ಕಡಲೇಕಾಯಿಯ ತಾಯಿಬೇರು ಯಾವ ದೇಶದಲ್ಲಿದೆ ಗೊತ್ತಾ? ಪರಿಷೆಯ ನೆಪದಲ್ಲಿ ಮೂಲ ಕೆದಕಿದಾಗ..

|

Updated on: Dec 04, 2020 | 1:09 PM

ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆಯೇ ಬೆಂಗಳೂರಿಗರಿಗೆ ಬೆಚ್ಚನೆ ನೆನಪಾಗುವುದು ಬಸವನಗುಡಿಯ ಕಡಲೇಕಾಯಿ ಪರಿಷೆ. ಬೆಂಗಳೂರಿಗೆ ಬೆಂಗಳೂರೇ ಕಂಬಳಿ ಹೊದ್ದು ಮಲಗಬೇಕೆನ್ನಿಸುವಷ್ಟು ಚಳಿಯ ನಡುವೆ ಶುರುವಾಗುವ ಕಡಲೇಕಾಯಿ ಪರಿಷೆಗೆ ಜನಸಾಗರವೇ ಹರಿದು ಬರುತ್ತದೆ. ಆದರೆ, ಈ ವರ್ಷ ಕೊರೊನಾ ದೆಸೆಯಿಂದ ಕಡಲೇಕಾಯಿ ಪರಿಷೆಗೆ ಅಡ್ಡಗಾಲು ಬಿದ್ದಿದೆ. ಈ ವರ್ಷವೇನಿದ್ದರೂ ಮನೆಯಲ್ಲೇ ಕೂತು ಟೈಂಪಾಸ್​ಗೆ ಕಡಲೇಕಾಯಿ ತಿನ್ನುತ್ತಾ ಪರಿಷೆಯ ಸಂಭ್ರಮವನ್ನು ಮೆಲುಕು ಹಾಕಬಹುದಷ್ಟೇ. ಹಾಗೆ ಮೆಲುಕು ಹಾಕುತ್ತಾ, ಹಾಕುತ್ತಾ ಕಡಲೇಕಾಯಿಯ ಮೂಲದ ಬಗ್ಗೆ ಹಾಗೂ ಅದರ ವಿಶಿಷ್ಟತೆಗಳ ಬಗ್ಗೆ ಒಂಚೂರು ತಿಳಿದುಕೊಳ್ಳೋಣ […]

ಕಡಲೇಕಾಯಿಯ ತಾಯಿಬೇರು ಯಾವ ದೇಶದಲ್ಲಿದೆ ಗೊತ್ತಾ? ಪರಿಷೆಯ ನೆಪದಲ್ಲಿ ಮೂಲ ಕೆದಕಿದಾಗ..
ಕಡಲೇಕಾಯಿ (ಸಾಂದರ್ಭಿಕ ಚಿತ್ರ)
Follow us on

ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆಯೇ ಬೆಂಗಳೂರಿಗರಿಗೆ ಬೆಚ್ಚನೆ ನೆನಪಾಗುವುದು ಬಸವನಗುಡಿಯ ಕಡಲೇಕಾಯಿ ಪರಿಷೆ. ಬೆಂಗಳೂರಿಗೆ ಬೆಂಗಳೂರೇ ಕಂಬಳಿ ಹೊದ್ದು ಮಲಗಬೇಕೆನ್ನಿಸುವಷ್ಟು ಚಳಿಯ ನಡುವೆ ಶುರುವಾಗುವ ಕಡಲೇಕಾಯಿ ಪರಿಷೆಗೆ ಜನಸಾಗರವೇ ಹರಿದು ಬರುತ್ತದೆ.

ಸಂಗ್ರಹ ಚಿತ್ರ

ಆದರೆ, ಈ ವರ್ಷ ಕೊರೊನಾ ದೆಸೆಯಿಂದ ಕಡಲೇಕಾಯಿ ಪರಿಷೆಗೆ ಅಡ್ಡಗಾಲು ಬಿದ್ದಿದೆ. ಈ ವರ್ಷವೇನಿದ್ದರೂ ಮನೆಯಲ್ಲೇ ಕೂತು ಟೈಂಪಾಸ್​ಗೆ ಕಡಲೇಕಾಯಿ ತಿನ್ನುತ್ತಾ ಪರಿಷೆಯ ಸಂಭ್ರಮವನ್ನು ಮೆಲುಕು ಹಾಕಬಹುದಷ್ಟೇ. ಹಾಗೆ ಮೆಲುಕು ಹಾಕುತ್ತಾ, ಹಾಕುತ್ತಾ ಕಡಲೇಕಾಯಿಯ ಮೂಲದ ಬಗ್ಗೆ ಹಾಗೂ ಅದರ ವಿಶಿಷ್ಟತೆಗಳ ಬಗ್ಗೆ ಒಂಚೂರು ತಿಳಿದುಕೊಳ್ಳೋಣ ಬನ್ನಿ..

ಕಳ್ಳೇಕಾಯ್ ಎಂಬ ಅಪ್ಪಟ ಕನ್ನಡ ಸೊಗಡಿನ ಕೂಗು
ಕಳ್ಳೇಕಾಯ್, ಕಳ್ಳೇಕಾಯ್, ಕಳ್ಳೇಕಾಯ್ ಎಂಬ ಅಪ್ಪಟ ಕನ್ನಡ ಸೊಗಡಿನ ಕೂಗಿಗೆ ಕಿವಿಯಾಗದವರು ಯಾರಿದ್ದೀರಿ? ಊಹೂಂ.. ಕನ್ನಡಿಗರಾಗಿ ಇದನ್ನು ಕೇಳದೇ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಈ ಕೂಗು ಕರ್ನಾಟಕದಲ್ಲಿ ಹಬ್ಬಿಕೊಂಡಿದೆ! ಕಡೇಪಕ್ಷ ನಿಮ್ಮ ಮನೆಯ ಟಿವಿಯ ಒಳಗಿನಿಂದಾದರೂ ಈ ಕೂಗು ಹೊರಬಿದ್ದಿರಲೇಬೇಕು.

ಕಡಲೇಕಾಯಿ ನಮ್ಮ ನೆಲದ ಬೆಳೆ ಅಲ್ಲ ಎಂದರೆ ನಂಬುತ್ತೀರಾ?
ಕಳ್ಳೇಕಾಯಿಯ ಮೂಲ ರೂಪ ಕಡಲೇಕಾಯಿ ಅನ್ನೋದು ಗೊತ್ತಿರುವ ವಿಷಯವೇ. ಹಾಗಾದ್ರೆ, ಕಡಲೇಕಾಯಿಯ ಮೂಲ ಯಾವುದು ಅಂತ ಗೊತ್ತಾ? ಗೊತ್ತಿಲ್ದೇ ಏನು, ನಮ್ಮ ಕರ್ನಾಟಕದ್ದೇ ಹಳ್ಳಿಯ ಹೊಲದಲ್ಲೆಲ್ಲೋ ಹುಟ್ಟಿ, ಬೆಳೆದು, ಹೆಸರು ಮಾಡಿದೆ ಅಂತೇನಾದ್ರೂ ನೀವಂದುಕೊಂಡಿದ್ರೆ ಅದು ತಪ್ಪು.. ಈಗೇನೋ ಮೊಳಕೆ ಬರಿಸಿ ಹಾಕಿದ್ರೆ ಮನೆ ಹಿತ್ತಲಲ್ಲೂ ಹುಟ್ಟುವಷ್ಟು ಒಗ್ಗಿಕೊಂಡಿರುವ ಕಡಲೇಕಾಯಿ ಅಸಲಿಗೆ ನಮ್ಮ ನೆಲದ ಬೆಳೆ ಅಲ್ಲವೇ ಅಲ್ಲ.

ಸಂಗ್ರಹ ಚಿತ್ರ

ತಾಯಿಬೇರು ಇರೋದು ಬ್ರೆಜಿಲ್​ನಲ್ಲಿ ಎಂದರೆ ಹುಬ್ಬೇರಿಸುತ್ತೀರಿ ಅಲ್ವಾ?
ಕಡಲೇಕಾಯಿಯ ತಾಯಿಬೇರು ಇರೋದು ಬ್ರೆಜಿಲ್​ನಲ್ಲಿ. ಹೌದು, ದಕ್ಷಿಣ ಅಮೇರಿಕಾ ಖಂಡದಲ್ಲಿರುವ ಬ್ರೆಜಿಲ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು ಇದರ ಮೂಲ. ಸಸ್ಯಶಾಸ್ತ್ರದಲ್ಲಿ ವೈಜ್ಞಾನಿಕವಾಗಿ ಅರಾಚಿಸ್ ಹೈಪೋಜಿಯಾ (Arachis hypogaea) ಎಂದು ವರ್ಗೀಕರಿಸಲಾಗಿರುವ ಕಡಲೆಕಾಯಿ ಬಹುಪಯೋಗಿ ಬೆಳೆಯೂ ಹೌದು.

ಹದಿಮೂರನೇ ಶತಮಾನದ ಆಸುಪಾಸಿನಲ್ಲಿ ಭಾರತಕ್ಕೆ ಬಂದ ಶೇಂಗಾ
ಬ್ರೆಜಿಲ್​ನ ಕಡಲೇಕಾಯಿ ಭಾರತಕ್ಕೆ ಸುಮಾರು 16ನೇ ಶತಮಾನದ ಆಸುಪಾಸಿನಲ್ಲಿ ಬಂತು ಎಂಬ ಮಾತಿದೆ. ಕ್ರೈಸ್ತ ಮಿಶನರಿಗಳ ಮೂಲಕ ಶೇಂಗಾ ಭಾರತಕ್ಕೆ ಕಾಲಿಟ್ಟಿತು ಎಂದೂ ಅಂದಾಜಿಸಲಾಗಿದೆ. ಇದನ್ನು 1910 ರ ಆಸುಪಾಸಿನಲ್ಲಿ ಗುಜರಾತ್ ರಾಜ್ಯಕ್ಕೆ ಪರಿಚಯಿಸಿದವರು ತಮಿಳುನಾಡು ಮೂಲದ ಪದ್ಮಾ ಭಾಯಿ ಪಟೇಲ್ ಎಂದು ಕೆಲವೆಡೆ ಮಾಹಿತಿ ಇದೆ.

ಕಡಲೇಕಾಯಿಗೆ ಶೇಂಗಾ ಹೆಸರು ಬಂದಿದ್ದು ಹೇಗೆ?
ಆದರೆ, ಇದು ಭಾರತದಲ್ಲಿ ಪ್ರಸಿದ್ಧಿಯಾಗಿದ್ದು ಹೇಗೆ? ಕಡಲೇಕಾಯಿಯ ಬೇರು ಭಾರತದೆಲ್ಲೆಡೆ ಹಬ್ಬಿದ್ದು ಯಾವಾಗ? ಇಲ್ಲಿನ ಜನರು ಅದನ್ನು ತಮ್ಮ ಹೊಲಗಳಲ್ಲಿ ಬೆಳೆಯಲು ಆರಂಭಿಸಿದ್ದು ಯಾವಾಗ? ಕಡಲೇಕಾಯಿಗೆ ಶೇಂಗಾ ಹೆಸರು ಬಂದಿದ್ದು ಹೇಗೆ? ಎಂಬಿತ್ಯಾದಿ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ.

ಚಳಿಗಾಲದಲ್ಲಿ ಫಸಲು ನೀಡುವ ಶೇಂಗಾ
ಏಕವಾರ್ಷಿಕ ಬೆಳೆಯಾಗಿರುವ ಕಡಲೇಕಾಯಿ ಚಳಿಗಾಲದ ಅವಧಿಯಲ್ಲಿ ಫಸಲು ನೀಡುತ್ತದೆ. ಶೇಂಗಾ ಬೀಜವನ್ನು ಆಹಾರ ಧಾನ್ಯಕ್ಕೆಂದು, ಶೇಂಗಾ ಎಣ್ಣೆ ತೆಗೆಯಲೆಂದು ಬಳಸುವುದರ ಜೊತೆಜೊತೆಗೆ ಅದರಲ್ಲಿರುವ ಔಷಧೀಯ ಗುಣಗಳ ಕಾರಣಕ್ಕೆ ಹಲವು ಬಗೆಗಳಲ್ಲಿ ಉಪಯೋಗಿಸಲಾಗುತ್ತದೆ.

ಬಡವರ ಬಾದಾಮಿ ಎಂದೇ ಪ್ರಸಿದ್ಧ
ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ಕೈಗೆಟಕುವ ಕಡಲೇಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧವಾಗಿದೆ. ಅಂದರೆ ಇದು ಬಾದಾಮಿಗೆ ಪೈಪೋಟಿ ನೀಡುವಷ್ಟು ಗುಣಭರಿತ ಎಂದು ಅರ್ಥೆಸಿಕೊಳ್ಳಬಹುದು. ಇದರಲ್ಲಿ ಪ್ರೋಟೀನ್ ಹಾಗೂ ಇತರ ಖನಿಜಾಂಶಗಳು ಹೇರಳವಾಗಿರುವ ಕಾರಣ ಇದು ದೇಹದ ಆರೋಗ್ಯ ಕಾಪಾಡಲು ಹೇಳಿ ಮಾಡಿಸಿದ ಧಾನ್ಯ.

ಹಲವು ಸಮಸ್ಯೆಗಳಿಗೆ ರಾಮಬಾಣ
ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್ ಸಮಸ್ಯೆ, ಸಕ್ಕರೆ ಕಾಯಿಲೆ, ಪೈಲ್ಸ್ ಸಮಸ್ಯೆ, ಪಿತ್ತಕೋಶದ ಸಮಸ್ಯೆ ತಡೆಗಟ್ಟುವ ಶೇಂಗಾ ತ್ವಚೆಯನ್ನು ವೃದ್ಧಿಸುವುದರಲ್ಲಿ ಮತ್ತು ದೇಹದ ತೂಕ ಹೆಚ್ಚದಂತೆ ತಡೆಯುವುದರಲ್ಲಿಯೂ ಸಿದ್ಧಹಸ್ತ. ಇದರೊಂದಿಗೆ ಗರ್ಭಿಣಿ ಮಹಿಳೆಯರಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯೂ ಹೌದು.

ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ
ದೈಹಿಕವಾಗಿ ಶಕ್ತಿ ನೀಡುವ ಬಡವರ ಬಾದಾಮಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲೂ ಸಹಕರಿಸುತ್ತದೆಯಂತೆ. ಅಲ್ಝೈಮರ್, ಮರೆವಿನ ಸಮಸ್ಯೆ, ಖಿನ್ನತೆಯಿಂದ ಹೊರಬರಲು ಕಡಲೇಕಾಯಿಯ ನಿಯಮಿತ ಸೇವನೆ ಬಹಳ ಸಹಕಾರಿ ಎನ್ನಲಾಗುತ್ತದೆ.

ಉಪ್ಪಿನಲ್ಲಿ ಹುರಿದು ತಿಂದರೆ ರುಚಿ ಇರಬಹುದು. ಆದರೆ…
ಇಷ್ಟೆಲ್ಲಾ ಉಪಯುಕ್ತತೆಯನ್ನು ಹೊಂದಿರುವ ಕಡಲೆಕಾಯಿಯನ್ನು ಜನರು ಬಾಯಿರುಚಿಗಾಗಿ ಉಪ್ಪಿನಲ್ಲಿ ಹುರಿದು ಸೇವಿಸುವುದೇ ಹೆಚ್ಚು. ಆದರೆ ನೆನಪಿರಲಿ.. ಉಪ್ಪಿನೊಂದಿಗೆ ಹುರಿದ ಕಡಲೇಕಾಯಿಯ ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ.

ಆದ್ದರಿಂದ ಬಾಯಿರುಚಿಗಿಂತಲೂ ಮಿಗಿಲಾಗಿ ನಿಮ್ಮ ಆರೋಗ್ಯಕ್ಕೆ ಸಹಕಾರಿಯಾಗುವುದನ್ನು ಗಮನದಲ್ಲಿರಿಸಿಕೊಂಡು ಕಡಲೇಕಾಯಿ ಸೇವಿಸಿ. ಹೇಗೂ ಚಳಿಗಾಲ ಶುರುವಾಗಿದೆ, ಕಡಲೇಕಾಯಿ ಮಾರುಕಟ್ಟೆಗೆ ಬರ್ತಾ ಇದೆ. ಇನ್ನೇಕೆ ತಡ? ಕಳ್ಳೇಕಾಯ್ ನಿಮ್ಮ ಬಾಯಿ ಸೇರಲಿ.

ಸಂಗ್ರಹ ಚಿತ್ರ

ಐತಿಹಾಸಿಕ ಕಡಲೇಕಾಯಿ ಪರಿಷೆಗೆ ಬ್ರೇಕ್: ಈ ಬಾರಿ ಸಾಂಪ್ರದಾಯಿಕ ಪೂಜೆ ಅಷ್ಟೇ..

Published On - 12:35 pm, Fri, 4 December 20