ಉಡುಪಿ: ಶಾಲೆಯೊಂದು 50 ವರ್ಷ ಪೂರೈಸಿದಾಗ ಏನೇನು ಕೆಲಸ ಮಾಡಬಹುದು? ಹಳೆ ವಿದ್ಯಾರ್ಥಿಗಳನ್ನು ಕರೆಸುವುದು, ಹಿರಿಯ ಗುರುಗಳನ್ನು ಸನ್ಮಾನಿಸುವುದು, ಭೋಜನ ಕೂಟ ಏರ್ಪಡಿಸುವುದು, ಮನರಂಜನಾ ಕಾರ್ಯಕ್ರಮ ನಡೆಸುವುದು.. ಹೀಗೆ ನಾಲ್ಕಾರು ಕೆಲಸಗಳ ಪಟ್ಟಿ ಬೆಳೆಯುತ್ತದೆ.
ಆದರೆ, ಸುವರ್ಣ ಸಂಭ್ರಮದಲ್ಲಿರುವ ಶಾಲೆಯೊಂದು ಕೃಷಿ ಕೆಲಸಕ್ಕೆ ಇಳಿಯಬಹುದೆ? ಮನಸ್ಸಿದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂದು ಸಾಧಿಸಿರುವ ಉಡುಪಿಯ ನಿಟ್ಟೂರು ಪ್ರೌಢಶಾಲೆ, ಕೊರೊನಾ ಮತ್ತು ಲಾಕ್ ಡೌನ್ ಗಲಾಟೆ ನಡುವೆ 50 ಎಕರೆಗೂ ಹೆಚ್ಚು ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ಕೆಲಸವನ್ನು ಮಾಡಿ ತೋರಿಸಿದೆ.
ಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಅವರ ಇಚ್ಛಾಶಕ್ತಿಯಿಂದ ಆರಂಭವಾದ ಈ ಕೆಲಸಕ್ಕೆ ಹಳೆ ವಿದ್ಯಾರ್ಥಿಗಳು, ಊರ ಜನರು ಸಹಕಾರ ನೀಡಿದ್ದಾರೆ.
ಶಾಲೆಯು ತನ್ನ 50ನೇ ವರ್ಷದ ಸಂಭ್ರಮಕ್ಕೆ, 50 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಯೋಜನೆ ಹಾಕಿಕೊಂಡಿತ್ತು. ಈ ಯೋಜನೆಗೆ ಜೊತೆಯಾದ ಊರಿನವರು ಮತ್ತೆ 20 ಎಕರೆ ಭೂಮಿ ನೀಡಿದ ಪರಿಣಾಮ, ಒಟ್ಟು 70 ಎಕರೆಯಷ್ಟು ಗದ್ದೆಯಲ್ಲಿ ಬಂಗಾರ ತೆನೆಗಳು ತೂಗುತ್ತಿವೆ!
ಅಸಾಧ್ಯವನ್ನು ಸಾಧ್ಯವಾಗಿಸಿದರು
ಕಳೆದ 32 ವರ್ಷಗಳಿಂದ ಅಧ್ಯಾಪಕ, 5 ವರ್ಷಗಳಿಂದ ಶಾಲೆಯ ಮುಖ್ಯೋಪಾಧ್ಯಾಯ ಆಗಿರುವ ಮುರಳಿ ಕಡೆಕಾರ್, ಈ ಯೋಜನೆಯ ರೂವಾರಿ. ಅವರು, ಶಾಲೆಯ ಸುವರ್ಣ ಸಂಭ್ರಮಕ್ಕೆ ಎಲ್ಲರೂ ಮಾಡುವ ಕೆಲಸಗಳ ಹೊರತಾಗಿ, ಹೊಸದೇನಾದರೂ ಮಾಡಬೇಕು ಎಂದು ಹಂಬಲಿಸಿದಾಗ ಹೊಳೆದ ಯೋಚನೆ-ಯೋಜನೆಯೇ ಈ ಸತ್ಕಾರ್ಯ.
25-30 ವರ್ಷಗಳ ಹಿಂದೆ ಹಸಿರು ತುಂಬಿದ್ದ ಗದ್ದೆಗಳು ಇಂದು ಪಾಳು ಬಿದ್ದಿವೆ. ಅಲ್ಲೇಕೆ ಮತ್ತೆ ಭತ್ತದ ತೆನೆಗಳು ರಾರಾಜಿಸಬಾರದು? ಎಂಬ ಯೋಚನೆ ಬಂದಾಗ ತಡ ಮಾಡದೆ ಹಳೆ ವಿದ್ಯಾರ್ಥಿಗಳ, ಶಿಕ್ಷಕರ ಸಭೆ ಕರೆದ ಅವರು ತಮ್ಮ ಕನಸನ್ನು ಹಂಚಿಕೊಂಡರು.
ಕಳೆದ ಫೆಬ್ರವರಿ ಅವಧಿಯಲ್ಲಿ ನಡೆಸಿದ ಮೊದಲ ಸಭೆಗೆ ಸುಮಾರು 25 ಮಂದಿ ಸಾಕ್ಷಿಯಾಗಿದ್ದರು. ಅಲ್ಲಿ ಹಂಚಿಕೊಂಡ ಕನಸೇನೋ ಚೆನ್ನಾಗಿತ್ತು. ಆದರೆ ಅದನ್ನು ನನಸಾಗಿಸುವಲ್ಲಿ ಎದುರಾದ ಸಮಸ್ಯೆಗಳು?
ಹಲವು ಸಮಸ್ಯೆಗಳನ್ನು ಮೀರಿದ ಹುಮ್ಮಸ್ಸು
50 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಸುಲಭದ ಕೆಲಸವಲ್ಲ. ಹಲವೆಡೆ ತೋಡು ಇಲ್ಲ. ನೀರು ಹರಿಯಲು ಎಡೆ ಇಲ್ಲ. ಗದ್ದೆಗೆ ಹುಣಿ ಇಲ್ಲ. ಎತ್ತರೆತ್ತರ ಹುಲ್ಲು, ಗಿಡಗಂಟಿಗಳು ಬೆಳೆದು ಗದ್ದೆ ಇದೆ ಎಂದೇ ಕಾಣಿಸುವುದಿಲ್ಲ. ಪ್ಲಾಸ್ಟಿಕ್, ಗಾಜು, ಕಸಗಳು ಬಿದ್ದಿವೆ. ಎಲ್ಲಕ್ಕೂ ಮುಖ್ಯವಾಗಿ ಗದ್ದೆಯ ಯಜಮಾನರು ಗದ್ದೆಗಳನ್ನು ಬಿಟ್ಟುಕೊಡಬೇಕಲ್ಲಾ?!
ಕೃಷಿಯ ಬಗ್ಗೆ ಆಳ ಜ್ಞಾನ ಇಲ್ಲದ ಮುರಳಿಯವರಿಗೆ ಇಷ್ಟೆಲ್ಲಾ ಸಮಸ್ಯೆಗಳು ಅನಿರೀಕ್ಷಿತವಾಗಿ ಎದುರಾದವು. ಇದರಿಂದ ಕಂಗಾಲಾಗದ ಅವರು, ಗದ್ದೆಗಳನ್ನು ಪರಿಶೀಲಿಸೋಣ, ಜಾಗ ಸಂದರ್ಶಿಸಿ, ಸಮಸ್ಯೆ ಗುರುತಿಸಿ, ಪರಿಹಾರ ಕಂಡುಕೊಳ್ಳೋಣ ಎಂದು ಕೃಷಿ ಮಾಡಿಯೇ ತೀರುವ ಹುಮ್ಮಸ್ಸು ತೋರಿದರು.
ಕೃಷಿ ಯೋಜನೆಗೆ ಐದು ವಲಯಗಳು-ಐವರು ಮುಂದಾಳುಗಳು
ಈ ಕೃಷಿ ಯೋಜನೆ ಸುಲಭವಾಗಿಸಲು ಐದು ವಲಯಗಳನ್ನು ರಚಿಸಲಾಯಿತು. ಕಕ್ಕುಂಜೆ, ಪುತ್ತೂರು, ನಿಟ್ಟೂರು, ಕರಂಬಳ್ಳಿ ಮತ್ತು ಪೆರಂಪಳ್ಳಿ.. ಹೀಗೆ ಆಯಾ ವಲಯಗಳಿಗೆ ಐವರು ಮುಂದಾಳತ್ವ ವಹಿಸಿದರು. ಭಾಸ್ಕರ ಡಿ. ಸುವರ್ಣ, ದಿನೇಶ್ ಪೂಜಾರಿ, ರಂಜನ್ ಶೆಟ್ಟಿ, ಹರೀಶ್ ಆಚಾರ್ಯ ಮತ್ತು ಸುಧಾಕರ್ ಕೋಟ್ಯಾನ್ ಮುರಳಿಯವರ ಕನಸಿಗೆ ಕಾಯಕಲ್ಪ ಒದಗಿಸಲು ಜೊತೆಯಾದರು.
ಇಷ್ಟು ಮಂದಿ ಜೊತೆಯಾಗಿ ತಂಡ ರಚನೆಯಾದದ್ದು ಕೃಷಿ ಕೆಲಸಕ್ಕೆ ಹೊಸ ಶಕ್ತಿ ತುಂಬಿತು. ಸಮಸ್ಯೆಗಳು ದೊಡ್ಡದಾಗುತ್ತಾ ಹೋದಷ್ಟು ಎದುರಿಸಿ ಗೆಲ್ಲುವ ಚೈತನ್ಯ ತುಂಬಿತು. ಒಂದೊಮ್ಮೆಗೆ ಈ ಕೆಲಸ ಆಗುವುದೇ ಇಲ್ಲ ಅನಿಸಿತಾದರೂ ನಿಟ್ಟೂರು ಶಾಲೆಯ ತಂಡ ಸೋಲೊಪ್ಪಲಿಲ್ಲ.
ಭತ್ತದ ಕೃಷಿ ಆರಂಭಿಸಿದ್ದು ಹೀಗೆ
ಆಯಾ ಗದ್ದೆಯ ಯಜಮಾನರನ್ನು ಭೇಟಿಯಾಗಿ ಮಾತನಾಡಿದಾಗ ಹಲವರು ಕೃಷಿಕಾರ್ಯಕ್ಕೆ ತೊಡಗುವ ಮನಮಾಡಲಿಲ್ಲ. ಬೇಸಾಯಕ್ಕೆ ಬೇಕಾದ ಹಣ ಎಲ್ಲಿಂದ ತರುವುದು ತಿಳಿಯಲಿಲ್ಲ. ಹಣವನ್ನೂ ನಾವೇ ಹಾಕೋಣ ಎಂದಾಗ ಹಲವರು ಕೆಲಸಕ್ಕೆ ಒಪ್ಪಲಿಲ್ಲ. ಆದರೆ ಮುರಳಿಯವರು ಜಗ್ಗಲಿಲ್ಲ.
ಇದು ಒಂದು ವರ್ಷದ ಯೋಜನೆ, ಅದನ್ನು ಸಾಧ್ಯವಾಗಿಸಿ ತೋರಿಸುವುದು ನಮ್ಮ ಕೆಲಸ ಎಂದರು. ಈ ಯೋಜನೆ ನಡೆದು ಹಣವೇನಾದರೂ ಉಳಿದರೆ, ಶಾಲೆಗದರಲ್ಲಿ ಬಿಡಿಗಾಸೂ ಬೇಡವೆಂದರು.
ಎಲ್ಲಾ ಸಂಪನ್ಮೂಲ ಸೇರಿಸಿ ಕೆಲಸ ಆರಂಭಿಸಲು ಕಾದರೆ, ಕೃಷಿಯ ಕಾಲ ಕೈತಪ್ಪಿ ಹೋಗುತ್ತದೆ. ಸಾಧ್ಯ ಇರುವವರು ದೇಣಿಗೆ ಕೊಡಿ. ಭತ್ತ ಮಾರಿ ಬಂದ ಮೊತ್ತವನ್ನು ಆದ್ಯತೆಯ ಮೇಲೆ ತೀರಿಸುತ್ತೇವೆ ಎಂದರು. ಬೆಳೆ ನಷ್ಟವಾದರೆ ಎಂಬ ಪ್ರಶ್ನೆ ಬಂದಾಗ, ಹಾಗಾಗಲು ನಮ್ಮ ಶಾಲೆ ಬಿಡುವುದಿಲ್ಲ ಎಂದರು.
ಹಿರಿಯ ವಿದ್ಯಾರ್ಥಿಗಳು, ವಲಯದ ಮುಂದಾಳುಗಳು ಅಗತ್ಯ ಸಂಪನ್ಮೂಲ ಒದಗಿಸಿದರು. ಆದರೆ ಹಣ ಕೂಡುವುದು ಸುಲಭವಾಗಿರಲಿಲ್ಲ. ಆರಂಭದಲ್ಲಿ ಸಿಕ್ಕ ದೇಣಿಗೆಯ ಮೊತ್ತ ಕೃಷಿಯ ದೊಡ್ಡ ಖರ್ಚು ವೆಚ್ಚ ಭರಿಸಲು ಸಾಕಾಗಲಿಲ್ಲ. ಆಗ ವಲಯಗಳ ಮುಂದಾಳುಗಳೇ ಹಣ ಹಾಕಿದರು. ಕಷ್ಟ ಅನಿಸಿದ್ದ ಕೆಲಸ ಉತ್ಸಾಹದ ಚಿಲುಮೆಯಾಯಿತು.ಗದ್ದೆಯ ಮಾಲಿಕರ ಮನವೊಲಿಸಿ, ಹಣ ಹೊಂದಿಸಿ, ಯುವಕರು, ಮಕ್ಕಳು ಎನ್ನದೆ ಕೃಷಿ ಕೆಲಸ ಗೊತ್ತಿಲ್ಲದವರೂ ಬೇಸಾಯದಲ್ಲಿ ತೊಡಗಿಕೊಂಡರು.
ಕೂಡಿತು ಜನಶಕ್ತಿ, ಬೆಳೆಯಿತು ಪೈರು
ಮಾಡಿಕೊಂಡ 5 ವಲಯಗಳಿಗೆ ಅಂದಾಜು 10-10 ಎಕರೆಗಳಷ್ಟು ಭೂಮಿ ಸಿಕ್ಕಿತು. ಅಗೆದ ಮಣ್ಣು, ಕಡಿದ ಗಿಡಗಂಟಿ ಮತ್ತು ಮರಗಳಿಗೆ ಮುಕ್ತಿ ಒದಗಿಸಲು ಊರಜನರು ಸಹಕರಿಸಿದರು.
ಶಾಲೆ ಆರಂಭಿಸಿದ ಕೆಲಸಕ್ಕೆ, ಊರ ಜನರು, ಇತರ ಸಂಘ ಸಂಸ್ಥೆಗಳೂ ಸೇರಿಕೊಂಡವು. ಇದರಿಂದ ಕೃಷಿ ಕೆಲಸ ಮುಂದುವರಿಸಲು ಸುಲಭವಾಯಿತು.
ಕೆಲಸ ಕಂಡು ಸಹಾಯಹಸ್ತ ಚಾಚಿದರು
ಕೃಷಿ ಕಾರ್ಯ ಮುಂದುವರಿಯುತ್ತಿದ್ದಂತೆ ಹಲವರು ಸಹಾಯಹಸ್ತ ಚಾಚಲು ಮುಂದಾದರು. 3 ಸಾವಿರ, 5 ಸಾವಿರ ಮೊತ್ತದಿಂದ ಹಿಡಿದು 25 ಸಾವಿರ, 75 ಸಾವಿರದವರೆಗೆ ಧನಸಹಾಯ ಒದಗಿತು.
ರೋಟರಿ ಮಣಿಪಾಲ, ಕಲ್ಯಾಣಪುರ ಕ್ಯಾಥೊಲಿಕ್ ಸಭಾ ಹೀಗೆ ಹಲವರು ಸಹಾಯಧನ ನೀಡಿದರು. ವಿವಿಧ ಸಂಸ್ಥೆಗಳ ಸದಸ್ಯರು ಬಂದು ಬೇಸಾಯದಲ್ಲಿ ತೊಡಗಿಸಿಕೊಂಡರು.
ಕೃಷಿಗೆ ಕೇವಲ ಧನಸಹಾಯ ಅಲ್ಲದೆ, ಮತ್ತಷ್ಟು ಹಡಿಲು ಭೂಮಿಯೂ ಸಿಕ್ಕಿತು. ಅಂದಾಜು ಇಪ್ಪತ್ತು ಎಕರೆ ಹೆಚ್ಚು ಭೂಮಿಯಲ್ಲಿ ಭತ್ತದ ಕೃಷಿ ಆಯಿತು.
ಮಳೆ ಹೆಚ್ಚಾದರೂ ಬೆಳೆ ಬಂತು
ಒಂದೊಮ್ಮೆ ಮಳೆ ಕಡಿಮೆ ಆದಾಗ ತೋಡಿಗೆ ಕಟ್ಟೆ ಕಟ್ಟಿ ನೀರು ಹಾಯಿಸಿದೆವು. ಮತ್ತೊಮ್ಮೆ ಮಳೆ ಹೆಚ್ಚಾಗಿ ಭಯವಾಯಿತು. ಆದರೆ, ಅದರಿಂದ ಬೆಳೆ ಸ್ವಲ್ಪ ತಡವಾಯಿತು ಹೊರತು ನಾಶವಾಗಲಿಲ್ಲ ಎಂದು ತೃಪ್ತಿಪಡುತ್ತಾರೆ ಶಾಲಾತಂಡದವರು.
ಇದು ಸಂಪೂರ್ಣ ಸಾವಯುವ ಕೃಷಿ
ಕೃಷಿ ಕೆಲಸ ಆರಂಭಿಸಿದ ಶಾಲಾತಂಡದವರು ನಾಟಿ ಯಂತ್ರ, ಕೊಯ್ಲಿನ ಯಂತ್ರದ ಸಹಾಯ ಪಡೆದಿದ್ದಾರೆ ಹೊರತು ಯಾವುದೇ ರಾಸಾಯನಿಕ ಗೊಬ್ಬರ ಬಳಸಿಲ್ಲ. ಗದ್ದೆಯು ವರ್ಷಗಳಿಂದ ಪಾಳುಬಿದ್ದಿತ್ತು. ಹಾಗಾಗಿ ಭೂಮಿ ಫಲವತ್ತಾಗಿತ್ತು. ಕಳೆಯೂ ಬೆಳೆಗೆ ಗೊಬ್ಬರವಾಯಿತು.
‘ನಿಟ್ಟೂರು ಸ್ವರ್ಣ’ ಎಂಬ ಶ್ರಮದ ಫಲ
ಬಹಳಷ್ಟು ನಿರ್ಧಾರಗಳು ತನ್ನಷ್ಟಕ್ಕೇ ಆಗುತ್ತಾ ಸಾಗಿದ ಕೃಷಿ ಕೆಲಸವು ಸದ್ಯ ಪೂರ್ಣಗೊಂಡಿದೆ. ಅಂದರೆ, ಭತ್ತ ಅಕ್ಕಿಯಾಗಿ 5, 10, 25 ಕೆಜಿಯ ಚೀಲಗಳಾಗಿ ಅನ್ನವಾಗಲು ಸಿದ್ಧವಾಗಿದೆ. ಅಕ್ಕಿ ಚೀಲದ ಮೇಲೆ ‘ನಿಟ್ಟೂರು ಸ್ವರ್ಣ’ ಸಾವಯುವ ಕುಚ್ಚಲಕ್ಕಿ ಎಂಬ ಹೆಸರು ಕಂಗೊಳಿಸುತ್ತಿದೆ.
ಸುಮಾರು 70 ಎಕರೆ ಜಮೀನಿನಲ್ಲಿ ಅಂದಾಜು 45 ಟನ್ಗಳಷ್ಟು ಭತ್ತ ಬೆಳೆದಿದ್ದು ಉಣ್ಣುವವರಿಗೆ ಸಂತೃಪ್ತಿಯ ತುತ್ತಾಗಲಿದೆ.
ಯೋಜನೆಗೆ ಗದ್ದೆ ಒದಗಿಸಿದ ಮಾಲಿಕರಿಗೆ, ಕೆಲಸಕ್ಕೆ ಶ್ರಮಿಸಿದ ಎಲ್ಲರಿಗೆ ‘ನಿಟ್ಟೂರು ಸ್ವರ್ಣ’ ಸಿಗಲಿದೆ. ಹೊಸ ಅಕ್ಕಿ ಮಾರಿ ಬಂದ ಹಣದಲ್ಲಿ ಮುಂಗಡ ಮೊತ್ತ ನೀಡಿದವರ ಹಣವನ್ನು ಶಾಲೆಯ ಸಮಿತಿ ಹಿಂತಿರುಗಿಸಲಿದೆ.
ಭತ್ತ ಬೆಳೆದ ಶಾಲೆ ಈಗ ಎಲ್ಲರಿಗೂ ಮಾದರಿ
ಯೋಜನೆ ಯಶಸ್ವಿಯಾಯಿತು.. ಈ ನಿಟ್ಟುಸಿರಿನೊಂದಿಗೆ ಮುಂದೇನು ಎಂಬ ಪ್ರಶ್ನೆ ಬಂದಿದೆ. ನಿಟ್ಟೂರು ಪ್ರೌಢಶಾಲೆಯದ್ದು ಮಾದರಿ ಕೆಲಸ. ಅದನ್ನು ನೋಡಿ ಊರಿನ, ರಾಜ್ಯದ ಜನರು ಕಣ್ತೆರೆದುಕೊಳ್ಳಬೇಕು. ಹಡಿಲು ಭೂಮಿಯಲ್ಲಿ ಹಸಿರು ಬೆಳೆಯಬೇಕು.
ಉಡುಪಿ ಶಾಸಕ ರಘುಪತಿ ಭಟ್ಟರೂ ಈ ಕೆಲಸದಲ್ಲಿ ತೊಡಗಿಕೊಂಡು ಜನರನ್ನು ಹುರಿದುಂಬಿಸಿದ್ದಾರೆ. ಕೃಷಿ ಕೆಲಸ ಕೈಗೂಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈಗ ಭತ್ತ ಬೆಳೆದಿದೆ. ಹಡಿಲು ಭೂಮಿ ಹಸಿರಾಗಿದೆ. ಮುಂದಿನ ವರ್ಷದಿಂದ ಈ ಯೋಜನೆಯನ್ನು ಇಡೀ ಕ್ಷೇತ್ರಕ್ಕೆ ವಿಸ್ತರಿಸಲು ಬಯಸುತ್ತೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ಅನ್ನದ ತತ್ವಾರ, ಪೌಷ್ಠಿಕಾಂಶದ ಕೊರತೆ, ಆಹಾರ ಭದ್ರತೆ, ಆಹಾರ ಸುರಕ್ಷತೆ ಮುಂತಾದವುಗಳ ನಡುವೆ ಇಂಥಾ ಕೆಲಸಗಳು ನಡೆಯುತ್ತಿರಬೇಕು. ಇದೆಲ್ಲಾ ಆಗಿಹೋಗುವ ಕೆಲಸವಲ್ಲ ಎನ್ನಲು ನಿಟ್ಟೂರು ಶಾಲೆ ಬಿಡುವುದಿಲ್ಲ. ಇಂದು ಉಡುಪಿ, ನಾಳೆ ಇತರ ಜಿಲ್ಲೆಗಳ ಮಂದಿಯೂ ಕೃಷಿಯಲ್ಲಿ ತೊಡಗಿಕೊಳ್ಳಲಿ. ಮಳೆ ಬಂದು, ಬೆಳೆ ಬೆಳೆದು, ಇಳೆ ತಣಿಯಲೆಂದು ನಾವೆಲ್ಲರೂ ಹಾರೈಸೋಣ.
‘ಕಲರ್ಫುಲ್’ ಭತ್ತ! 5 ಎಕರೆ ಗದ್ದೆಯಲ್ಲಿ ಲಕ್ಷಾಂತರ ಹಣ ಗಳಿಸಿದ ರೈತನ ಸಾಧನೆ ಇದು
Published On - 2:42 pm, Fri, 4 December 20