ಕೆಲವೊಂದು ವಿಚಾರಗಳು ನಮ್ಮ ಕಣ್ಣ ಮುಂದೆ ನೂರು ಸಲ ಹಾದುಹೋಗಿದ್ದರೂ ಅದನ್ನು ನಾವು ಗಮನಿಸಿರುವುದಿಲ್ಲ. ಯಾರಾದರರೊಬ್ಬರು ಅದರ ಬಗ್ಗೆ ಬೆಳಕು ಚೆಲ್ಲುವ ತನಕ ಆ ಕುರಿತು ಯೋಚಿಸಿಯೂ ಇರುವುದಿಲ್ಲ. ಆದರೆ, ಅಂಥದ್ದೊಂದು ಅಪರೂಪದ ಸಂಗತಿ ಬಗ್ಗೆ ಕೇಳಿದ ನಂತರ ಅರೆ! ಹೌದಲ್ವಾ, ಇದನ್ನು ಎಲ್ಲೋ ನೋಡಿದ್ದೆನಲ್ಲಾ, ಕೇಳಿದ್ದೆನಲ್ಲಾ ಎಂಬ ಯೋಚನೆ ತಲೆಯನ್ನು ಹೊಕ್ಕಿ ಬಿಡುತ್ತದೆ. ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಇಂದು ಈ ಲೇಖನದ ಮೂಲಕ ನಿಮಗೆ ಇಂಥದ್ದೇ ಒಂದು ವಿಷಯದ ಬಗ್ಗೆ ಪರಿಚಯಿಸಲಿದ್ದೇವೆ. ಇದನ್ನು ನೋಡಿದ ತಕ್ಷಣ ನಿಮ್ಮ ಮನಸ್ಸು ಇದನ್ನೆಲ್ಲೋ ನೋಡಿದ್ದೆನಲ್ಲಾ ಎಂದು ಯೋಚಿಸುವುದು ಪಕ್ಕಾ. ಅದರಲ್ಲೂ ನೀವು ಮೈ ಹುಷಾರಿಲ್ಲ ಎಂದು ಯಾವಾಗಲಾದರೂ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರಂತೂ ಇದನ್ನು ಕಂಡಿರಲೇಬೇಕು. ಅಂದಹಾಗೆ ಇವತ್ತಿನ ಈ ಕುತೂಹಲಕಾರಿ ವಿಷಯ ಕನ್ನಡ ಮಾತ್ರೆ!
ಕನ್ನಡ ಮಾತ್ರೆ? ಅದೇನದು? ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ಅಚ್ಚರಿಯೇನಲ್ಲ. ಇದೇನಪ್ಪಾ ಕನ್ನಡ ಮಾತ್ರೆ. ಭಾಷೆ ಬರದೇ ಇರುವವರಿಗೆ ಇದನ್ನು ಕೊಡಬೇಕಾ? ಕನ್ನಡ ಕಲಿಸೋಕೆ ಕೊಡುವ ಮಾತ್ರೆನಾ? ಎಂಬೆಲ್ಲಾ ಪ್ರಶ್ನೆಗಳು ಒಂದರ ಹಿಂದೊಂದರಂತೆ ಉದ್ಭವಿಸಬಹುದು. ಒಂದುವೇಳೆ ವೈದ್ಯರು ಕೊಡುವ ಮಾತ್ರೆಯನ್ನು ಹತ್ತಾರು ಬಾರಿ ಹಿಂದೆ ಮುಂದೆ ತಿರುಗಿಸಿ ನೋಡಿ ನುಂಗುವವರಾಗಿದ್ದರೆ ಈ ಕನ್ನಡ ಮಾತ್ರೆಯನ್ನು ನುಂಗಿರುವ ನೆನಪೂ ಆಗಬಹುದು. ಅಸಲಿ ವಿಚಾರ ಏನಪ್ಪಾ ಎಂದರೆ ಈ ಮಾತ್ರೆಯನ್ನು ಸರ್ಕಾರಿ ಆಸ್ಪತ್ರೆಗೆ ಹೋದ ಬಹುತೇಕರು ಖಂಡಿತವಾಗಿಯೂ ನುಂಗಿರುತ್ತಾರೆ. ಆದರೆ, ಗಮನವಿಟ್ಟು ನೋಡಿರುವುದು ಅನುಮಾನ ಅಷ್ಟೇ. ಈ ಮಾತ್ರೆಯ ಬಗ್ಗೆ ಸುಲಭವಾಗಿ ನೆನಪಾಗಬೇಕೆಂದರೆ ಈ ಕೆಳಗಿನ ಚಿತ್ರವನ್ನೊಮ್ಮೆ ಸರಿಯಾಗಿ ನೋಡಿ.
ಮಾತ್ರೆಯ ಮೇಲೆ ಆ ಇ ಎಂದು ಬರೆದಿರುವುದು ಕಾಣಿಸಿತಾ? ಇದನ್ನು ಕೈಯಲ್ಲಿ ಹಿಡಿದಿರುವ ನೆನಪಾಯಿತಾ? ಹೌದಾದರೆ ನೀವೂ ಕನ್ನಡ ಮಾತ್ರೆಯನ್ನು ನುಂಗಿದವರೇ ಹೌದು. ಅದರಲ್ಲೂ ಕೊರೊನಾ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಪಡೆದ ಕೆಲವರಾದರೂ ಈ ಮಾತ್ರೆಯನ್ನು ಇತ್ತೀಚೆಗೆ ನುಂಗಿರುತ್ತೀರಿ. ಅಂದಹಾಗೆ ಈ ಮಾತ್ರೆಯ ಮೇಲಿರುವ ಆ ಇ ನಮ್ಮ ರಾಜ್ಯದ ಆರೋಗ್ಯ ಇಲಾಖೆಯನ್ನು ಪ್ರತಿನಿಧಿಸುತ್ತದೆ. ಆರೋಗ್ಯ ಹಾಗೂ ಇಲಾಖೆ ಎಂಬ ಎರಡು ಪದಗಳ ಮೊದಲ ಅಕ್ಷರಗಳನ್ನು ತೆಗೆದು ಆ ಇ ಎಂದು ಮುದ್ರಿಸಿರಲಾಗುತ್ತದೆ. ಹೀಗಾಗಿ ಇದು ಕನ್ನಡ ಮಾತ್ರೆ.
ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ತನ್ನ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಮಾತ್ರೆ, ಕ್ಯಾಫ್ಸೂಲ್‌ಗಳ ಮೇಲೆ ಆ-ಇ (ಆರೋಗ್ಯ ಇಲಾಖೆ) ಎಂದು ಮುದ್ರಿಸುವ ಮೂಲಕ ಮಾರುಕಟ್ಟೆಯಲ್ಲಿ ಆಗುವ ದುರುಪಯೋಗ ಹಾಗೂ ನಕಲಿ ಮಾತ್ರೆಗಳ ಹಾವಳಿ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ರೀತಿ ಮಾತ್ರೆಗಳ ಮೇಲೆ ಕನ್ನಡ ಅಕ್ಷರ ಮುದ್ರಿಸಲು ಆರಂಭಿಸಿ ಸುಮಾರು ವರ್ಷಗಳೇ ಆಗಿವೆಯಾದರೂ ಅದರ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ತಲುಪಿಲ್ಲವಷ್ಟೇ.
ಹೀಗೆ ಅಕ್ಷರ ಮುದ್ರಿಸುವುದಕ್ಕೂ ಮೊದಲು ಸರ್ಕಾರ ಔಷಧಗಳ ಸ್ಟ್ರಿಪ್ ಮೇಲೆ ಸರ್ಕಾರಿ ಮುದ್ರೆ ಜತೆಗೆ ಇದು ಸರ್ಕಾರದ ಸರಬರಾಜು, ಮಾರಾಟಕ್ಕಲ್ಲ ಎಂದು ಮುದ್ರಣ ಮಾಡುತ್ತಿತ್ತು. ಆದರೆ, ಕೆಲವರು ಆ ಮಾತ್ರೆಗಳನ್ನು ಪೊಟ್ಟಣದಿಂದ ತೆಗೆದು ಮಾರಾಟ ಮಾಡುವ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದ್ದರು. ನಂತರ ಅದರ ತಡೆಗೆ ಯೋಜನೆ ರೂಪಿಸಿದ ಸರ್ಕಾರ ಮಾತ್ರೆಗಳ ಮೇಲೆ ಆರೋಗ್ಯ ಇಲಾಖೆಯ ಆರಂಭಿಕ ಅಕ್ಷರಗಳನ್ನು ಮುದ್ರಿಸಿ, ಗುಣಮಟ್ಟ ಕಾಪಾಡುವುದರೊಂದಿಗೆ ದುರುಪಯೋಗಕ್ಕೂ ತಡೆಯೊಡ್ಡುವ ಪ್ರಯತ್ನ ಮಾಡಿದೆ.
ಆರೋಗ್ಯ ಇಲಾಖೆ ಮೊದಲಿನಿಂದಲೂ ಕನ್ನಡಕ್ಕೆ ಒತ್ತು ನೀಡುತ್ತಿದೆ. ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿ ಹೆಚ್ಚಾಗಿ ಕನ್ನಡದಲ್ಲಿಯೇ ಮಾತನಾಡುವುದನ್ನು ನೀವು ಕೇಳಿರಬಹುದು. ಕೆಲ ವೈದ್ಯರು ಮಾತ್ರೆಗಳನ್ನು ಬರೆಯುವಾಗ ಅದರ ಮೇಲೆ ಸ್ಪಷ್ಟವಾಗಿ ಊಟಕ್ಕೆ ಮೊದಲು, ಊಟದ ನಂತರ ಎಂದು ಬರೆದುಕೊಡುತ್ತಾರೆ ಕೂಡಾ. ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಕನ್ನಡ ಬಳಸಲು ಪ್ರಮುಖ ಕಾರಣವೆಂದರೆ ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವವರು ಬಡವರು ಮತ್ತು ಮಧ್ಯಮವರ್ಗದ ಜನ. ಇವರಲ್ಲಿ ಬಹುತೇಕರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಹೀಗಾಗಿ ಇವರ ಜೊತೆಗೆ ವ್ಯವಹರಿಸುವಾಗ ಕನ್ನಡ ಬಳಕೆ ಅನಿವಾರ್ಯವಾಗಿರುತ್ತದೆ. ಅತ್ಯಂತ ಗಹನವಾದ ವೈದ್ಯಕೀಯ ವಿಜ್ಞಾನದ ವಿಚಾರಗಳನ್ನೂ ಆರೋಗ್ಯ ಇಲಾಖೆ ಸಿಬ್ಬಂದಿ ಸರಳವಾಗಿ ತಿಳಿಗನ್ನಡದಲ್ಲಿ ವಿವರಿಸುತ್ತಾರೆ.
ನಕಲು ತಡೆಯುವ ಉದ್ದೇಶದೊಂದಿಗೆ ಸರ್ಕಾರ ಆರೋಗ್ಯ ಇಲಾಖೆ ಮಾತ್ರೆಗಳ ಮೇಲೆ ಕನ್ನಡ ಅಕ್ಷರ ಮುದ್ರಿಸುವ ನಿಲುವು ತಳೆದಿದ್ದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಕಳೆದ ಕೆಲ ವರ್ಷಗಳಿಂದ ಈ ಮಾರ್ಗವನ್ನು ಅನುಸರಿಸಲಾಗುತ್ತಿದ್ದು, ಎಷ್ಟೋ ಸಂದರ್ಭಗಳಲ್ಲಿ ಈ ಕನ್ನಡ ಮಾತ್ರೆಯನ್ನು ನಾವೆಲ್ಲರೂ ಹೆಚ್ಚು ಗಮನೆ ನೀಡದೇ ನುಂಗಿರಬಹುದು. ಗಮ್ಮತ್ತಿನ ಸಂಗತಿ ಎಂದರೆ ಚಿಕ್ಕವರಿದ್ದಾಗ ಶಾಲೆಯಲ್ಲಿ ಕನ್ನಡ ವ್ಯಾಕರಣ ಓದುವಾಗ ಒಂದು ಮಾತ್ರೆಯ ಕಾಲ, ಎರಡು ಮಾತ್ರೆಯ ಕಾಲ ಎಂದೆಲ್ಲಾ ಓದಿರುತ್ತೇವೆ. ಆದರೆ, ಇಲ್ಲಿ ಮಾತ್ರೆಯ ಮೇಲೆಯೇ ಕನ್ನಡ ಬಂದು ಕೂತಿದೆ ನೋಡಿ!
ಕಚಗುಳಿ: ನಾವು ಬೇರೆಯವರ ಭಾಷಾ ಪ್ರೇಮ ನೋಡಿ ಕನ್ನಡಿಗರು ಹಾಗಿಲ್ಲವಲ್ಲಾ ಅಂದುಕೊಳ್ಳುತ್ತಿರುತ್ತೇವೆ. ಹಿಂದಿ ಹೇರಿಕೆ ಆಯ್ತು, ಕನ್ನಡ ಕಡೆಗಣನೆ ಆಯ್ತು ಎಂದು ಬೇಸರಿಸುತ್ತೇವೆ. ನಮ್ಮ ಆರೋಗ್ಯ ಇಲಾಖೆಯೇನಾದರೂ ದೊಡ್ಡ ಮನಸ್ಸು ಮಾಡಿ ಇಡೀ ದೇಶಕ್ಕೂ ಮಾತ್ರೆ ಸರಬರಾಜು ಮಾಡಿ ಎಲ್ಲರಿಗೂ ಕನ್ನಡ ಮಾತ್ರೆ ಕೊಟ್ಟರೆ, ಎಲ್ಲರ ಮೈಯಲ್ಲೂ ಕನ್ನಡ ಹರಿಯುತ್ತಿದೆ ಎಂದು ಸಮಾಧಾನಪಟ್ಟುಕೊಳ್ಳಬಹುದೇನು ಅಲ್ವಾ?
ಇದನ್ನೂ ಓದಿ:
‘ಕನ್ನಡದ ಶಾಲೆಯಲ್ಲಿ ಓದಿದರೆ ಸಾಕಾಗಲ್ಲ; ಅ ಕಾರಕ್ಕೂ, ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ’: ಅನಿತಾ ಭಟ್ ಕ್ಲಾಸ್