ನಾನಿರುವುದು ಬೆಂಗಳೂರು. ನಾನೊಬ್ಬ ಶಾಲಾ ಶಿಕ್ಷಕಿ ಮತ್ತು ಎಳೆಮಗುವಿನ ತಾಯಿ. ಉಳಿದ ವಿವರಗಳು ಇಲ್ಲಿ ಅಮುಖ್ಯ. ಅದು ಯಾಕೆ ಎನ್ನುವುದು ನನ್ನ ಈ ಪತ್ರ ಓದುತ್ತಾ ಹೋದಂತೆ ನಿಮಗೇ ಅರ್ಥವಾಗುತ್ತಾ ಹೋಗುತ್ತದೆ. ಏಳುವಾರಗಳಿಂದ ದಿನವೂ ನನ್ನ ಎಳೆಮಗಳಿಗೆ ಹಾಲು ಕುಡಿಸುತ್ತಿರುವಾಗೆಲ್ಲಾ ನನ್ನ ಕಣ್ಣಮುಂದೆ ಬರುತ್ತಿರುವುದು ತಾಯಿಯನ್ನು ಕಳೆದುಕೊಂಡ ಎಳೆಕೂಸುಗಳು, ಬತ್ತಿದ ಎದೆಯೆದುರು ಹಸಿವಿನಿಂದ ಅಳುತ್ತಿರುವ ಪುಟ್ಟಜೀವಗಳು, ಅಪ್ಪಿದ ಎದೆಗೆ ಮುಖತೀಡುತ್ತಿರುವ ದತ್ತುಕಂದಮ್ಮಗಳು, ಬಾಡಿಗೆತಾಯಿಯ ಮಡಿಲಿನಿಂದಿಳಿದು ಮೊಲೆಹಾಲಿಗಾಗಿ ತಡಕಾಡುತ್ತಿರುವ ಎಳೆತುಟಿಗಳೇನೋ ನಿಜ. ಆದರೆ, ನನ್ನ ಮನಸ್ಸು ಮತ್ತು ಹೆಚ್ಚುವರಿಯಾಗಿ ಜಿನುಗುತ್ತಿರುವ ನನ್ನ ಎದೆಹಾಲು ಹಂಬಲಿಸುತ್ತಿರುವುದು ಬಡವರ ಜೋಳಿಗೆಯಲ್ಲಿ ಹಸಿವಿನಿಂದ ಅಳುತ್ತಿರುವ ಕಂದಮ್ಮಗಳಿಗಾಗಿ. ನನ್ನ ಮಗುವಿನೊಂದಿಗೆ ಆ ಮಗುವಿನ ದೇಹಮನಸ್ಸನ್ನೂ ಇದು ಸೇರಬೇಕೆನ್ನುವ ಆಶಯದಿಂದಲೇ ಇಲ್ಲಿ ಬರೆಯುತ್ತಿರುವುದು. ಇದನ್ನು ಓದುತ್ತಿರುವ ಅಂತಃಕರಣವುಳ್ಳ ನೀವುಗಳು ಅಂಥ ಮಗುವಿನೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಬಹುದೆ?
ಈಗಷ್ಟೇ ಬ್ರೆಸ್ಟ್ ಪಂಪ್ ಆಚೆಗಿಟ್ಟೆ. ಮಗು ಕೂಡ ನಿದ್ದೆಗೆ ಜಾರಿತು. ಹಾಗಾಗಿ ಈ ಪತ್ರ ಬರೆಯತೊಡಗಿದೆ.
ಎಳೆಕಂದನನ್ನು ಎದೆಗೊತ್ತಿಕೊಂಡ ತಾಯಿಗೆ ಇರುವುದು ಒಂದೇ ಆಲೋಚನೆ; ಮಗು ಹೊಟ್ಟೆತುಂಬ ಹಾಲು ಕುಡಿಯಿತೋ ಇಲ್ಲವೋ, ಅಳುತ್ತಿದೆ ಎಂದರೆ ಹಾಲು ಸಾಕಾಗುತ್ತಿಲ್ಲವೆಂದೇ ಅರ್ಥ, ಅಲ್ಲವೆ? ಆದರೆ ಈ ವಿಷಯದಲ್ಲಿ ನನಗೆ ಚಿಂತೆಯಿಲ್ಲ. ಏಕೆಂದರೆ ನನ್ನ ಏಳುವಾರದ ಮಗಳು ಎದೆಹಾಲು ಕುಡಿದು ಸಂತೃಪ್ತಿಯಿಂದ ನಿದ್ದೆ ಹೋಗುತ್ತಿದ್ದಾಳೆ. ಆದರೆ ಚಿಂತೆಗೀಡು ಮಾಡಿದ್ದು ದಿನವಿಡೀ ಜಿನುಗುತ್ತಲೇ ಇರುವ ನನ್ನ ಎದೆಹಾಲು. ಸಂಕಟಕ್ಕೀಡು ಮಾಡುತ್ತಿರುವುದು ದಿನವೂ 500.ಮಿ.ಲೀಟರಿನಷ್ಟು ಹಾಲನ್ನು ಹೊರಚೆಲ್ಲುವಂತಾಗಿರುವುದು.
ಹೀಗಿದ್ದಾಗ ಉಳಿದವರು ಏನು ಮಾಡುತ್ತಾರೆ? ನಾನೇನು ಮಾಡಬಲ್ಲೆ? ಆಸ್ಪತ್ರೆಗಳಿಗೆ, ಎದೆಹಾಲು ಬ್ಯಾಂಕುಗಳಿಗೆ ಹಾಲನ್ನು ಉಚಿತವಾಗಿ ಕೊಡುವುದು. ಆದರೆ ಈ ಬೆಂಗಳೂರಿನಲ್ಲಿ, ಕೊರೊನಾ ಸಂದರ್ಭದಲ್ಲಿ ಏನೆಲ್ಲವೂ ‘ವ್ಯವಹಾರ’ದ ತೂಕವನ್ನು ಧಾರಾಳವಾಗಿ ಹೆಚ್ಚಿಸಿಕೊಂಡಂಥ ವಾತಾವರಣವಿರುವಾಗ ಇನ್ನು ಈ ಎದೆಹಾಲಿನ ಬೆಲೆ! ಹಣವುಳ್ಳವರು ಲೆಕ್ಕಿಸದೆ ಕೊಂಡು ತಮ್ಮ ಮಕ್ಕಳನ್ನು ಪೋಷಿಸಿಯಾರು. ಆದರೆ ಬಡವರು? ಈ ವಿಷಯದಲ್ಲಿ ಸ್ವಲ್ಪ ಯೋಚಿಸಿ ಹೆಜ್ಜೆ ಇಡಬೇಕು ಎನ್ನಿಸುತ್ತಿದೆ. ದಿನವೊಂದಕ್ಕೆ 500 ಮಿ.ಲೀಟರಿನಷ್ಟು ಉತ್ಪಾದನೆಗೊಳ್ಳುತ್ತಿರುವ ನನ್ನ ಮೊಲೆಹಾಲನ್ನು ಬಡವರ ಎಳೆಗೂಸುಗಳಿಗೆ ಉಚಿತವಾಗಿ ಕೊಡಬೇಕೆಂದು ತೀರ್ಮಾನಿಸಿದ್ದೇನೆ.
ವ್ಯಾಪಾರವನ್ನೇ ಉಸಿರಾಡುತ್ತಿರುವ ಮತ್ತು ಪ್ರಚಾರದ ಅಮಲಿನಲ್ಲೇ ತೇಲುತ್ತಿರುವ ಈ ಜಗತ್ತಿನೊಳಗೆ ನಾನು ಹೇಗೆ ನನ್ನ ಆಶಯದ ಮೂಲಕ ಅರ್ಹರನ್ನು ತಲುಪಲು ಸಾಧ್ಯ? ಅನಾಮಿಕಳಾಗಿಯೇ ನಾನಿದನ್ನು ಸಾಧ್ಯವಾಗಿಸಿಕೊಳ್ಳಬೇಕು, ಸಾರ್ಥಕಗೊಳಿಸಿಕೊಳ್ಳಬೇಕು ಎಂದು ನಿರ್ಧರಿಸಿ ‘ಟಿವಿ9 ಕನ್ನಡ ಡಿಜಿಟಲ್’ ಅನ್ನು ಸಂಪರ್ಕಿಸುತ್ತಿದ್ದೇನೆ.
ಅರ್ಹ ಪೋಷಕರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ನಮ್ಮ ಮನೆಗೇ ಬಂದು, ನೇರ ಪರಿಚಯಿಸಿಕೊಂಡು, ಸಂಗ್ರಹಿಸಿದ ಎದೆಹಾಲನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಏಕೆಂದರೆ ನನ್ನ ತಂದೆ-ತಾಯಿಗೆ ವಯಸ್ಸಾಗಿರುವುದರಿಂದ ಅವರು ಈ ವಿಷಯದಲ್ಲಿ ತೊಡಗಿಕೊಳ್ಳಲಾರರು. ಎಲ್ಲಕ್ಕಿಂತ ಮುಖ್ಯವಾಗಿ ಇದು ಕೊರೊನಾ ಸಮಯ. ಆದಷ್ಟು ಸುರಕ್ಷಿತ ಕ್ರಮಗಳನ್ನು ಕೈಗೊಂಡು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಂಗ್ರಹಿಸಿದ ಎದೆಹಾಲನ್ನು ತೆಗೆದುಕೊಂಡು ಹೋಗಬಹುದು. ವೈದ್ಯರೊಂದಿಗೆ ಸಮಾಲೋಚನೆ ನಡೆಸಿಯೇ ಪರಸ್ಪರ ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು.
ಇದೆಲ್ಲವನ್ನು ಓದುತ್ತಿರುವ ನಿಮ್ಮೆಲ್ಲರಲ್ಲಿಯೂ ಒಂದು ವಿನಂತಿ. ಎದೆಹಾಲಿನ ಅವಶ್ಯಕತೆ ಇರುವವರು ಅನಕ್ಷರಸ್ಥರಾಗಿರಬಹುದು, ಡಿಜಿಟಲ್ನ ಲೋಕದಿಂದ ದೂರವಿರಬಹುದು. ಅಕ್ಷರಸ್ಥರಾದ, ಸಾಮಾಜಿಕ ಕಳಕಳಿಯುಳ್ಳಂಥ ನೀವುಗಳು ಪರಸ್ಪರ ಸಹಾಯ ಮಾಡಬಹುದೆ?
ಧನ್ಯವಾದಗಳು.
ಮಮತೆಯಿಂದ
ಕೂಸಿನ ತಾಯಿ
ಸಂಪರ್ಕಿಸಬೇಕಾದ ಈ ಮೇಲ್ ವಿಳಾಸ : tv9kannadadigital@gmail.com
(ವಿ. ಸೂ : ಸಂಸ್ಥೆಯು ಕೇವಲ ಸಂಪರ್ಕಕೊಂಡಿಯಂತೆ ತನ್ನ ಪಾತ್ರ ನಿರ್ವಹಿಸಲು ಇಚ್ಛಿಸುತ್ತದೆ.)
ಇದನ್ನೂ ಓದಿ : ನಿಜಕ್ಕೂ ಮಹಾತಾಯಿ ಈಕೆ..! ಕೊರೊನಾಗೆ ಬಲಿಯಾದ ತಾಯಂದಿರ ಮಕ್ಕಳಿಗೆ ಎದೆಹಾಲು ಕೊಟ್ಟು ಸಾಕ್ತಿದ್ದಾರೆ.!
Published On - 8:41 pm, Sun, 20 June 21