ಯುಎಇಯಲ್ಲಿ ತೆರೆದ ಮಸೀದಿ: ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗಿ
ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಶುಕ್ರವಾರದ ಪ್ರಾರ್ಥನೆಗಾಗಿ ಮಸೀದಿಗಳನ್ನು ತೆರೆಯಬೇಕು ಎಂದು ಸರ್ಕಾರ ಮಸೀದಿಗಳಿಗೆ ಆದೇಶಿಸಿತ್ತು.
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ಸುಮಾರು 8 ತಿಂಗಳುಗಳಿಂದ ಮುಚ್ಚಿದ್ದ ಮಸೀದಿಗಳು ಶುಕ್ರವಾರದ ಪ್ರಾರ್ಥನೆಗಾಗಿ ತೆರೆದಿವೆ. ಇಂದು ನಡೆದ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಶುಕ್ರವಾರದ ಪ್ರಾರ್ಥನೆಗಾಗಿ ಮಸೀದಿಗಳನ್ನು ತೆರೆಯಬೇಕು ಎಂದು ಸರ್ಕಾರ ಮಸೀದಿಗಳಿಗೆ ಆದೇಶಿಸಿತ್ತು. ಪ್ರಾರ್ಥನೆಗೆ ಶೇ.30ರಷ್ಚು ಮಂದಿಗೆ ಅವಕಾಶ ನೀಡಿದ್ದು, ಪ್ರಾರ್ಥನೆ ವೇಳೆ ಅಂತರ ಕಾಯ್ದುಕೊಳ್ಳಲಾಗಿತ್ತು.
ವೈರಸ್ ಹರಡದಂತೆ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ದುಬೈಯಲ್ಲಿನ ಇಸ್ಲಾಮಿಕ್ ವ್ಯವಹಾರ ಮತ್ತು ಸಹಾಯಾರ್ಥ ಚಟುವಟಿಕೆ ವಿಭಾಗದ ಪ್ರಧಾನ ನಿರ್ದೇಶಕ ಡಾ. ಹಮದ್ ಅಲ್ ಶೇಖ್ ಅಹ್ಮದ್ ಅಲ್ ಶೈಬನಿ ಹೇಳಿದ್ದಾರೆ.
ದುಬೈನಲ್ಲಿರುವ ಜನರಿಗೆ ಪ್ರಾರ್ಥನೆಗಾಗಿ 60 ತಾತ್ಕಾಲಿಕ ಮಸೀದಿಗಳನ್ನು ನಿರ್ಮಿಸಲಾಗುವುದು. ಪ್ರಾರ್ಥನೆ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಇರಬಾರದು. ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರಾರ್ಥನೆಗೆ ಬಳಸುವ ಚಾಪೆಯನ್ನು ಅವರೇ ತರಬೇಕು. ಮಸೀದಿಗೆ ಬರುವವರನ್ನು ನಿಯಂತ್ರಿಸಲು ಎಲ್ಲ ಮಸೀದಿಗಳಲ್ಲಿಯೂ ವ್ಯಕ್ತಿಯೊಬ್ಬನನ್ನು ನಿಯೋಜನೆ ಮಾಡಬೇಕು ಎಂದಿದ್ದಾರೆ ಅವರು.
ಗುರುವಾರ ಯುಎಇನಲ್ಲಿ 132,380 ಕೋವಿಡ್ ಪರೀಕ್ಷೆ ನಡೆಸಿದ್ದು 1,317 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಮರಳುಗಾಡಿನಲ್ಲಿ ಕನ್ನಡದ ಕಂಪು.. ದುಬೈನಲ್ಲಿ ತೆರೆದಿದೆ ಕನ್ನಡ ಪಾಠ ಶಾಲೆ!