ಈ ಬುದ್ಧಿಯಿಲ್ಲದ ಮನುಷ್ಯರಿಂದ ಬಂದೆರಗಿದ ಕೋವಿಡ್‌ನಿಂದ ನಿಜವಾಗಿ ಕಷ್ಟಪಟ್ಟದ್ದು ನಾನು ಎಂದು ಎಷ್ಟೋಸಲ ಬೆಕ್ಕು ಬೈದುಕೊಂಡದ್ದನ್ನು ನಾನು ಕೇಳಿದ್ದೇನೆ. ಮೀನಿಲ್ಲದೆ ಕಳೆದ ದಿನಗಳು ಎಂದು ಲಾಕ್‌ಡೌನ್ ಕಾಲವು ಬೆಕ್ಕಿನ ನೆನಪಿನಲ್ಲಿ ದಾಖಲೆಯಾಗಬಹುದು. ಮೊದಲೆಲ್ಲ ಹಸಿಮೀನು ಬರದಿದ್ದ ದಿನಗಳಲ್ಲಿ ಹೋಟೆಲಿನಿಂದ ಒಂದು ಮೀನು ಫ್ರೈ ತರಿಸಿ ಹಾಕುತ್ತಿದ್ದೆವು. ಈಗ ಹೋಟೆಲುಗಳೂ ಬಂದ್ ಬಿದ್ದಿವೆ. ಮೊಟ್ಟೆ ಸಿಗುವುದೂ ಕಷ್ಟ. ಅಳಿಲು, ಪಾರಿವಾಳ, ಹಲ್ಲಿಹರಣೆಗಳ ಬೇಟೆಯಾಡಿ ಸ್ವಾವಲಂಬಿಯಾಗಲು ಬೆಕ್ಕು ಯತ್ನಿಸುತ್ತಿತ್ತು. ಇದರ ಹೊಟ್ಟೆ ತುಂಬಿಸಲು ಏನು ಮಾಡುವುದೋ ಎಂದು ನಾವು ಚಿಂತಿಸುತ್ತಿದ್ದೆವು. ಇಂಥ ಸಂಕಟ ಕಾಲದಲ್ಲಿ ಒಂದು ದಿನ ಬೆಳಬೆಳಿಗ್ಗೆ ಮೀನು ಗಾಡಿಯ ನಾದ ಕೇಳಬೇಕೆ? ಧಡಲ್ಲನೆ ಸೋಫಾದಿಂದ ಹಾರಿ ಕೆಳಗೋಡಿದ ಬೆಕ್ಕಿನ ವದರಾಟ, ಓಡಾಟ ನೋಡಬೇಕು! ಕಳೆದುಹೋದ ಮಕ್ಕಳು ಮನೆಗೆ ಬಂದರೆ ತಾಯಿಗೆ ಆಗುವ ಸಂತೋಷಕ್ಕೆ ಸಮ ಅದರ ಸಂಭ್ರಮ.
*
1
‘ನಿಮ್ಮೆಸ್ರು’
‘ರಾಮ ಬೆಳಿಯಾ’
‘ಗೌಡ?’
‘ಅಲ್ಲಲ್ಲ ಅಲ್ಲಲ್ಲ, ನಾಯ್ಕ ನಾಯ್ಕ’
2
‘ಏನ್ ಹೆಸ್ರು’
‘ಕನ್ನೆ’
‘ನಾಯ್ಕ?’
‘ಶಿ, ಅಲ್ಲರಾ, ಗೌಡ. ಕನ್ನೆ ಜಟ್ಟ ಗೌಡ.’
3
‘ನಿಮ್ ಹೆಸ್ರು ಹೇಳ್ತಾ?’
‘ಎನ್. ವಿ. ಶೆಟ್ಟಿ’
‘ಅಂದ್ರೆ?’
ಅಂದ್ರೆ ಎಂಥದು? ಶೆಟ್ಟಿ ಅಂದ್ಮೇಲೆ ಆಯ್ತು’
4
‘ನೀವು’
‘ಆಚಾರಿ, ಚಳಕೋಡು’
‘ಹೆಸ್ರೇ ಹೇಳ್ಳಿಲ್ಲ?’
‘ಅದ್ ತಕಂಡ್ ಏನ್ಮಾಡ್ತರ‍್ರಾ? ನಮ್ಮರ‍್ಗೆ ನಾ ವಬ್ನೆ ಆಚಾರಿ’
5
‘ಹೆಸ್ರೇಳಿ’
‘ಸಂಕ್ರ ಅಂದಿ’
‘ಮುಂದೆ’
‘ಅದೆಲ್ಲ ಅಮ್ಮಗ್ ಗೊತ್ತದೆ. ಯಾಕ್ರಾ ಅಮ್ಮ?’
‘ಹೋಗ್ಲಿ ಬಿಡಮ್ಮ ಆಶಾ’
6
‘ನಿಮ್ದು?’
‘ಅವ್ರು ಗುತ್ತಿಲ್ಲ ನಿಮ್ಗೆ? ನಂ ಮಾಬ್ಲೇಶ್ವರ ಗುಡಿಯ ಭಟ್ರು’
‘ಹೆಸರು?’
‘ನಾ ಹೇಳ್ತೆ, ಈಶ್ವರ ಸುಬ್ರಾಯ ಭಟ್ಟರು ಅಂತ. ಸರೀ ಬರ‍್ಕಣಿ’
7
‘ನಾವ್ ಕಸಲೆ?’
‘ಸೋಬಿನ’
‘ಸೋಬಿನ, ಅನ್ನಿ..’
‘ಜೂಜೆ ಲೋಪಿಸ್’
8
‘ಆಪಕಾ ನಾಮ್?’
‘ಸಾದ್ಮಿ’
‘ಸಾದ್ಮಿ ಔರ್, ಆಗೇ’
‘ಔರ್ ಕುಚ್ ಭೀ ನಾಯ್’
‘ಬಾಪಾ ಕೆ ನಾಮ್’
‘ಮೆರಿ ಶಾದೀ ಹುವಾ ಹೈ. ಸಾವುದ್ ಸಿದ್ದಿಬಾಪಾ ಲಿಖೋ’
ಹೆಚ್ಚುಕಡಿಮೆ ಪ್ರತಿದಿನ ಕೇಳಿಬರುವ ಪ್ರಶ್ನೋತ್ತರ ಮಾಲಿಕೆ ಇದು. ಸಾಂಡ್ರಾ, ಆಶಾಗೆ ವಹಿಸಿದ ಮೇಲೆ ಮುಗಿಯಿತು, ಅವರು ಎಳೆದೆಳೆದು ಕೇಳಿಕೇಳಿ ಮಾಹಿತಿ ಹೊರಗೆಳೆಯುವರು. ದಿನವೂ ಬರುವ ರೋಗಿಗಳ ಪೂರ್ಣ ಹೆಸರು, ವಯಸ್ಸು, ವಿಳಾಸ, ಕಾಯಿಲೆ, ಚಿಕಿತ್ಸೆ, ಸಂಪರ್ಕ ಸಂಖ್ಯೆಗಳನ್ನು ದಾಖಲಿಸಬೇಕು ಎಂಬ ಆದೇಶವಿದೆ. ಪೂರ್ಣ ಹೆಸರು ಎಂದರೆ ಇಲ್ಲಿ ವ್ಯಕ್ತಿಯ ಹೆಸರು, ತಂದೆಯ/ಗಂಡನ ಹೆಸರು, ಜಾತಿಯ ಹೆಸರು ಎಂದಾಗಿಬಿಟ್ಟಿದೆ. ಸೀತೆ ಕುಟ್ಣ ಹಳ್ಳೇರ, ಜಾನಕಿ ವಾಸುದೇವ ಕೊಡಿಯಾ, ಸುಬ್ಬಿ ನಾರಾಯಣ ಭಂಡಾರಿ, ಮೋಹನ ವೋಮು ಮರಾಠಿ – ಇವೆಲ್ಲ ‘ಪೂರ್ಣ’ ಹೆಸರುಗಳು. ಇಲ್ಲಿ ಹೆಸರನ್ನಷ್ಟೇ ಬೆಳಕಿಗೆ ಹಿಡಿದು, ಇನಿಷಿಯಲ್ ಎಂದು ಇತರ ವಿವರಗಳನ್ನು ಚುಕ್ಕೆಯಿಟ್ಟು ಮುಚ್ಚಿಡುವುದು ಇಲ್ಲ. ವ್ಯಕ್ತಿಯ, ತಂದೆಯ ಹೆಸರು ಇನಿಷಿಯಲ್ ಆಗಬಲ್ಲವೇ ಹೊರತು ಜಾತಿಯಲ್ಲ. ಪರಮ ಸಣ್ಣು ಮುಕ್ರಿಯು ಪಿ. ಎಸ್. ಮುಕ್ರಿ ಆಗಬಹುದು. ಈಶ್ವರ ತಿಪ್ಪಣ್ಣ ಹೆಗಡೆಯು ಐ. ಟಿ. ಹೆಗಡೆ ಆಗಬಹುದು. ಮಾದೇವಿ ಜಟ್ಟಿ ಹುಲಸ್ವಾರ ಎಂ. ಜೆ. ಹುಲಸ್ವಾರ ಆಗಬಹುದು. ಒಟ್ಟೂ ಎಷ್ಟು ಜಾತಿಗಳಿವೆಯೋ ಅಷ್ಟು ಸರ್‌ನೇಮ್‌ಗಳಿವೆ. ವ್ಯಕ್ತಿಯ ಹೆಸರಿನಲ್ಲಿ ಜಾತಿಯು ಹೇಗಾದರೂ ಕಾಣಲೇಬೇಕು ಎಂಬ ಧೋರಣೆಯಿದೆ. ಹಾಗಾಗಿ ಎಚ್. ಎಸ್. ಅನುಪಮಾ, ಪೃಥ್ವಿ ಕೆ. ಎ., ಪ್ರಜ್ಞಾ ಕೆ. ಎ., ಜಿ. ಕೃಷ್ಣ, ಸ್ವಾತಿ ಎಸ್. ಜಿ.ಯಂತಹ ಹೆಸರುಗಳೆಲ್ಲ ಇಲ್ಲಿಯವರಿಗೆ ಅರ್ಧ ಹೆಸರುಗಳು. ಅಕ್ಷರಗಳನ್ನು ಬಿಡಿಸಿ ಅದೇನು ಎಂದು ಪ್ರಶ್ನಿಸುತ್ತಾರೆ.
ಇಂಥಕಡೆ, ‘ಜಾತಿ ಗೀತಿ ಸಾಯ್ಲಿ’ ಎನ್ನುವಂತಹ ಘಟನೆ ಕೋವಿಡ್ ಸಮಯದಲ್ಲಿ ನಡೆಯಿತು. ಆದರೆ ಆ ಮಾತು ಎಷ್ಟು ಮತ್ತು ಎಲ್ಲಿಯತನಕ ನಿಜ ಎಂದೂ ಗೊತ್ತಾಯಿತು. ಇದನ್ನು ನಿಮಗೆ ಹೇಳದಿದ್ದರೆ, ನಾಳಿನ ಕತೆ ಹೊರಡಲಾರದು.
***
‘ತರ್ಕಾರಿ ತಿಂದ್ ತಿಂದ್ ಬಾಯೆಲ್ಲ ಹಾಳಾಗದೆರ. ಮೀನಿಲ್ಲ, ಕೋಳಿಲ್ಲ, ಮಟ್ಟೆ ಇಲ್ಲ. ಒಂತರಾ ಬ್ಯಾಜಾರ.’
ಇದು ಲಾಕ್‌ಡೌನ್ ಸಮಯದಲ್ಲಿ ನಮ್ಮೂರಿನಲ್ಲಿ ಪದೇಪದೇ ಕೇಳಿಬಂದ ಮಾತು. ಕಡಲ ತಡಿಯ ಬಂದರದಿಂದ ಮೀನು ಹೊರಟು ಒಳಗಿನ ಊರುಗಳಿಗೆಲ್ಲ ಬರಲು ಲಾಕ್‌ಡೌನ್ ತಡೆಯೊಡ್ಡಿತು. ಪ್ರತಿ ಊರಿನಲ್ಲೂ ಮೀನು ಮಾರುವವರು ಕೂರುವ ಒಂದು ತಾವು ಇರುತ್ತದೆ. ಹಾಗೆ ಕೂತು ಮಾರುವುದು ನಿಂತುಹೋಯಿತು. ಡೀಸೆಲ್ ಸಿಗುವುದು ಕಷ್ಟವಾದ್ದರಿಂದ ವಾಹನದಲ್ಲಿ ತಂದು ಮಾರುವುದೂ ಕಷ್ಟವಾಗಿತ್ತು. ಕೆರೆ, ಹಳ್ಳ, ನದಿಯ ಮೀನು ಹಿಡಿಯಬಹುದಾದರೂ ಹಲವರಿಗೆ ಈಗ ಗಾಳ ಹಾಕುವುದು ಮರೆತೇ ಹೋಗಿದೆ. ಯಾರೋ ಬಲೆಬೀಸಿ ಹಿಡಿದ ಚೂರುಪಾರು ಮೀನು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಒಟ್ಟಾರೆ ಕೋವಿಡ್ ಕಾಯಿಲೆಯು ಮೀನು ಪ್ರಿಯರನ್ನು ತುಂಬ ಬಾಧಿಸಿದೆ.
ನಮ್ಮ ಬೆಕ್ಕಿನ ಕಷ್ಟ ಮನುಷ್ಯರಿಗಿಂತ ಕಡಿಮೆಯದಲ್ಲ. ನಾವು ತಿನ್ನುವ ಸೊಪ್ಪುಸದೆ, ಅನ್ನ, ಸಾರನ್ನು ಸುತರಾಂ ಮೆಚ್ಚದ ಅದು ಮುಷ್ಕರ ಹೂಡಿ ಹಸಿ ಮೀನು, ಮೊಟ್ಟೆ, ಹಾಲು, ಚಪಾತಿ, ಕಾರದ ಕಡ್ಡಿಗೆ ತನ್ನ ಡಯೆಟ್ ಅಂತಿಮಗೊಳಿಸಿದೆ. ಮೀನು ವ್ಯಾಪಾರಿಗಳ ಬಳಿ ಒಂದು ವಿಶೇಷವಾದ ಪುಂಯ್ಞ್ ಪುಂಯ್ಞ್ ಹಾರ್ನ್ ಇದೆ. ದಿನಾ ಬೆಳಿಗ್ಗೆ ಮೀನಿನ ಆ ಹಾರ್ನ್ ಕೇಳಿದರೆ ಅದೆಲ್ಲಿದ್ದರೂ ಜನ ಹೊರಗೆ ಬರುತ್ತಾರೆ. ನಮ್ಮ ಬೆಕ್ಕು ಮತ್ತು ಕೆಂಪಿ ನಾಯಿ ಇಬ್ಬರೂ ಮೀನು ಗಾಡಿಯ ದಿಕ್ಕನ್ನೇ ನೋಡುತ್ತ ಕೂಗುತ್ತ ರಸ್ತೆಯಲ್ಲಿ ತಾರಾಡುತ್ತವೆ. ಉಳಿದಂತೆ ನಾಯಿಯನ್ನು ಹೆದರಿಸಿಟ್ಟುಕೊಂಡಿರುವ ಬೆಕ್ಕು ಮೀನಿನವ ಬರುವ ವೇಳೆಗೆ ದೋಸ್ತಿಯಾಗಿರುತ್ತದೆ. ಅದರ ಕಾಲಡಿ ನುಸುಳಿ ನಿಂತು ಇಬ್ಬರೂ ಅವ ಬರುವ ದಾರಿ ನೋಡುತ್ತಾರೆ. ಅವ ಹತ್ತಿರ ಬಂದಂತೆ ನಮ್ಮ ಬೆಕ್ಕನ್ನು ನೀವು ನೋಡಬೇಕು. ಕಂಪೌಂಡು ಹತ್ತುವುದೇನು, ಇಳಿಯುವುದೇನು, ಬೇರೆ ನಾಯಿಗಳು ಕಂಡರೆ ಹೆದರಿ ಸಂಪಿಗೆ ಮರ ಹತ್ತುವುದೇನು, ರಸ್ತೆಯ ಆ ತುದಿಯಲ್ಲಿ ಅವನಿರುವಲ್ಲಿಯ ತನಕ ಸಂದಿಗೊಂದಿ ಬಳಸಿ ಹೋಗಿ ಕರೆದು ಬರುವುದೇನು, ಅವ ಮನೆ ಹತ್ತಿರ ಬಂದಹಾಗೆ ಮನೆ ಬಾಗಿಲನ್ನೊಮ್ಮೆ ನೋಡುವುದು ಅವನನ್ನೊಮ್ಮೆ ನೋಡುವುದು ಮಾಡುತ್ತಾ ತಾರಕದಲ್ಲಿ ಒಳಗಿರುವ ನಮ್ಮನ್ನು ಕರೆಯುವುದೇನು? ಸಾಧಾರಣವಾಗಿ ಪಟ್ಟಣದ ಬಂದರದಿಂದ ಸ್ಕೂಟಿ ಮೇಲೆ ಬರುತ್ತಿದ್ದ ಆ ಮೀನಿನವ ನಮ್ಮ ಬೆಕ್ಕಿಗೆ ಇಪ್ಪತ್ತು ರೂಪಾಯಿ ಮೀನು ಕೊಡದೆ ಮುಂದೆ ಹೋಗುತ್ತಿರಲಿಲ್ಲ, ಅಷ್ಟು ಗೌಜಿ.
ಈ ಬುದ್ಧಿಯಿಲ್ಲದ ಮನುಷ್ಯರಿಂದ ಬಂದೆರಗಿದ ಕೋವಿಡ್‌ನಿಂದ ನಿಜವಾಗಿ ಕಷ್ಟಪಟ್ಟದ್ದು ನಾನು ಎಂದು ಎಷ್ಟೋಸಲ ಬೆಕ್ಕು ಬೈದುಕೊಂಡದ್ದನ್ನು ನಾನು ಕೇಳಿದ್ದೇನೆ. ಮೀನಿಲ್ಲದೆ ಕಳೆದ ದಿನಗಳು ಎಂದು ಲಾಕ್‌ಡೌನ್ ಕಾಲವು ಬೆಕ್ಕಿನ ನೆನಪಿನಲ್ಲಿ ದಾಖಲೆಯಾಗಬಹುದು. ಮೊದಲೆಲ್ಲ ಹಸಿಮೀನು ಬರದಿದ್ದ ದಿನಗಳಲ್ಲಿ ಹೋಟೆಲಿನಿಂದ ಒಂದು ಮೀನು ಫ್ರೈ ತರಿಸಿ ಹಾಕುತ್ತಿದ್ದೆವು. ಈಗ ಹೋಟೆಲುಗಳೂ ಬಂದ್ ಬಿದ್ದಿವೆ. ಮೊಟ್ಟೆ ಸಿಗುವುದೂ ಕಷ್ಟ. ಅಳಿಲು, ಪಾರಿವಾಳ, ಹಲ್ಲಿಹರಣೆಗಳ ಬೇಟೆಯಾಡಿ ಸ್ವಾವಲಂಬಿಯಾಗಲು ಬೆಕ್ಕು ಯತ್ನಿಸುತ್ತಿತ್ತು. ಇದರ ಹೊಟ್ಟೆ ತುಂಬಿಸಲು ಏನು ಮಾಡುವುದೋ ಎಂದು ನಾವು ಚಿಂತಿಸುತ್ತಿದ್ದೆವು.
ಇಂಥ ಸಂಕಟ ಕಾಲದಲ್ಲಿ ಒಂದು ದಿನ ಬೆಳಬೆಳಿಗ್ಗೆ ಮೀನು ಗಾಡಿಯ ನಾದ ಕೇಳಬೇಕೆ? ಧಡಲ್ಲನೆ ಸೋಫಾದಿಂದ ಹಾರಿ ಕೆಳಗೋಡಿದ ಬೆಕ್ಕಿನ ವದರಾಟ, ಓಡಾಟ ನೋಡಬೇಕು! ಕಳೆದುಹೋದ ಮಕ್ಕಳು ಮನೆಗೆ ಬಂದರೆ ತಾಯಿಗೆ ಆಗುವ ಸಂತೋಷಕ್ಕೆ ಸಮ ಅದರ ಸಂಭ್ರಮ.
ನಾನು ಮೇಲಿನಿಂದಲೇ ನಿಲ್ಲಿ ಎಂದು ಕೈಸನ್ನೆ ಮಾಡಿ ಕೆಳಗೆ ಬಂದು, ಸಾಗುವಾನಿ ಎಲೆ ಕೀಳುವುದರಲ್ಲಿ ಮೀನು ಗಾಡಿಯವ ಕೆಳಗಿಳಿದ. ಓ, ಇವತ್ತು ಬಂದಿರುವುದು ಮಂಜುವೇ?! ಈ ಕಡೆಯ ಕೇರಿಗಳಿಗೆ ಇನ್ನೂ ಗೊತ್ತಿರದ ಡಿಸೆಂಬರ್ ಆರು ಎಂಬ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಪರಿಚಯಿಸಲು ಕಷ್ಟಪಟ್ಟ ಮಂಜು. ಹೇಗಾದರೂ ಪ್ಲೋಟು ಮನೆಯ ತನ್ನ ಜನರ ನಾಯಕನಾಗಬೇಕೆಂದು ಯತ್ನಿಸುವ ಮಂಜು. ತಾನು ಓದದ ನನ್ನ ಪುಸ್ತಕಗಳನ್ನು ಏಪ್ರಿಲ್ 14ರ ಕಾರ್ಯಕ್ರಮಗಳಲ್ಲಿ ಕೊಡಿಸುವ ಮಂಜು. ಜೀವವೇ ನಗೆಯಾಗಿ ಅರಳಿತೇನೋ ಎನ್ನುವಂತೆ ಎಲ್ಲಿ ಕಂಡರೂ ಒಂದು ಉದ್ದನೆಯ ನಗೆಬೀರುವ ಮಂಜು. ಬಿಳಿಬಿಳಿಯ ಶರಟು, ಪ್ಯಾಂಟು ಧರಿಸಿ ಹಣೆಗೆ ತಿಲಕವಿಟ್ಟು ಮೀನು ವ್ಯಾಪಾರಕ್ಕೆ ಬಂದಿರುವನಲ್ಲ?!
‘ಮಾಸ್ಕಿಲ್ಲದೆ ಹೀಗೆ ಓಡಾಡುದಾ?’ ಎಂದೆ. ಪಕಪಕ ನಗು. ಇದಕ್ಕೆ ನಗುವೇಕೆ?
‘ಬೆಳಬೆಳಗಾತ ಎದ್ದು ಬಂದ್ರೂ ಮಾಸ್ಕು ಮಾಸ್ಕು ಅಂತ್ರಪ್ಪ ನೀವು’
‘ಹೌದು ಮತ್ತೆ. ಅದೇ ನಮ್ಮ ಜೀವ ಉಳಿಸಿರೋದು. ಆರಾಮಿದ್ರ ಎಲ್ಲ?’
‘ಹೀಂಗೇ ಆರಾಮರಾ. ಯಂತದೂ ಸಿಗುದಿಲ್ಲಲ ಈಗ’ ಎಂದು ಮತ್ತೆ ಖಿಲ್ ನಗು.
ಬೆಳಿಗ್ಗೆ ಶುರುವಾದರೆ ಮಲಗುವ ತನಕ ಅಷ್ಟಿಷ್ಟು ಮದ್ಯ ಸುರುವಿಕೊಳ್ಳುತ್ತಲೇ ಇರುವ ಮಂಜುವಿಗೆ ಲಾಕ್‌ಡೌನ್ ಬಹಳ ತೊಂದರೆ ಕೊಟ್ಟಿರಬಹುದು. ಆದರೆ ಕಣ್ಣು ಬೆಳ್ಳಗಾಗಿದೆ. ಜೀವದಲ್ಲಿ ಸುಧಾರಿಸಿರುವಂತೆ ಕಾಣುತ್ತಿದೆ.
‘ಸಿಗದೆ ಇರೋದು ಒಳ್ಳೇದೇ ಆಯ್ತು. ಈಗ ಮೀನು ವ್ಯಾಪಾರನಾ? ನಿನ್ನೆನೂ ನೀವೇ ಬಂದಿದ್ದಾ? ನಿಲ್ಲಿಸದೆ ಹಂಗೇ ಹೋದ್ರಿ?’
‘ಇಲ್ಲಿಂದ ಓ ಆ ನುಗ್ಗೆಮರ ಇದ್ಯಲ, ಅಲ್ಲೀತಂಕ ಯಾರೂ ಮೀನ್ ತಿಂಬರಿಲ್ಲ. ಹಂಗಾಗಿ ನಿಲ್ದೆ ಹೋಯ್ತಿದ್ದೆ. ಆದ್ರೆ ನೀವು…? ಗೊತ್ತಿರ್ಲಿಲ್ಲ’
ರಾಗ ಎಳೆದು ದನಿ ಸಣ್ಣ ಮಾಡಿದ. ಆ ರಾಗದಲ್ಲಿ ‘ನೀವ್ ಮೀನು ತಿನು ಜಾತಿ ಅಂತ ಗೊತ್ತರ‍್ಲಿಲ್ಲ’ ಎಂಬ ಮಾತು ಅಡಗಿಕೊಂಡಿತ್ತು.
‘ನಿಂ ಜಾತ್ಯರು ಮೀನಾ ನೋಡುದ್ ಸೈತ ಇಲ್ಲ’
‘ಜಾತಿಗೀತಿ ಹೋಗ್ಲಿ ಮಂಜು, ನಾಲ್ಕು ಮೀನು ಕೊಡಿ ಮೊದಲಿಗೆ. ನಮ್ಮನೇಲಿ ಇಬ್ರು ತಿನ್ನೋರಿದಾರೆ. ಮೀನಿಲ್ದೆ ಬಾರಿ ಕಷ್ಟ ಆಗೋಗಿದೆ. ಇನ್ಮೇಲೆ ದಿನಾ ಕೊಡಿ’
‘ದಿನಾ ಸಿಗ್ತದೊ ಇಲ್ಲೋ. ಆದ್ರೆ ಇಬ್ರಿಗೆ ನಾಕ್ ಮೀನು ಸಾಕಾ ಅಮಾ? ಒಬ್ಬೊಬ್ರೇ ಹತ್ತು ಇಪ್ಪತ್ತು ತಿಂತ್ರು ನಾವು. ತಡಿರಿ, ತಡಿರಿ, ನೀವ್ ಮುಟ್ಟಬ್ಯಾಡಿ, ನಾ ಕೊಡ್ತೆ’
ಎಲೆಯಲ್ಲಿ ಸುತ್ತಿ ಕರಿ ಕೊಟ್ಟೆಗೆ ಹಾಕಿ ಕೊಟ್ಟ. ಒಳಗಿರುವುದು ಮೀನು ಎಂದು ಕಾಣಬಾರದೆಂದು ಅಪಾರದರ್ಶಕ ಕರಿಕೊಟ್ಟೆ ಬಳಸುತ್ತಾರೆ. ನನಗೇನು ತೊಂದರೆ? ಪ್ಲಾಸ್ಟಿಕ್ ಬೇಡವೆಂದು ತಿರುಗಿ ಕೊಟ್ಟು ಎಲೆಯ ಪೊಟ್ಲೆ ಕೈಗೆತ್ತಿಕೊಂಡೆ. ಅಷ್ಟರಲ್ಲಿ ಬೆಕ್ಕು ಕುಣಿಯಲು ಶುರುಮಾಡಿತು. ಅದಕ್ಕೆ ಮೀನಿನ ಪರಿಮಳ ಬಂದ ಮೇಲೆ ತುಡು ತಡೆಯಲಾಗುತ್ತಿಲ್ಲ. ಬೇಗ ಮೇಲೆ ಬಾ ಎಂದು ನನ್ನ ಹಿಂದೆ ಮುಂದೆ ತಾರು ಹೊಡೆಯುತ್ತಿದೆ. ಅವ ತನ್ನ ಹತ್ತಿರವಿದ್ದ ಸಣ್ಣ ಬರಲು ಹಿಡಿದು ನಡಿನಡಿ ಎನ್ನುತ್ತ ಬೀಸಿದ. ಅಷ್ಟೊತ್ತಿಗೆ ಜೋರಾಗಿ ಹಾರ್ನ್ ಮಾಡುತ್ತ ಆ ಕಡೆಯಿಂದ ಬೈಕ್ ಬಂತು. ಅವರು ನನ್ನ ಕಂಡು ನಮಸ್ತೆ ಮೇಡಂ ಎನ್ನುವುದನ್ನೂ, ಮಂಜುವನ್ನು ಕಂಡು ‘ಎಂಥ ಮೀನಾ?’ ಎನ್ನುವುದನ್ನೂ ಒಟ್ಟೊಟ್ಟಿಗೆ ಮಾಡಿದರು.
‘ಸೌಂದಳ, ತೂರಿ ಅದೆ. ಎಯ್ಡು ಸೇಡೆ ಇತ್ತು, ಕೊಟ್ಬಂದೆ. ಬಂಗಡಿ ರ‍್ಲಿಲ್ಲ. ಹನೀ ಬಂದಿತ್ತಂತ, ಸಿಕ್ಕಾಪಟ್ಟಿ ತುಟ್ಟಿ. ಬರ‍್ಲಿಲ್ಲ.’
‘ಯಲ್ಲ ಉಪೇಗಿಲ್ದ ಮೀನಾ ಹಿಡ್ಕಬಂದಿದ್ಯಲ? ಕಾಣಿ ಬರ‍್ಲಿಲ್ಲನ? ಬೆಳ್ಳಂಜಿನು ಇಲ್ವ’
‘ಬೆಳ್ಳಂಜಿ ಕೇಳುಕೇ ಇಲ್ಲ. ಕಾಣಿ ಬರುಕೆ ಎಯ್ಡು ದಿನಾ ತಡ. ನಾ ಹಿಡ್ದುಂದಲ್ಲ ಒಡ್ಯಾ. ತದಡಿದು.’
ಆಗ ಮಂಜು ಬೆಳಿಗ್ಗೆ ನಾಲ್ಕಕ್ಕೆ ಎದ್ದು, ಪೊಲೀಸರ ಕಣ್ತಪ್ಪಿಸಿ, ಯಾವ್ಯಾವುದೋ ಒಳದಾರಿಯಲ್ಲಿ ತದಡಿ ಬೇಲೆಗೆ ಹೋಗಿ ಮೀನು ತಂದ ಕತೆ ಹೇಳಿದ. ಅಕಸ್ಮಾತ್ ದಾರಿ ಮೇಲೆ ಅಥವಾ ಚೆಕ್‌ಪೋಸ್ಟಿನಲ್ಲಿ ‘ಮಾವ’ ಸಿಕ್ಕರೆ ಅವರಿಗೆ ಮೀನು ಕೊಟ್ಟು ತಪ್ಪಿಸಿಕೊಳ್ಳುವ ಭರವಸೆಯಿಂದ ಬಂದನಂತೆ. ಆದರೆ ಅಂಥರ‍್ಯಾರೂ ಸಿಗದೆ ಸುರಕ್ಷಿತವಾಗಿ ಬಂದೆ, ಈಗ ಪೇಟೆಗೆ ಹೈವೇ ಪ್ಯಾಟ್ರೋಲ್ ಗಾಡಿ ಬರುವುದರಲ್ಲಿ ಮಾಲು ಮಾರಿ ಮನೆಗೆ ಹೋಗಬೇಕು ಎಂದ.
‘ಆತು, ನೂರ‍್ರುಪಾಯ್ ಸೌಂದಳ ಕೊಡು’
‘ಆದ್ರೆ ದೊಡ್ಡ ಅಮ್ಮ ಬ್ಯಾಡಂದಿದ್ರು..’
‘ಹೆಂಗಸ್ರಿಗೆ ಎಂತ ಗೊತ್ತಾಗ್ತದೆಯ? ತಕಂಡೋದ್ರೆ ಮಾಡ್ ಹಾಕಿ ಗನ್ನಾ ತಿಂತರೆ. ಜಾತಿ ಗೀತಿ ಸಾಯ್ಲಿ, ನಂಗೆ ಮೀನ ಇಟ್ಟಿರು. ಒಂನ್ನಿಮಿಷ, ಕೆಳಗೋಗಿ ಹಾಲು ತಕರ‍್ತೆ’
ಎಂದೆನ್ನುತ್ತ ಅವರು ಭರ‍್ರನೆ ಹೊರಟರು. ಹೆಂಗಸರ ಬಗ್ಗೆ ಇವರೇನು ಹೇಳುತ್ತಿದ್ದಾರೆಂದು ಮಾಸ್ಕಿನೊಳಗಡೆಯೇ ನಾನು ಭುಸುಭುಸು ಎನ್ನುವಾಗ, ಹೊರಟವರು ನಿಂತು, ‘ಮೇಡಂ, ನೀವೂ ಮೀನ ತಿಂಬವ್ರು ಅಂತ ಗೊತ್ತರ‍್ಲಿಲ್ಲ ಹ್ಞಾಂ?’ ಎಂದು ಪರಮ ರಹಸ್ಯವೊಂದನ್ನು ಅರಿತ ಖುಷಿಯಲ್ಲಿ ನಕ್ಕು ಬರ‍್ರೆಂದು ಮುಂದೆಹೋದರು.
‘ಅವ್ರದ್ದೇನು ಮಂಜು?’
‘ಅವುರುದೆಂತ ಕೇಳ್ತಿ? ಅವರ ಮನಿ ಅಮ್ಮ ನಾ ಒಯ್ದ್ ಮೀನ ತಕಣುದಿಲ್ಲ. ಬ್ಯಾಡಂತಾರೆ’
‘ಮೀನು ವ್ಯಾಪಾರಕ್ಕೂ ಜಾತಿನಾ?’
‘ಹೌದ್ರ ಅಮ, ಎಲ್ಲ ಕಡೆ ಅದೆಯ. ಜಾತಿ ಜಾತಿ. ಸಾಯೇಬ್ರು, ಕ್ರಿಚ್ಚನ್ರು ಅಷ್ಟೇ ನನ್ನತ್ರ ತಕಣದು.’
‘ಮತ್ತೀಗ ಅವ್ರು ಜಾತಿಗೀತಿ ಇಲ್ಲ ಅಂದ್ರು?’
ಅಷ್ಟೊತ್ತಿಗೆ ಟಣ್ ಟಣ್ ಎಂದು ಲಯಬದ್ಧವಾಗಿ ಹೆಜ್ಜೆ ಹಾಕುತ್ತಿರುವ ಸದ್ದು ಬೆನ್ನಕಡೆಯಿಂದ ಬಂದು ‘ಹ್ವಾ’ ಎಂದು ಸದ್ದುಮಾಡುತ್ತ ನಿಂತಿತು. ಓ, ಇವಳು! ಮಂಜುವಿನ ಹೆಂಡತಿ ಶಾಂತಿ. ಮುಖ ಕಾಣದಷ್ಟು ಸೊಪ್ಪಿನ ಹೊರೆ ಹೊತ್ತು ಬರುತ್ತಿದ್ದವಳು ನಿಂತಳು. ಅವಳ ಸೊಂಟದ ಕೊಕ್ಕೆ, ಕತ್ತಿಗಳು ಒಂದಕ್ಕೊಂದು ತಾಕುತ್ತ ಓಡುನಡಿಗೆಯಲ್ಲಿ ಕುದುರೆಯ ಗ್ಯಾಲಪಿಂಗ್ ಸದ್ದು ನೆನಪಿಸಿದವು. ‘ಮನಿಗೂ ಎಯ್ಡ್ ಜಬ್ಬು ತಕರ‍್ತಾ? ಏನ್ ಇಲ್ಲೇ ಎಲ್ಲ ಕೊಡ್ತಾ?’ ಎಂದು ಗಂಡನಿಗೆ ತಂದದ್ದರಲ್ಲಿ ಮನೆಗೂ ಸ್ವಲ್ಪ ತಾರೆಂದು ಕುಟುಕಿದಳು. ಹೋಗ್ ಹೋಗಾ, ಬತ್ತೆ, ಬರ‍್ತೆ’ ಎಂದು ಬೆಕ್ಕನ್ನು ಅಟ್ಟಿದಂತೆ ಅವಳನ್ನೂ ಅಟ್ಟಲು ನೋಡಿದ.
‘ಅರೆ, ಕಾಣ್ಲೇ ಇಲ್ಲ, ಏನ್ರಾ ಅಮ, ನೀವು?’ ಎಂದು ನನ್ನ ಕಂಡು ತಿರುಗಿದಳು. ಅವಳಷ್ಟೇ ಉದ್ದದ ಸೊಪ್ಪಿನ ಜೊಂಪೆಯು ಅವಳ ಜೊತೆಗೇ ನನ್ನೆಡೆಗೆ ತಿರುಗಿತು.
‘ನೀವೂ ತಿಂತ್ರಾ? ನೀವ್ ಮೀನ ತಕಂಡಿದ್ದು ಕಂಡಿದ್ದೇ ಇಲ್ಲ.’
‘ಜಾತಿಗೀತಿ ಎಲ್ಲ ಇಲ್ಲ ಅಂತ ಯಾರೋ ಒಬ್ರು ಈಗ ಹೇಳಿಹೋದ್ರು ಶಾಂತಿ. ಅದ್ಕೇ ನಾನೂ ತಗತಾ ಇದೀನಿ’ ಎಂದು ಕುಶಾಲು ಮಾಡಿದೆ.
‘ಯಾರ್ ಹೇಳ್ದರು ಜಾತಿ ಇಲ್ಲಂದಿ? ಮೀನು ಬೇಕಾದಾಗ ಯಾವ್ ಜಾತ್ಯಾರೂ ಅಡ್ಡಿಲ್ಲ. ಅದೇ ನಾವ್ ಅವ್ರ ಮನಿ ಬಾಕ್ಲಿಗೆ ಹೋಗ್ಲಿ, ಆಗ ನಂದು ನಮ್ಮಪ್ಪಂದು, ಅವ್ವಿದು, ಅಜ್ಜಂದು ಎಲ್ಲಾರ್ ಜಾತಿನೂ ಬೇಕಾಯ್ತದೆ. ಈಗ್ ಹೋದ್ರಲ, ಅವ್ರ್ ಮನಿ ಚೌಡಿಪೂಜಿ ದಿವ್ಸ ಚಪ್ರ ಹಾಯುಕ್ ಸೈತ ಬಿಡ್ಲಿಲ್ಲ ಗೊತ್ತದೆರಿ ಅಮಾ?’
‘ಹೌದು ಶಾಂತಿ, ಜಾತಿ ಇಲ್ಲ ಅನ್ನದು ಬಾಯಿಮಾತು ಅಷ್ಟೆ. ಹೋದಸಲ ನಾಗರಪಂಚಮಿ ಟೈಮಲ್ಲಿ ಗುಡಿ ಎದ್ರು ಟೆಂಟ್ ಹಾಕ್ದಾಗ ನೋಡ್ಲಿಲ್ವ ನಾವು?’
ಕಳೆದ ಸಲ ನಾಗರಪಂಚಮಿಯಂದು ನಾಗಪ್ಪನ ಗುಡಿಗೆ ಬರುವವರು ಪ್ಲಾಸ್ಟಿಕ್ ಚೀಲದಲ್ಲಿ ಹಣ್ಣುಕಾಯಿ ತರುವುದನ್ನು ನಿಲ್ಲಿಸಬೇಕೆಂದು ಕರಪತ್ರ ಕೊಟ್ಟು ಹೇಳುತ್ತ ‘ನಾಗರಿಕ ವೇದಿಕೆ’ ವತಿಯಿಂದ ಶೆಡ್ ಹಾಕಿ ಸುರಿಯುವ ಮಳೆಯಲ್ಲಿ ನಿಂತಿದ್ದೆವು. ಆಗ ಇವರನ್ನು ಗುಡಿಯ ಒಳತನಕ ಬಿಡರು ಎಂಬ ವಿಷಯ ಗಮನಕ್ಕೆ ಬಂದಿತ್ತು. ಬಿಡಲಾರರು ಎಂದಿವರು ಹೋಗುವ ಪ್ರಯತ್ನವನ್ನೇ ಮಾಡರು. ಹೊರಗಿನಿಂದಲೇ ಕೈಮುಗಿದು, ಹಣ್ಣುಕಾಯಿ ಪಡೆದು ಬಂದುಬಿಡುವರು. ಆ ಸಲ ಇವಳು ಪಂಚಾಯ್ತಿ ಸದಸ್ಯೆಯಾಗಿದ್ದವಳು. ಆದರೂ ವ್ಯತ್ಯಾಸವಿಲ್ಲ. ಅಂದು ಇಂಥ ವಿಷಯಗಳ ಬಗೆಗೆ ಚರ್ಚಿಸಿದ್ದೆವು.
‘ನೀ ನಡಿಯ ನೀನು ರಸ್ತಿ ಮ್ಯಾಲೆ ಬಾಸಣ ಸುರು ಮಾಡ್ಬೇಡ. ಜಾತಿನು ಇಲ್ಲ, ಪಾತಿನು ಇಲ್ಲ’ ಗಂಡ ಗದರಿದ.
‘ಇದೆಂತ ಬಾಸಣನ? ಜಾತಿ ಇದ್ಯ ಇಲ್ವ ಗೊತ್ತಾಗುಕೆ ಮೀನು ಮಾರುದಲ್ಲ, ಮೀನು ಹೋಟ್ಲು ಇಡು, ಆಗ ಗೊತ್ತಾಯ್ತದೆ. ನಾ ಬತ್ತುನ್ರಾ ಅಮಾ. ಎಯ್ಡು ದನಾ ಕಟ್ಟಿದ್ನಾ, ಅದ್ರ ಕಾಲಡಿಗೆ ಹಸಿ ತಕಂಡೋಗ್ತಿದ್ದೆ. ಹ್ವಾಯ್, ಮತೆ, ಬರಿ ತೂರಿ ತಂದ್ರಾಗುದಿಲ್ಲ, ಸೌಂದಳನೂ ತಕಬನ್ನಿ ಹ್ಞಾಂ’ ಎಂದು ಅವನನ್ನು ಮಾತಿನಲ್ಲೇ ಮೊಟಕಿ ಎಚ್ಚರಿಸಿ ತಲೆಯ ಮೇಲಿನ ಹೊರೆಯೊಂದಿಗೆ ನಡೆದಳು.
‘ಪಂಚಾತಿ ಮೇಂಬ್ರ ಆಗಿ ಏನ್ ಲಾಬಿಲ್ದಿದ್ರೂ ಮಾತಾಡುದ್ ಒಂದ್ ಕಲ್ತದೆ ನೋಡಿ. ಸುಮ್ಮಿದ್ದಿರೆ ಅದ್ಯಶ್ಟೇ ಆಯ್ತಿತ್ತು, ನಾ ಹೇಳ್ ಬಂದಿದ್ದೆ ಅವ್ರಿಗೆ. ಬರೀ ಅಧಿಕ’ ಎಂದು ಮಂಜು ಮಿಸುಕಾಡುತ್ತ ಅವರಿಗಾಗಿ ಕಾಯತೊಡಗಿದ.
‘ಮಾತಾಡದು ಕಲೀರಿ ಅಂತನೇ ಪಂಚಾಯ್ತಿ ಸದಸ್ಯೆಯಾಗಿ ಮಾಡೋದು ಮಂಜು. ಅವಳು ಮಾತು ಕಲ್ತರೆ ಅಧ್ಯಕ್ಷೆ ಆಗಿದ್ದಕ್ಕಿಂತ ಹೆಚ್ಚು’ ಎಂದವನಿಗೆ ಹೇಳಿ ಮನೆಕಡೆಗೆ ಎಳೆಯುತ್ತಿದ್ದ ಬೆಕ್ಕಿನ ಹಿಂದೆ ನಡೆದೆ.
*
ಪದಗಳ ಅರ್ಥ
*
7 ನೆಯದು = ಕೊಂಕಣಿಯ ಪ್ರಶ್ನೋತ್ತರ
ತಿಂತ್ರು = ತಿನ್ನುತ್ತೇವೆ. (ಇಲ್ಲಿ ಬರ‍್ತು, ಹೋಗ್ತು, ಮಾಡ್ತುಗಳೆಲ್ಲ ಹೀಗೆ ಓದಿಸಿಕೊಳ್ಳುತ್ತವೆ.)
ಎಯ್ಡು = ಎರಡು
ಹನೀ = ಸ್ವಲ್ಪ
ತುಡು = ಬಾಯಿಚಪಲ
ಬರಲು = ಸಪೂರ ಕಡ್ಡಿ
ಬೇಲೆ = ದೋಣಿ ನಿಲ್ಲುವ ಜಾಗ
ತಕರ‍್ತಾ = ‘ತಗೊಂಡು ಬರುತ್ತೀರಾ’ದ ಅತಿ ಹ್ರಸ್ವ ರೂಪ
ಕೊಡ್ತಾ = ಕೊಡುತ್ತೀರಾ
*
ಫೋಟೋ : ಎಸ್. ವಿಷ್ಣುಕುಮಾರ್
*
ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 26 ; ಮಣ್ಣಿನ ಯಾವ ಗುಣದಿಂದ ಗುಲಾಬಿ ಹೂವಿನ ಜೊತೆ ಮುಳ್ಳು ಬೆಳೀತು ಅಂತ ಹುಡುಕಕ್ಕಾಗುತ್ತ?
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಡಾಕ್ಟರ್ ಸಾಹಿಬಾ, ರುಖೋ ರುಖೋ, ಆಪನೆ ಕ್ಯಾ ಲಿಖ್ರೇ ಹೈ ಥೋಡಾ ದಿಖಾವೋ’
Published On - 11:38 am, Fri, 25 June 21