ಇಂಗ್ಲಿಷ್ ಸಾಹಿತ್ಯದ ನೆಲೆಯಲ್ಲಿ ಏಸುವಿನ ವ್ಯಕ್ತಿತ್ವ ಕಟ್ಟಿಕೊಡಲು ಯತ್ನಿಸುವ ಬರಹವಿದು. ಆದರೆ ಅಷ್ಟಕ್ಕೇ ಈ ಬರಹದ ಚೌಕಟ್ಟನ್ನು ಇಂಗ್ಲಿಷ್ ಪ್ರಾಧ್ಯಾಪಕ ಡಾ. ಗೌತಮ್ ಜ್ಯೋತ್ಸ್ನಾ ಸೀಮಿತಗೊಳಿಸಿಲ್ಲ. 2020ರ ನೆಲೆಗಟ್ಟಿನಲ್ಲಿ ನಿಂತು ಏಸುವನ್ನು ಹೇಗೆಲ್ಲಾ ಅರ್ಥ ಮಾಡಿಕೊಳ್ಳಬಹುದು ಎಂಬ ಪ್ರಶ್ನೆಗೆ ಮುಖಾಮುಖಿಯಾಗುವಾಗ ತೀರಾ ಸಹಜವೆಂಬಂತೆ ಕೃಷ್ಣನ ಪ್ರಸ್ತಾಪವೂ ಬಂದಿದೆ.
—
ದೇವರಾಗೇ ಹುಟ್ಟಿ ದೇವರಾಗಿ ಸಾಯುವುದಲ್ಲ. ಮನುಷ್ಯನಾಗಿ ಹುಟ್ಟಿ ದೇವರಾಗಿ ಸಾಯಬೇಕು. ನಾವು ಮನೆ, ಮದುವೆ, ಮಕ್ಕಳು, ಕಾರು ಇಷ್ಟಕ್ಕೆ ತೃಪ್ತಿ ಹೊಂದುತ್ತೇವೆ. ನಮ್ಮ ಸಣ್ಣತನ, ಸ್ವಾರ್ಥಗಳನ್ನು ಮೀರಲು ಪ್ರಯತ್ನಿಸುವುದಿಲ್ಲ. ಹಾಗಾಗಿ ಮನುಷ್ಯ ವಿಕಾಸ ಹೊಂದುವುದಿಲ್ಲ. ವಿಕಾಸ ಹೊಂದುವುದು ಅಂದರೆ ಇರುವ ಮಿತಿಯನ್ನು ಮೀರುವುದು. ಇಸ್ರೇಲಿನ ಜನರು ತಮ್ಮನ್ನು ಕಾಪಾಡಲು ಯಾರೋ ಸಂತ ಬರುತ್ತಾನೆ, ರಾಜ ಬರುತ್ತಾನೆ ಅಂತ ಕಾದಿದ್ದರು. ಅವನು ರೋಮನ್ರನ್ನು ತನ್ನ ಶಕ್ತಿಯಿಂದ, ಮಾಯೆಯಿಂದ ಹೊಡೆದು ಹಾಕುತ್ತಾನೆ, ಸಾಮ್ರಾಜ್ಯ ಕಟ್ಟುತ್ತಾನೆ ಎಂದುಕೊಂಡಿದ್ದರು. ಆದರೆ, ಏಸು ಬೆತ್ಲೆಹೇಮಿನ ಗೋದಲಿಯಲ್ಲಿ ಜನಿಸಿದ. ಸಾಮಾನ್ಯ ಬಡಗಿಯ ಬಡತನದ ಮನೆಯಲ್ಲಿ ಹುಟ್ಟಿ, ಜನಸಾಮಾನ್ಯರ ಜೊತೆ ಬೆರೆತ.
ರೋಮನ್ರ ವಿರುದ್ಧ ಜನರು ಹೈರಾಣಾಗಿದ್ದರು. ಮನಸ್ಸು ಮಾಡಿದ್ದರೆ ಏಸು ಕ್ರಾಂತಿ ಮಾಡಬಹುದಿತ್ತು. ಅಷ್ಟು ಜನಬೆಂಬಲ ಆತನಿಗಿತ್ತು. ಆದರೆ ಏಸುವಿಗೆ ಹಿಂಸೆ ಇಷ್ಟವಿರಲಿಲ್ಲ. ಹಿಂಸೆ ಪ್ರಯೋಜನವಿಲ್ಲ, ಅದರಿಂದ ನಾವು ಬೆಳೆಯುವುದಿಲ್ಲ ಎಂದ. ಒಂದುವೇಳೆ ಏಸು ಸೈತಾನನ ಆಮಿಷಕ್ಕೆ ಒಳಗಾಗಿ ಸಾಮ್ರಾಜ್ಯ ಕಟ್ಟಿದ್ದರೆ, ರಾಜನಾಗುತ್ತಿದ್ದ. ನಂತರ ಅವನೂ, ಅವನ ಕೆಳಗಿನ ಜನರೂ ಆ ಮೊದಲಿನವರು ಏನು ಮಾಡಿದ್ದರೋ ಅದನ್ನೇ ಮಾಡುತ್ತಿದ್ದರು. ಏಸುಕ್ರಿಸ್ತ ಆ ಕಾಮನೆಗಳನ್ನು ಮುರಿದ. ಆತ್ಮವನ್ನು ದಂಡಿಸಿಕೊಂಡ.
ಶಿಲುಬೆಗೆ ಏರುವುದು ಅಂದರೆ ನೋವು, ಯಾತನೆಯನ್ನು ಸ್ವೀಕರಿಸುವುದು. ಏಸು ಮಾನವನಾಗೇ ಹುಟ್ಟಿದ. ಮಾನವ ಸತ್ತಂತೆಯೇ ಸತ್ತ. ಸಹಜ ಕಾಮನೆಗಳನ್ನು ಮೀರಿ ಹೊಸ ದಾರಿ ಹಿಡಿದ. ಏಸು ಶಿಲುಬೆಗೆ ಏರಿಲ್ಲವಾದರೆ ಇದು ಸಾಧ್ಯವಾಗುತ್ತಿರಲಿಲ್ಲ. ನೋವನ್ನು ತಿರಸ್ಕರಿಸದೆ, ಅದನ್ನು ನನ್ನದು ಎಂದು ಪಡೆದುಕೊಂಡದ್ದು ಏಸುವಿನ ಸಂಕಲ್ಪ ಶಕ್ತಿ. ಮನೋಬಲ ಅಥವಾ ಮನೋನಿಶ್ಚಯ. ಹಾಗಾಗಿ ಏಸು ದೇವರಾದ. ದೇವರ ಸಾಮ್ರಾಜ್ಯ ಇನ್ನೆಲ್ಲೋ ಇಲ್ಲ, ಅದು ನಮ್ಮೊಳಗೆ ಇದೆ. ವಿಕಾಸ ಹೊಂದುವತ್ತ ನಾವು ನಡೆಯಬೇಕಷ್ಟೆ.
ಏಸು ಮನುಷ್ಯನೇ. ಅವನ ಸಂಕಲ್ಪಶಕ್ತಿ ಅವನನ್ನು ದೇವರನ್ನಾಗಿಸಿತು. The Last Temptation of Christನಲ್ಲಿ ನವ್ಯ ಗ್ರೀಕ್ ಸಾಹಿತಿ ನಿಕೋಸ್ ಕಝನ್ಟ ಇದನ್ನೇ ಹೇಳುತ್ತಾನೆ.
ಕೃಷ್ಣ ಮತ್ತು ಕ್ರಿಸ್ತ
ಕೃಷ್ಣನನ್ನು ತ್ರಿಕಾಲಜ್ಞಾನಿ ಎಂದು ಕರೆಯುತ್ತಾರೆ. ಅಭಿಮನ್ಯುವಿನ ಸಾವು, ಪಾಂಡವ ಅವಸಾನ, ಮಹಾಭಾರತ ಯುದ್ಧ, ಯಾದವ ಕಲಹ, ಕೃಷ್ಣಾವಸಾನ ಎಲ್ಲವೂ ಅವನಿಗೆ ಗೊತ್ತಿತ್ತು. ಆದರೆ, ಆತ ಯಾವುದನ್ನೂ ತಡೆಯಲಿಲ್ಲ. ಧೃತಿಗೆಡಲಿಲ್ಲ. ಇದನ್ನೆಲ್ಲಾ ಸಮಾಜದ ಒಳಿತಿಗಾಗಿ ಮಾಡಿದ, ತ್ಯಾಗ ಮಾಡಿದ ಎಂದು ಪರಿಗಣಿಸುವುದು ಸಣ್ಣದು ಎಂದು ಅನಿಸಬಹುದು. ಇದೊಂದು ಸಿದ್ಧಾಂತವಲ್ಲ. ಮನಸ್ಸಿನ ಬಲವಷ್ಟೆ. ಈಗಿನ ಸಮಾಜದಲ್ಲಿ ಈ ತೆರನಾದ ಮನೋನಿಶ್ಚಯ (ಕನ್ವಿಕ್ಷನ್) ಕಡಿಮೆ. ನಾವು ದೇವರಾಗಲು ಹೊರಡುತ್ತಿಲ್ಲ!
ನಾವು ಎಲ್ಲದರಲ್ಲೂ ಅವನು ಯಾಕೆ ಹಾಗೆ ಮಾಡಿದ ಎಂಬ ಲಾಜಿಕ್ ಹುಡುಕುತ್ತೇವೆ. ಕೃಷ್ಣ ಯಾಕೆ ಹಾಗೆ ಮಾಡಿದ ಅಂದರೆ.. ಎಂದು ಸಬೂಬು ನೀಡುತ್ತೇವೆ. ಕಾರಣ ನೀಡಿ ಸುಮ್ಮನಾಗುತ್ತೇವೆ. ಅವನು ಹಾಗೆ ಮಾಡಲು ಹೇಗೆ ಸಾಧ್ಯವಾಯಿತು? ಆ ಮನೋನಿಶ್ಚಯ ಅವನಿಗಿತ್ತು. ಅದನ್ನು ನಾವು ಗ್ರಹಿಕೆಗೆ ತರುವುದೇ ಇಲ್ಲ. ಕೃಷ್ಣ ಅಥವಾ ಏಸು ಯಾಕೆ ಹಾಗೆ ಮಾಡಿದರು ಎಂಬ ಕಾರಣಗಳು ಸೆಕೆಂಡರಿಯಾಗಬೇಕು. ಅವರು ಹಾಗೆ ಮಾಡಿದರು ಎಂಬುದಷ್ಟೇ ಮುಖ್ಯವಾಗಬೇಕು. ಅದು ಅಂತಿಮ ಸತ್ಯ ಎಂಬುದು ಅವರಿಗೆ ಗೊತ್ತಿತ್ತು. ಹೀಗೆ, ಏಸು ಅಥವಾ ಕೃಷ್ಣನನ್ನು ಇಡಿಯಾಗಿ ಸ್ವೀಕರಿಸಬೇಕು.
ದೇವರು ಇಲ್ಲದಿದ್ದರೆ ನೀವು ಒಳ್ಳೆಯವರಾಗ್ತೀರೊ, ಕೆಟ್ಟವರಾಗ್ತೀರೊ?
ಜರ್ಮನ್ ತತ್ವಜ್ಞಾನಿ ಫ್ರೆಡ್ರಿಕ್ ನೀಚ್ಚೆಯದ್ದು ಕೂಡ ಇದೇ ವಾದ. ಗಾಡ್ ಇಸ್ ಡೆಡ್ ಬಿಕಾಸ್ ವಿ ಕಿಲ್ಡ್ ಹಿಮ್! ಅಂದರೆ, ಏಸುವನ್ನು ಇಡಿಯಾಗಿ ಸ್ವೀಕರಿಸೋಣ. ಆತ್ಮಸಾಕ್ಷಿ, ಅಂತಃಸಾಕ್ಷಿಗೆ ಮೌಲ್ಯ ಕೊಡೋಣ. ನಮ್ಮನ್ನು ದೇವರು ಬಂದು ಬದಲಾಯಿಸುವುದು ಬೇಡ. ದೇವರ ಭಯದಿಂದ ನಾವು ಬದಲಾಗುವುದು ಬೇಡ. ನಾವು ನಾವಾಗಿಯೇ ಸರಿಯಾಗೋಣ. ಅದಕ್ಕಾಗಿ ಪ್ರಯತ್ನಿಸೋಣ. ಪಾಪ, ನರಕ, ತಪ್ಪೊಪ್ಪಿಗೆ (Confession) ಯಾವುದೂ ಬೇಡ ಎಂಬರ್ಥ.
ಟ್ರಾಫಿಕ್ ಪೊಲೀಸ್ ಇದ್ದಾರೆ ಎಂದು ಹೆಲ್ಮೆಟ್ ಧರಿಸುತ್ತೇನೋ, ಪರೀಕ್ಷೆಯಲ್ಲಿ ಚೀಟಿ ಇಟ್ಟರೆ ಡಿಬಾರ್ ಮಾಡುತ್ತಾರೆ ಎಂಬ ಕಾರಣಕ್ಕೆ ಚೀಟಿ ಇಡದೆ ಕೂರುತ್ತೇವೋ, ಡ್ರೈವಿಂಗ್ ಕ್ಲಾಸ್ನಲ್ಲಿ ನನ್ನ ಪಕ್ಕದಲ್ಲಿ ಡ್ರೈವರ್ ಕೂತಿದ್ದಾರೆ ಎಂದು ವಾಹನ ಚಲಾಯಿಸುತ್ತೇವೋ.. ನಾವು ತಪ್ಪಿದ್ದೇವೆ. ನಾನು ನನ್ನ ಆತ್ಮಸಾಕ್ಷಿಗಾಗಿ ತಪ್ಪು ಮಾಡುವುದಿಲ್ಲ. ನನ್ನ ಅಂತಃಸತ್ವಕ್ಕೆ ನಾನು ಶರಣಾಗುತ್ತೇನೆ ಎಂಬ ಭಾವನೆ ನಮ್ಮಲ್ಲಿ ಅರಳಬೇಕು.
ದೇವರು ಇಲ್ಲದಿದ್ದರೆ ನೀವು ಒಳ್ಳೆಯವರಾಗ್ತೀರೊ, ಕೆಟ್ಟವರಾಗ್ತೀರೊ? ಇದು ನೀಚ್ಚೆಯ ಪ್ರಶ್ನೆ. ಕನಕದಾಸರ ಬಗ್ಗೆ ಇರುವ ದೇವರಿಲ್ಲದ ಸ್ಥಳದಲ್ಲಿ ಬಾಳೆಹಣ್ಣು ತಿನ್ನುವ ಕಥೆಯೂ ಹೀಗೆಯೇ. ಎರಡು ಕಣ್ಣುಗಳು ಎಲ್ಲಿ ಹೋದರೂ ನನ್ನನ್ನು ನೋಡುತ್ತಿದೆ. ಹಾಗಾಗಿ ಯಾರೂ ನೋಡದ ಸ್ಥಳ ನನಗೆ ಸಿಗಲಿಲ್ಲ. ಹಣ್ಣು ತಿನ್ನಲಾಗಲಿಲ್ಲ (ಕನಕದಾಸರ ಕಥೆ).
ಇಂದಿಗೆ ಬೇಕಾಗಿರುವುದು ಕ್ರಿಸ್ತನ ಆಚರಣೆಗಳು
ಪಾಪ ನಿರ್ಣಯ, ನರಕ, ತಪ್ಪೊಪ್ಪಿಗೆ ಇತ್ಯಾದಿಗಳನ್ನು ಏಸುವಿನ ಕಾಲಾನಂತರ ರೋಮ್ ಸಾಮ್ರಾಜ್ಯ ಜನರ ಮೇಲೆ ಹೇರಿತು. ಏಸು ಯಾವ ಸಾಮ್ರಾಜ್ಯ ತನಗೆ ಬೇಡ ಎಂದು ತಿರಸ್ಕರಿಸಿ ದೇವರಾಗಿದ್ದನೋ ರೋಮ್ ಅದನ್ನು ಕಟ್ಟಿತು. ಕ್ರಿಶ್ಚಿಯನ್ ರಾಜ್ಯ ಅಂದಿತು. ದೇವರ ಭಯ ಇರುವಂತೆ ಮಾಡಿತು. ತಪ್ಪು ಕಾಣಿಕೆಯಂಥ ಸಂಪ್ರದಾಯವೂ ಹೀಗೆಯೇ. ಫ್ರೆಡ್ರಿಕ್ ನೀಚ್ಚೆ, ರಷ್ಯನ್ ತತ್ವಜ್ಞಾನಿ ದಾಸ್ತೊವಸ್ಕಿಗೂ ಈ ಬಗ್ಗೆ ಅಸಮಾಧಾನ. ದೇವರಿಲ್ಲದಿದ್ದರೆ ನಾವು ಸರಿಯಾಗಿ ನಡೆಯುವುದಿಲ್ಲವೇ? ಇಂದಿಗೆ ಬೇಕಾಗಿರುವುದು ಕ್ರಿಸ್ತನ ಆಚರಣೆಗಳು.
ಲೇಖಕರ ಪರಿಚಯ: ಲೇಖಕರು ಹಾಗೂ ಕತೆಗಾರರೂ ಆಗಿರುವ ಡಾ. ಗೌತಮ್ ಜ್ಯೋತ್ಸ್ನಾ ಬೆಸೆಂಟ್ ಮಹಿಳಾ ಪದವಿ ಕಾಲೇಜು, ಮಂಗಳೂರು ಇಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಸ್ಟಾನ್ಲಿ ಕ್ಯುಬ್ರಿಕ್ ಸಿನಿಮಾಗಳ ಬಗ್ಗೆ ಪಿಹೆಚ್ಡಿ ಪಡೆದಿದ್ದಾರೆ. ಪ್ರಸ್ತುತ, ‘ಅನಂತು ವರ್ಸಸ್ ನುಸ್ರತ್’ ಚಿತ್ರದ ನಿರ್ದೇಶಕ ಸುಧೀರ್ ಶಾನ್ಭೋಗ್ ಅವರ ಹೊಸ ಚಿತ್ರದ ಬರಹಗಾರರೂ ಆಗಿದ್ದಾರೆ.
Published On - 9:23 pm, Fri, 25 December 20