ಹತ್ತಿರದ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಇವರದ್ದೇ ಮಠದ ವ್ಯಕ್ತಿಯೊಬ್ಬರು ಪೂಜೆ ಮಾಡಿಸುವವರು, ನನ್ನ ಕಂಡ ತಕ್ಷಣ ‘ಕೂದಲು ಕಟ್ಟಿಕೊಳ್ಳಿ, ಇದೇನಿದು ಬಿಚ್ಚುಗೂದಲು!’ ಅಂತ ಬಯ್ದುಕೊಂಡರು. ನಾನೂ ಯಥಾವತ್ತಾಗಿ ಪಾಲಿಸಿದೆ. ನನ್ನ ಗಂಡ ಆರಾಮಾಗಿ ಆಧುನಿಕ ಬಟ್ಟೆಯಲ್ಲಿ ಕುಳಿತಿದ್ದ ಮತ್ತು ಅವನಿಗಿಲ್ಲದ ಜುಟ್ಟಿನ ಬಗ್ಗೆ, ಇರುವ ಕ್ರಾಪ್ ಬಗ್ಗೆ ಯಾರಿಗೂ ತಕರಾರಿರಲಿಲ್ಲ. ಮನೆಗೆ ಬಂದ ಮೇಲೆ, ನಾನು ಯಾಕೆ ಕೂದಲು ಕಟ್ಟಿಕೊಳ್ಳಲು ಒಪ್ಪಿಕೊಂಡೆ ಅಂತ ಯೋಚಿಸಿದಾಗ ಅರಿವಾಯಿತು; ಹುಡುಗಿಯರನ್ನು ನಮ್ಮ ವ್ಯವಸ್ಥೆ ಎಷ್ಟು Conditioned ಮಾಡುತ್ತದೆ.
ಮನುಷ್ಯ-ಮನುಷ್ಯ ಜತೆಗೂಡಿ ಬದುಕುವ ಸರಳ ಮತ್ತು ವೈಯಕ್ತಿಕ ಪ್ರಕ್ರಿಯೆಯನ್ನು ಜಾತಿ-ಆಹಾರ-ಉಡುಪು-ಸ್ತರ-ಪ್ರತಿಷ್ಠೆಯ ವಿಷಯವನ್ನಾಗಿ ರೂಪಾಂತರಗೊಳಿಸಿಕೊಂಡಿದ್ದೇವೆ ನಿಜ. ಆದರೀಗ ಅದನ್ನೆಲ್ಲ ತೊರೆದು ವಿಸ್ತಾರವಾಗುವ ಕಾಲವೇ ಹೊರತು ಹಿಂದಕ್ಕೆ ಸಾಗಿ ಮತ್ತದೇ ಸವಕಲು ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ಕಾಲವಲ್ಲ. ಆದರೆ ಇತ್ತೀಚೆಗಿನ ಪೇಜಾವರ ಸ್ವಾಮಿಗಳ ಹೇಳಿಕೆ ಗಮನಿಸಿದರೆ ಹಾಗನಿಸಲಿಲ್ಲ. ವಿದ್ಯಾರ್ಥಿಗಳ ಹಾಸ್ಟೆಲಿಗೆ ಹೋಗಿ ಭಾಷಣ ಮಾಡಿ ಬಂದ ಶ್ರೀಗಳಿಗೆ ಮಾತನಾಡಲು ಸಿಕ್ಕಿದ ವಿಷಯ ದುರದೃಷ್ಟಕರವಾದುದು. ಸ್ವಾಮಿಗಳ ಪ್ರಕಾರ ಅಂತರ್ಜಾತಿ ವಿವಾಹ ಒಂದು ಪ್ರಕರಣ ಎಂದು ಪರಿಗಣನೆ ಆಗುತ್ತದೆ ಎಂಬುದು ಮೊತ್ತಮೊದಲ ದುಖಃಕರ ಸಂಗತಿ. ಅದನ್ನೊಂದು ಸಮಸ್ಯೆ ಎಂದು ನಿರ್ಧರಿಸಿ ಅದಕ್ಕೆ ಕಾರಣ ಮತ್ತು ಪರಿಹಾರ ಹುಡುಕುವ ಹಕ್ಕು ಯಾರು ಕೊಟ್ಟರು ಇವರಿಗೆ? ಭಾರತ ಮುಕ್ತದೇಶ ಮತ್ತು ಸಂಗಾತಿಯನ್ನು ಆಯ್ದುಕೊಳ್ಳುವ ಹಕ್ಕು ಪ್ರತಿ ಪ್ರಜೆಯದು.
‘ಮನೆಗಳಲ್ಲಿ ಹೆಣ್ಣುಮಕ್ಕಳ ಸ್ಥಿತಿಯ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಇಷ್ಟು ಸುಸಂಸ್ಕೃತ ಸಮಾಜವನ್ನು ಬಿಟ್ಟು ಯಾಕೆ ಬೇರೆ ಸಮಾಜದವರನ್ನು ಮದುವೆಯಾಗುತ್ತಾರೆ’ ಅಂದರು ಸ್ವಾಮಿಗಳು. ಬಹುಶಃ ಉತ್ತರ ಅವರ ಪ್ರಶ್ನೆಯಲ್ಲೇ ಇದೆ. ನಾವು ಯಾವಾಗ ಶ್ರೇಷ್ಠತೆಯ ವ್ಯಸನ ಅಂಟಿಸಿಕೊಳ್ಳುತ್ತೇವೆಯೋ ಆಗಲೇ ಸುಸಂಸ್ಕೃತತೆ ಕೊಲೆಯಾಗುವುದು. ಇಷ್ಟಕ್ಕೂ ನಮ್ಮ ಹೆಣ್ಣುಮಕ್ಕಳ ಸ್ಥಿತಿಯ ಬಗ್ಗೆ ಅವಲೋಕನ ಮಾಡಿಕೊಳ್ಳಲಿಕ್ಕೆ ಅಂತರ್ಜಾತೀಯ ವಿವಾಹಗಳು ಕಾರಣೀಭೂತವಾಗುತ್ತಿರುವುದು ಹಾಸ್ಯಾಸ್ಪದ ವಿಷಯ. ನಮ್ಮ ಮನೆಯ ಹೆಣ್ಣುಮಕ್ಕಳನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬ ಅರಿವು ಸಮಾಜದ ಹಿರಿಯರು-ಗುರುಗಳು ಎಂದೆನಿಸಿಕೊಂಡವರಿಗೆ ಬಹಳ ಮುಂಚೆಯಿಂದಲೇ ಇರಬೇಕು.
ಕರ್ಮಠ ಸಮುದಾಯಗಳಲ್ಲಿ ಮೊದಲಿಂದಲೂ ಹೆಣ್ಣನ್ನು ಗೌರವಿಸುವ ಪರಿಪಾಠ ಕಮ್ಮಿ. ಅವರಲ್ಲಿ ಹೆಣ್ಣುಮಕ್ಕಳು ಸಂಸ್ಕೃತಿಯ ಬ್ರಾಂಡ್ ಅಂಬಾಸಡರ್ಗಳು. ಉದ್ದ ಕೂದಲು, ಮೆಲು ನುಡಿ, ಸಂಪ್ರದಾಯ ನಿಷ್ಠೆ, ವಿಧೇಯತೆ ಇವನ್ನೆಲ್ಲ ಅವರ ಮೇಲೆ ವ್ಯವಸ್ಥಿತವಾಗಿ ಹೇರಲಾಗುತ್ತದೆ. ಹೆಣ್ಣು ಮಕ್ಕಳ ಬಾಲ್ಯ, ಯೌವ್ವನ, ಮದುವೆ, ಮಕ್ಕಳು ಎಲ್ಲವೂ ಪುರುಷ ಪ್ರಧಾನ ವ್ಯವಸ್ಥೆಗೆ ಅನುಗುಣವಾಗಿ ಜರುಗುತ್ತಾ ಹೋಗುತ್ತದೆ.
‘ಎಷ್ಟು ಓದಿಸಿದರೂ ನಾಳೆ ದುಡಿಯುವ ದುಡ್ಡು ನಮ್ಮದಲ್ಲವಲ್ಲ, ಗಂಡನ ಮನೆಯವರದಲ್ಲವೇ?’ (ಹೆಣ್ಣು ಮುಂದೆ ನಮ್ಮನ್ನು ನೋಡಿಕೊಳ್ಳಲಾರಳು, ಅವಳು ಬೇರೆ ಮನೆಯ ಸ್ವತ್ತು, ಒಮ್ಮೆ ಮದುವೆಯಾದರೆ ನಮ್ಮವಳಲ್ಲ ಎಂಬ ಭಾವ)
‘ಯಾಕಿಷ್ಟು ಓದಿಸುತ್ತೀರಿ? ಇದಕ್ಕಿಂತ ಹೆಚ್ಚು ಓದಿದ, ಸಂಪಾದಿಸುವ ಹುಡುಗ ಸಿಗಬೇಕಲ್ಲ ಮುಂದೆ?’ (ಹೆಣ್ಣಿಗಿಂತ ಗಂಡು ಹೆಚ್ಚು ಓದಿರಬೇಕು, ಸಂಪಾದಿಸಬೇಕು!)
‘ಫೇಸ್ಬುಕ್ ನೋಡಿದೆ ಈ ಹುಡುಗಿಯದ್ದು. ಬರೇ ಜೀನ್ಸ್ ಹಾಕಿದ ಫೋಟೋಗಳು! ಯಾಕೋ ಸರಿ ಇಲ್ಲ ಈ ಹುಡುಗಿ ಎನಿಸುತ್ತದೆ.’ (ಆಧುನಿಕ ಬಟ್ಟೆ ಹಾಕಿದ ಹುಡುಗಿಯರ ಕ್ಯಾರೆಕ್ಟರ್ ಸರ್ಟಿಫಿಕೇಟು!) ಇವೆಲ್ಲ ಸ್ಯಾಂಪಲ್ಲುಗಳಷ್ಟೇ. ಇಂಥದ್ದು ಸಾವಿರ ಇವೆ.
ಇವನ್ನೆಲ್ಲ ಮೀರಿ ಕೆಲ ಬ್ರಾಹ್ಮಣರ ಹುಡುಗಿಯರು ಬೆಳೆಯುತ್ತಾರೆ. ಮತ್ತೆ ಕೆಲವರು ಅದೇ ವಿಷವರ್ತುಲಕ್ಕೆ ಬಿದ್ದು ಓದಿದರೂ ಮೂಲೆಗುಂಪಾಗುತ್ತಾರೆ. ಇಂತಿಪ್ಪ ಸಮಾಜಕ್ಕೆ ಸ್ವಾಮಿಗಳಾದವರು ಕೊಡಬೇಕಾದ ಸಂದೇಶ ಮುಕ್ತತೆಯದ್ದಲ್ಲವೇ? ಮತ್ತು ಆ ಸಂದೇಶವನ್ನು ಕೊಡಬೇಕಾದದ್ದು ಗಂಡುಮನಸ್ಸಿನ ನಿಯಂತ್ರಣಾ ವ್ಯವಸ್ಥೆಗಲ್ಲವೇ? ಅದು ಬಿಟ್ಟು ಹೆಣ್ಣುಮಕ್ಕಳು ಮಾಡಿಕೊಳ್ಳುವ ಅಂತರ್ಜಾತಿ ವಿವಾಹಕ್ಕೆ ಪರಿಹಾರ ಹುಡುಕುವ ಮಾತಾಡುವುದು ವಿಪರ್ಯಾಸ. ಕೆಲ ವೃತ್ತಿಯಲ್ಲಿರುವವರಿಗೆ ಹೆಣ್ಣು ಸಿಗುತ್ತಿಲ್ಲ ಅನ್ನುವುದು ಹಲವರ ವಾದ; ಸತ್ತ ಮೇಲೆ ಮೋಕ್ಷ ಒದಗಿಸಲು ಬೇಕಿರುವ ಗಂಡು ಮಗುವಿನ ಹಾತೊರೆಯುವಿಕೆಯಿಂದಾಗಿ ಬದುಕಿದ್ದಾಗ ಮದುವೆಯಾಗಿ ಬಾಳ್ವೆ ಮಾಡಲು ಹೆಣ್ಣು ಸಿಗುತ್ತಿಲ್ಲ. ಹೆಣ್ಣು-ಗಂಡುಗಳ ಅನುಪಾತದಲ್ಲಿನ ವ್ಯತ್ಯಾಸ ಇದನ್ನು ಸ್ಪಷ್ಟವಾಗಿ ನಮ್ಮ ಮುಖಕ್ಕೆ ಹಿಡಿಯುತ್ತದೆ.
ಇದೆಲ್ಲ ನಡಿಯಲ್ಲ ಬಿಡು, ಏನೋ ಮಾತಾಡಿಕೊಂಡಿರಲಿ ಅಂತ ಉಡಾಫೆಯಾಡಿದವರಿಗೆ ಬ್ರಾಹ್ಮಣ ಹೆಣ್ಣುಮಕ್ಕಳ ಸ್ಥಿತಿ-ಗತಿ ಅರಿವಿಲ್ಲ. ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಎಷ್ಟು ವಿರಳವಾದುದು ಎಂಬುದನ್ನು ನೋಡಲು ಒಮ್ಮೆ ಕೆಳ-ಮಧ್ಯಮ ವರ್ಗದ/ಹಳ್ಳಿಯ ನಾಲ್ಕು ಬ್ರಾಹ್ಮಣ ಹುಡುಗಿಯರನ್ನು ಮಾತಾಡಿಸಿ ನೋಡಬೇಕು. ಗುರುಗಳ ಇಂತಹ ಮಾತುಗಳು, ಮಾತೃಮಂಡಳಿಯಂತಹ ಮತ್ತೊಂದು ಸಂಘದ ರಚನೆ ಇವೆಲ್ಲವುಗಳ ಪರಿಣಾಮ ಏನಾಗಬಹುದು? ಮುಂದೊಂದು ದಿನ ಹೆಣ್ಣುಮಕ್ಕಳನ್ನು ಓದಿಸಿಯೇ ಸಮುದಾಯ ಕೆಟ್ಟುಹೋಯಿತು ಮತ್ತು ಓದದಿದ್ದರೆ ಇವಳು ಯಾವ ವೃತ್ತಿಯವನನ್ನಾದರೂ ಬಾಯಿಮುಚ್ಚಿಕೊಂಡು ಮದುವೆಯಾಗುತ್ತಿದ್ದಳು ಎಂಬ ಮಾತುಗಳು ಬಂದರೂ ಆಶ್ಚರ್ಯವಿಲ್ಲ. ಅಲ್ಲಿಗೆ ನಾವು ಮತ್ತೆ ಒಂದೆರಡು ಶತಮಾನಗಳಷ್ಟು ಹಿಂದೆ ಸಾಗಿರುತ್ತೇವೆ.
ಪ್ರಗತಿ ವಿರೋಧಿಗಳಿಗೆ ಮೊದಲಿನಿಂದಲೂ ಹೆಣ್ಣುಮಕ್ಕಳು ಮುಖ್ಯ ಗುರಿ, ಸಮುದಾಯಾತೀತವಾಗಿ. ನಮ್ಮ ರಾಜಕಾರಣಿಗಳು ನೀಡುವ ಹೇಳಿಕೆಗಳು, ಪೇಜಾರವರರಷ್ಟೇ ಅಲ್ಲದೆ ಮತ್ತೂ ಅನೇಕ ಮಠಾಧೀಶರುಗಳು ಹಾಕುವ ಗುಟುರುಗಳು ಅಸ್ತಿತ್ವದ ಅಲ್ಲಾಡುವಿಕೆಯ ಭಯವಾಗಿ ಕಾಣುತ್ತಿದೆ. ಸಮುದಾಯದ ಜನಸಂಖ್ಯೆ ಹೆಚ್ಚಿಸಲು ಈಡಿಗರ ಸ್ವಾಮಿಯೊಬ್ಬರು ಹೆಚ್ಚು ಹೆಚ್ಚು ಹೆರಲು ಹೆಣ್ಣುಮಕ್ಕಳಿಗೆ ಕರೆ ನೀಡಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿಗೆ ಹೆಣ್ಣು ಮಕ್ಕಳ ಹರಿದ ಜೀನ್ಸ್ನಿಂದಾಗಿ ನಾಶವಾಗುತ್ತಿರುವ ಸಂಸ್ಕೃತಿಯ ಚಿಂತೆ. ಹೆಣ್ಣುಮಕ್ಕಳ ಹೆಗಲಿನಿಂದ ಸಂಸ್ಕೃತಿಯ ಭಾರ ಇಳಿಸಿದರೆ ಬೇರೆ ಹತ್ತು ಹಲವು ನಿಜಕ್ಕೂ ಮುಖ್ಯವಾದ ವಿಷಯಗಳಿಗೆ ಅವರ ಹೆಗಲುಗಳಲ್ಲಿ ಖಂಡಿತ ಸ್ಥಳಾವಕಾಶವಿರುತ್ತದೆ.
ಇದನ್ನೂ ಓದಿ: ವಾಸ್ತವ ಒಪ್ಪಿಕೊಂಡರೆ ಮಾತ್ರ ಮುಕ್ತಿ: ಜಾತಿ ಯಾವುದಾದರೇನು ಶಾಂತಿ ನೆಮ್ಮದಿಯೇ ಇಲ್ಲದಿದ್ದಲ್ಲಿ
Published On - 5:02 pm, Thu, 18 March 21