ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ’ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ ಕಾವ್ಯಾ ಕಡಮೆ ಅವರ ಕವಿತೆಗಳು ಈಗಿಲ್ಲಿ…
ಪರಿಕಲ್ಪನೆ : ಶ್ರೀದೇವಿ ಕಳಸದ
ಯುವ ಕವಿಗೆ ಅಗತ್ಯವಾದ ಚೈತನ್ಯಶೀಲತೆ ಇಲ್ಲಿಯ ಕವಿತೆಗಳಲ್ಲಿ ಸ್ಥಾಯೀಭಾವವೆನ್ನುವಷ್ಟರ ಮಟ್ಟಿಗೆ ಎದ್ದು ಕಾಣುತ್ತದೆ. ಇದು ತಾರುಣ್ಯದ ಮನಸ್ಸಿಗೆ ಸಹಜವಾದದ್ದು ಹಾಗೂ ಜಗತ್ತನ್ನು ಭರವಸೆಯಿಂದ ನೋಡಲು ಅತ್ಯಗತ್ಯವಾದದ್ದು. ತನ್ನ ಆಂತರ್ಯದಲ್ಲಿ ಬದುಕಿನ ಬಗ್ಗೆ ಭರವಸೆಯಿಲ್ಲದ ಮನುಷ್ಯ ಹೊಸ ದಿಕ್ಕಿನತ್ತ ಮುಖವೊಡ್ಡಲಾರ. ಇದರ ಜೊತೆಗೆ, ಭಾಷೆಯ ಬಳಕೆಯ ಬಗೆಗಿನ ಎಚ್ಚರ ಕೂಡ ಕಾವ್ಯಾಳಿಗಿರುವುದರಿಂದ ಇಲ್ಲಿಯ ಕವಿತೆಗಳಿಗೆ ತಕ್ಕ ಸೌಷ್ಠವವೂ ಒದಗಿಬಂದಿದೆ. ಯಾವ ಬಗೆಯ ಕವಿತೆಗಳಿಗೆ ಎಂಥ ಭಾಷೆ ಮತ್ತು ಲಯ ಬೇಕೆನ್ನುವ ಎಚ್ಚರ ಕವಿಗಿರುವುದು ಸಂಕಲನದುದ್ದಕ್ಕೂ ಕಾಣುತ್ತದೆ.
ವಿವೇಕ ಶಾನಭಾಗ
ಸ್ಪರ್ಶವೆಂದರೇನು?
ಇದ್ದಾನೆ ಒಳಗೇ ಒಬ್ಬ ಅವನಿಗೆ ದೇಹವಿಲ್ಲ
ಕುದ್ದು ಮಾಗಿರುವಾತಗೆ ಚಹರೆ ಇಲ್ಲ
ನಾನು ಉಸಿರು ಬಿಗಿ ಹಿಡಿದ ಅರೆಕ್ಷಣದಲಿ
ಅವನು ಶ್ವಾಸವಾಡುತ ಹೊರಬರಬೇಕು
ಮೂಗಿನ ಹೊಳ್ಳೆಗಳಿಂದ
ನನ್ನ ಕೈ ತೋಳು ತುಟಿಗಳನು
ಎರವಲು ಪಡೆಯಬೇಕು
ಇಡೀದೇಹವ ಬಿಲ್ಲನಾಗಿಸಿ
ಅವನು ಬಾಣವಾಗಬೇಕು
ಮಿದುಳಿನಲಿ ಹುಟ್ಟಿದ ಅವನ ಚಿತ್ರ
ಎದೆಯ ಹಾಯ್ದು ಏರಿ ಅಂಗದುತ್ತುಂಗದಲಿ
ಎಲ್ಲಿ ಹಿಡಿತವಿರಬೇಕು ಎಲ್ಲಿ ಸಡಿಲ ಬಿಡಬೇಕು
ಅವನಿಗೆ ಕರಗತ
ಇಳಿದು ನರಳುವುದಲ್ಲ ಈ ಸಹವಾಸ
ಮತ್ತನು ಹತ್ತುತ್ತ ಹೋಗುವುದು
ಸ್ಪರ್ಶಕ್ಕೆ ಸಿಗುವುದೆಂದರೇನು?
ನನ್ನ ಪೂರ್ವಜರೇ ಅವನ ಪಿತೃಗಳೂ ಆಗಿರುವಾಗ
ಕೂದಲೆಳೆಯಿಂದ ಶಿಖರವನೇ ಭೇದಿಸಬಹುದು
ಚರ್ಮದ ಒಳಪದರವ ಮುಟ್ಟಿದಾಗ
ಅನಂಗನ ಸ್ಪರ್ಶವೂ ನಿಜವೆನಿಸುವುದು
ಸ್ವ ಮಿಡಿಯಬಹುದು ಸುಖಾಂತ
ಕಾಂತನಿರದಾಗಲೇ ಬೇಕು ಏಕಾಂತ.
ಕಾವ್ಯಾ ಅವರ ಮೊದಲ ಸಂಕಲನವುಸಂಬಂಧಗಳ ಅರ್ಥವನ್ನು ‘ವರ್ತಮಾನ’ದಲ್ಲಿ ಭಾವತೀವ್ರತೆಯಲ್ಲಿ ಹುಡುಕಿದರೆ, ಎರಡನೆಯ ಸಂಕಲನವು ಅದೇ ಸಂಬಂಧಗಳನ್ನು ನೆನಪಿನಿಂದ ಹೊರಗೆ ತೆಗೆದು ಪರಿಶೀಲಿಸುತ್ತದೆ. ಎರಡೂ ಕಡೆ ತೀರ್ಪು ಕೊಡುವ ಧಾಟಿಯಿಲ್ಲ. ಸಂಬಂಧಗಳ ನಿಗೂಢತೆ ಮತ್ತು ‘ಅನ್ ಪ್ರಿಡಿಕ್ಟಿಬಿಲಿಟಿ’ಗಳು ಅವರ ತಲ್ಲಣ ಮತ್ತು ರೋಮಾಂಚನಗಳಿಗೆ ಕಾರಣವಾಗುತ್ತವೆ. ಅನ್ಯರನ್ನು ಅರಿಯುವುದು ಕೂಡ ತನ್ನನ್ನು ಅರಿಯುವುದರ ಹಾದಿಯೆಂದುಅವರಿಗೆ ತಿಳಿದಿದೆ.
ಎಚ್. ಎಸ್. ರಾಘವೇಂದ್ರರಾವ್
***
ಹಾಲು
ಯಾವ ಕೊರಕಲಿನಲಿ ಜೀವ ಪಡೆಯುವುದೋ ಗೊತ್ತಿಲ್ಲ
ಈ ನಳಿಕೆಯಲಿ ಹರಿಯುತ್ತದೆ
ಮಗುವಿನ ಮೃದು ತುಟಿಯ ಸ್ಪರ್ಶಕ್ಕೆ
ಇಡೀ ದೇಹ ಓಗೊಟ್ಟು ಜೀವಜಲವ
ಮೊಗೆ ಮೊಗೆದು ಕುಡಿಸುತ್ತದೆ
ಕದವ ತೆರೆಯದೇ ಒಳಬಿಟ್ಟುಕೊಳ್ಳುವುದೆಂದರೆ
ಇದೇ ಇರಬೇಕು ಈ ಅಮ್ಮ ಮತ್ತವಳ ಕೂಸು
ನಾಗರಿಕತೆಯ ಆದಿಗೂ ಅಂತ್ಯಕ್ಕೂಕಾಣ್ವ
ಒಂದು ಸ್ತಬ್ಧಚಿತ್ರ
ಸಿನಿಮಾದಲ್ಲಿ ತೋರಿಸಬೇಕು ಮೊಲೆ
ಮತ್ತದನು ಕಚ್ಚಿಕೊಂಡ ಕಂದ
ಬಿಲ್‍ಬೋರ್ಡ್ ಜಾಹಿರಾತಿನಲಿ ಪಾರ್ಕಿನ ಪುತ್ಥಳಿಯಲಿ
ಮನೆಮನೆಯ ಜಗಲಿಯಲಿ
ಕಾಣಿಸಬೇಕು ದೇಹದ ಈ ಗುಪ್ತ ವ್ಯವಹಾರ
ಕೇಳಬೇಕು ಉದ್ರೇಕಿಸುವುದೇ ತೆರೆದೆದೆ?
ಉತ್ಪಲಿಸುವುದೇ?
***
ಪರಿಚಯ: ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. 1988ರಲ್ಲಿ ಜನನ. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ’ ಮತ್ತು ‘ಡೋರ್ ನಂಬರ್ ಎಂಟು’ ನಾಟಕಗಳ ಸಂಕಲನ. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ.
Published On - 11:16 am, Sun, 24 January 21