ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿರುವ ಭಾರತ ಈಗ 2ನೇ ಟೆಸ್ಟ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಮೈದಾನದಲ್ಲಿ ಭಾರಿ ತಾಲೀಮು ನಡೆಸುತ್ತಿರುವ ಟೀಂ ಇಂಡಿಯಾ ಮುಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅಲ್ಲದೆ ಟೀ ಇಂಡಿಯಾದ ಈ ಆತ್ಮವಿಶ್ವಾಸಕ್ಕೆ ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿನ ಮೆಲ್ಬೋರ್ನ್ ಟೆಸ್ಟ್ನ ಗೆಲುವು ಸಹ ಕಾರಣವಾಗಿದೆ. ಈ ಬಾರಿಯ ಪ್ರವಾಸದಂತೆ ಕಳೆದ ಪ್ರವಾಸದಲ್ಲೂ ಟೀಂ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ ಸೋಲನುಭವಿಸಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಜಯದ ಮಾಲೆ ಅಲಂಕರಿಸಿತ್ತು.
ಕಳೆದ ಪಂದ್ಯದ ಸೋಲಿನ ಕಹಿಯನ್ನು ಮರೆತು ಮುಂದಿನ ಪಂದ್ಯಕ್ಕೆ ಸಿದ್ಧವಾಗಿರುವ ಭಾರತ ಮುಂದಿನ ಪಂದ್ಯಕ್ಕೆ ತಂಡದಲ್ಲಿ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಇದರಲ್ಲಿ ಪ್ರಮುಖ ನಾಲ್ಕು ಬದಲಾವಣೆಗಳೊಂದಿಗೆ ಭಾರತ ಕಣಕ್ಕಿಳಿಯುತ್ತಿದೆ. ಈಗಾಗಲೇ ಪಿತೃತ್ವದ ರಜೆಯ ಮೇಲಿರುವ ಕೊಹ್ಲಿ, ತಂಡವನ್ನು ತೊರೆದು ಭಾರತಕ್ಕೆ ವಾಪಾಸ್ಸಾಗಲಿದ್ದಾರೆ. ಕೊಹ್ಲಿ ಸ್ಥಾನಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಲಾಗಿದೆ. ಇನ್ನು ಇಂಜುರಿಯಿಂದ ಹೊರಬಿದ್ದಿರುವ ವೇಗಿ ಶಮಿ ಬದಲು ಮಹಮ್ಮದ್ ಸಿರಾಜ್ ಕಣಕ್ಕಿಳಿಯಲ್ಲಿದ್ದಾರೆ. ಹಾಗೆಯೇ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆರಂಭಿಕ ಆಟಗಾರ ಪೃಥ್ವಿ ಶಾ ಬದಲು ಶುಭಮನ್ ಗಿಲ್ ಬ್ಯಾಟಿಂಗ್ಗೆ ಇಳಿಯಲಿದ್ದಾರೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಬದಲು ರಿಶಭ್ ಪಂತ್ ಕೀಪಿಂಗ್ ಮಾಡಲಿದ್ದಾರೆ.
‘ಟಿವಿ9 ಕನ್ನಡ ಡಿಜಿಟಲ್’ ಗುರುವಾರ ನಡೆಸಿದ ಫೇಸ್ಬುಕ್ ಲೈವ್ ಸಂವಾದದಲ್ಲಿ 2ನೇ ಟೆಸ್ಟ್ಗೆ ಆಯ್ಕೆಯಾಗಿರುವ ಆಟಗಾರರ ಬಗ್ಗೆ, ಈಗಾಗಲೇ ಇಂಜುರಿಗೊಂಡಿರುವ ಆಟಗಾರರು ಮತ್ತು ತಂಡಕ್ಕೆ ಮರಳಿರುವ ಆಟಗಾರರ ಫಿಟ್ನೆಸ್ ಜೊತೆಗೆ ಕನ್ನಡಿಗ ರಾಹುಲ್ಗೆ ತಂಡದಲ್ಲಿ ಸ್ಥಾನ ನೀಡದಿರುವುದರ ಬಗ್ಗೆ ಚರ್ಚಿಸಲಾಯಿತು. ಫಿಜಿಯೋ ಥೆರಪಿಸ್ಟ್ ಶರಣ್ ಹಾಗೂ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ ಸಂವಾದದಲ್ಲಿ ಪಾಲ್ಗೊಂಡಿದ್ದರು. ಆ್ಯಂಕರ್ ಹರಿಪ್ರಸಾದ್ ಸಂವಾದ ನಿರ್ವಹಿಸಿದರು.
ಕನ್ನಡಿಗ ರಾಹುಲ್ಗೆ ಅವಕಾಶ ನೀಡುವ ವಿಶ್ವಾಸವಿತ್ತು; ಎನ್.ಸಿ.ಅಯ್ಯಪ್ಪ
ಸಂವಾದದಲ್ಲಿ ಮಾತನಾಡಿದ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ, ಟೀಂ ಇಂಡಿಯಾಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ರೋಹಿತ್ ಶರ್ಮ ಹಾಗೂ ಮಹಮ್ಮದ್ ಶಮಿ ಇಲ್ಲದಿರುವುದೇ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಕೊಹ್ಲಿ ಸ್ಥಾನಕ್ಕೆ ರಾಹುಲ್ ಆಯ್ಕೆಯಾಗುವ ನಿರೀಕ್ಷೆ ಇತ್ತು. ರಾಹುಲ್ ಎಂತಹ ಸಂದರ್ಭದಲ್ಲೂ ತಂಡಕ್ಕಾಗಿ ನಿಂತು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಆಯ್ಕೆ ಮಂಡಳಿ ನಾನಾ ರೀತಿ ಯೋಚಿಸಿ ಈ ತೀರ್ಮಾನ ತೆಗೆದುಕೊಂಡಿರಬಹುದು ಎಂದರು.
ಕಳಪೆ ಫಾರ್ಮ್ನಿಂದ ತಂಡದಿಂದ ಸ್ಥಾನಕಳೆದುಕೊಂಡಿರುವ ಪೃಥ್ವಿ ಶಾ ಬಗ್ಗೆ ಮಾತಾನಾಡಿದ ಎನ್.ಸಿ.ಅಯ್ಯಪ್ಪ, ಪೃಥ್ವಿ ಶಾ ತಮ್ಮ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದರು. ಆದರೆ ಈಗ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಹೀಗಾಗಿ ಗಿಲ್ಗೆ ಆಯ್ಕೆ ಮಂಡಳಿ ಅವಕಾಶ ನೀಡಿದೆ. ಗಿಲ್ಗೆ ಇದು ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿರುವುದರಿಂದ ಗಿಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಆಸಿಸ್ ಬೌಲರ್ಗಳ ಮೈಂಡ್ ಗೇಮ್ ಬಗ್ಗೆ ಮಾತಾನಾಡಿದ ಅಯ್ಯಪ್ಪ, ಆಸಿಸ್ ಬೌಲರ್ಗಳು ಪ್ರಮುಖವಾಗಿ ಎದುರಾಳಿ ತಂಡದ ಬೌಲರ್ಗಳನ್ನು ಟಾರ್ಗೆಟ್ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಎದುರಾಳಿ ತಂಡದ ಪ್ರಮುಖ ಬೌಲರ್ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರ ನಡೆದರೆ ತಮ್ಮ ತಂಡಕ್ಕೆ ಬ್ಯಾಟಿಂಗ್ ಮಾಡಲು ಸಹಾಯವಾಗುತ್ತದೆ. ಹೀಗಾಗಿ ಅವರು ಎದುರಾಳಿ ತಂಡದ ಬೌಲರ್ಗಳನ್ನು ಗಾಯಗೊಳಿಸಲು ಸಂಚು ರೂಪಿಸುತ್ತಿರುತ್ತಾರೆ. ಅದರ ಪ್ರತಿಫಲವೇ ವೇಗಿ ಶಮಿ ಗಾಯದ ಸಮಸ್ಯೆಗೆ ಗುರಿಯಾಗಿರುವುದು. ಶಮಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಸೇರಿರುವ ಸಿರಾಜ್ ಮೇಲೆ ಬಹಳಷ್ಟು ನಿರೀಕ್ಷೆಗಳಿರುತ್ತವೆ. ಆದರೆ ಅನನುಭವಿ ಸಿರಾಜ್ ಅಲ್ಲಿನ ಪಿಚ್ಗಳಲ್ಲಿ ಹೇಗೆ ಬೌಲಿಂಗ್ ಮಾಡ್ತಾರೆ ಎಂಬುದು ಪ್ರಶ್ನೆಯಾಗಿದೆ ಎಂದರು.
ಸೈಕಾಲಾಜಿಕಲ್ ಫ್ಯಾಕ್ಟರ್; ಶರಣ್
ಆಟಗಾರರ ದೈಹಿಕ ಕ್ಷಮತೆಯ ಬಗ್ಗೆ ಮಾತಾನಾಡಿದ ಫಿಜಿಯೋ ಥೆರಪಿಸ್ಟ್ ಶರಣ್, ಅಂಡರ್ ಲೈಟ್ನಲ್ಲಿ ಆಡುವುದು, ಪಿಂಕ್ ಬಾಲ್ ಅನ್ನು ಎದುರಿಸುವುದರ ಜೊತೆಗೆ ತಂಡದ ಪ್ರಮುಖ ಅಸ್ತ್ರ ನಾಯಕ ವಿರಾಟ್ ಕೊಹ್ಲಿ ಇಲ್ಲದಿರುವುದು ಉಳಿದ ಆಟಗಾರರ ಮೇಲೆ ಬಹುಮುಖ್ಯ ಪರಿಣಾಮ ಬೀರುತ್ತದೆ. ತಂಡದ ಅನನುಭವಿ ಆಟಗಾರರನ್ನು ನಿಭಾಯಿಸುವ ಜವಾಬ್ದಾರಿ ತಂಡದ ನಾಯಕ ಅಜಿಂಕ್ಯ ರಹಾನೆ ಹಾಗೂ ಕೋಚ್ ರವಿಶಾಸ್ತ್ರಿ ಹೆಗಲ ಮೇಲಿದೆ ಎಂದರು.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಜಡೇಜಾ, ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದರು ಎಷ್ಟರಮಟ್ಟಿಗೆ ಫಿಟ್ ಆಗಿದ್ದಾರೆ ಎಂಬುದು ಪ್ರಶ್ನಾರ್ಹ. ಹೀಗೆ ಹೆಡ್ ಇಂಜುರಿಗೆ ಒಳಗಾಗುವ ಆಟಗಾರರಿಗೆ ಪ್ರಮುಖವಾಗಿ ವಾಂತಿಯಾಗುವುದು, ಮರೆವಿನ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಇಂತಹ ಚಾಲೆಂಜ್ಗಳನ್ನು ಜಡೇಜಾ ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿಯಿಂದಾಗಿ ಆಟಗಾರರು ಕ್ರಿಕೆಟ್ ಅಭ್ಯಾಸವಿಲ್ಲದೆ ಮನೆಯಲ್ಲಿಯೇ ಇರಬೇಕಾಯಿತು. ಕೆಲವು ಆಟಗಾರರು ಜಿಮ್ಗಳಿಗೆ ತೆರಳಿ ಫಿಟ್ನೆಸ್ ಕಾಪಾಡಿಕೊಂಡಿರಬಹುದು. ಆದರೆ ಕ್ರಿಕೆಟ್ ಮೈದಾನದಲ್ಲಿ ಸಿಗುವ ತರಬೇತಿಯೇ ಬೇರೆಯಾದ್ದಗಿರುತ್ತದೆ. ಹೀಗಾಗಿ ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳಲ್ಲಿ ಆಟಗಾರರು ಆಡಲು ತಿಣುಕಾಡುವುದಲ್ಲದೆ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದರು.
ಕೆಲ ಬದಲಾವಣೆಗಳೊಂದಿಗೆ 2ನೇ ಟೆಸ್ಟ್ಗೆ ತಯಾರಿ ನಡೆಸುತ್ತಿರುವ ಭಾರತ ತಂಡವು ಎದುರಾಳಿಗಳ ಮೈಂಡ್ ಗೇಮ್ ಹಾಗೂ ಅನುಭವಿ ಆಟಗಾರರ ಅನುಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೈದಾನಕ್ಕಿಳಿಯಬೇಕು. ಜೊತೆಗೆ ಹಿಂದಿನ ಪಂದ್ಯದ ನ್ಯೂನತೆಗಳೆಲ್ಲವನ್ನು ಸರಿಪಡಿಸಿಕೊಂಡು ಪಂದ್ಯದ ಗೆಲುವಿಗೆ ತಂಡದ ಎಲ್ಲರೂ ಶ್ರಮಿಸಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ.
India vs Australia Test Cricket 2020 | ಚುಟುಕು ಸಮರದಲ್ಲಿ ರನ್ ಮಳೆ ಹರಿಸಿದ್ದ ರಾಹುಲ್ಗಿಲ್ಲ ಸ್ಥಾನ
Published On - 6:17 pm, Fri, 25 December 20