ಭಾರತ ಮೂಲದ ಯುವ ವಿಜ್ಞಾನಿ ಗೀತಾಂಜಲಿ ರಾವ್​ಗೆ ‘ಕಿಡ್ ಆಫ್​ ದಿ ಇಯರ್’ ಗೌರವ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 04, 2020 | 12:49 PM

ಕಲುಷಿತ ಕುಡಿಯುವ ನೀರು ಮತ್ತು ಸೈಬರ್ ಬೆದರಿಕೆಯ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಬೆರಗುಗೊಳಿಸುವ ಉತ್ತರ ಹುಡುಕಿದ 15 ವರ್ಷದ ಗೀತಾಂಜಲಿ ರಾವ್​ ಅವರಿಗೆ ಮೊದಲ ವರ್ಷದ ಈ ಗೌರವ ಸಂದಿದೆ.

ಭಾರತ ಮೂಲದ ಯುವ ವಿಜ್ಞಾನಿ ಗೀತಾಂಜಲಿ ರಾವ್​ಗೆ ‘ಕಿಡ್ ಆಫ್​ ದಿ ಇಯರ್’ ಗೌರವ
ಗೀತಾಂಜಲಿ ರಾವ್
Follow us on

ನ್ಯೂಯಾರ್ಕ್: ಭಾರತ ಮೂಲದ ಯುವ ವಿಜ್ಞಾನಿ ಮತ್ತು ಸಂಶೋಧಕಿ ಗೀತಾಂಜಲಿ ರಾವ್​ ಅವರನ್ನು ಕಿಡ್​ ಆಫ್ ದಿ ಇಯರ್ ಎಂದು ಟೈಮ್ಸ್​ ನಿಯತಕಾಲಿಕೆ ಗುರುತಿಸಿದೆ. ಕಲುಷಿತ ಕುಡಿಯುವ ನೀರು ಮತ್ತು ಸೈಬರ್ ಬೆದರಿಕೆಯ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಬೆರಗುಗೊಳಿಸುವ ಉತ್ತರ ಹುಡುಕಿದ 15 ವರ್ಷದ ಗೀತಾಂಜಲಿ ರಾವ್​ ಅವರಿಗೆ ಮೊದಲ ವರ್ಷದ ಈ ಗೌರವ ಸಂದಿದೆ.

ಈ ಪುರಸ್ಕಾರಕ್ಕೆ 5,000ಕ್ಕೂ ಹೆಚ್ಚು ಮಂದಿ ನಾಮ ನಿರ್ದೇಶನಗೊಂಡಿದ್ದರು. ಪ್ರಸಿದ್ಧ ನಟಿ ಎಂಜಲಿನಾ ಜೋಲಿ ಇವರನ್ನು ಸಂದರ್ಶನ ಮಾಡಿದ್ದರು. ಅಮೇರಿಕ ಕೊಲೊರಾಡೋದಲ್ಲಿನ ತಮ್ಮ ಮನೆಯಿಂದ ವರ್ಚುವಲ್ ವಿಧಾನದಲ್ಲಿ ಗೀತಾಂಜಲಿ ರಾವ್​ ಅವರನ್ನು ಸಂದರ್ಶನ ಮಾಡಲಾಯಿತು.

ಕಲುಷಿತ ನೀರಿನಿಂದ ಹಿಡಿದು, ಸೈಬರ್ ಬೆದರಿಕೆಯವರೆಗಿನ ಸಮಸ್ಯೆಗಳನ್ನು ನಿಭಾಯಿಸಲು ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯ ಬಗೆಗಿನ ತಮ್ಮ ಆವಿಷ್ಕಾರಗಳ ಬಗ್ಗೆ ಗೀತಾಂಜಲಿ ಮಾತನಾಡಿದರು. ಸಮಸ್ಯೆಗಳನ್ನು ಪರಿಹರಿಸಲೆಂದು ವಿಶ್ವದ ವಿವಿಧ ದೇಶಗಳಲ್ಲಿ ಆವಿಷ್ಕಾರದ ಮನಃಸ್ಥಿತಿಯಿರುವ ಯುವಪಡೆಯನ್ನು ಒಗ್ಗೂಡಿಸುವ ತಮ್ಮ ಧ್ಯೇಯದ ಬಗ್ಗೆಯೂ ಅವರು ಸಂದರ್ಶನದಲ್ಲಿ ಮಾತನಾಡಿದರು.

ನಾನು ಸಾಧಿಸಿದ್ದೇನೆ ಎಂದಾದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಜಾಗತಿಕ ಮಟ್ಟದಲ್ಲಿ ನಾವು ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಾಂಕ್ರಾಮಿಕದ ಮಧ್ಯೆ ಕುಳಿತಿದ್ದೇವೆ. ಮಾನವ ಹಕ್ಕುಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಮಸ್ಯೆಗಳನ್ನು ಹುಟ್ಟುಹಾಕುವ ಬದಲು, ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಕೊಡಬೇಕಿದೆ. ಅದು ಹವಾಮಾನ ಬದಲಾವಣೆ ಅಥವಾ ಸೈಬರ್ ಬೆದರಿಕೆ ಕುರಿತಾಗಿಯೂ ಆಗಿರಬಹುದು ಎಂದು ಹೇಳಿದರು.

ಸಮಸ್ಯೆಯು ಚಿಕ್ಕದೇ ಆಗಿರಬಹುದು. ನಿರ್ದಿಷ್ಟ ವಿಷಯದ ಕುರಿತು ಗಮನ ಕೇಂದ್ರೀಕರಿಸಿ, ಚಿಂತನೆ ನಡೆಸಿ, ಬುದ್ಧಿವಂತಿಕೆಯಿಂದ ವಿಶ್ಲೇಷಿಸಿ, ನಂತರ ನೀವು ಕಂಡುಕೊಂಡಿದ್ದನ್ನು ಜಗತ್ತಿಗೆ ತಿಳಿಸಿ. ನಾವು ವಾಸಿಸುವ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯಿದ್ದರೆ, ನಾವು ಸಕಾರಾತ್ಮಕ ಗುಣಗಳನ್ನು ಹೊಂದಿರುತ್ತೇವೆ ಎಂದು ಹೇಳಿದರು.

ಸಾಮಾಜಿಕ ಬದಲಾವಣೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂದು ನಾನು 2ನೇ ತರಗತಿ ಇದ್ದಾಗಿನಿಂದಲೇ ಯೋಚಿಸಲು ಆರಂಭಿಸಿದೆ. ಡೆನ್ವರ್ ವಾಟರ್ಕ್ವಾಲಿಟಿ ರಿಸರ್ಚ್ ಲ್ಯಾಬ್​ನಲ್ಲಿ ಕಾರ್ಬನ್ ನ್ಯಾನೊಟ್ಯೂಬ್ ಸೆನ್ಸರ್ ತಂತ್ರಜ್ಞಾನವನ್ನು ಸಂಶೋಧಿಸಲು ಬಯಸುತ್ತೇನೆ ಎಂದು ಪೋಷರಿಗೆ ಹೇಳುವಾಗ ನನಗೆ 10 ವರ್ಷವಾಗಿತ್ತು ಎಂದು ಗೀತಾಂಜಲಿ ರಾವ್ ನೆನಪಿಸಿಕೊಂಡರು.

 

Published On - 12:48 pm, Fri, 4 December 20