ತಾಯಿಗೆ ಕೊರೊನಾ ಬಂದ್ರೆ ಎಳೆಕಂದಮ್ಮಗಳಿಗೆ ಎದೆಹಾಲುಣಿಸಲಿದ್ದಾರೆ ಬೆಂಗಳೂರಿನ ಅಮ್ಮಂದಿರು

ಬೆಂಗಳೂರಿನ ಸ್ನಗ್ ಬಬ್ ಕನೆಕ್ಟ್ ವತಿಯಿಂದ ಎದೆಹಾಲುಣಿಸಲು ಕೆಲ ತಾಯಂದಿರು ಮುಂದೆ ಬರುತ್ತಿದ್ದು, ಕೊರೊನಾ ಸೋಂಕಿಗೆ ತುತ್ತಾಗಿ ಮಗುವಿಗೆ ಹಾಲು ನೀಡಲಾಗದೇ ಕಂಗಾಲಾದ ತಾಯಂದಿರಿಗೆ ಆಸರೆಯಾಗುತ್ತಿದ್ದಾರೆ.

ತಾಯಿಗೆ ಕೊರೊನಾ ಬಂದ್ರೆ ಎಳೆಕಂದಮ್ಮಗಳಿಗೆ ಎದೆಹಾಲುಣಿಸಲಿದ್ದಾರೆ ಬೆಂಗಳೂರಿನ ಅಮ್ಮಂದಿರು
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Apr 30, 2021 | 8:44 AM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ನಿರೀಕ್ಷೆಗೂ ಮೀರಿ ಕ್ಷಿಪ್ರಗತಿಯಲ್ಲಿ ಏರುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವತ್ತ ಸಾಗುತ್ತಿದ್ದು ಪರಿಸ್ಥಿತಿ ಕಠೋರವಾಗುತ್ತಿದೆ. ಪುಟ್ಟ ಕಂದಮ್ಮಗಳ ತಾಯಂದಿರು ಕೊರೊನಾ ಸೋಂಕಿಗೆ ತುತ್ತಾಗಿ ಅನುಭವಿಸುತ್ತಿರುವ ಕಷ್ಟವಂತೂ ಹೇಳತೀರದು. ಅಮ್ಮಂದಿರಿಗೆ ಸೋಂಕು ತಗುಲಿದರೆ ಎದೆಹಾಲು ಕುಡಿಯುವ ಹಸುಗೂಸುಗಳನ್ನು ನಿಭಾಯಿಸುವುದೇ ಸವಾಲಾಗುತ್ತಿದೆ. ಇಂತಹ ವಿಷಮ ವೇಳೆಯಲ್ಲಿ ಬೆಂಗಳೂರಿನಲ್ಲಿ ಧಾರಾಳ ಮನಸ್ಸುಳ್ಳ ಕೆಲ ತಾಯಂದಿರು ಪುಟ್ಟ ತಂಡವನ್ನು ರಚಿಸಿಕೊಂಡಿದ್ದು ಸೋಂಕಿಗೆ ಒಳಗಾದವರ ಎಳೆ ಮಕ್ಕಳಿಗೆ ಎದೆಹಾಲು ಕುಡಿಸಲು ಮುಂದೆ ಬಂದಿದ್ದಾರೆ.

ಬೆಂಗಳೂರಿನ ಸ್ನಗ್ ಬಬ್ ಕನೆಕ್ಟ್ ವತಿಯಿಂದ ಎದೆಹಾಲುಣಿಸಲು ಕೆಲ ತಾಯಂದಿರು ಮುಂದೆ ಬರುತ್ತಿದ್ದು, ಕೊರೊನಾ ಸೋಂಕಿಗೆ ತುತ್ತಾಗಿ ಮಗುವಿಗೆ ಹಾಲು ನೀಡಲಾಗದೇ ಕಂಗಾಲಾದ ತಾಯಂದಿರಿಗೆ ಆಸರೆಯಾಗುತ್ತಿದ್ದಾರೆ. ಕಳೆದ 15 ದಿನಗಳ ಹಿಂದೆ ಪ್ರಗತಿ ಎಂಬುವವರು ಕೊರೊನಾ ಸೋಂಕಿಗೆ ತುತ್ತಾದಾಗ 9 ತಿಂಗಳ ಎಳೆ ಮಗುವನ್ನು ಪೋಷಿಸುವುದು ತಂದೆಗೆ ಸವಾಲಾಗಿತ್ತು. ಪ್ಯಾಕೆಟ್ ಹಾಲು ನೀಡಿದರೆ ಮಗು ಕುಡಿಯಲು ಒಪ್ಪುತ್ತಿರಲಿಲ್ಲವಾದ್ದರಿಂದ ಆರೈಕೆ ಮಾಡುವುದೇ ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಸ್ನಗ್ ಬಬ್ ಟೀಮ್‌ನ ತಾಯಂದಿರು ಮುಂದೆ ಬಂದು ನಿರಂತರ 15 ದಿನಗಳ ಕಾಲ ಎಳೆ ಮಗುವಿಗೆ ಎದೆಹಾಲು ಕುಡಿಸುವ ಮೂಲಕ ಜೀವ ಉಳಿಸಿದ್ದಾರೆ.

ಕೊರೊನಾ ಸೋಂಕಿಗೆ ಒಳಗಾದ ತಾಯಂದಿರಿಗೆ ಈ ತಂಡ ಆಸರೆಯಾಗುತ್ತಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಹೃದಯ ವೈಶಾಲ್ಯತೆಯಿಂದ ಇನ್ನೊಬ್ಬರ ಮಕ್ಕಳ ಕಷ್ಟಕ್ಕೆ ಮಿಡಿಯುತ್ತಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಎಳೆಮಕ್ಕಳಿಗೆ ತೊಂದರೆಯಾಗದಂತೆ ಶುಚಿತ್ವದತ್ತಲೂ‌ ಗಮನ ಹರಿಸಿ ತಮ್ಮ ಸ್ವಂತ ಮಗುವಿನಂತೆಯೇ ಆರೈಕೆ ಮಾಡುವುದನ್ನು ಸಹೃದಯಿಗಳು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಆನ್​ಲೈನ್​ ಮೂಲಕ ಕೊರೊನಾ ಮುಕ್ತ ಎದೆಹಾಲು ಮಾರಾಟಕ್ಕೆ ಮುಂದಾದ ಮಹಿಳೆಯರು