ ವಿಂಗಡಣೆಯು ಇಂದು, ಬೇರೆ ಅರ್ಥ ಪಡೆದುಕೊಂಡಿವೆ. ನಿಸರ್ಗ, ಭಾವಚಿತ್ರ, ಸ್ಟಿಲ್ ಲೈಫ್ (ಜೋಡಿಸಲಾದ ವಸ್ತುಗಳ ಚಿತ್ರಣ) ಇತ್ಯಾದಿಗಳನ್ನು ಇಂದು ‘ಜಾನ್ರ ಚಿತ್ರ’ ಎಂದು ಕರೆಯಲಾಗುತ್ತದೆ. ಗ್ರಾಮೀಣ ಬದುಕಿನ ಬವಣೆಯನ್ನು ನಿಸರ್ಗಚಿತ್ರ ಪ್ರಕಾರಗಳೊಂದಿಗೆ ಬೆರೆಸುವ ಯತ್ನ ಮಾಡಿದವರು ಮೈಸೂರಿನ ಎನ್. ಹನುಮಯ್ಯನವರು.
ಚಿತ್ರಕಲೆಯ ಮೂಲಕ ರೈತರ, ಗ್ರಾಮೀಣ ಬದುಕಿನ ಚಿತ್ರಗಳನ್ನು ರಚಿಸುವ ಅಭ್ಯಾಸವು ನಾಗರೀಕತೆಯಲ್ಲಿ ಕೈಗಾರೀಕರಣ ಆರಂಭಗೊಂಡ ಕಾಲಕ್ಕೆ ಹುಟ್ಟಿಕೊಂಡದ್ದು. ಚಿತ್ರಕಲೆಯಲ್ಲಿ ಮೊದಲ ಆಧುನಿಕತೆ ದೊಡ್ಡದಾಗಿ ಆರಂಭಗೊಂಡದ್ದೇ ಹೊಲಗದ್ದೆಗಳ, ವಾಮೆಗಳ ಚಿತ್ರಣದ ಮೂಲಕ, ಇಂಪ್ರೆಷನಿಸ್ಟ್ ಕಲಾವಿದರಿಂದ. ಕ್ಲಾಡ್ ಮಾನೆ ಎಂಬ ಫ್ರೆಂಚ್ ಕಲಾವಿದ ತನ್ನ ಮನೆಯ ಸುತ್ತಲಿನ ಒಂದೇ ತೋಟವನ್ನು ಸುಮಾರು ಐದು ದಶಕಗಳ ಕಾಲ ಚಿತ್ರಿಸಿದ್ದ. ಭಾರತದಲ್ಲಿ ಚಿತ್ರ, ಶಿಲ್ಪಕಲೆಗಳಿಗೆ ಮಾರುಕಟ್ಟೆ ಇಲ್ಲದ ಕಾರಣ, ಹಿಂನೆನಪಿನ ಚಿತ್ರಗಳನ್ನೇ ಹೆಚ್ಚಾಗಿ ನಿಸರ್ಗ ಚಿತ್ರಗಳ ಮೂಲಕ ಬಿಡಿಸಿದ ಕಲಾವಿದರುಗಳಿದ್ದಾರೆ. ವಿಚಿತ್ರವೆಂದರೆ ಎಲ್ಲ ಗೋಚರ ಜಗತ್ತಿನ ಎಲ್ಲವನ್ನೂ ಬಿಡಿಸಲು ಕಲಿಸುವ ಕಲಾಶಾಲೆಗಳಲ್ಲಿ, ನಿಸರ್ಗ ಚಿತ್ರಣವನ್ನು ಮಾತ್ರ ಕಲಿಸುವುದಿಲ್ಲ. ಹೆಚ್ಚುವರಿ ಹಣ ಸಂಪಾದನೆ ಮಾಡುವವರು ಹೆಚ್ಚಾಗಿ ನಿಸರ್ಗ ಚಿತ್ರಗಳನ್ನು ರಚಿಸಿ ಮಾರಿ ಹೊಟ್ಟೆಹೊರೆಯುತ್ತಾರೆ. ಗ್ರಾಮೀಣತೆಯನ್ನು ಒಳಗೊಳ್ಳುವ ನಿಸರ್ಗಚಿತ್ರಣವನ್ನು ಕಲಾವಿಮರ್ಶೆಯೂ ಸಹ ಅನುಮಾನದಿಂದಲೇ ವೀಕ್ಷಿಸುತ್ತಾರೆ. ವಿಶೇಷವೆಂದರೆ, ಭಾರತಕ್ಕೆ ರವಿವರ್ಮ ಇದ್ದಂತೆ ಇಂಗ್ಲೆಂಡಿನ ಟರ್ನರ್ ಎಂಬಾತ, ನಿಸರ್ಗ, ಸಮುದ್ರ ಹಾಗೂ ಜನರಹಿತ ಪ್ರಕೃತಿ ಚಿತ್ರಣಕ್ಕೆ ಹೆಸರುವಾಸಿ. ಜನರಿಂದ ತುಂಬಿರುವ, ರೈತಜೀವನವನ್ನು ಚಿತ್ರಿಸಿರುವ ಕಾನ್ಸ್ಟೇಬಲ್ ಎಂಬ ಕಲಾವಿದ ಹೆಚ್ಚು ವಿಮರ್ಶಾತ್ಮಕವಾಗಿ ಸ್ವೀಕಾರ್ಹನಲ್ಲ!
ದಕ್ಷಿಣ ಭಾರತದಲ್ಲಿ ರೈತಕುಟುಂಬದವರೂ ತಮ್ಮ ಮೂಲವೃತ್ತಿಯನ್ನು ತೊರೆಯದೆ, ತಮ್ಮಗಳ ಕುರಿತಾದ ಚಿತ್ರಗಳನ್ನು ರಚಿಸಿದ್ದಿದೆ. ಮಳೆಗಾಲದಲ್ಲಿ ಹೊಲದಲ್ಲಿ ಮಾಡಲು ಕೆಲಸವಿಲ್ಲದ ಸಮಯದಲ್ಲಿ, ಇಂತಹವರು ತೊಗಲುಗೊಂಬೆಗಳನ್ನು ರಚಿಸುವುದಿದೆ. ಜೊತೆಗೆ, ಟಿವಿ, ಸಿನೆಮಾದಿಂದ ಸ್ವಲ್ಪ ದೂರವೇ ಉಳಿದ ಇಂತಹವರಿಗೆ ತೊಗಲುಗೊಂಬೆ, ವಾರ್ಲಿ, ಮಧುಬನಿ ಚಿತ್ರಗಳ, ದೊಕ್ರ ಶಿಲ್ಪಗಳ ಮೂಲಕ ಐತಿಹ್ಯ, ಪುರಾಣಗಳ ನಾಟಕವನ್ನಾಡುವ ಅಭ್ಯಾಸವೂ ಇಂದು ಜನಜನಿತವಾಗಿದೆ. ಸಾಧಾರಣವಾಗಿ ಗ್ರಾಮವೆಂದರೆ, ಗ್ರಾಮವಾಸವೆಂದರೆ ಭವಿಷ್ಯದಲ್ಲಿ ನಗರವಾಗಿ ಮಾರ್ಪಾಡುಗಳು ಕಾಯುತ್ತಿರುವ ತಾಣಗಳಾಗಿ ಕಾಣುತ್ತವೆ. ‘ಭೂಮಿಗೀತ’, ‘ಮೇಯರ್ ಮುತ್ತಣ್ಣ’, ‘ಭೂತಯ್ಯನ ಮಗ ಅಯ್ಯು’ ವಿನಂಥ ಸಿನೆಮಾಗಳಲ್ಲಿ ಉತ್ತುವ ನೆಲವನ್ನು ಕಟ್ಟುವ ನೆಲವನ್ನಾಗಿ ಪರಿವರ್ತಿಸುವಲ್ಲಿನ ರಾಜಕಾರಣ, ಅದಕ್ಕೆ ಜನಸಾಮಾನ್ಯರ, ರೈತರ ಪ್ರತಿರೋಧಗಳನ್ನು ಪ್ರತಿಷ್ಠಾಪಿಸುವ ಯತ್ನಗಳು ಕಾಣುತ್ತವೆ. ‘ಬಂಗಾರದ ಮನುಷ್ಯ’ದಂತಹ ಸಿನೆಮಾಗಳ ಆದರ್ಶವು ಹಳ್ಳಿಗೆ ಹಿಂದಿರುಗುವ ಜನರ ಬಯಕೆ ಹಾಗೂ ವಾಸ್ತವದಲ್ಲಿ ಅದರಿಂದ ದೂರ ಹೋಗುವ ವ್ಯಂಗ್ಯೋಕ್ತಿಗಳನ್ನೂ ತಮ್ಮ ಒಡಲಲ್ಲಿ ಉಳಿಸಿಕೊಂಡಿರುತ್ತವೆ. ‘ಭೂದಾನ’ ಮುಂತಾದ ನಿಜದ ವಾಸ್ತವವನ್ನು ಪ್ರಜ್ಞಾಪೂರ್ವಕವಾಗಿ ಪರದೆಮೇಲೆ ನಿರೂಪಿಸುವ ಸೂಕ್ಷ್ಮ ಯತ್ನಗಳೂ ಆಗಿವೆ. ಅಲ್ಲೆಲ್ಲ ಕಲಾವಿದರುಗಳು ಕಲಾನಿರ್ದೇಶಕರುಗಳಾಗಿ ಕಾರ್ಯ ನಿರ್ವಹಿಸಿದಿದೆ.
ಹೀಗೆ, ಬೇಸಾಯವನ್ನು ಕಲಾ ನಿರ್ಮಿತಿಯ ಕ್ರಿಯೆಯೊಂದಿಗೆ ತಾಳೆ ಹಾಕುವ, ಆ ಬದುಕನ್ನು ನಾಸ್ಟಾಲ್ಜಿಕ್ ಆಗಿ ತಮ್ಮ ಕಲಾತ್ಮಕ ಅಭಿವ್ಯಕ್ತಿಯ ವಿಷಯವನ್ನಾಗಿ ಭಾವಿಸುವ ಯತ್ನಗಳ ಹಿಂದೆ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ; ರೈತಾಪಿ ಜೀವನವು ಭಾರತದಂತಹ ದೇಶದಲ್ಲಿ ಸ್ವತಃ ಒಂದು ಮೌನ ಪ್ರತಿಭಟನೆ. ಬೇಸಾಯದ ಬದುಕಿನ ಮುನ್ನ, ಹತ್ತು ಸಾವಿರ ವರ್ಷಗಳಿಗೂ ಮುನ್ನ ಇದ್ದ ಅಲೆಮಾರಿ ಬದುಕನ್ನು ನೆನಪಿಸುವ, ಪ್ರಸ್ತುತ ರೈತ ಪ್ರತಿಭಟನೆಗಳನ್ನು ಹತ್ತಿಕ್ಕುವ, ಇಂತಹವನ್ನು ಒಳಗಿನಿಂದಲೂ ಒಡೆಯಲು ಯತ್ನಿಸುವ ಸಮಾಜೋ-ರಾಜಕಾರಣದ ಆಗುಹೋಗುಗಳಿಗೆ ಪ್ರತಿಕ್ರಿಯಿಸುವುದನ್ನು ರೈತರ ಬದುಕೇ ಪಾಠವಾಗಿ ಕಲಾವಿದರುಗಳಿಗೆ ಒದಗಿ ಬಂದಿದೆ. ಕಲೆಯ ವ್ಯವಸಾಯದಲ್ಲಿ, ದಿನನಿತ್ಯದ ದೃಗ್ಗೋಚರವಾದುದನ್ನು ಗ್ರಹಿಸುವ, ಅದಕ್ಕೆ ಕರಡು ಚಿತ್ರ ರಚಿಸುವ, ನಂತರ ಅದನ್ನು ಒಪ್ಪಓರಣ ಮಾಡುವ, ಹಲವು ದಿನಗಳ ಕಾಲ ಅದು ಅರಗಿಸಿಕೊಳ್ಳಲು ಬಿಟ್ಟು, ಕ್ರಮೇಣ ಹೊಸ ಹೊಳಹಿನ ಕಳೆ ತೆಗೆದು, ಅದು ಬಿಡುವ ಹೊಸ ದೃಶ್ಯೀಕರಣದ ಫಸಲನ್ನು ತೆಗೆವ ಕ್ರಮ ಇದು. ಎಡಬಲಗಳ ರಾಜಕೀಯ ನಿಲುವುಗಳಾಚೆಗೆ ಚಿತ್ರಕಲೆ ರೈತಜೀವನದಲ್ಲಿ ಹೊಸ ಬಗೆಗಳಿಂದ ಪ್ರೇರಣೆ ಪಡೆದುಕೊಳ್ಳುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿ 1996ರಲ್ಲಿ ಐದು ಎಕರೆ ನೆಲವನ್ನೇ ಅಗೆದು, ‘ಲ್ಯಾಂಡ್ ಆರ್ಟ್’ ಮಾಡಿದ್ದ ಉಮೇಶ ಮದ್ದನಹಳ್ಳಿಯವರ ಕೃತಿಯಂತಹ ಕೃತಿಗಳೂ ಸಹ, ಗ್ರಾಮಜೀವನದಿಂದ ಕೇವಲ ‘ವಸ್ತು’ವನ್ನು ಪಡೆದುಕೊಳ್ಳದೇ, ಬೇಸಾಯದ ಕ್ರಿಯೆಯಿಂದಲೂ ಚಿತ್ರಕಲೆಯ ರಚನೆಯ ವಿಧಾನವನ್ನೇ ಬದಲಿಸಿಕೊಂಡದ್ದಿದೆ. ಜರ್ಮನಿಯ ಜೋಸೆಫ್ ಬಾಯ್ಸ್ ಏಳು ಸಾವಿರ ಓಕ್ ಮರಗಳನ್ನು ನೆಟ್ಟಿದ್ದ, ಶಾಂತಿನಿಕೇತನದಲ್ಲಿ ರವೀಂದ್ರನಾಥ್ ಟಾಗೋರ್ ಅವರು ಸಾವಿರಾರು ಮರಗಳನ್ನು ನೆಟ್ಟಿದ್ದರು. ಕ್ರಮಬದ್ಧವಾಗಿ ಕಲಾಕೃತಿ ಹಾಗೂ ಕಲೆಯ ತಾಣ ಎಂಬ ಅರ್ಥಗಳಲ್ಲಿ. ಎಲ್ಲರೂ ಕಲಾವಿದರು ಎಲ್ಲವೂ ಕಲೆ ಎಂಬ ಈ ನಾಣ್ಣುಡಿ ನಿಜವಾಗುವಲ್ಲಿ ರೈತಾಪಿ ಬದುಕಿಯ ಪ್ರಭಾವವು ರೂಪಕದಾಚೆಗೂ ಪಾತ್ರವಹಿಸಿದೆ.
(ಮುಗಿಯಿತು)
Published On - 3:24 pm, Tue, 12 January 21