ಸುದೀರ್ಘ ಕಥನ | ಏನಿದು ತಂತ್ರಶಾಸ್ತ್ರ? ಕುತೂಹಲದ ಬೆನ್ನೇರಿ ಕಾಮಾಖ್ಯದವರೆಗಿನ ಹುಡುಕಾಟಕ್ಕೆ ಸಿಕ್ಕ ಫಲವಿದು

| Updated By: ಆಯೇಷಾ ಬಾನು

Updated on: Jan 11, 2021 | 6:26 AM

ಭಾರತೀಯ ಅಧ್ಯಾತ್ಮ ಚಿಂತನೆಯ ಪ್ರಮುಖ ಕವಲಾದ ತಂತ್ರಶಾಸ್ತ್ರವನ್ನು ಈ ಸುದೀರ್ಘ ಲೇಖನದಲ್ಲಿ ಲೇಖಕಿ ಆಶಾ ರಘು ಪರಿಚಯಿಸಿದ್ದಾರೆ. ತಂತ್ರಶಾಸ್ತ್ರದ ಪ್ರಾಥಮಿಕ ಪರಿಚಯ ಬೇಕು ಎನ್ನುವವರಿಗೆ  2200 ಪದಗಳ ಈ ಲೇಖನ ಅತ್ಯುತ್ತಮ ಆಕರ. ಹೆಚ್ಚಿನ ಅಧ್ಯಯನ-ಸಾಧನೆ ಮಾಡಬೇಕು ಎಂದುಕೊಳ್ಳುವವರಿಗೆ ಇದು ಮಾರ್ಗದರ್ಶಿ.

ಸುದೀರ್ಘ ಕಥನ | ಏನಿದು ತಂತ್ರಶಾಸ್ತ್ರ? ಕುತೂಹಲದ ಬೆನ್ನೇರಿ ಕಾಮಾಖ್ಯದವರೆಗಿನ ಹುಡುಕಾಟಕ್ಕೆ ಸಿಕ್ಕ ಫಲವಿದು
ಅಸ್ಸಾಂನ ಕಾಮಾಖ್ಯ ದೇಗುಲದಲ್ಲಿ ತಂತ್ರಸಾಧಕರೊಂದಿಗೆ ಲೇಖಕಿ ಆಶಾ ರಘು
Follow us on

ಭಾರತೀಯ ಅಧ್ಯಾತ್ಮ ಚಿಂತನೆಯ ಪ್ರಮುಖ ಕವಲು ತಂತ್ರಶಾಸ್ತ್ರ. ಜನಸಾಮಾನ್ಯರ ಅಧ್ಯಾತ್ಮ ಎಂದು ಬೆಳೆದ ತಂತ್ರಶಾಸ್ತ್ರ ಹಲವರ ಕಣ್ಣಿಗೆ ಕೇವಲ ಮಾಟಮಂತ್ರ. ಆದರೆ ಈ ಮಿತಿಗಳ ಆಚೆಗಿನ ಸಾಧನೆಯ ಹಲವು ಮುಖಗಳನ್ನು ಈ ಸುದೀರ್ಘ ಲೇಖನದಲ್ಲಿ ಲೇಖಕಿ ಆಶಾ ರಘು ಪರಿಚಯಿಸುತ್ತಾರೆ. ‘ಈ ಲೇಖನದಲ್ಲಿ ತಂತ್ರಶಾಸ್ತ್ರದ ಕುರಿತ ನನ್ನ ಅಲ್ಪ ತಿಳುವಳಿಕೆಯನ್ನೂ, ಪ್ರಮುಖ ಶಕ್ತಿಪೀಠವಾದ ಅಸ್ಸಾಮಿನ ಕಾಮಾಖ್ಯಕ್ಕೆ ಒಬ್ಬಳೇ ಪ್ರಯಾಣಿಸಿ, ಅಲ್ಲಿನ ತಂತ್ರ ಸಾಧಕರನ್ನು ಸಂದರ್ಶಿಸಿದ ಅನುಭವವನ್ನು ದಾಖಲಿಸಿದ್ದೇನೆ’ ಎನ್ನುವುದು ಅವರ ವಿನಯ. ತಂತ್ರಶಾಸ್ತ್ರದ ಪ್ರಾಥಮಿಕ ಪರಿಚಯ ಬೇಕು ಎನ್ನುವವರಿಗೆ  2200 ಪದಗಳ ಈ ಲೇಖನ ಅತ್ಯುತ್ತಮ ಆಕರ. ಹೆಚ್ಚಿನ ಅಧ್ಯಯನ-ಸಾಧನೆ ಮಾಡಬೇಕು ಎಂದುಕೊಳ್ಳುವವರಿಗೆ ಇದು ಮಾರ್ಗದರ್ಶಿ.

ಸುಮಾರು ಎರಡು ವರ್ಷಗಳ ಕೆಳಗೆ ಹೊಸ ಕಾದಂಬರಿಗೆ ವಸ್ತು ಹುಡುಕುತ್ತಾ, ಯಾವುದಾದರೂ ವಿಷಯ ಹೊಳೆಯಬಹುದೆಂದು ಆಗಾಗ ಪುಸ್ತಕದ ಅಂಗಡಿಗಳಿಗೆ ಎಡತಾಕುತ್ತಿದ್ದೆ. ಒಮ್ಮೆ, ಜಿ.ಬಿ.ಹರೀಶರು ಆಯ್ಕೆ ಹಾಗೂ ಸಂಪಾದನೆ ಮಾಡಿರುವ ‘ತಂತ್ರ ದರ್ಶನ’ ಕಣ್ಣಿಗೆ ಬಿದ್ದಿತು. ಕೆಲ ಪುಟಗಳನ್ನು ತಿರುವಿ ಹಾಕಿ, ಆಸಕ್ತಿ ಹುಟ್ಟಿದ ಮೇಲೆ ಮನೆಗೆ ಹಿಡಿದು ತಂದೆ. ನನ್ನ ಪತಿ ಕೆ.ಸಿ.ರಘುರವರು ಅದಾಗಲೇ ತಮ್ಮ ಕಪಾಟಿನಲ್ಲಿ ಆ ಕೃತಿಯನ್ನು ತಂದಿರಿಸಿಕೊಂಡಿದ್ದಾರೆಂದು ತಿಳಿದು, ಅನ್ಯಾಯವಾಗಿ ಹಣ ದಂಡವಾಯಿತಲ್ಲ ಎನಿಸಿದರೂ, ಆ ಕೃತಿಯ ಕುರಿತ ಆಕರ್ಷಣೆ ಇನ್ನಷ್ಟು ಇಮ್ಮಡಿಯಾಯಿತು.

ಪ್ರೊ.ಕೆ.ಜಿ.ನಾಗರಾಜಪ್ಪನವರ ‘ರಹಸ್ಯ ಪಂಥಗಳು’, ಡಾ.ಎಂ.ಚಿದಾನಂದಮೂರ್ತಿಯವರ ‘ಮಧ್ಯಕಾಲೀನ ಕರ್ನಾಟಕದ ಕೆಲವು ರಹಸ್ಯ ತಾಂತ್ರಿಕ ಪಂಥಗಳು’, ಡಾ.ಎಂ.ಎಂ.ಕಲಬುರ್ಗಿಯವರ ‘ಲಜ್ಜಾಗೌರಿ’ ಮೊದಲಾದ ಸಂಶೋಧನಾತ್ಮಕ ಲೇಖನಗಳು ಹಿಡಿದು ಕೂರಿಸಿಬಿಟ್ಟವು! ನಂತರ ಜಿ.ಬಿ.ಹರೀಶರದ್ದೇ ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ ಇನ್ನೆರಡು ಪುಸ್ತಕಗಳು ‘ಭಾರತೀಯ ತಂತ್ರಶಾಸ್ತ್ರದ ಪರಿಚಯ’ ಹಾಗೂ ಸರ್ ಜಾನ್ ವುಡ್ರೋಫ್‍ರ ಇಂಗ್ಲೀಷ್ ಮೂಲದಿಂದ ಅನುವಾದಿಸಿದ ‘ತಂತ್ರಶಾಸ್ತ್ರ ಪ್ರವೇಶ’ವನ್ನೂ ತಂದು ಓದಿದೆ. ರಘುರವರು ಬಿ.ಭಟ್ಟಾಚಾರ್ಯರ ‘The world of Tantra’, ಕೆ.ಸಿ.ಪಾಂಡೆಯವರ ‘Abhinavagupta’, ರಾ.ಸತ್ಯನಾರಾಯಣರ ‘ಶ್ರೀವಿದ್ಯಾಷೋಡಶಿಕಾ’ಗಳನ್ನು ತಂದು ಕೊಟ್ಟರು. ಜಿ.ಬಿ.ಹರೀಶರಿಗೆ ಕರೆ ಮಾಡಿ ಇನ್ನಷ್ಟು ಮಾರ್ಗದರ್ಶನ ಪಡೆದೆ.

ಡಾ.ಟಿ.ಎನ್.ವಾಸುದೇವಮೂರ್ತಿಗಳೂ ತಂತ್ರದ ಕುರಿತ ಕೆಲವು ಓಶೋನ ಕೃತಿಗಳನ್ನು ಹೆಸರಿಸಿದರು. ಮೀರಾ ಚಕ್ರವರ್ತಿಯವರ ‘ತಂತ್ರ-ಮನೋವೈಜ್ಞಾನಿಕ ಪರಿಕಲ್ಪನೆ’, ಕೆ.ಪಿ.ಶಂಕರ ಸೋಮಯಾಜಿಯವರ ‘ತಂತ್ರಸಮುಚ್ಚಯ’, ನಂ.ಬಾಲಸುಬ್ರಮಣ್ಯರ ‘ಶ್ರೀ ಚಕ್ರಾರ್ಚನ ಪದ್ಧತಿಃ’, ವಿದ್ವಾನ್ ವಿ.ನಂಜುಂಡಸ್ವಾಮಿಗಳ ‘ಶ್ರೀಸಾಮಾನ್ಯರಿಗೆ ಶ್ರೀಚಕ್ರ ದರ್ಶನ’, ಶ್ರೀಮೂರ್ತಿಯವರ ‘ಚಿಚ್ಛಕ್ತಿ ಪ್ರಭಾವ’, ಪಾದೇಕಲ್ಲು ನರಸಿಂಹಭಟ್ಟರ ‘ಅಭಿನವ ಗುಪ್ತ’ ನನ್ನ ಡೆಸ್ಕಿನ ಸುತ್ತ ಬಂದು ಕುಳಿತವು.
ಈ ಎಲ್ಲ ಅಧ್ಯಯನ ಅಥವಾ ಶಾಸ್ತ್ರದ ಕೃತಿಗಳಲ್ಲಿ ಕೆಲವನ್ನು ಪೂರ್ತಿಯಾಗಿಯೂ, ಕೆಲವನ್ನು ಸಾಂದರ್ಭಿಕವಾಗಿ ಆಯ್ದ ಭಾಗಗಳನ್ನೂ ಓದಿದೆ. ಕೆಲವು ಪ್ರವೇಶಿಸಲೇ ಕ್ಲಿಷ್ಟ ಎನಿಸಿ, ಹಾಗೇ ಬದಿಗಿರಿಸಿಕೊಂಡು ನಿಟ್ಟುಸಿರುಬಿಟ್ಟೆ. ಆದರೆ ತಂತ್ರಶಾಸ್ತ್ರದ ಎಳೆಯನ್ನು ಬಳಸಿಕೊಂಡು ರಚಿತಗೊಂಡಿರುವ ಕಾದಂಬರಿಗಳನ್ನಂತೂ ಇಡಿಯಾಗಿ ತಲ್ಲೀನತೆಯಿಂದ ಭಾವೋದ್ರೇಕಗಳಿಗೆ ಒಡ್ಡಿಕೊಂಡು ಓದಿದೆ. ನನ್ನ ಸೃಜನಶೀಲ ಮನಸ್ಸಿಗೆ ಅದು ದಕ್ಕಿತು. ಕಲೆಯ ರೂಪದಲ್ಲಿ ಬಂದ ವಿಚಾರಗಳೂ ಒಂದಿಷ್ಟು ಒಳಗೆ ಇಳಿದವು.

ಸತ್ಯಕಾಮರ ಅನುಭವಗಳ ವಿವರಣೆಗಳೂ, ಪ್ರಬಂಧಗಳೂ ಕಥಾರೂಪದಲ್ಲಿಯೇ ಇರುತ್ತವೆ. ಹೀಗಾಗಿ ನಾನು ಅಂತಹ ಅವರ ಕೃತಿಗಳನ್ನೂ ಕಾದಂಬರಿಯೆಂದುಕೊಂಡೇ ಓದಿದೆ. ‘ಸ್ವತಂತ್ರ’, ‘ವಿಜ್ಞಾನ ಭೈರವ’, ‘ತಂತ್ರಯೋನಿ’ಗಳಲ್ಲಿ ಅವರು ತಂತ್ರದ ಕುರಿತ ತಮ್ಮ ಅನುಭವಗಳನ್ನೂ, ವಿಚಾರಗಳನ್ನೂ ಹಂಚಿಕೊಂಡಿದ್ದಾರೆ ಮತ್ತು ತಂತ್ರ ಜಗತ್ತಿನ ಕೆಲವು ಒಳನೋಟಗಳನ್ನೂ ಪ್ರಸ್ತಾಪಿಸಿದ್ದಾರೆ.

‘..ಈ ದಾರಿ ದಾರಿಯಲ್ಲ. ಇದೊಂದು ವಿಶೇಷ ಅಂಗೀಕರಣೆ. ಒಂದು ರೀತಿಯ ಉನ್ಮನದ ಮಾನವೀಯತೆ ಇದ್ದು, ಸೃಷ್ಟಿಯಂತೆ ಸಂಹಾರವೂ ಒಂದು ಸಹಜಕ್ರಿಯೆ ಎನ್ನುವುದರ ಬಗ್ಗೆ ದೃಢವಾದ ಎಚ್ಚರ ಇದ್ದವರು ಇದನ್ನು ನಡೆಯುತ್ತಾರೆ. ಒಂದು ಚಮತ್ಕಾರವೆಂದರೆ ಇದರಲ್ಲಿ ಗುರುವು ಯಾರನ್ನೂ ಕರೆಯುವುದಿಲ್ಲ. ಬಂದರೆ ಅವನನ್ನು ಒಂದು ವರುಷ ಹತ್ತಿರ ಇಟ್ಟುಕೊಳ್ಳುತ್ತಾರೆ. ಗುರು ಸಿಕ್ಕವರು ಈ ಮಾರ್ಗದಿಂದ ನಿರಾಶರಾಗಿ ಹೋದದ್ದಿಲ್ಲ. ನಮ್ಮ ವಯೋವೃತ್ತಿಯಲ್ಲಿ ನೂರು ಮಾರ್ಗಗಳಿವೆ. ಅದರಲ್ಲಿ ಸಾವಿರ ಜನ ಲಕ್ಷ್ಯ ಹಾಕಿದ್ದಾರೆ. ಅರ್ಧದಲ್ಲಿ ಕಾಲು ಸೋತವರು, ಮುಂದೆ ನಡೆಯಲು ಕೈಲಾಗದವರು, ವಿಫಲರಾಗಿ ನಿಂತಲ್ಲೇ ನಿಂತವರು ಬಹು ಜನರು. ಆದರೆ ಒಬ್ಬ ಅಘೋರಿಯು ಅಸಫಲನಾಗಿ ಕೈಚೆಲ್ಲಿ ಹಿಂತಿರುಗಿಲ್ಲ.’ ಇದು ‘ಸ್ವತಂತ್ರ’ ಕೃತಿಯಲ್ಲಿ ಲೇಖಕರು ಅಘೋರಿಯೊಬ್ಬನನ್ನು ಸಂದರ್ಶಿಸಿದಾಗ, ಅವನು ಹೇಳುವ ಮಾತು. ಇದು ಒಬ್ಬ ತಂತ್ರ ಸಾಧಕನ ಕಠಿಣ ಹಾದಿಯನ್ನು ಕುರಿತು ತಿಳಿಸುತ್ತದೆ. ತಮ್ಮ ‘ತಂತ್ರಯೋನಿ’ಯಲ್ಲಿ, ಅಭಿನವ ಗುಪ್ತನು ‘ತಂತ್ರೋನ್ಮೇಷ’ದಲ್ಲಿ ಹೇಳಿರುವ ಮಾತನ್ನು ಉಲ್ಲೇಖಿಸುತ್ತಾರೆ.

‘ಗರತಿಯ ಕೊರಳಿಗೆ ಮಾಂಗಲ್ಯ | ಸೂಳೆಯ ಕಾಲಿಗೆ ಗೆಜ್ಜೆ | ಅಲಂಕಾರವಲ್ಲ, ಬದುಕು | ಗರತಿ ಬೆಂಕಿಯನ್ನು ಏಳು ಹೆಜ್ಜೆ ಸುತ್ತುತ್ತಾಳೆ | ಸೂಳೆ ಬಾಳಿನುದ್ದಕ್ಕೂ ಬೆಂಕಿ ತುಳಿಯುತ್ತಾಳೆ..’ ಮುಂದುವರೆದು.. ‘ಉಪದೇಶವನ್ನು ತಲೆಯಲ್ಲಿ ಹೊತ್ತು ಕುಸಿಯದಿರಬೇಕು. ಮುಳ್ಳುದಾರಿಯಲ್ಲಿ ಅದರ ಪಾದರಕ್ಷೆ ಮಾಡಿಕೊಂಡು ಮುಂದುವರಿಯಬೇಕು. ಇದು ತಂತ್ರಸಾರ!’ ಎನ್ನುತ್ತಾರೆ. ಇದು ಶಿಷ್ಟ ಪರಂಪರೆಗೂ, ದೇಸೀ ಪರಂಪರೆಗೂ ಇರುವ ವ್ಯತ್ಯಾಸವನ್ನೂ, ಆ ಮೂಲಕ ಒಬ್ಬ ತಂತ್ರ ಸಾಧಕನ ಬದುಕು ಎಂಥಾ ಕ್ಲಿಷ್ಟದಾಯಕವಾದದ್ದು ಎಂದೂ ಹೇಳುತ್ತದೆ.

ಅಸ್ಸಾಮಿನ ಕಾಮಾಖ್ಯ ದೇಗುಲದ ಆವರಣದಲ್ಲಿ ಕಂಡುಬಂದ ಶಿಲ್ಪಗಳು

ತಂತ್ರ ಜಗತ್ತಿನಲ್ಲಿ ಭೇದವಿಲ್ಲ

ವೇದಗಳು ಕೇವಲ ಶಿಷ್ಟ ಸಮುದಾಯಕ್ಕೆ ಮಾತ್ರ ಎಂಬ ನಿಯಮವಿದೆ. ಆದರೆ ತಂತ್ರಗಳು ಹಾಗೇನಿಲ್ಲ. ತಂತ್ರಸಾಧನೆಯನ್ನು ಜೈವಿಕ ಹಾಗೂ ಸಾಮಾಜಿಕ ಭೇದಭಾವಗಳಿಲ್ಲದೇ ಯಾರಾದರೂ ಮಾಡಬಹುದು. ಇಂಥ ಸಾಧನೆಯಲ್ಲಿ ಶೂದ್ರ ಗುರುವಾಗುವ, ಸ್ತ್ರೀ ಗುರುವಾಗಿ ದೀಕ್ಷೆ ಕೊಡುವ ಹಕ್ಕೂ ಇದೆ. ಕೀಳು ಜಾತಿಯ ಹೆಣ್ಣು ಶಕ್ತಿಯಾಗುತ್ತಾಳೆ. ಪುರುಷ ಅವಳನ್ನು ಪೂಜಿಸಿ ಕಾಲಿಗೆ ಬೀಳುತ್ತಾನೆ! (‘ಶೂದ್ರನೂ’, ‘ಸ್ತ್ರೀಯೂ’.. ಎನ್ನುವಂತಹ ಪದ ಪ್ರಯೋಗಗಳಿಗೆ ಕ್ಷಮೆಯಿರಲಿ. ಸಾಮಾಜಿಕ ಅಂತರಗಳಿಗೂ, ಲಿಂಗತಾರತಮ್ಯಗಳಿಗೂ ಇಲ್ಲಿ ಎಡೆ ಇಲ್ಲ ಎಂದು ಹೇಳುವಲ್ಲಿ ಅನಿವಾರ್ಯವಾಗಿ ಬಳಸಿದ್ದೇನೆ)

ಸಾಧಕ ನಾಲ್ಕು ಪಾದಗಳನ್ನು ಕ್ರಮಿಸಬೇಕು.. ಜ್ಞಾನಪಾದ, ಯೋಗಪಾದ, ಕ್ರಿಯಾಪಾದ ಹಾಗೂ ಚರ್ಯಾಪಾದಗಳೇ ಆ ನಾಲ್ಕು ಪಾದಗಳು. ಗುರಿಯನ್ನು ಸಾಧ್ಯ ಮಾಡುವ ಸಾಧಕನ ಬೌದ್ಧಿಕ ಚಿಂತನೆಯನ್ನು ಜ್ಞಾನಪಾದ ಎನ್ನಲಾಗುತ್ತದೆ. ಸಾಧಕ ಭೌತಿಕ-ಮಾನಸಿಕ ಸಾಧನೆಗಳನ್ನು ಮಾಡುವ ಕ್ರಿಯೆಗೆ ಯೋಗಪಾದ ಎನ್ನುತ್ತಾರೆ. ಸಾಧಕ ತನ್ನ ‘ಅಹಂ’ ಅನ್ನು ಕಳೆದುಕೊಳ್ಳುವಲ್ಲಿ ಈ ಮಾನಸಿಕ ಕ್ರಿಯೆಗಳು ಸಹಾಯಮಾಡುತ್ತವೆ. ದೇವರ ಪೂಜೆ ಅಥವಾ ಸಾಮೂಹಿಕ ಪೂಜೆಯನ್ನು ಕ್ರಿಯಾಪಾದ ಎನ್ನಲಾಗುತ್ತದೆ. ಚರ್ಯಾಪಾದ ಸಾಧಕನಿಗೆ ನೈತಿಕ ವ್ಯವಹಾರದ ವಿಧಿ-ನಿಷೇಧಗಳನ್ನೂ ಸಾಧನಾಕ್ರಮಗಳ ವಿವರಗಳನ್ನೂ ಒದಗಿಸುತ್ತದೆ. ಆದರೆ ಈ ನಾಲ್ಕು ಪಾದಗಳ ಸಾಧನೆಯನ್ನು ಪ್ರಾರಂಭಿಸುವುದಕ್ಕಿಂತ ಮೊದಲು ಸಾಧಕ ಕ್ರಮೇಣ ತನ್ನ ಪಶುಭಾವ ಹಾಗೂ ವೀರಭಾವ ಎನ್ನಲಾಗುವ ತಾಮಸಿಕ ಹಾಗೂ ರಾಜಸಿಕ ಸ್ವಭಾವಗಳನ್ನು ತ್ಯಜಿಸಿ, ದಿವ್ಯಭಾವನ್ನು ಅಥವಾ ಸಾತ್ವಿಕ ಸ್ವಭಾವದ ಸಾಧನೆಯೇ ತಂತ್ರದ ಕೊನೆಯಲ್ಲ, ಸಾಧಕನು ಅದನ್ನೂ ಮೀರಿ ಹೋಗಬೇಕಾಗುತ್ತದೆ!

ತಂತ್ರಸಾಧನೆಯಲ್ಲಿ ಪೂರ್ತಿ ಬ್ರಹ್ಮಾಂಡವನ್ನೇ ಅಸ್ತಿತ್ವದ ವಿವಿಧ ಸ್ತರಗಳೆಂದೂ ಹಾಗೂ ಅವುಗಳಲ್ಲಿ ಪ್ರತಿಯೊಂದು ಸ್ತರವೂ ಮಾನಸಿಕ ತತ್ವದ ಪ್ರಕಟರೂಪವೆಂದೂ ಭಾವಿಸಲಾಗುತ್ತದೆ. ಇದನ್ನು ಮಾನವ ಶರೀರಕ್ಕೆ ಸಮೀಕರಿಸಲಾಗುತ್ತದೆ. ಮಾನವನ ಶರೀರದಲ್ಲಿ ಹಲವು ಕೇಂದ್ರಬಿಂದುಗಳಿದ್ದು, ಅವುಗಳಿಗೂ ಬ್ರಹ್ಮಾಂಡದ ಸ್ತರಗಳಿಗೂ ಸಂಬಂಧವನ್ನು ಹೆಣೆಯಲಾಗುತ್ತದೆ. ಈ ಕೇಂದ್ರಬಿಂದುಗಳು ಆ ಸಂಬಂಧಗಳನ್ನು ಸರಿಯಾಗಿ ಉಪಯೋಗಿಸಿದಾಗ, ಅವು ಮಾನವನಲ್ಲಿ ಅಡಗಿದ ಶಕ್ತಿಯನ್ನು ಪ್ರಕಟಗೊಳಿಸುತ್ತವೆ. ಈ ಕೇಂದ್ರಬಿಂದುಗಳನ್ನು ದಳಗಳುಳ್ಳ ಅಥವಾ ನಾಡಿಗಳುಳ್ಳ ಕಮಲಗಳು ಅಥವಾ ಚಕ್ರಗಳು ಎಂದು ಕರೆಯಲಾಗುತ್ತದೆ. ಈ ಚಕ್ರಗಳು ಏಳು- ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ ಹಾಗೂ ಸಹಸ್ರಾರ. ಇವುಗಳಲ್ಲಿ ಮೊದಲನೆಯದು ಬೆನ್ನೆಲುಬಿನ ಬೇರಿನಲ್ಲಿರುವ ‘ಸ್ಥೂಲ ಭೌತಿಕ ವಸ್ತು’ ಹಾಗೂ ಕೊನೆಯದು ಮಸ್ತಕದಲ್ಲಿರುವ ‘ಪ್ರಕಾಶದ ಅತ್ಯುಚ್ಚ ಕೇಂದ್ರ’! ಈ ಮೂಲಾಧಾರ ಚಕ್ರದಲ್ಲಿ ಕುಂಡಲಿನಿ ಶಕ್ತಿ ಹಾವಿನಂತೆ ಸುರುಳಿ ಸುತ್ತಿಕೊಂಡು ಮಲಗಿರುತ್ತದೆ. ಇದನ್ನು ಸುರುಳಿ ಬಿಡಿಸಿ ಕ್ರಮವಾಗಿ ಸಹಸ್ರಾರದೆಡೆಗೆ ಏರುವಂತೆ ಮಾಡಬೇಕು. ಅದು ಸುರುಳಿ ಬಿಚ್ಚಿಕೊಂಡು ಸರ್ಪದಂತೆ ಪ್ರತಿ ಕಮಲವನ್ನು ಭೇದಿಸುತ್ತ ಮೇಲೆ ಏರಲು ಪ್ರಾರಂಭಿಸುತ್ತದೆ ಹಾಗೂ ಕೊನೆಗೆ ಬ್ರಹ್ಮರಂಧ್ರದಲ್ಲಿ ಶಕ್ತಿಪುರುಷನನ್ನು ಸೇರಿ ಪೂರ್ಣ ಸಮಾಧಿಯನ್ನು ಹೊಂದುತ್ತದೆ.

ತಂತ್ರಶಾಸ್ತ್ರಗಳನ್ನು ಆಗಮಗಳೆಂದೂ ಕರೆಯುವುದು ರೂಢಿಯಲ್ಲಿದೆ. ಆದರೆ ಮೊದಲಿಗೆ ವೇದಗಳನ್ನು ಆಗಮಗಳೆಂದು ಕರೆಯಲಾಗುತ್ತಿತ್ತು. ನಂತರ ತಂತ್ರಶಾಸ್ತ್ರಗಳು ಪ್ರಾಮುಖ್ಯತೆಯನ್ನು ಪಡೆದು ವೇದಗಳ ಸ್ಥಾನವನ್ನೇ ಬಯಸಿದಾಗ, ಅವುಗಳನ್ನೇ ಆಗಮಗಳೆಂದೂ, ವೇದಗಳನ್ನು ನಿಗಮಳೆಂದೂ ಕರೆಯುವುದು ವಾಡಿಕೆಯಾಯಿತು ಎಂದು ಅಭಿಪ್ರಾಯ ಪಡುತ್ತಾರೆ ಮೀರಾ ಚಕ್ರವರ್ತಿಯವರು. ಆಗಮಗಳಿಗೆ ದೇವರೇ ಮೂಲ. ಈ ಆಗಮಗಳನ್ನು ಅವುಗಳ ಅಧಿದೇವತೆಗಳ ಹೆಸರಿನ ಆಧಾರದ ಮೇಲೆ ಹೆಸರಿಸಲಾಗಿದೆ. ಶಿವ ಅಧಿದೇವತೆಯಾಗಿರುವ ಆಗಮವನ್ನು ಶೈವ, ಶಕ್ತಿ ಅಧಿದೇವತೆಯಾಗಿರುವ ಆಗಮವನ್ನು ಶಾಕ್ತ, ವಿಷ್ಣು ಅಧಿದೇವತೆಯಾಗಿರುವ ಆಗಮಕ್ಕೆ ವೈಷ್ಣವ, ಸೂರ್ಯ ಅಧಿದೇವತೆಯಾಗಿರುವ ಆಗಮವನ್ನು ಸೌರ್ಯ ಹಾಗೂ ಗಣಪತಿ ಅಧಿದೇವತೆಯಾಗಿರುವ ಆಗಮಕ್ಕೆ ಗಾಣಪತ್ಯ ಆಗಮಗಳು ಎಂದು ಹೆಸರಿಸಲಾಗಿದೆ. ಇವುಗಳಲ್ಲಿ ಶಾಕ್ತ ಆಗಮವೇ ಪ್ರಮುಖವಾಗಿರುವುದರಿಂದ ಅದನ್ನೇ ಪೂರ್ತಿಯಾಗಿ ತಂತ್ರಶಾಸ್ತ್ರ ಎಂದು ಪರಿಭಾವಿಸಲಾಗುತ್ತದೆ.

ಪೂಜಾವಿಧಿಯಲ್ಲಿ ಮೂರ್ತಿಗಳನ್ನು ಅಥವಾ ಚಿಹ್ನೆಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ವಿಷ್ಣುವಿನ ಚಿಹ್ನೆಯಾಗಿ ಶಾಲಿಗ್ರಾಮವನ್ನೂ, ಶಿವನ ಚಿಹ್ನೆಯಾಗಿ ಲಿಂಗವನ್ನೂ ಪೂಜಿಸಲಾಗುತ್ತದೆ. ಇವುಗಳಲ್ಲದೇ ವೃತ್ತಗಳು, ತ್ರಿಕೋಣಗಳು ಮೊದಲಾದ ಜ್ಯಾಮಿತಿಯಂಕೆಗಳೂ ಸಹ ಪೂಜಾವಸ್ತು ಆಗುತ್ತದೆ. ಇವುಗಳಿಗೆ ಯಂತ್ರಗಳು ಅಥವಾ ಮಂಡಲಗಳು ಎಂದು ಕರೆಯುತ್ತಾರೆ.

ಶಾಕ್ತರ ತಂತ್ರಸಾಧನೆಯಲ್ಲಿ ಸ್ತ್ರೀ ಸಂಬಂಧೀ ಶಾಸ್ತ್ರಾಚಾರಗಳು ಅಥವಾ ಗೌಪ್ಯ ಆಚಾರಗಳು ಮಹತ್ವದ ಸ್ಥಾನ ಪಡೆದಿದೆ. ಇದನ್ನು ಲತಾ ಸಾಧನೆ ಎಂದೂ ಕರೆಯುತ್ತಾರೆ. ಮದ್ಯ, ಮಾಂಸ, ಮತ್ಸ್ಯ, ಮುದ್ರಾ ಹಾಗೂ ಮೈಥುನ- ಇವು ಈ ಉಪಾಸನೆಯ ಐದು ಅಂಗಗಳು. ಇವನ್ನು ‘ಪಂಚಮಕಾರಗಳು’ ಎಂದು ಕರೆಯುತ್ತಾರೆ. ಪ್ರೊ.ಕೆ.ಜಿ.ನಾಗರಾಜಪ್ಪನವರು ತಮ್ಮ ‘ರಹಸ್ಯ ಪಂಥಗಳು’ ಲೇಖನದಲ್ಲಿ ತಂತ್ರ ಸಾಧನೆಯನ್ನು ಗೌಪ್ಯವಾಗಿಯೇ ಆಚರಿಸುತ್ತಿರುವ ಗುಪ್ತ ಸಮಾಜಗಳ ಕುರಿತು ಹೇಳುತ್ತಾ, ಈ ಪಂಚಮಕಾರ ಸಾಧನೆಯೇ ಗುಪ್ತ ಸಮಾಜಗಳಿಗೆ ಮೂಲ ಎನ್ನುತ್ತಾರೆ.

ಈ ಪೂಜಾವಿಧಿಯಲ್ಲಿ ತಾತ್ಕಾಲಿಕವಾಗಿ ಭೈರವಿ-ಭೈರವರ ವಿವಾಹದ ಆಚರಣೆ ನಡೆಯುತ್ತದೆ. ಭೈರವಿಯ ಪೂಜೆಯನ್ನು ಮಾಡಿದ ನಂತರ ಭೈರವ ತನ್ನನ್ನು ತಾನೇ ಪೂಜಿಸಿಕೊಳ್ಳುತ್ತಾನೆ. ಮದ್ಯ, ಮತ್ಸ್ಯ, ಮಾಂಸ ಮೊದಲಾದ ವಸ್ತುಗಳ ಸೇವನೆಯಾಗುತ್ತದೆ. ಮೈಥುನಕ್ಕೆ ಇವು ಪ್ರೇರಕಗಳು. ಭೈರವನು ದೇವಿಯ ಕಾಲಿಗೆ ಬಿದ್ದು ನಮಸ್ಕರಿಸಿ, ‘ತಾಯಿ ಬ್ರಹ್ಮಾನಂದಕ್ಕೆ ಅವಕಾಶ ಮಾಡಿಕೊಡು’ ಎಂದು ಪ್ರಾರ್ಥಿಸುತ್ತಾನೆ. ದೇವಿಯು ಅವನಿಗೆ ಒಪ್ಪಿಗೆ ನೀಡುತ್ತಾಳೆ. ಆನಂತರ ಅವರ ನಡುವೆ ಒಂಬತ್ತು ಬಗೆಯ ರತಿಕ್ರೀಡೆಗಳು ನಡೆಯುತ್ತವೆ. ಈ ಚಕ್ರಪೂಜೆಯ ಮೈಥುನದ ಗುರಿ ಸಂತಾನೋತ್ಪತ್ತಿ ಅಲ್ಲ, ಬ್ರಹ್ಮಾನಂದ! ಕೆಲವು ಅನಾಚಾರಿಗಳು ಈ ತಂತ್ರ ಸಾಧನೆಯನ್ನು ಇಂದ್ರಿಯ ತೃಪ್ತಿಗೆ ಬಳಸುವ ಅಪಾಯವೂ ಇದೆ. ಅದಕ್ಕಾಗಿಯೇ ಈ ಪಂಚಮಕಾರಗಳ ಬಳಕೆಯ ಹದದಲ್ಲಿ ತಂತ್ರದ ರಹಸ್ಯ ಅಡಗಿದೆ ಎನ್ನುವುದು. ನಿಜವಾದ ತಂತ್ರ ಸಾಧಕರು ಕಾಮದಿಂದಲೇ ಕಾಮವನ್ನು ಗೆಲ್ಲುವ ಹಠಯೋಗಿಗಳು, ಮೃಗೀಯ ತೃಷೆಯ ತೃಪ್ತಿಯ ಕಡುವಿರೋಧಿಗಳು. ತಂತ್ರ ಸಾಧನೆ ಅಶ್ಲೀಲವಲ್ಲ. ಸಾಧನೆಯಲ್ಲಿ ವೀರ್ಯ ಪತನವಿಲ್ಲ, ವೀರ್ಯಧಾರಣೆ, ಸಂಯಮ ಮುಖ್ಯ!

‘ತಂತ್ರ’ದ ಇಣುಕುನೋಟ ನೀಡುವ ಮೀರಾ ಚಕ್ರವರ್ತಿಯವರ ಕೃತಿ (ಎಡ). ತಂತ್ರದ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಬರೆದವರು ಸತ್ಯಕಾಮ

ವೀರಭಾವ ಸಾಧನೆಯ ಅಂತಿಮ ಗಡುವು

ಸತ್ಯಕಾಮರು ತಮ್ಮ ‘ತಂತ್ರಯೋನಿ’ಯಲ್ಲಿ ನಾಲ್ಕು ವಿಧದ ಯೋನಿಪೂಜೆಗಳನ್ನು ಹೆಸರಿಸುತ್ತಾರೆ. ಮಾತೃ, ಮಾತಂಗಿ, ಕೌಮಾರಿ ಹಾಗೂ ಭೈರವಿಗಳೇ ಆ ನಾಲ್ಕು ವಿಧಗಳು. ಇವುಗಳೆಲ್ಲವೂ ಭಿನ್ನ ರೀತಿಯ ಆಚರಣಾ ಕ್ರಮವನ್ನು ಒಳಗೊಂಡಿವೆಯೆಂಬುದು ತಿಳಿಯುತ್ತದೆ. ಈ ನಾಲ್ಕು ವಿಧಗಳಲ್ಲಿ ಒಂದಾದ ಕೌಮಾರಿ ಅಥವಾ ಕುಮಾರಿ ಪೂಜೆಯನ್ನು ನೇಪಾಳದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ನೇಪಾಳದ ರಾಜ ಮನೆತನ ಕುಮಾರಿ ಪೂಜೆಯಲ್ಲಿ ಭಾಗವಹಿಸುತ್ತದೆ. ಅಲ್ಲಿ ಕುಮಾರಿಯನ್ನು ಉತ್ತಮ ಕುಲದಿಂದಲೇ ಆರಿಸುತ್ತಾರೆ. ಅಸ್ಸಾಮಿನ ಕಾಮಾಖ್ಯ ದೇವಾಲಯದಲ್ಲಿ ಇಂದಿಗೂ ಕುಮಾರಿಪೂಜೆ ರೂಢಿಯಲ್ಲಿದೆ. ಅಂಬುವಾಚಿ ಅವಧಿ ಎಂದರೆ ದೇವಿ ಕಾಮಾಖ್ಯ ಮುಟ್ಟಾಗುವ ಮೂರು ದಿವಸ, ದೇವಾಲಯದ ಬಾಗಿಲನ್ನು ಮುಚ್ಚುತ್ತಾರೆ. ಬಾಗಿಲು ತೆರೆದ ನಾಲ್ಕನೇ ದಿವಸ ದೇವಿಯ ದರ್ಶನ ಪವಿತ್ರವಾದುದು ಎಂಬುದು ನಂಬಿಕೆ. ಬಂಗಾಳ, ಒರಿಸ್ಸಾ, ಬಿಹಾರ ಹೀಗೆ ಭಾರತದ ಮೂಲೆ ಮೂಲೆಗಳಿಂದ ತಾಂತ್ರಿಕ ಸಾಧಕರು ಕಾಮಾಖ್ಯಕ್ಕೆ ಬಂದು ಈ ಅವಧಿಯಲ್ಲಿ ಸಾಧನೆಯಲ್ಲಿ ತೊಡಗಿರುತ್ತಾರೆ. ಭಕ್ತರಿಗೆ ದೇವಿಯ ಮುಟ್ಟಿನ ಸಂಕೇತವಾಗಿ ಕೆಂಪು ಬಟ್ಟೆಯನ್ನು ದೇವಿಯ ಪ್ರಸಾದವನ್ನಾಗಿ ನೀಡಲಾಗುತ್ತದೆ.

ಈ ಚಕ್ರಪೂಜೆಯ ವಿಧಿಯನ್ನು ಕಾಮಾಕ್ಯ ಪ್ರದೇಶದಲ್ಲಿ ಹೇಗೆ ನಡೆಸುತ್ತಾರೆಂದು ಜಿ.ಬಿ.ಹರೀಶರು ತಮ್ಮ ‘ಭಾರತೀಯ ತಂತ್ರಶಾಸ್ತ್ರದ ಪರಿಚಯ’ದಲ್ಲಿ ಬಹಳ ಸರಳವೂ, ಕ್ರಮಬದ್ಧವೂ ಆದ ರೀತಿಯಲ್ಲಿ, ಹಲವು ಹಂತಗಳಲ್ಲಿ ವಿವರಿಸಿದ್ದಾರೆ. ಹಿರಿಯ ಪ್ರಸಿದ್ಧ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರ ‘ಸಾರ್ಥ’ದಲ್ಲಿ ಈ ಯೋನಿಪೂಜೆಯ ವಿಧಿ ಇನ್ನೂ ವಿಸ್ತಾರವಾಗಿ ಪ್ರಸ್ತಾಪಗೊಂಡಿದೆ. ಈ ಕಾದಂಬರಿಯಲ್ಲಿ ಭೈರಪ್ಪನವರು ಬೌದ್ಧ, ಮೀಮಾಂಸಕ, ಇಸ್ಲಾಂ, ವೈದಿಕ ಧಾರೆಗಳೊಂದಿಗೆ ತಾಂತ್ರಿಕ ಮಾರ್ಗದ ಚಿತ್ರಣವನ್ನೂ ಮಾಡಿದ್ದಾರೆ. ಇಲ್ಲಿ ಬರುವ ಯೋನಿಪೂಜೆಯ ವಿಧಿ ಕಾದಂಬರಿಯ ಪಾತ್ರಗಳ ಭಾವನಾತ್ಮಕ ಸಂಬಂಧಗಳ ಹಿನ್ನೆಲೆಗಳೊಂದಿಗೆ ಸೃಜನಾತ್ಮಕವಾಗಿಯೂ, ರೋಚಕವಾಗಿಯೂ, ಶಾಸ್ತ್ರಬದ್ಧವಾಗಿಯೂ ನಿರೂಪಿತಗೊಂಡಿದೆ.

ಶ್ರೀರಾಮಕೃಷ್ಣ ಪರಮಹಂಸರು ಭಕ್ತಿ, ಅದ್ವೈತ ಮುಂತಾದ ಸಾಧನೆಗಳೊಂದಿಗೆ ತಂತ್ರದ ಸಾಧನೆಯನ್ನೂ ಮಾಡಿದ ವಿವರಣೆಯನ್ನು ‘ಭಾರತೀಯ ತಂತ್ರಶಾಸ್ತ್ರದ ಪರಿಚಯ’ದಲ್ಲಿ ಜಿ.ಬಿ.ಹರೀಶರು ನೀಡಿದ್ದಾರೆ. ಸುಂದರ ಯುವತಿಯು ನಗ್ನಳಾಗಿದ್ದು ಅವಳ ತೊಡೆಯ ಮೇಲೆ ಕುಳಿತು ಪರಮಹಂಸರು ಭಾವಮಯರಾಗಿ ಮಂತ್ರ ಜಪಿಸುತ್ತಾರೆ. ಬ್ರಾಹ್ಮಣಿಯು ಶವದ ತಲೆಬುರುಡೆಯಲ್ಲಿ ಮೀನನ್ನು ಬೇಯಿಸಿ ಶ್ರೀ ಜಗನ್ಮಾತೆಗೆ ತರ್ಪಣ ಮಾಡುವುದನ್ನು ತೋರಿಸಿಕೊಟ್ಟಂತೆಯೇ ಪರಮಹಂಸರೂ ಮಾಡಿ ಅದನ್ನು ಸ್ವೀಕರಿಸುತ್ತಾರೆ. ಕೊಳೆತ ಮಾಂಸವನ್ನು ತಿನ್ನುತ್ತಾರೆ. ಸಂಭೋಗ ಕ್ರಿಯೆಯಲ್ಲಿದ್ದ ಹೆಣ್ಣು ಗಂಡನ್ನು ಬ್ರಾಹ್ಮಣಿಯು ಅವರಿಗೆ ತೋರಿದಾಗ, ಅದನ್ನು ಶಿವಶಕ್ತಿಲೀಲೆ ಎಂದು ಭಾವಿಸಿ ಸಮಾಧಿ ಸ್ಥಿತಿಗೆ ತಲುಪಿ ಹಿಂದಿರುಗುತ್ತಾರೆ. ಬ್ರಾಹ್ಮಣಿಯು ಅವರು ಅತ್ಯಂತ ಕಷ್ಟ ಸಾಧ್ಯವಾದ ತಂತ್ರ ಸಾಧನೆಯಲ್ಲಿ ಸಿದ್ಧಿಯನ್ನು ಪಡೆದು ದಿವ್ಯಭಾವದಲ್ಲಿ ಪ್ರತಿಷ್ಠಿತರಾಗಿರುವುದಾಗಿ ಹೇಳಿ, ಇದೇ ವೀರಭಾವ ಸಾಧನೆಯ ಅಂತಿಮ ಗಡುವು ಎನ್ನುತ್ತಾಳೆ.

ತಂತ್ರ ಸಾಧನೆಯಲ್ಲಿ ಗುರುವಿನದು ಮಹತ್ವದ ಪಾತ್ರ. ಶಾಂಭವೀ, ಶಾಕ್ತೀ, ಮಾಂತ್ರೀ ಎನ್ನುವ ಮೂರು ದೀಕ್ಷಾ ವಿಧಿಗಳನ್ನು ಸತ್ಯಕಾಮರು ಹೆಸರಿಸುತ್ತಾರೆ. ಇವುಗಳ ವಿಸ್ತಾರವಾದ ವಿವರಣೆಯ ನಂತರ, ‘ದೀಕ್ಷೆ ಗುರುವಿನ ಅಧೀನ ಕಲಾಪ ಮಾತ್ರ. ಶಾಸ್ತ್ರ ಅದನ್ನು ಸಂಗ್ರಹಿಸಿವೆ ಅಷ್ಟೆ. ದೀಕ್ಷಾ ವಿಧಿ ಮೂರು ಅಲ್ಲ, ಸಹಸ್ರಾರು. ಆದರೆ ಅದು ಕಲಾಪವಲ್ಲ. ಅದ್ಭುತ ಪರಿವರ್ತನೆಗೆ ತೆರೆದಿಟ್ಟ ಶಕ್ತಿಯ ಬಾಗಿಲು’ ಎನ್ನುತ್ತಾರೆ ತಮ್ಮ ‘ತಂತ್ರಯೋನಿ’ಯಲ್ಲಿ.

ಆಚರಣೆಗಳ ಭಿನ್ನತೆಯಿಂದ ತಂತ್ರಗಳನ್ನು ದಕ್ಷಿಣಾಚಾರ, ವಾಮಾಚಾರ ಮತ್ತು ಮಧ್ಯಮ ಎಂದು ವಿಂಗಡಿಸಲಾಗಿದೆ. ದಕ್ಷಿಣಾಚಾರದ ತಂತ್ರಗಳು ವೇದ ಮತ್ತು ವರ್ಣಾಶ್ರಮ ಪರವಾದುವು. ವಾಮಾಚಾರ ತಂತ್ರಗಳು ಕೌಲ ಸಂಪ್ರದಾಯವಾಗಿದ್ದು, ಪಂಚಮಕಾರ ತತ್ತ್ವವನ್ನು ಎತ್ತಿಹಿಡಿದವು. ಮಧ್ಯಮ ತಂತ್ರಗಳು ಎರಡೂ ಬಗೆಯ ವಿಚಾರ ಧಾರೆಗಳ ಒಂದು ಹದದ ಮಿಶ್ರಣ. ಕಮ್ಮಾರ, ಚಮ್ಮಾರ, ದೊಂಬ, ದರ್ಜಿ, ನೇಯ್ಗೆ ಮುಂತಾದ ಕೆಳ ಸ್ತರದ ವರ್ಗದಲ್ಲಿ ಪ್ರಚಲಿತವಾಗಿದ್ದ ತಂತ್ರಗಳು ಹೇಗೆ ವೈದಿಕೀಕರಣಗೊಂಡಿತು ಎನ್ನುವ ಸಂಗತಿಯನ್ನು ಪ್ರೊ.ಕೆ.ಜಿ.ನಾಗರಾಜಪ್ಪನವರು ತಮ್ಮ ಲೇಖನದಲ್ಲಿ ಚರ್ಚಿಸುತ್ತಾರೆ. ಕೆಳ ಸಮುದಾಯದಲ್ಲಿ ಪ್ರಚಲಿತವಾಗಿದ್ದ ತಂತ್ರಗಳನ್ನು ಅಕ್ಷರಸ್ಥ ವರ್ಗ ಲಿಖಿತಗೊಳಿಸಿ, ಬ್ರಾಹ್ಮಣೀಕರಣ ಮತ್ತು ಸಂಸ್ಕೃತೀಕರಣಗೊಳಿಸಿದರು ಎನ್ನುತ್ತಾರೆ. ವಾಮಾಚಾರ ಸಾಧನೆಯಲ್ಲಿ ಪಂಚಮಕಾರದಲ್ಲಿ ಅಸಲಿ ವಸ್ತುಗಳನ್ನೇ ಬಳಸಿದರೆ, ದಕ್ಷಿಣಾಚಾರದಲ್ಲಿ ಪಂಚಮಕಾರದ ಅಸಲಿ ವಸ್ತುಗಳಿಗೆ ಬದಲು ಸಾಂಕೇತಿಕ ವಸ್ತುಗಳನ್ನು ಸಾಧನೆಗೆ ಬಳಸಲಾಯಿತು ಎನ್ನುತ್ತಾರೆ.

ದಕ್ಷಿಣಾಚಾರದ ಮಾನಸಿಕ ಸಾಧನೆಯಲ್ಲಿ ಮದ್ಯವು ಉನ್ಮತ್ತಜ್ಞಾನಕ್ಕೂ, ಮಾಂಸವು ನಾಲಿಗೆಯ ನಿಯಂತ್ರಣಕ್ಕೂ, ಮತ್ಸ್ಯವು ಇಡಾ ಮತ್ತು ಪಿಂಗಳಗಳು ಸೇರುವ ಸುಷುಮ್ನನಾಡಿಗೂ, ಮುದ್ರಾವು ಯೋಗದ ಏಕಾಗ್ರತೆಗೂ, ಮೈಥುನವು ಸೃಷ್ಟಿಕ್ರಿಯೆಗೂ ಸಂಕೇತವಾಗುತ್ತದೆ. ಎಳನೀರನ್ನು ಮದ್ಯಕ್ಕೆ, ಶುಂಠಿಯನ್ನು ಮಾಂಸಕ್ಕೆ, ಅನ್ನವನ್ನು ಮುದ್ರೆಗೆ, ಕರವಿ (ಲಿಂಗ) ಮತ್ತು ಅಪರಾಜಿತಾ (ಯೋನಿ) ಪುಷ್ಪಗಳನ್ನು ಮೈಥುನಕ್ಕೆ ಬದಲಾಗಿ ಸಾಧನೆಗೆ ವಸ್ತುಗಳನ್ನಾಗಿ ಬಳಸಲಾಯಿತು. ಇಂತಹಾ ಅನುಕರಣಾ ವಸ್ತುಗಳ ಬಳಕೆ ತಂತ್ರದಲ್ಲಿ ಶ್ರೇಷ್ಠವಾದುದಲ್ಲ ಎನ್ನುವುದು ವಾಮಾಚಾರದವರ ಖಂಡನೆ.

ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ ಪ್ರಮುಖ ಕೃತಿಗಳು

ತಂತ್ರದಲ್ಲಿ ಆರು ಮತಗಳು

ತಂತ್ರದಲ್ಲಿ ಶೈವರು, ಶಾಕ್ತರು, ವೈಷ್ಣವರು, ಗಾಣಪತ್ಯರು, ಸೌರರು ಮತ್ತು ಕಾಪಾಲಿಕರು ಎಂಬ ಆರು ಮತಗಳಿವೆ. ಶೈವರಲ್ಲಿಯೇ ಶೈವ, ಪಾಶುಪತ, ಕಾಳಮುಖ, ಮಾಹಾವ್ರತಿ, ಸನ್ಯಾಸಿ, ಕಾಳ ಎನ್ನುವ ವಿಂಗಡನೆಗಳಿವೆ. ಅಘೋರಿಗಳಂತಹ ಉಗ್ರಸಾಧಕರೂ ಬೆನ್ನಿಗೆ ಇದ್ದಾರೆ. ಅಮರೋಲಿ ಮತ್ತು ವಜ್ರೋಲಿ ಸಾಧಕರ ಕುರಿತು ಸ್ವತಃ ಸಾಧಕನಾದ ಅಲ್ಲಮನೂ ಪ್ರಸ್ತಾಪಿಸುತ್ತಾನೆ. ನಾಥಪಂಥದ ಉಲ್ಲೇಖವೂ ಅವನ ಮತ್ತೊಂದು ಪ್ರಸಂಗದಲ್ಲಿ ಬರುತ್ತದೆ. ‘ಭಾರತೀಯ ತಂತ್ರಶಾಸ್ತ್ರದ ಪರಿಚಯ’ದಲ್ಲಿ ಅರವತ್ತನಾಲ್ಕು ತಂತ್ರಗಳ ಪಟ್ಟಿಯನ್ನು ನೀಡಲಾಗಿದೆ. ಇದರೊಂದಿಗೆ ಜೈನರ ಯಾಪನೀಯ ತಂತ್ರ ಮಾರ್ಗವೂ, ಬೌದ್ಧರ ವಜ್ರಾಯಾನವೂ ಇವೆ.

ಸತ್ಯಕಾಮರು ತಂತ್ರದ ಮಹತ್ವವನ್ನು ಕುರಿತು ಹೇಳುತ್ತಾ ಒಂದೆಡೆ, ‘ಜೀವಿತವನ್ನು ವ್ಯಾಖ್ಯಾನಿಸುವಾಗ ಮರಣವನ್ನೂ ಅದರ ಅನಿವಾರ್ಯ ಅವಸ್ಥೆ ಎಂದು ಕೊನೆಗೂ ಅಂಗೀಕರಿಸಿಬಿಟ್ಟೆವು. ಮರಣವು ಜೀವಿತದ ಅನಿವಾರ್ಯ ಅವಸ್ಥೆಯಲ್ಲ. ಅದನ್ನು ದಾಟಲು ಸಾಧ್ಯವಿದೆ. ತಂತ್ರ ಮೃತ್ಯುಂಜಯತ್ವದ ವ್ಯವಸ್ಥೆ ಮಾಡುತ್ತಿದೆ’ ಎನ್ನುತ್ತಾರೆ! ಇದರ ಸಾಧಕ ಬಾಧಕಗಳ ಕುರಿತು ವೈಜ್ಞಾನಿಕ ದೃಷ್ಟಿಕೋನದ ಚರ್ಚೆಗೆ ನಾನೀಗ ಇಳಿಯಲು ಬಯಸುವುದಿಲ್ಲ.

‘ತಂತ್ರ’ ಎಂದ ಕೂಡಲೆ ಅದನ್ನು ಮಾಟ-ಮಂತ್ರ, ಮಾರಣ-ವಶೀಕರಣ ಎಂದು ಜನಸಾಮಾನ್ಯರು ತಪ್ಪು ತಿಳಿಯುವ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ, ‘ತಂತ್ರ ಇವಾವುದರಿಂದಲೂ ವಿಮುಖವಾಗಿಲ್ಲ, ಆದರೆ ಅವಿಷ್ಟೇ ಅದಾಗಿದ್ದರೆ ಅದಕ್ಕೆ ಇಷ್ಟು ದೊಡ್ಡ ಹೆಸರೇಕೆ ಬೇಕು?’ ಎನ್ನುತ್ತಾರೆ. ಮೀರಾ ಚಕ್ರವರ್ತಿಯವರೂ ತಮ್ಮ ‘ತಂತ್ರ-ಮನೋವೈಜ್ಞಾನಿಕ ಪರಿಕಲ್ಪನೆ’ಯಲ್ಲಿ ಮೊದಲ ಪರಿಚಯ ಭಾಗದಲ್ಲಿಯೇ, ‘ತಂತ್ರ ಎಂದರೆ ಪಶ್ಚಿಮದಲ್ಲಿ ಯಾವುದಕ್ಕೆ ಮಾಟ ಅಥವಾ ಮಾರಣ ಶಾಸ್ತ್ರ ಎನ್ನಲಾಗುತ್ತಿದೆಯೋ ಅಂತಹುದೇ ಒಂದು ಶಾಸ್ತ್ರ ಎನ್ನುವ ತಪ್ಪುಕಲ್ಪನೆ ಇಂದು ಬೆಳೆದುಬಂದಿದೆ. ವಾಸ್ತವವಾಗಿ ತಂತ್ರ ಎಂದರೆ ಮಾಟವಲ್ಲ. ಅದು ಜನಸಾಮಾನ್ಯರಿಗೆ ಸಾಧಿಸಲು ಸುಲಭ ಮಾಡಲಾದ ತತ್ವಜ್ಞಾನ. ಅದು ಮಾನವನನ್ನು ವಿಕೃತ ಅನೈತಿಕ ಪಶುವನ್ನಾಗಿ ಮಾಡುವುದಿಲ್ಲ. ಬದಲಾಗಿ ಅವನನ್ನು ದೇವತ್ವಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತದೆ. ಆದುದರಿಂದ ತಂತ್ರವನ್ನು ನಿಂದಿಸುವ ಬದಲು ಅದರ ಸರಿಯಾದ ಅರ್ಥವನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಡುತ್ತಾರೆ.

ಜನಸಾಮಾನ್ಯರ ಈ ತಪ್ಪುತಿಳುವಳಿಕೆಯನ್ನು ಶ್ರೀ ಅರವಿಂದರೂ ಒಂದೆಡೆ ಖಂಡಿಸುತ್ತಾ, ‘ಚೈತನ್ಯದ ಕ್ಷೇತ್ರದಲ್ಲಿ ಪ್ರಭುತ್ವ ಹೊಂದಿರುವ ಅದೊಂದು ತತ್ವಜ್ಞಾನ’ ಎನ್ನುವ ಉಲ್ಲೇಖವನ್ನು ಮಾಡುತ್ತಾರೆ. ಸರ್ ಜಾನ್ ವುಡ್ ರಾಫ್ ಅವರು, ‘ಒಂದು ದೃಷ್ಟಿಯಿಂದ, ಸಾಂಖ್ಯರ ದ್ವೈತ ಹಾಗೂ ಶಂಕರನ ವೇದಾಂತದ ಅದ್ವೈತ ಭಾಷ್ಯಗಳ ನಡುವೆ ತಂತ್ರಗಳ ಚಿಂತನೆ ಸ್ಥಾನ ಪಡೆದಿದೆ’ ಎಂದು ತಂತ್ರದ ಪ್ರಾಮುಖ್ಯತೆಯನ್ನು ಕುರಿತು ಒತ್ತಿ ಹೇಳುವುದನ್ನೂ ಅವರು ದಾಖಲಿಸುತ್ತಾರೆ.

ಓದಿದ ಪ್ರತಿಯೊಂದನ್ನೂ ದಾಖಲಿಸಲು ಲೇಖನದ ಅಳತೆಯ ಮಿತಿಯಿಂದ ಸಾಧ್ಯವಾಗುವುದಿಲ್ಲ. ಆದರೆ ಕೆಲವನ್ನಂತೂ ತುಸು ಸ್ಪರ್ಶಿಸಿಯಾದರೂ ಸಾಗದೆ ಹೊರತು, ಜೀವಕ್ಕೆ ನೆಮ್ಮದಿಯಿಲ್ಲ. ಡಾ.ಎಂ.ಎಂ.ಕಲಬುರ್ಗಿಯವರ ‘ಲಜ್ಜಾಗೌರಿ’ ಕರ್ನಾಟಕದ ಹಲವು ದೇವಾಲಯಗಳಲ್ಲಿ ಕಾಣಸಿಗುವ ಬೆತ್ತಲೆ ಸ್ತ್ರೀಯ ವಿಗ್ರಹಗಳನ್ನು ಕುರಿತದ್ದು. ದೇವಿಕೋಶದಲ್ಲಿ, ಶ್ರೀ ಗಣೇಶಶಾಸ್ತ್ರಿ ಲೇಲೆಯವರ ಮಹಾಕೂಟದಲ್ಲಿ, ಶಂಕರ ದಾಸಿಮಯ್ಯನ ಪುರಾಣ ಹಾಗೂ ಜನಪದ ಸಾಹಿತ್ಯಗಳಲ್ಲಿ ಲಜ್ಜಾಗೌರಿಯ ಕುರಿತಾದ ಸ್ವಾರಸ್ಯಕರ ಕಥೆಗಳು ದೊರಕುವುದನ್ನೂ, ಕರ್ನಾಟಕದಲ್ಲಿ ಬೆಳಕಿಗೆ ಬಂದ ಲಜ್ಜಾಗೌರಿ ವಿಗ್ರಹಗಳ ಪಟ್ಟಿಯನ್ನೂ ಒದಗಿಸುತ್ತಾರೆ. ಕೆಲವೆಡೆ ಈ ವಿಗ್ರಹಗಳನ್ನು ಶಾಕ್ತರು ಆರಾಧಿಸುತ್ತಿದ್ದ ಉಲ್ಲೇಖಗಳನ್ನು ಕುರಿತೂ ಹೇಳುತ್ತಾರೆ. ಲಜ್ಜಾಗೌರಿ ತುಂಬ ವಿಲಕ್ಷಣ ವಿಗ್ರಹವೆಂದೂ, ಇವಳು ಮಕ್ಕಳ ಫಲ ಕೊಡುವ ದೇವತೆಯೆಂಬುದು ಜನಸಾಮಾನ್ಯರಲ್ಲಿ ಇರುವ ನಂಬಿಕೆಯಂದೂ ಹೇಳುತ್ತಾರೆ.

ಸುರೇಶ್ ಸೋಮಾಪುರ ಅವರ ಗುಜರಾತಿ ಮೂಲದಿಂದ ಎಂ.ವಿ.ನಾಗರಾಜರಾವ್ ಅವರು ಕನ್ನಡಕ್ಕೆ ತಂದಿರುವ ‘ಅಘೋರಿಗಳ ನಡುವೆ’ ಕಾದಂಬರಿಯು ಅಘೋರಿಗಳ ವಿಲಕ್ಷಣವಾದ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ಅಘೋರಿಗಳು ಹೇಸಿಗೆಯನ್ನು ಕಾಣರು. ನೈರ್ಮಲ್ಯವೆಂದರೆ ‘ಶುಚಿತ್ವ’ ಎಂದು ತಿಳಿದವರಲ್ಲ. ಅವರ ಜೀವನ ಒಂದು ವಿಶಿಷ್ಟ ಮಾನಸಿಕ ಸ್ಥಿತಿ. ಹುಟ್ಟಿರುವುದರಿಂದ ತಿನ್ನಬೇಕು. ಎನ್ನುವುದಕ್ಕೆ ಏನಾದರೂ ಸರಿಯೆ, ಸ್ವಂತ ಮಲ ತಿನಿಸಾದರೆ, ಮೂತ್ರ ಜಲಪಾನ. ಅಷ್ಟೇ ಅಲ್ಲದೆ ಸತ್ತ ಪ್ರಾಣಿ ಯಾವುದಾದರೂ ಸರಿಯೆ ಅಘೋರಿಗಳಿಗೆ ತಿನ್ನಲು ಯೋಗ್ಯ. ಚಿತೆಯಲ್ಲಿ ಬೇಯುತ್ತಿರುವ ಮಾನವ ಹೆಣವಾದರೂ ಈ ಜನ ತಿಂದು ಬದುಕುತ್ತಾರೆ. ನಿರ್ಭಾವ ಮನಸ್ಸಿನ ಇವರು ಹೊರ ಪ್ರಪಂಚದ ಯಾವ ಘಟನೆಗಳಿಂದಲೂ ವಿಚಲಿತರಲ್ಲ. ಮಾಂಸ, ಮದಿರೆ, ಮೈಥುನ ಇವರ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ಪೀಠಿಕೆಯಲ್ಲಿಯೇ ವಿವರಿಸುತ್ತಾರೆ. ತ್ರಾಟಕವಿದ್ಯೆ, ಪೂತಲಿಕಾ ಪ್ರಯೋಗ, ಖೇಚರಿ ವಿದ್ಯೆ ಮೊದಲಾದ ತಂತ್ರವಿದ್ಯೆಗಳ ಪ್ರಯೋಗಗಳ ವಿವರಣೆಗಳಂತೂ ರೋಚಕವಾದದ್ದು.

ತ.ರಾ.ಸು ಅವರ ‘ಶ್ರೀಚಕ್ರೇಶ್ವರಿ’ಯು ತಂತ್ರದ ಶ್ರೀಚಕ್ರ ಪೂಜೆಯ ಕಥಾ ಹಂದರವನ್ನು ಒಳಗೊಂಡ ಒಂದು ದುರಂತ ಕಾದಂಬರಿ. ಈ ಕಾದಂಬರಿಯ ಪೂರ್ವಾರ್ಧವನ್ನು ಮಾತ್ರ ತ.ರಾ.ಸು ಅವರು ರಚಿಸಿದ್ದಾರೆ. ಅಂತಿಮಗೊಳಿಸುವ ಮುನ್ನ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಆದರೆ, ಮೊದಲ ಭಾಗವನ್ನು ತ.ರಾ.ಸು ಅವರು ಹೇಳುತ್ತಿದ್ದಂತೆ ಪ್ರತಿ ಮಾಡಿದ್ದ ನಾ.ಪ್ರಭಾಕರ್ ಅವರಿಗೆ ತ.ರಾ.ಸು ಅವರು ಯೋಚಿಸಿಕೊಂಡಿದ್ದ ಮುಂದಿನ ಕಥಾಭಾಗದ ವಿವರಗಳು ತಿಳಿದಿರುತ್ತದೆ. ಶ್ರೀಮತಿ ಅಂಬುಜ ತ.ರಾ.ಸು ಅವರ ಅನುಮತಿ ಪಡೆದು ಉಳಿದ ಭಾಗವನ್ನು ನಾ.ಪ್ರಭಾಕರ್ ಬರೆಯುತ್ತಾರೆ. ತಾಯಿ ಅಂಬುಜರು ಪ್ರಭಾಕರರಿಗೆ ಹೇಳುವ ಮಾತನ್ನು ಗಮನಿಸಬೇಕು, ‘ಇದನ್ನು ಮನೆಯಲ್ಲಿ ಬರೆಯಬೇಡ. ಈ ದುರಂತ ಕತೆಯನ್ನು ಯಾವುದಾದರೂ ದೇವಸ್ಥಾನದಲ್ಲಿ ಬರಿ’.

ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಬಂಗಾಳಿ ಮೂಲದ ‘ಕಪಾಲ ಕುಂಡಲ’ ಕಾದಂಬರಿಯನ್ನು ಸೊಂದಲಗೆರೆ ಲಕ್ಷ್ಮೀಪತಿಯವರು ಕನ್ನಡಕ್ಕೆ ತಂದಿದ್ದಾರೆ. ಈ ಕಾದಂಬರಿಯಲ್ಲಿ ಕಾಪಾಲಿಕನೊಬ್ಬನ ಚಿತ್ರಣವಿದೆಯಾದರೂ, ಅದೇ ಪೂರ್ಣ ಪ್ರಮಾಣದಲ್ಲಿ ಕೃತಿಯನ್ನು ಆವರಿಸಿಕೊಂಡಿಲ್ಲ.

ತಮ್ಮ ಹದಿಹರಯದ ವಯಸ್ಸಿನಲ್ಲಿಯೇ ಸ್ವತಃ ಶಾಕ್ತ್ಯಪಂಥದ ಹುಚ್ಚು ಅಂಟಿಸಿಕೊಂಡು, ಯಾರಿಗೂ ಹೇಳದೇ ಕೇಳದೆ ಮನೆಬಿಟ್ಟು, ಬಹಳ ಕಾಲ ಅಂತಹ ಸಾಧಕರ ಅಪಾಯಕರ ಸಂಪರ್ಕದಲ್ಲಿಬದುಕಿ, ಪುನಃ ಹಿಂದಿರುಗಿದ ಇಂದಿರಾತನಯರು, ‘ಚಕ್ರಾಯಣ’, ‘ಮಂತ್ರಶಕ್ತಿ’, ‘ಶಕ್ತಿಪೂಜೆ’, ‘ಸೇಡಿನಕಿಡಿ’, ‘ಪೂಜಾತಂತ್ರ’ ಮೊದಲಾದ ತಂತ್ರವನ್ನು ವಸ್ತುವನ್ನಾಗಿ ಉಳ್ಳ ಕಾದಂಬರಿಗಳನ್ನು ರಚಿಸಿದ್ದಾರೆ. ಈ ಕಾದಂಬರಿಗಳು ಅವರ ಕೆಲವು ಸ್ವಂತ ಅನುಭವಗಳನ್ನೂ ಕಥೆಯ ರೂಪದಲ್ಲಿ ಹೊಂದಿದ್ದು, ನಾನಾ ರೀತಿಯ ತಂತ್ರವಿದ್ಯೆಗಳ ಸಾಲುಸಾಲು ಚಿತ್ರಣಗಳಿಂದ ಕೂಡಿ, ನಂಬಲೇ ಅಸಾಧ್ಯವೆನಿಸುವಂತಿವೆ.

ಅಸ್ಸಾಂ ಕಾಮಾಖ್ಯ ದೇಗುಲದಲ್ಲಿ ಯೋನಿಪೂಜೆಯ ಸಂಪ್ರದಾಯವಿದೆ

ಅಸ್ಸಾಮಿನ ಕಾಮಾಖ್ಯಕ್ಕೆ ಪ್ರಯಾಣ

…ಇಷ್ಟೆಲ್ಲಾ ಓದಿಕೊಂಡ ಸುಮಾರು ಐದಾರು ತಿಂಗಳುಗಳ ಅವಧಿಯಲ್ಲಿ ತಂತ್ರದ ವಿಷಯಗಳ ಗ್ರಹಿಕೆಯೊಂದಿಗೆ, ಜೊತೆಜೊತೆಯಾಗಿ ಕಥಾವಸ್ತುವೊಂದು ರೂಪಗೊಳ್ಳತೊಡಗಿತು. ಒಂದು ಹಂತದಲ್ಲಿ ಭಾರತದ 51 ಶಕ್ತಿಪೀಠಗಳಲ್ಲಿ ಪ್ರಮುಖವಾದ ಶಕ್ತಿಪೀಠವಾದ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಬೇಕೆಂಬ ಬಯಕೆಯಾಯಿತು. ಹೋದರೆ, ಅಲ್ಲಿ ಖಂಡಿತವಾಗಿ ಕೆಲವು ತಂತ್ರ ಸಾಧಕರನ್ನೂ ಕಾಣುವ, ಸಾಧ್ಯವಾದರೆ ಅವರೊಂದಿಗೆ ಮಾತಿಗೂ ಇಳಿಯುವ ಅವಕಾಶವಾಗಬಹುದು. ಆ ಮೂಲಕ ನಾನು ಬರೆಯ ಹೊರಟಿರುವ ಕಾದಂಬರಿಗೆ ಒಂದು ಅಧಿಕೃತತೆ ಬರುತ್ತದೆ ಎಂದು ಬಲವಾಗಿ ಅನ್ನಿಸಿತು. ಪತಿಯನ್ನು ಕೇಳಿದೆ.

ಅವರು, ‘ತೀರ್ಥಯಾತ್ರೆಗೆ ಹೋಗುವಂತಿದ್ದರೆ ಕುಟುಂಬ ಸಮೇತರಾಗಿ ಹೋಗಬೇಕು.. ನೀನು ಅಧ್ಯಯನ ದೃಷ್ಟಿಯಲ್ಲಿ ಹೋಗುತ್ತಿರುವೆಯಾದರೆ ಒಬ್ಬಳೇ ಹೋಗು. ಎಲ್ಲ ವ್ಯವಸ್ಥೆಯನ್ನೂ ನಾನು ಮಾಡುತ್ತೇನೆ’ ಎಂದರು. ಜಿ.ಬಿ.ಹರೀಶರು ತಂತ್ರಶಾಸ್ತ್ರಕ್ಕೆ ಸಂಬಂಧಿಸಿ ಸಾಹಿತ್ಯಿಕವಾಗಿ ಸಾಕಷ್ಟು ಕಾರ್ಯ ಮಾಡಿರುವುದನ್ನು ಅರಿತಿದ್ದು, ಅವರಿಗೆ ಕರೆ ಮಾಡಿ, ನಾನು ಕಾಮಾಖ್ಯಕ್ಕೆ ಒಬ್ಬಳೇ ಹೊರಟಿರುವುದಾಗಿಯೂ, ಅವರಿಗೆ ತಿಳಿದ ಯಾರಾದರೂ ಅಲ್ಲಿ ಗೈಡ್ ಮಾಡಲು ಸೂಚಿಸಬಹುದೇ ಎಂದೂ ವಿಚಾರಿಸಿದೆ. ಅವರಿಂದ ನನ್ನ ಬೇಡಿಕೆಗೆ ಉತ್ತರ ದೊರೆಯದಿದ್ದರೂ, ‘ಅದು ರಕ್ತದ ಓಕುಳಿ ಹರಿಯುವ ಜಾಗ..! ಎಚ್ಚರಿಕೆ!’ ಎಂದರು. ಸ್ವಲ್ಪ ಎದೆಗುಂದಿದೆನಾದರೂ, ನಂತರ ಪುನಃ ಧೈರ್ಯ ಮಾಡಿ ಒಬ್ಬಳೇ ಹೊರಟುಬಿಟ್ಟೆ. ತಂಗಿ ದೀಪದಮಲ್ಲಿಯೂ, ಪತಿ ರಘುವೂ ಸೇರಿಕೊಂಡು ನಾನು ಪ್ರಯಾಣಿಸುವ ವಿಮಾನ, ರೈಲು, ತಂಗುವ ಹೋಟೆಲ್ಲು ಎಲ್ಲಾ ಸಮರ್ಪಕವಾಗಿ ಮಾಡಿಕೊಟ್ಟಿದ್ದರು.

ಕಾಮಾಖ್ಯ..! ದಾಕ್ಷಾಯಣಿಯು ತನ್ನ ಗಂಡ ಶಿವನಿಗೆ ಅಪಮಾನವಾಯಿತೆಂದು, ದಕ್ಷನ ಯಜ್ಞದಲ್ಲಿ ಬೀಳುವ ಕಥೆ ಎಲ್ಲರಿಗೂ ತಿಳಿದಿರುತ್ತದೆ. ಆ ನಂತರ ಪತ್ನಿಯನ್ನು ಕಳೆದುಕೊಂಡು ಕ್ರೋಧಗೊಳ್ಳುವ ಶಿವ ಅವಳ ಮೃತ ದೇಹವನ್ನು ಭುಜದಲ್ಲಿ ಹೊತ್ತು ತಾಂಡವ ನೃತ್ಯವನ್ನು ಮಾಡುತ್ತಾನೆ. ಶಿವನ ಕ್ರೋಧವನ್ನು ಇಳಿಸುವ ಸಲುವಾಗಿ, ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ನೂರಾ ಎಂಟು ತುಂಡುಗಳಾಗಿ ಕತ್ತರಿಸುತ್ತಾನೆ. ಅವು ಛಿದ್ರಛಿದ್ರವಾಗಿ ಬೇರೆ ಬೇರೆ ಸ್ಥಳಗಳಲ್ಲಿ ಬೀಳುತ್ತವೆ. ಆ ಎಲ್ಲಾ ಸ್ಥಳಗಳೂ ಒಂದೊಂದು ಶಕ್ತಿಪೀಠಗಳಾಗಿವೆ ಎನ್ನಲಾಗಿದೆ. ಪುರಾಣದಲ್ಲಿ ನೂರ ಎಂಟಾಗಿದ್ದರೂ, ವಾಸ್ತವದಲ್ಲಿ ಐವತ್ತೊಂದು ಶಕ್ತಿಪೀಠಗಳನ್ನು ಹೆಸರಿಸುತ್ತಾರೆ. ಹಾಗೆ, ಅವಳ ಯೋನಿಯ ಭಾಗವು ಕಾಮಾಖ್ಯದಲ್ಲಿ ಬಿದ್ದಿತೆಂದೂ, ಫಲವತ್ತತೆಯ ಸಂಕೇತವಾದ ಅದು ಬಿದ್ದ ಸ್ಥಳವೇ ಪ್ರಮುಖ ಶಕ್ತಿಪೀಠವೆಂದೂ ಕರೆಯುತ್ತಾರೆ. ಇಲ್ಲಿ ಸ್ತ್ರೀ ರೂಪದ ದೇವತಾ ಮೂರ್ತಿ ಇಲ್ಲ. ಬದಲಿಗೆ ಯೋನಿಯ ರೂಪದ ಕೆತ್ತನೆಗೇ ಆರಾಧನೆ. ಈ ದೇವಾಲಯವನ್ನು ವರ್ಷದಲ್ಲಿ ನಾಲ್ಕು ದಿನಗಳ ಕಾಲ ಮುಚ್ಚಿರುತ್ತಾರೆ. ಅದು ದೇವಿಯ ವಾರ್ಷಿಕ ಋತುಚಕ್ರದ ಸಮಯ ಎನ್ನಲಾಗುತ್ತದೆ. ದೇವಾಲಯದ ಬಾಗಿಲು ತೆರೆಯುವ ನಾಲ್ಕನೆಯ ದಿನ ಪರಮ ಪವಿತ್ರವಾದದ್ದು ಎಂದು ಪ್ರತೀತಿ. ಯೋನಿಪೀಠದ ಗರ್ಭಗುಡಿ ಪ್ರವೇಶ ನಿಜಕ್ಕೂ ನನಗೆ ತಾಯಿಯ ಹೊಟ್ಟೆ ಪ್ರವೇಶಿಸಿ, ಹೊರಬಂದಂತಹ ಅನುಭವವನ್ನೇ ನೀಡಿತು!
ದೇವಾಲಯದ ಆವರಣದಲ್ಲಿ ತಂತ್ರ ಸಾಧಕರೊಬ್ಬರು ಕಂಡರು. ನಾನೇ ಮುಂದಾಗಿ ಹೋಗಿ, ನನಗೆ ತಿಳಿದಿದ್ದ ಹರಕುಮುರಕು ಹಿಂದಿಗೆ ಅಲ್ಲಷ್ಟು ಇಲ್ಲಷ್ಟು ಇಂಗ್ಲೀಷ್ ಬೆರೆಸಿ ನನ್ನನ್ನು ಪರಿಚಯಿಸಿಕೊಂಡು ಮಾತಿಗೆ ಇಳಿದೆ. ಆ ತಂತ್ರ ಸಾಧಕರು ಮಾತಿಗೆ ಮೊದಲೇ ದಿಢೀರನೆ ಯಾವುದೋ ರಕ್ತಲೇಪಿತ ಮೂಳೆಯಂತಹ ವಸ್ತುವನ್ನು ತೆಗೆದು ನನ್ನ ಹಣೆಗೆ ಬಳಿದು ಆಶೀರ್ವದಿಸಿದರು. ಮೈನಡುಗಿತು. ಕೆಲವು ಪ್ರಶ್ನೆಗಳನ್ನು ಕೇಳಿದೆ.. ನಾನು ಓದಿ ತಿಳಿದಿದ್ದಂತಹ ಕಾಮಾಖ್ಯದ ಪ್ರಾಥಮಿಕ ವಿಚಾರಗಳನ್ನೇ ಒಂದೆರಡು ಮಾತಿನಲ್ಲಿ ಹೇಳಿದರು. ಮುಂದುವರಿದ ನನ್ನ ಪ್ರಶ್ನೆಗಳಿಗೆ, ‘ಈಗ ಉತ್ತರಿಸುವ ಸ್ಥಿತಿಯಲ್ಲಿ ಇಲ್ಲ’ ಎಂದು ಹೇಳಿ ಹೊರಟೇಬಿಟ್ಟರು.

ಕಲ್ಕತ್ತಾದ ಒಬ್ಬ ಕಾಳಿ ಉಪಾಸಕರು ನನಗೆ ಬೋಲ್ಪುರದಲ್ಲಿ ಸಿಕ್ಕರು. ಸುಮಾರು ಹದಿನೆಂಟು ವರ್ಷಗಳಿಂದ ತಾವು ಆ ಮಾರ್ಗವನ್ನು ಹಿಡಿದಿರುವುದಾಗಿ ಹೇಳಿದರು. ಬ್ರಹ್ಮಪುತ್ರ ನದಿಗೊಂದು ನಮೋ ಎಂದು, ದ್ವೀಪದ ದೇವಾಲಯ ಉಮಾನಂದನ ದರ್ಶನಕ್ಕೆ ಹೋದೆ. ಅಲ್ಲಿ, ಒಬ್ಬರು ಸಾತ್ವಿಕ ಸ್ವಭಾವದ ಮಹಾರಾಷ್ಟ್ರದ ಸಾಧುಗಳು ಸಿಕ್ಕರು. ಶೈವ ಪಂಥದವರೆಂದೂ, ಅದೈತ ಮಾರ್ಗ ಅನುಸರಿಸುವುದಾಗಿಯೂ ಹೇಳಿದರು. ಗೀತೆಯನ್ನು ಓದಿ ಅಂದರು. ಕೆಲಕಾಲ ಇಬ್ಬರೂ ಗೀತೆಯ ಕುರಿತು ಚರ್ಚಿಸಿದೆವು. ಕಲ್ಕತ್ತೆಯ ರಾಮಕೃಷ್ಣರು ಪೂಜಿಸಿದರು ಎನ್ನಲಾದ ಕಾಳಿ ದೇವಾಲಯದ ಆವರಣದಲ್ಲಿ, ತನ್ನ ಕಣ್ಣುಗಳ ಕಾಂತಿಯಿಂದಲೂ, ತನ್ನ ವೇಷಭೂಷಣಗಳಿಂದರೂ ಬಹಳ ಆಕರ್ಷಕವಾಗಿ ಕಾಣುತ್ತಿದ್ದ ಒಬ್ಬ ತಂತ್ರ ಸಾಧಕನನ್ನು ಕಂಡೆ. ಮಾತನಾಡಿಸಿದೆ. ಆತನೊಂದಿಗೆ ಒಂದು ಭಾವಚಿತ್ರ ತೆಗೆದುಕೊಳ್ಳಲು ಹವಣಿಸಿದೆ. ಆತ ನಕ್ಕು, ‘ಅದಾಗದು’ಎಂದು ಹೇಳಿ ತಿರುಗಿ ನೋಡುತ್ತ ನೋಡುತ್ತಲೇ ಕಣ್ಮರೆಯಾದ!

ಅಲ್ಲಿಂದ ಮರಳಿ ಬೆಂಗಳೂರಿಗೆ ಬಂದ ಮೇಲೆ, ಓದಿದ, ನೋಡಿದ, ಮಾತನಾಡಿದ.. ಎಲ್ಲದರ ಅನುಭವದೊಂದಿಗೆ ಬರೆಯಲು ಕುಳಿತೆ. ಕಥಾ ಹಂದರ ಮೂಡಿತು.. ಆಡಿತು.. ಮುಳುಗಿತು! ಮತ್ತೆ ಎದ್ದಿತು.. ನಲಿದಾಡಿತು.. ಮಲಗಿತು! ಕಟ್ಟಿದೆ.. ಕೆಡವಿದೆ; ಪುನಃ ಕಟ್ಟಿದೆ.. ಕೆಡವಿದೆ.. ಕಡೆಗೊಮ್ಮೆ ಎಲ್ಲವನ್ನೂ ಕಟ್ಟಿಟ್ಟು ನಿಟ್ಟುಸಿರು ಬಿಟ್ಟೆ! ಹತಾಶೆಯಲ್ಲಿ ಹಲವು ದಿನಗಳನ್ನು ಕಳೆದೆ..
ನಂತರ.. ಬೇರೊಂದು ವಸ್ತು ಮೊಳೆಯಿತು.. ಚಿಗುರಿತು.. ನಲಿಯಿತು!

ನಾನು ಕಾಮಾಖ್ಯಕ್ಕೆ ಹೋಗಿ ಬಂದ ಸುಮಾರು ಹತ್ತಾರು ತಿಂಗಳುಗಳ ನಂತರ ಪತ್ರಿಕೆಯೊಂದರಲ್ಲಿ ಸುದ್ದಿಯೊಂದನ್ನು ಓದಿದೆ. ಗುವಹಾಟಿಯ ಕಾಮಾಖ್ಯದಲ್ಲಿ ಸ್ತ್ರೀಯೊಬ್ಬಳ ಮುಂಡವೊಂದು ಕಡೆಯೂ, ಬಹುದೂರದಲ್ಲಿ ಅವಳ ರುಂಡವೊಂದು ಕಡೆಯೂ ಸಿಕ್ಕಿದೆಯೆಂದೂ, ಕಾಮಾಖ್ಯ ದೇವಿಯ ವಾರ್ಷಿಕ ನಾಲ್ಕು ದಿನಗಳ ಮುಟ್ಟಿನ ಅಂಬುವಾಚಿ ಅವಧಿ ಅದಾಗಿದ್ದು, ಯಾರೋ ತಂತ್ರ ಸಾಧಕರೇ ಸಿದ್ಧಿಗಾಗಿ ಅಂತಹ ಕೃತ್ಯವನ್ನು ಎಸಗಿರಬಹುದೆಂದೂ ಊಹಿಸಲಾಗಿತ್ತು! ಊರಿಂದೂರಿಗೆ ಪ್ರಯಾಣಿಸಿ, ಭಾಷೆ ಬರದ ನಾಡಿನಲ್ಲಿ ಒಬ್ಬಳೇ ಸಂಚರಿಸಿ, ತಂತ್ರ ಸಾಧಕರೊಂದಿಗೆ ಸಂವಾದಕ್ಕೆ ಇಳಿದಿದ್ದ ನನ್ನ ಆಗಿನ ಅಪಾಯಕರ ಯತ್ನವನ್ನು ನೆನದು ನನ್ನ ಮೈ ನಡುಗಿತು!

ಕಾಮಾಖ್ಯದಲ್ಲಿ ತಂತ್ರ ಸಾಧಕರೊಂದಿಗೆ ಲೇಖಕಿ

ಆಶಾ ರಘು ಪರಿಚಯ
ರಂಗಭೂಮಿ ಹಿನ್ನಲೆಯುಳ್ಳ ಬರಹಗಾರ್ತಿ ಆಶಾ ರಘು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ ನಂತರ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆವರ್ತ, ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು, ಚೂಡಾಮಣಿ ಹಾಗೂ ಬಂಗಾರದ ಪಂಜರ ಇವರ ಪ್ರಮುಖ ಕೃತಿಗಳು. ಇವರ ಆವರ್ತ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಈಚೆಗಷ್ಟೇ ಇವರ ಗತ ಕಾದಂಬರಿ ಪ್ರಕಟವಾಗಿದೆ.

Published On - 9:06 pm, Sun, 10 January 21