ಸಂಗೀತ ಕ್ಷೇತ್ರಕ್ಕೆ ದೊಡ್ಡ ಉಡುಗೊರೆಗಾಗಿರುವ ಸಂಗೀತಗಾರರು ಮತ್ತು ಗಾಯಕರನ್ನು ಗೌರವಿಸಲು ಪ್ರತಿವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತವಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಸಂಗೀತವನ್ನು ಇಷ್ಟಪಡದವರೇ ಇಲ್ಲ. ಈ ಕಲೆಯ ಶಕ್ತಿಯನ್ನು ಅರಿಯಲೇ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.
ಫೆಟೆ ಡೆ ಲಾ ಮ್ಯೂಸಿಕ್ ಎಂದೂ ಕರೆಯಲ್ಪಡುವ ಇದನ್ನು ಯುವ ಮತ್ತು ವೃತ್ತಿಪರ ಸಂಗೀತಗಾರರಿಗೆ ತಮ್ಮ ಕಲೆ ಪ್ರದರ್ಶಿಸಲು ಪ್ರೇರೇಪಿಸುವುದಕ್ಕಾಗಿ ಆಚರಿಸಲಾಗುತ್ತದೆ. 120 ಕ್ಕೂ ಹೆಚ್ಚು ದೇಶಗಳು ವಿಶ್ವ ಸಂಗೀತ ದಿನವನ್ನು ಆಚರಿಸುತ್ತವೆ. ಮತ್ತು ಈ ವಿಶೇಷ ದಿನದಂದು ಸಂಗೀತ ಪ್ರಿಯರು ವಿಭಿನ್ನ ಸಂಗೀತ ಕಚೇರಿಗಳನ್ನು ಉದ್ಯಾನವನಗಳು, ಕ್ರೀಡಾಂಗಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಿ ಈ ದಿನವನ್ನು ಆಚರಿಸುತ್ತವೆ.
ಸಂಗೀತ ದಿನದ ಇತಿಹಾಸ
ವಿಶ್ವ ಸಂಗೀತ ದಿನವನ್ನು ಮೊದಲ ಬಾರಿಗೆ 1982 ರಲ್ಲಿ ಫ್ರಾನ್ಸ್‌ನಲ್ಲಿ ಆಚರಿಸಲಾಯಿತು. ಆಗಿನ ಫ್ರೆಂಚ್ ಕಲೆ ಮತ್ತು ಸಂಸ್ಕೃತಿ ಸಚಿವರಾಗಿದ್ದ ಜ್ಯಾಕ್ ಲ್ಯಾಂಗ್ ಮತ್ತು ಮಾರಿಸ್ ಫ್ಲೆರೆಟ್ ಅವರು ಪ್ಯಾರಿಸ್ನಲ್ಲಿ ಫೆಟೆ ಡೆ ಲಾ ಮ್ಯೂಸಿಕ್ ಅನ್ನು ಪ್ರಾರಂಭಿಸಿದರು. ಸಂಗೀತವನ್ನು ಆಚರಿಸಲು ಪ್ರತ್ಯೇಕ ಒಂದು ದಿನವನ್ನು ಪ್ರಾರಂಭಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮಾರಿಸ್ ಫ್ಲೆರೆಟ್, ಫ್ರೆಂಚ್ ಸಂಯೋಜಕ, ಸಂಗೀತ ಪತ್ರಕರ್ತ ಮತ್ತು ರೇಡಿಯೋ ನಿರ್ಮಾಪಕರಾಗಿದ್ದಾರೆ. ಅಂದಿನಿಂದ, ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ ಸಂಗೀತವು ಬಹಳ ಜನಪ್ರಿಯವಾಗಿದೆ. ಹಾಗೂ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಸಂಗೀತ ದಿನದ ಮಹತ್ವ
ಎಲ್ಲಾ ಸಂಗೀತ ಪ್ರಿಯರಿಗೆ ಉಚಿತ ಸಂಗೀತ ಕೂಟವನ್ನು ಉಣ್ಣಬಡಿಸುವ ಮತ್ತು ಹವ್ಯಾಸಿ, ವೃತ್ತಿಪರ ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತದ ಮಹತ್ವವನ್ನು ಮತ್ತು ಅದು ಮಾನವನ ಮನಸ್ಸು ಮತ್ತು ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಈ ದಿನ ಎತ್ತಿ ತೋರಿಸಲಾಗುತ್ತದೆ.
ಅನೇಕ ಅಧ್ಯಯನಗಳು ಮತ್ತು ತಜ್ಞರು ಹೇಳುವ ಪ್ರಕಾರ ಸಂಗೀತವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ನಿದ್ರೆಯನ್ನು ನೀಡುತ್ತದೆ ಮತ್ತು ನಮ್ಮ ಮನಸ್ಸಿಗೆ ಶಾಂತಿ, ಉಲ್ಲಾಸ ನೀಡಿ ಮುಂದೆ ಸಾಗಲು ಸಹಾಯ ಮಾಡುತ್ತದೆ. ಇನ್ನು ಸಂಗೀತ ಚಿಕಿತ್ಸೆಯು ಮಾನಸಿಕ ಸಮಸ್ಯೆಗಳೊಂದಿಗೆ ಹೋರಾಡುವ ಜನರಿಗೆ ಅದ್ಭುತಗಳನ್ನು ಮಾಡಿದೆ. ಹಿತವಾದ ಸಂಗೀತ ಜನರಿಗೆ ಮೂಡ್ ಫ್ರೇಶ್ ಮಾಡುತ್ತೆ. ಇದರಿಂದ ತಮ್ಮ ಉದ್ಯೋಗಗಳತ್ತ ಗಮನ ಹರಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯಕವಾಗಿದೆ.
ಸಂಗೀತ ದಿನ 2021 ಆಚರಣೆಗಳು
1982 ರ ಆಚರಣೆಯ ನಂತರ, ವಿಶ್ವ ಸಂಗೀತ ದಿನವನ್ನು ಜಗತ್ತಿನ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಮತ್ತು ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ. ಭಾರತ, ಇಟಲಿ, ಆಸ್ಟ್ರೇಲಿಯಾ, ಅಮೆರಿಕಾ, ಜಪಾನ್, ಚೀನಾ, ಮಲೇಷ್ಯಾ ಮುಂತಾದ ದೇಶಗಳು ಸಂಗೀತ ದಿನವನ್ನು ಆಚರಿಸುತ್ತವೆ. ಹವ್ಯಾಸಿ ಸಂಗೀತಗಾರರು ಮತ್ತು ಅನುಭವಿಗಳು ಬೀದಿಗಳಲ್ಲಿ ವಿವಿಧ ಸಂಗೀತ ಕಚೇರಿಗಳಲ್ಲಿ ಭಾಗವಹಿಸುತ್ತಾರೆ ಮತ್ತು ಹಾಡಿ ಜನರಿಗೆ ರಂಜಿಸುತ್ತಾರೆ.
ವಿಶ್ವ ಸಂಗೀತ ದಿನದಂದು ಪ್ಯಾರಿಸ್ನ ಪ್ರತಿಯೊಂದು ಬೀದಿಗಳು ರಾಗ, ತಾಳ, ಭಾವದಿಂದ ತುಂಬಿರುತ್ತವೆ ಮತ್ತು ಸಂಗೀತ ಪ್ರಿಯರು ಅದಕ್ಕೆ ಮಾರು ಹೋಗಿರುತ್ತಾರೆ. ಸಂಗೀತದ ಅಲೆಯಲ್ಲಿ ತೇಲುತ್ತಿರುತ್ತಾರೆ. ಪ್ಯಾರಿಸ್ ಮತ್ತು ಫ್ರಾನ್ಸ್‌ನ ಇತರ ಸ್ಥಳಗಳಲ್ಲಿನ ಸಂಗೀತ ಪ್ರಿಯರು ಫೆಟೆ ಡೆ ಲಾ ಮ್ಯೂಸಿಕ್‌ನಲ್ಲಿ ಭಾಗಿಯಾಗಿ ಸಂಗೀತ ಹಬ್ಬವನ್ನು ಆನಂದಿಸುತ್ತಾರೆ.
ಈ ವರ್ಷ, ಮಹಾಮಾರಿ ಕೊರೊನಾ ಸೋಂಕಿನಿಂದಾಗಿ, ವಿಶ್ವ ಸಂಗೀತ ದಿನಾಚರಣೆಯನ್ನು ಪ್ರತಿ ವರ್ಷದಂತೆ ಆಚರಿಸಲಾಗುವುದಿಲ್ಲ. ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸಂಗೀತ ಹಬ್ಬಕ್ಕೆ ಸಮಸ್ಯೆ ಎದುರಾಗಿದೆ. ಈ ಬಾರಿ ಸಹ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಆದರೆ ಬೃಹತ್ ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಅನೇಕ ಸಂಗೀತ ಸಂಸ್ಥೆಗಳು ಮತ್ತು ಕಂಪನಿಗಳು ವಿಶ್ವ ಸಂಗೀತ ದಿನದಂದು ಆನ್‌ಲೈನ್ ಸಂಗೀತ ಕಚೇರಿಗಳು, ಸ್ಪರ್ಧೆಗಳು ಮತ್ತು ಉತ್ಸವಗಳನ್ನು ಆಯೋಜಿಸುತ್ತವೆ.
ಇದನ್ನೂ ಓದಿ: ಭಾರತ ರತ್ನ ಪಂಡಿತ ಭೀಮಸೇನ ಜೋಶಿ ಜನ್ಮಶತಮಾನೋತ್ಸವ; ಭೀಮಪಲಾಸ್ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಂಗೀತಕಾಶಿ ಧಾರವಾಡ