ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಸಮುದ್ರ ಅಥವಾ ನದಿ ಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರದ ನೀರು ಉಪ್ಪಾಗಿರುವ ಕಾರಣದಿಂದ ಚರ್ಮ ರೋಗಗಳು ನಿವಾರಣೆಯಾಗ್ತವೆ ಎನ್ನುತ್ತೆ ವಿಜ್ಞಾನ. ನಮ್ಮ ಪೂರ್ವಜರು ಹಿಂದಿನಿಂದಲೂ ಈ ರೀತಿಯ ಸ್ನಾನದ ಆಚರಣೆಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ನದಿ ಮತ್ತು ಸಮುದ್ರ ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ನೀರಿನ ತೇಜದಾಯಕ ಸ್ಪರ್ಶವಾಗುತ್ತೆ. ಪರಿಣಾಮ ದೇಹದಲ್ಲಿನ ಚೇತನವು ಜಾಗೃತವಾಗಿ, ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತೆ. ಹಾಗಾದ್ರೆ ಬನ್ನಿ ಸಮುದ್ರದಲ್ಲಿ ಸ್ನಾನ ಮಾಡೋದು ಹೇಗೆ ಗೊತ್ತಾ?
ನದಿ ಹಾಗೂ ಸಮುದ್ರದಲ್ಲಿ ಸ್ನಾನ ಮಾಡುವುದಕ್ಕಿಂತ ಮೊದಲು ಜಲದೇವತೆಯನ್ನು ಪ್ರಾರ್ಥಿಸಬೇಕು. ನಂತರ ಭಗವಂತನ ನಾಮಜಪ ಮಾಡುತ್ತಾ ಸ್ನಾನ ಮಾಡಬೇಕು. ಹೀಗೆ ಸ್ನಾನ ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಜಾಗೃತವಾಗಿ ದೇಹಕ್ಕೆ ಅದರ ಸ್ಪರ್ಶವಾಗುತ್ತೆ. ಪರಿಣಾಮ ನಮ್ಮ ದೇಹದ ಅಣುರೇಣುಗಳಿಗೆ ಚೈತನ್ಯ ಸಂಕ್ರಮಣವಾಗುತ್ತೆ. ಇದರಿಂದ ದೇಹಕ್ಕೆ ಚೈತನ್ಯ ಪ್ರಾಪ್ತಿಯಾಗಿ ದಿನವಿಡೀ ಕೆಲಸ ಕಾರ್ಯಗಳನ್ನು ಮಾಡಲು ನೆರವಾಗುತ್ತೆ. ಇದಿಷ್ಟು ನದಿ, ಸಮುದ್ರ ಸ್ನಾನದ ವಿಚಾರವಾದ್ರೆ, ನಮ್ಮ ಧರ್ಮಶಾಸ್ತ್ರದಲ್ಲಿ ಒಂದು ಪ್ರಮುಖವಾದ ಸ್ನಾನದ ಬಗ್ಗೆ ತಿಳಿಸಲಾಗಿದೆ. ಅದೇ ಸಚೇಲ ಸ್ನಾನ. ಸಚೇಲ ಅಂದ್ರೆ ವಸ್ತ್ರ. ಸಚೇಲ ಸ್ನಾನವೆಂದರೆ ವಸ್ತ್ರದೊಡನೆ ಮಾಡುವ ಸ್ನಾನ. ನಾವು ವಸ್ತ್ರವನ್ನು ಧರಿಸಿಯೇ ಸ್ನಾನ ಮಾಡಬೇಕೆಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಹಾಗಾದ್ರೆ, ಸಚೇಲ ಸ್ನಾನವನ್ನು ಯಾವಾಗ ಮಾಡಬೇಕು ಆ ಬಗ್ಗೆ ಇಲ್ಲಿ ತಿಳಿಯಿರಿ.
ಸಚೇಲ ಸ್ನಾನ ಯಾವಾಗ ಮಾಡಬೇಕು?
-ಕಾಗೆ ಮತ್ತು ಗೂಬೆ ನಮ್ಮನ್ನು ಮುಟ್ಟಿದರೆ
-ಇನ್ನೊಬ್ಬರ ರಕ್ತವನ್ನು ಮುಟ್ಟಿದಾಗ
-ಹಲ್ಲಿ ಮೈ ಮೇಲೆ ಬಿದ್ದಾಗ
-ವಾಂತಿ, ಬೇಧಿ ಆದಾಗ
-ಸಾವಿನ ಮನೆಗೆ ಹೋಗಿ ಬಂದಾಗ
-ಸ್ಮಶಾನಕ್ಕೆ ಹೋಗಿ ಬಂದಾಗ
-ಯಾರ ಹಣೆಯಲ್ಲಿ ಅಂಗಾರ ಅಕ್ಷತೆ ಇಲ್ಲವೂ ಅಂತಹವರ ಹಣೆ ಸ್ಮಶಾನ ದರ್ಶನಕ್ಕೆ ಸಮನಾದುದರಿಮದ ಅಂತಹವರ ಬರಿ ಹಣೆಯನ್ನು ನೋಡಿದಾಕ್ಷಣವೇ ಸಚೇಲ ಸ್ನಾನ ಮಾಡಬೇಕು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಹೀಗೆ ಸಚೇಲ ಸ್ನಾನದ ಪರಿಕಲ್ಪನೆಯನ್ನು ನೋಡಿದಾಗ ಇದೊಂದು ವೈಜ್ಞಾನಿಕವಾದ ಸ್ನಾನ. ಪ್ರಾಣಿಗಳನ್ನು ಮುಟ್ಟಿದಾಗ ಅವುಗಳಲ್ಲಿರುವ ಅಪಾಯಕಾರಿ ಕ್ರೀಮಿಕೀಟಗಳಿಂದ ಮಾರಕ ರೋಗಗಳು ಬರುವ ಸಾಧ್ಯತೆ ಇರುತ್ತೆ. ಇತರರ ರಕ್ತದಿಂದ ಕೆಲವು ಅಂಟುರೋಗಗಳು ಬರಬಹುದು. ಹಲ್ಲಿ ಮೈ ಮೇಲೆ ಬಿದ್ರೆ ಅಶುಭ ಅಂತಾ ಶಾಸ್ತ್ರಗಳೇ ಹೇಳುತ್ತವೆ. ವಾಂತಿ, ಬೇಧಿ ಆದಾಗ ಇಡೀ ದೇಹ ಮಲಿನವಾಗಿರುತ್ತೆ. ಹಾಗೇ ಸಾವಿನ ಮನೆಗೆ, ಸ್ಮಶಾನಕ್ಕೆ ಹೋದಾಗ ದುಷ್ಟ ಶಕ್ತಿಗಳ ಕಾಟ ನಮ್ಮನ್ನು ಕಾಡಬಾರದೆಂಬ ವೈಜ್ಞಾನಿಕ ದೃಷ್ಟಿಯಿಂದ ನಮ್ಮ ಪೂರ್ವಜರು ಸಚೇಲ ಸ್ನಾನವನ್ನು ಮಾಡುವ ನಿಯಮವನ್ನು ಮಾಡಿದ್ದಾರೆ.
ಇದನ್ನೂ ಓದಿ: ಕುಂಭ ಮೇಳದಲ್ಲಿ ಮೂರನೇ ಶಾಹಿ ಸ್ನಾನ ಇಂದು, ಕೊವಿಡ್ ಮಾರ್ಗಸೂಚಿ ಪಾಲಿಸಿ: ಉತ್ತರಾಖಂಡ ಸಿಎಂ ತೀರತ್ ಸಿಂಗ್ ರಾವತ್ ಮನವಿ