ಕನ್ನಡದ ಮೊದಲ ಪ್ರವಾಸಿ ಜಾಲತಾಣ ಲೋಕಸಂಚಾರಕ್ಕೆ ಸಿದ್ಧ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2020 | 4:13 PM

ಬೇರೆ ಪ್ರಾದೇಶಿಕ ಭಾಷೆಗಳೆಲ್ಲಾ ಇಂಟರ್​ನೆಟ್​ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಹೊತ್ತಿನಲ್ಲಿ ಕನ್ನಡಕ್ಕೂ ಪ್ರಾಮುಖ್ಯತೆ ಸಿಗಬೇಕು. ಈ ಮಣ್ಣಿನ ಮುಂದಿನ ತಲೆಮಾರು ಕನ್ನಡದಲ್ಲೇ ವ್ಯವಹರಿಸುವಂತೆ ಆಗಬೇಕು ಎಂಬ ಆಶಯ ಈ ಯತ್ನದ ಹಿಂದಿದೆ.

ಕನ್ನಡದ ಮೊದಲ ಪ್ರವಾಸಿ ಜಾಲತಾಣ ಲೋಕಸಂಚಾರಕ್ಕೆ ಸಿದ್ಧ!
ನೂತನ ಪ್ರವಾಸಿ ಜಾಲತಾಣ
Follow us on

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಜೀವನಾನುಭವವನ್ನು ಕಲಿಸುವ ಈ ಎರಡು ಮಾರ್ಗಗಳು ನಮ್ಮ ಬದುಕನ್ನು ಮತ್ತಷ್ಟು ವರ್ಣಮಯವಾಗಿಸಬಲ್ಲವು. ಕನ್ನಡದ ಯುವ ಉತ್ಸಾಹಿ ತಂಡವೊಂದು ಸುತ್ತಾಟ ಹಾಗೂ ಓದನ್ನು ಒಂದೇ ತಾಣದಲ್ಲಿಟ್ಟು ಜನರಿಗೆ ಹೊಸ ಅನುಭವವನ್ನು ನೀಡಲು ಸಿದ್ಧವಾಗಿದೆ.

ಕನ್ನಡ ಮತ್ತು ಪ್ರವಾಸ ಇವೆರಡನ್ನೂ ಹೊತ್ತ ಕನ್ನಡದ ಮೊದಲ ಪ್ರವಾಸಿ ಜಾಲತಾಣ (Travel Blog) ಕನ್ನಡ.ಟ್ರಾವೆಲ್ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಹುಬ್ಬಳ್ಳಿ ಮೂಲದವರಾದ ಸುನಿಲ್​ ಪಾಟಿಲ್ ನೇತೃತ್ವದಲ್ಲಿ ಆರಂಭವಾಗುತ್ತಿರುವ ಈ ಜಾಲತಾಣದ ಉದ್ಘಾಟನಾ ಸಮಾರಂಭದಲ್ಲಿ ಡೆಕ್ಕನ್​ ಏವಿಯೇಷನ್​ ಮತ್ತು ಏರ್ ಡೆಕ್ಕನ್​ ಸ್ಥಾಪಕ ಕ್ಯಾಪ್ಟನ್​ ಗೋಪಿನಾಥ್, ಕತೆಗಾರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಹಿರಿಯ ಪತ್ರಕರ್ತ ಜೋಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕನ್ನಡದ ಬೈಕ್ ರೈಡ್ ಮೋಹಿಗಳು, ಟೆಕ್ಕಿಂಗ್ ಪ್ರೇಮಿಗಳು, ಪ್ರವಾಸ ಪ್ರಿಯರನ್ನು ಒಗ್ಗೂಡಿಸುವುದರೊಂದಿಗೆ ಅವರ ಅನುಭವಗಳನ್ನು ಕನ್ನಡದಲ್ಲಿ ಬರೆದು ಹಂಚಿಕೊಳ್ಳಲು ಸೂಕ್ತ ವೇದಿಕೆ ನೀಡಬೇಕು. ಆ ಬರಹಗಳ ಮೂಲಕ ಜವಾಬ್ದಾರಿಯುತ ಪ್ರವಾಸಿಗರನ್ನು ಹುಟ್ಟು ಹಾಕಬೇಕು ಎಂಬ ಉದ್ದೇಶ ಕನ್ನಡ.ಟ್ರಾವೆಲ್ ತಂಡದ್ದಾಗಿದೆ.

ಬೇರೆ ಪ್ರಾದೇಶಿಕ ಭಾಷೆಗಳೆಲ್ಲಾ ಇಂಟರ್​ನೆಟ್​ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಹೊತ್ತಿನಲ್ಲಿ ಕನ್ನಡಕ್ಕೂ ಪ್ರಾಮುಖ್ಯತೆ ಸಿಗಬೇಕು. ಈ ಮಣ್ಣಿನ ಮುಂದಿನ ತಲೆಮಾರು ಕನ್ನಡದಲ್ಲೇ ವ್ಯವಹರಿಸುವಂತೆ ಆಗಬೇಕು. ಆದ್ದರಿಂದ ಯುವ ವರ್ಗವನ್ನು ಪರಿಣಾಮಕಾರಿಯಾಗಿ ಪ್ರಭಾವಿಸುವುದಕ್ಕೆ ಪ್ರವಾಸ ಮತ್ತು ಕನ್ನಡವನ್ನು ಒಟ್ಟಿಗೆ ತರಲಾಗಿದೆ ಎನ್ನುವುದು ತಂಡದ ಅಭಿಪ್ರಾಯ.

ಈ ಪ್ರವಾಸಿ ಜಾಲತಾಣದ ಮೂಲಕ ಕನ್ನಡದಲ್ಲಿಯೇ ವೀಡಿಯೋ ವಿವರಣೆ ಸಿಗಲಿದ್ದು ಹೊರದೇಶಗಳಲ್ಲಿ ನೆಲೆಸಿದ ಕನ್ನಡಿಗರು ಅಲ್ಲಿಯೇ ಕುಳಿತು ತಮ್ಮ ತವರು ನೆಲದ ಸೊಬಗನ್ನು ಆಸ್ವಾದಿಸಬಹುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾ ವಾಸಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಅರ್ಚನಾ ಶ್ರೀಧರ್, ತೈವಾನ್ ಕನ್ನಡ ಬಳಗ ಸ್ಥಾಪಕ ಸದಸ್ಯ ಡಾ. ಶ್ರೀಶ ಎಸ್ ರಾವ್, ಕೆನಡಾ ಆಲ್ಬರ್ಟಾ ವಿವಿಯ ಇಂಗ್ಲಿಷ್, ಸಿನಿಮಾ ಅಧ್ಯಯನ ವಿಭಾಗದ ಶಶಿಕುಮಾರ್, ಕೀನ್ಯಾ ಕನ್ನಡ ಸಾಂಸ್ಕೃತಿಕ ಸಂಘದ ಅದ್ಯಕ್ಷ ರವಿಕಿರಣ್ ಬೆಳವಾಡಿ ಇರಲಿದ್ದಾರೆ.

ಆಮಂತ್ರಣ ಪತ್ರಿಕೆ

 

Published On - 4:11 pm, Sun, 29 November 20