ಮಾಡಿದ ಸಾಲ ತೀರಸಲಾಗದೆ ಇದ್ದ ಎರಡು ಮೂರು ಎಕರೆ ಜಮೀನು ಮಾರಾಟ ಮಾಡಿ ಬಾಡಿಗೆ ಮನೆ ಹೊಕ್ಕ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಧುಕೇಶ್ವರ ಹೆಗಡೆಯವರ ಕೈಹಿಡಿದದ್ದು ಜೇಣು ಸಾಕಾಣಿಕೆ. ಇದೀಗ ಅವರು ಕಳೆದುಕೊಂಡ ಜಮೀನಿಗಿಂತ ಹತ್ತುಪಟ್ಟು ಹೆಚ್ಚು ಗಳಿಸಿದ್ದಾರೆ. ಇವರ ವ್ಯಾಸಾಂಗ 8ನೇ ತರಗತಿಯಾಗಿದ್ದರೂ ಜೇಣುಸಾಕಾಣಿಕೆಯಲ್ಲಿ ಪಳಗಿ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. ಮಾತ್ರವಲ್ಲದೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ನಲ್ಲಿ ಇವರ ಬಗ್ಗೆ ಮಾತನಾಡುವಷ್ಟರ ಮಟ್ಟಿಗೆ ಎತ್ತರಕ್ಕೆ ಬೆಳೆದುನಿಂತಿರುವುದು ಸಣ್ಣ ಸಂಗತಿಯಲ್ಲ. ಜೇನೇ ದೇವರು ಎಂದು ಹೇಳುವ ಜೇನು ಕೃಷಿಕ ಡಾ. ಮಧುಕೇಶ್ವರ ಹೆಗಡೆ ಅವರ ಜೇನು ಸಾಕಾಣಿಯ ಯಶಸ್ವಿ ಜೀವನ ಹೀಗಿದೆ ನೋಡಿ.
ಮಧುಕೇಶ್ವರ ಅವರು ಮೂಲತಃ ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿನವರಾಗಿದ್ದಾರೆ. ಸಣ್ಣ ವಯಸ್ಸಿನಲ್ಲೇ ಜೇನು ಸಾಕಾಣಿಕೆ ಮೇಲೆ ಅತಿಯಾದ ಒಲವನ್ನು ಹೊಂದಿದ್ದ ಇವರು, ಜೇನು ಹಿಡಿದು ಗೂಡಿಗೆ ಹಾಕುವ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಮನೆಯಲ್ಲಿ ಬಡತನ ಹೆಚ್ಚಾಗಿದ್ದರಿಂದ ಮಾಡಿದ ಸಾಲವನ್ನು ತೀರಿಸಲಾಗದೆ ಇದ್ದ ಎರಡು ಮೂರು ಎಕರೆ ಜಾಗವನ್ನು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ನೆಲೆಸುತ್ತಾರೆ.
ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಮಧುಕೇಶ್ವರ ಅವರು ಇದ್ದಕ್ಕಿದ್ದಂತೆ ಜೇನು ಸಾಕುವ ಯೋಜನೆಯನ್ನು ಹಾಕಿಕೊಂಡರು. ಪ್ರಾರಂಭಿಕ ಹಂತವಾಗಿ ಅವರು ಜೇನು ಸಾಕಾಣಿಕೆಗಾರರಿಂದ ಜೇನು ಖರೀದಿಸಿ ಅದನ್ನು ಮಾರುಕಟ್ಟೆಗೆ ಮಾರಾಟ ಮಾಡುವ ಕೆಲಸವನ್ನು ಆರಂಭಿಸಿದರು. ಕಾಲ ಕಳೆಯುತ್ತಿದ್ದಂತೆ ಜೇನು ಸಾಕಾಣಿಗೆ ಒತ್ತು ನೀಡಲು ಆರಂಭಿಸಿದ ಅವರು ಸುಮಾರು ಹತ್ತು ಜೇನು ಪೆಟ್ಟಿಗೆ ಮೂಲಕ ಜೇನು ಸಾಕಾಣಿಕೆಯನ್ನು ಪ್ರಾರಂಭಿಸಿದರು. ಹೀಗೆ ಪ್ರಾರಂಭವಾದ ಜೇನು ಸಾಕಾಣಿಕೆ 30-34 ವರ್ಷಗಳಲ್ಲಿ ಮಧುಕೇಶ್ವರ ಅವರಿಗೆ ಈವರೆಗೆ 18 ಕೋಟಿ ರೂಪಾಯಿವರೆಗೆ ಆದಾಯ ತಂದುಕೊಟ್ಟಿದೆ ಎಂದರೆ ನೀವು ನಂಬಲೇಬೇಕು.
ಸರಿಸುಮಾರು 2006-2007ರಲ್ಲಿ ಜೇನು ಸಾಕಾಣಿಕೆಗೆ ಹೆಚ್ಚಿನ ಒತ್ತನ್ನು ನೀಡಲು ಆರಂಭಿಸಿದ ಮಧುಕೇಶ್ವರ ಅವರು, ಹಂತಹಂತವಾಗಿ ಜೇನು ಕುಟುಂಬಗಳನ್ನು ಹೆಚ್ಚಿಸಿಕೊಂಡರು. ಸದ್ಯ 800 ರಿಂದ 850 ಜೇನು ಪೆಟ್ಟಿಗೆಗಳಲ್ಲಿ ಜೇನು ಸಾಕಾಣಿಕೆ ಮಾಡಿ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.
ಜೇನು ಉತ್ಪನ್ನಗಳ ಮಾರಾಟ
ಜೇನು ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭವನ್ನು ಕಂಡಿರುವ ಮಧುಕೇಶ್ವರ ಅವರು, ಜೇನಿನ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಸವಿಮಧು ಇಂಡಸ್ಟ್ರೀಸ್ ಎಂಬ ಕಂಪನಿಯನ್ನು ಆರಂಭಿಸಿದರು. ಈ ಕಂಪನಿಯಲ್ಲಿ ಜೇನು ತುಪ್ಪದ ಜೊತೆಗೆ ಜೇನು ತುಪ್ಪದಿಂದ ತಯಾರಿಸಿದ ಮಧು ಲೇಹ್ಯ, ಹನಿ ಜಾಮ್, ನೆಲ್ಲಿ ಜಾಮ್, ಜೇನು, ಜೇನುನೊಣ ಪರಾಗ, ರಾಯಲ್ ಜೆಲ್ಲಿ, ನಿಂಬೆ ಶುಂಠಿ ಸ್ಕ್ವ್ಯಾಷ್, ಕೋಕಮ್ ಸಿರಪ್, ಆಮ್ಲಾ ಕ್ಯಾಂಡಿ, ಆಮ್ಲಾ ಜಾಮ್, ಜೇನುತುಪ್ಪ ಅದ್ದಿದ ಆಮ್ಲಾ, ಪರಾಗ ಚಾಕೊಲೇಟ್, ಬೀ ಮೇಣದ ಕೆನೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಜೇನು ಪರಿಕರಗಳ ಮಾರಾಟ
ಜೇನು ಸಾಕಾಣಿಕೆಯಲ್ಲಿ ಇನ್ನಷ್ಟು ಪಳಗಲು ಉತ್ಸಾಹವನ್ನು ತೋರಿದ ಮಧುಕೇಶ್ವರ ಅವರು ಜೇನಿನ ಪರಿಕರಗಳನ್ನು ಮಾರಾಟ ಮಾಡಲು ನಿರ್ಧರಿಸಿದರು. ಅದರಂತೆ ಮಧು ಬೀ ನರ್ಸರಿ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಇಲ್ಲಿ ಜೇನು ಪಟ್ಟೆಗಳು ಸೇರಿದಂತೆ ಜೇನು ಸಾಕಾಣಿಕೆಗೆ ಬೇಕಾದಂತಹ ವಿವಿಧ ಪರಿಕರಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ಜೇನುನೊಣ ಪೆಟ್ಟಿಗೆ, ಟ್ರಿಗೋನಾ ಇರಿಡಿಪೆನ್ನಿಸ್ ಬಾಕ್ಸ್, ಪರಾಗ ಬಲೆ ಗೇಟ್, ರಾಣಿ ಗೇಟ್, ಬೀ ಮಾಸ್ಕ್, ಜೇನು ತೆಗೆಯುವ ಸಾಧನ, ಮೇಣದ ಹಾಳೆ ಪರಿಕರಗಳನ್ನು ಮಾರಾಟ ಮಾಡಲಾಗುತ್ತಿದೆ.
ಜೇನು ರೈತರಿಗೆ ಉತ್ತೇಜನ
ಮಧುಕೇಶ್ವರ ಅವರು ಜೇನು ಸಾಕಾಣಿಕೆದಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಧುಮಿತ್ರ ಆರ್ಟಿಕಲ್ಚರ್ ಫಾರ್ಮರ್ ಪ್ರೊಡ್ಯೂಸರ್ ಎಂಬ ಕಂಪನಿಯನ್ನು ಆರಂಭಿಸಿದ್ದಾರೆ. ಸುಮಾರು 500 ರೈತರು ಕಂಪನಿಯ ಸದಸ್ಯತ್ವವನ್ನು ಹೊಂದಿದ್ದಾರೆ. ಇಂತಹ ರೈತರಿಂದ ಜೇನು, ಜೇನಿನ ಉತ್ಪನ್ನಗಳ ಖರೀದಿಸಿ ಮಾರಾಟ ಮಾಡಲಾಗುತ್ತದೆ.
ಜೇನು ಸಾಕಾಣಿಕೆಯ ಲಾಭ ಹೇಗಿದೆ?
ಸ್ವತಃ ಜೇನು ಸಾಕಾಣಿಕೆದಾರ ಮಧುಕೇಶ್ವರ ಅವರು ಹೇಳುವಂತೆ, ಸರಿಯಾಗಿ ನಿರ್ವಹಣೆ ಮಾಡಿದ್ದೇ ಆದರೆ ಜೇನು ಸಾಕಾಣಿಕೆಯಿಂದ ಉತ್ತಮ ಲಾಭವನ್ನು ಪಡೆಯಬಹುದು. ಮಧುಕೇಶ್ವರ ಅವರು ಪ್ರತಿ ಕೆಜಿಗೆ 500 ರೂಪಾಯಿಯಿಂದ 1500 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದು, ವಾರ್ಷಿಕವಾಗಿ 30 ಲಕ್ಷದ ರೂಪಾಯಿ ವರೆಗೆ ಆದಾಯ ಗಳಿಸಿದ್ದು ಕೂಡ ಇದೆ. ಇದರೊಂದಿಗೆ ಜೇನಿನ ಪರಿಕರಗಳನ್ನು ಒಳಗೊಂಡ ಪ್ರತಿ ಜೇನು ಪಟ್ಟಿಗೆಗೆ 4500 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಪರಿಕರಗಳ ಮಾರಾಟದಿಂದ ವಾರ್ಷಿಕವಾಗಿ 1-2 ಕೋಟಿ ರೂಪಾಯಿ ವರೆಗೆ ಆದಾಯ ಗಳಿಸಿದ್ದೂ ಇದೆ. ಇನ್ನು ಜೇನು ಉತ್ಪನ್ನಗಳ ಮಾರಾಟದಿಂದ ವಾರ್ಷಕವಾಗಿ 15-20 ಲಕ್ಷ ರೂಪಾಯಿವರೆಗೆ ಮಾರಾಟವಾಗಿದ್ದಿದೆ.
ಜೇನಿನ ನಿರ್ವಹಣೆ ಹೇಗೆ?
ಜೇನು ಸಾಕಾಣಿಕೆ ಹೇಳಿಕೊಳ್ಳುವಷ್ಟು ಸುಲಭವಿಲ್ಲ. ಸರಿಯಾದ ನಿರ್ವಹಣೆ ಮಾಡದಿದ್ದರೆ ನಷ್ಟ ಅನುಭವಿಸುವುದು ಖಂಡಿತ. ಕ್ರಮಬದ್ಧವಾಗಿ ನಿರ್ಹಹಣೆ ಮಾಡಿದ್ದೇ ಆದಲ್ಲಿ ಜೇನು ಸಾಕಾಣಿಕೆಯಲ್ಲಿ ಯಶಸ್ವಿ ಕಾಣಬಹುದು ಎಂದು ಮಧುಕೇಶ್ವರ ಅವರು ಹೇಳುತ್ತಾರೆ. ಹೂವಿನ ಅಭಾವ ಆದಾಗ ಆಹಾರದ ಕೊರತೆ ಆಗದಂತೆ ಸಕ್ಕರೆ ಪಾಕ ನೀಡಬೇಕು. ಇತರೆ ಕೀಟಗಳ ದಾಳಿಯಿಂದ ರಕ್ಷಣೆ ಒದಗಿಸಬೇಕು, ಕಾಲಕಾಲಕ್ಕೆ ತಕ್ಕಂತೆ ಪೆಟ್ಟಿಗೆಗಳಿಂದ ನೊಣಗಳನ್ನು ಬೇರ್ಪಡಿಸಬೇಕು ಮತ್ತು ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸಬೇಕು. ಮಳೆಗಾಲದಲ್ಲಿ ಜೇನು ನೊಣಗಳನ್ನು ಹಾಗೂ ಪೆಟ್ಟಿಗೆಯನ್ನು ರಕ್ಷಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್ ಮುಚ್ಚುವುದು, ಮಳೆ ಬೀಳದ ಸ್ಥಳದಲ್ಲಿ ಇಡುವ ಇತ್ಯಾದಿ ಕೆಲಸಗಳನ್ನು ಮಾಡಬೇಕಾಗುತ್ತದೆ.
ಹೂವಿನ ಕೊರತೆ ನೀಗಿಸಲು ವಿಶೇಷ ಕ್ರಮ
ಕೆಲವೊಂದು ಅವಧಿಯಲ್ಲಿ ಹೂವುಗಳ ಕೊರತೆ ಕಾಣುತ್ತದೆ. ಇದರಿಂದಾಗಿ ಜೇನುಗಳಿಗೆ ಆಹಾರದ ಕೊರತೆ ಉದ್ಭವಿಸುತ್ತದೆ. ಇದನ್ನು ನೀಗಿಸುವ ನಿಟ್ಟಿನಲ್ಲಿ ವಿಶೇಷ ಕ್ರಮ ಕೈಗೊಂಡ ಮಧುಕೇಶ್ವರ ಅವರು, ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹೂವುಗಳನ್ನು ಬಿಡುವ ಮರ, ಗಿಡಗಳನ್ನು ಬೆಳೆಸಿದ್ದಾರೆ. ಆ ಮೂಲಕ ಯಾವುದೇ ಅವಧಿಯಲ್ಲೂ ಜೇನು ನೊಣಗಳಿಗೆ ಹೂವಿನ ಅಭಾವ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ಮಿಸ್ರಿ ಜೇನು ಸಾಕಾಣಿಕೆ
ದೊಡ್ಡ ಜೇನು ಸಾಕಾಣಿಯೊಂದಿಗೆ ಮೊಜಂಟಿ, ಚುಚ್ಚದ ಜೇನು, ನರ್ಸರಿ ಜೇನು ಎಂದೂ ಕರೆಯುವ ಮಿಸ್ರಿ ಜೇನು ಸಾಕಾಣಿಕೆಯನ್ನು ಕೂಡ ಮಾಡುತ್ತಿದ್ದಾರೆ. ಇವುಗಳ ವಿಶೇಷ ಸಾಮರ್ಥ್ಯ ಎನೆಂದರೆ ಇವುಗಳು ಗಾತ್ರದಲ್ಲಿ ಅತಿಸಣ್ಣದಾಗಿದ್ದು, ಯಾವುದೇ ಸಣ್ಣ ಹೂವಿನೊಳಗೆ ಹೋಗಿ ಮಕರಂದ ಹೀರಿ ಬರುತ್ತವೆ, ಇದೇ ಕಾರಣಕ್ಕೆ ಮಧುಕೇಶ್ವರ ಅವರು ಮಿಸ್ರಿ ಜೇನು ಸಾಕಾಣಿಕೆಯನ್ನು ಆರಂಭಿಸಿದ್ದಾರೆ. ಈ ಜೇನು ತುಪ್ಪವು ಔಷಧೀಯ ಗುಣವನ್ನು ಹೊಂದಿದೆ.
ಜೇನುತ್ಪನ್ನಗಳ ಆನ್ಲೈನ್ ಮಾರಾಟ
ಮಧುಕೇಶ್ವರ ಅವರು ಜೇನಿನ ಉತ್ಪನ್ನಗಳು, ಜೇನು ತುಪ್ಪ ಮತ್ತು ಪರಿಕರಗಳ ಮಾರಾಟದ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸಲು ಆನ್ಲೈನ್ ಮಾರಾಟದ ವೇದಿಕೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ https://madhukeshwarhegde.com/ ಎಂಬ ವೆಬ್ಸೈಟ್ ಅನ್ನು ಇತ್ತೀಚೆಗಷ್ಟೇ ಆರಂಭಿಸಿದ್ದು, ಇದರ ಹೆಚ್ಚಿನ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಇದರಲ್ಲಿ ಆಮ್ಲಾಶ್ವಗಂಧ, ಕೋಕಂ ಸೇರಿದಂತೆ ವಿವಿಧ ಜೇನಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಮಿಶ್ರ ಕೃಷಿಯಲ್ಲೂ ಸ್ವರ್ಗ ಕಂಡ ಮಧುಕೇಶ್ವರ
ಆರಂಭದಲ್ಲಿ ಇದ್ದ ಎರಡು ಮೂರು ಎಕರೆ ಜಮೀನನ್ನು ಮಾರಾಟ ಮಾಡಿದ್ದ ಮಧುಕೇಶ್ವರ ಅವರು ಸದ್ಯ 40ಎಕರೆಗೂ ಹೆಚ್ಚು ಜಮೀನನ್ನು ಹೊಂದ್ದಿದ್ದಾರೆ. ಇದರಲ್ಲಿ ಜೇನು ಸಾಕಾಣಿಕೆಯೊಂದಿಗೆ 4ಎಕರೆ ಜಮೀನಿನಲ್ಲಿ ಅಡಿಕೆ ಕೃಷಿಯನ್ನು ಮಾಡುತ್ತಿದ್ದಾರೆ. ಸುಮಾರು 8ಎಕರೆ ಗದ್ದೆ ಇದ್ದು, 32 ಎಕರೆಯಷ್ಟು ಗುಡ್ಡವನ್ನು ಹೊಂದಿದ್ದಾರೆ. ಈ ಗುಡ್ಡ ಪ್ರದೇಶದಲ್ಲಿ ಲಕ್ಷ್ಮಣ ಫಲ, ಸೀತಾ ಫಲ, ರಾಮಫಲ, ಅಶೋಕ, ಸಲೇಶಿಯಾ ಸೇರಿದಂತೆ ಅನೇಕ ರೀತಿಯ ಉಪಯುಕ್ತ ಸಸ್ಯಗಳನ್ನು, ಮರಗಳನ್ನು ಬೆಳೆಸಿದ್ದಾರೆ. ಇದರೊಂದಿಗೆ 30ರಿಂದ 40 ಜಾತಿಯ ವಿವಿಧ ಹಣ್ಣುಗಳ ಗಿಡ-ಮರಗಳನ್ನು ಬೆಳೆಸಿದ್ದಾರೆ.
ಮಧುಕೇಶ್ವರ ಅವರಿಗೆ ವಿಧಾನಸಭಾಧ್ಯಕ್ಷರ ಸಾಥ್
ಮಧುಕೇಶ್ವರ ಅವರು ಜೇನು ಕೃಷಿಯಲ್ಲಿ ಪಳಗಲು ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ವಿಶೇಷವಾಗಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ. ಇವರು ಮಧುಕೇಶ್ವರ ಅವರಿಗೆ ಬೇಕಾದ ಎಲ್ಲಾ ರೀತಿಯ ನೆರವನ್ನು ನೀಡುವ ಮೂಲಕ ಜೇನು ಸಾಕಾಣಿಕೆಯಲ್ಲಿ ಮುಂದೆಬರಲು ಕಾರಣಕರ್ತರಾಗಿದ್ದಾರೆ. ಇವರಿಗೆ ಹಾಗೂ ಸಹಾಯ ಮಾಡಿದ ಎಲ್ಲಾ ವ್ಯಕ್ತಿಗಳಿಗೂ ಚಿರಋಣಿಯಾಗಿದ್ದೇನೆ ಎಂದು ಮಧುಕೇಶ್ವರ ಅವರು ಹೇಳುತ್ತಾರೆ.
ಸಾಧನೆಗೆ ಸಂದ ಪ್ರಶಸ್ತಿಗಳು
2007-08ರಲ್ಲಿ ಮಧುಕೇಶ್ವರ ಅವರ ಜೇನು ಸಾಕಾಣಿಕೆಯಲ್ಲಿನ ಸಾಧನೆಯನ್ನು ಗುರುತಿಸಿದ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಸಂಘವು ಕೃಷಿ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 2009ರಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ಕೃಷಿ ಪಂಡಿತ ಪ್ರಶಸ್ತಿ, ತೋಟಗಾರಿಕಾ ಇಲಾಖೆಯಿಂದ ರಾಜ್ಯಮಟ್ಟದ ಪ್ರಗತಿಪರ ಜೇನು ಕೃಷಿಕ ಪ್ರಶಸ್ತಿ, ಧಾರವಾಡ ವಿಶ್ವವಿದ್ಯಾಲಯದಿಂದ ಇನ್ನೋವೇಟಿವ್ ಫಾರ್ಮರ್ ಪ್ರಶಸ್ತಿ, ಅಭಿಮಾನಿಗಳ ಸಂಗಮದಿಂದ ಆರ್ಯಭಟ ಪ್ರಶಸ್ತಿ, ಮಂತ್ರಾಲಯದಿಂದ ಗುರು ಅನುಗ್ರಹ ಪ್ರಶಸ್ತಿ, ಬಾಗಲಕೋಟೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ಲಭಿಸಿದೆ. ಇವುಗಳಲ್ಲದೆ ಕರ್ನಾಟಕ ರತ್ನ ಪ್ರಶಸ್ತಿ, ಕೃಷಿ ರತ್ನ ಪ್ರಶಸ್ತಿ, ಫಾರ್ಮರ್ ಸೈಂಟಿಸ್ಟ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಗಳು ಕೂಡ ಆಗಿವೆ.
Published On - 9:30 am, Sun, 7 August 22