ನಾನೆಂಬ ಪರಿಮಳದ ಹಾದಿಯಲಿ: ಕಂಬಳಿ ಹುಳವೊಂದು ಚಿಟ್ಟೆಯಾಗುವ ಘಳಿಗೆ ಸಹಿಸಿಕೊಂಡಿದ್ದಕ್ಕೇ…

|

Updated on: Jan 21, 2021 | 11:39 AM

‘ಕುಬುಸ, ತೊಟ್ಟಿಲಶಾಸ್ತ್ರದ ಸಮಯದಲ್ಲಿ ನನ್ನನ್ನು ದೂರ ತಳ್ಳಿದಂತೆ ಭಾಸವಾಗುತ್ತಿತ್ತು. ಎಲ್ಲಡೆಯೂ ಕಾಲುಕಸಕ್ಕಿಂತ ಕೀಳು ಎಂಬ ಭಾವನೆ ಬರುವಂತೆ ನನ್ನನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಅನಿಸುತ್ತಿತ್ತು. ಇಂಥ ಮನಸ್ಸುಗಳಿಗೆ ವೈಚಾರಿಕತೆ ಮಾತಾಡಿ ಅರ್ಥ ಮಾಡಿಸುವುದೂ ವ್ಯರ್ಥ ಅನ್ನಿಸಿತು. ಆ ದಿನಗಳಲ್ಲೇ ನನಗೆ ನನ್ನ ಅಸ್ತಿತ್ವದ ಪ್ರಶ್ನೆ ಕಾಡತೊಡಗಿದ್ದು. ಶಾಸ್ತ್ರ ಸಂಪ್ರದಾಯಗಳ ಕುರುಡು ನಂಬಿಕೆಗಳ ಕುರಿತು ಆಗಲೇ ಮನಸ್ಸಿನಲ್ಲಿ ವಿರೋಧ ಹುಟ್ಟಲು ಆರಂಭಗೊಂಡಿತು.‘ ಸುನಂದಾ ಕಡಮೆ

ನಾನೆಂಬ ಪರಿಮಳದ ಹಾದಿಯಲಿ: ಕಂಬಳಿ ಹುಳವೊಂದು ಚಿಟ್ಟೆಯಾಗುವ ಘಳಿಗೆ ಸಹಿಸಿಕೊಂಡಿದ್ದಕ್ಕೇ...
ಕಥೆಗಾರ್ತಿ ಸುನಂದಾ ಕಡಮೆ
Follow us on

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಕಥೆಗಾರ್ತಿ ಸುನಂದಾ ಕಡಮೆ ಅವರ ಅನುಭವ ಬರಹ ನಿಮ್ಮ ಓದಿಗೆ

 

ಬಿ.ಕಾಂ ನಲ್ಲಿ ಕಲಿಯುತ್ತಿದ್ದಾಗ ಒಂದು ಸರಕಾರಿ ನೌಕರಿ ಹಿಡಿಯುವುದು ನನ್ನ ಮತ್ತು ನನ್ನ ತಂದೆಯ ಒಂದಂಶದ ಕಾರ್ಯಕ್ರಮವಾಗಿತ್ತು. ಹೆಣ್ಣುಮಕ್ಕಳಿಗೆ ಒಂದು ಸರಕಾರಿ ನೌಕರಿ ಅಂತ ಇದ್ದರೆ, ಅವರ ಕಷ್ಟಗಳು ಕೊಂಚ ಸಹನೀಯವಾಗಿರುತ್ತವೆ ಎಂಬುದು ನನ್ನ ತಂದೆಯವರು ನೋಡಿ ಕೇಳಿ ಅರಿತುಕೊಂಡ ವಿಚಾರವಾಗಿತ್ತು. ಹಾಗಾಗಿ ಪಿಯೂ ಮುಗಿದ ತಕ್ಷಣವೇ ನನ್ನನ್ನು ಸಾಲುಸಾಲಾಗಿ ಕೆ.ಎಸ್.ಆರ್​.ಟಿ.ಸಿ ಜೂನಿಯರ್ ಅಸಿಸ್ಟಂಟ್, ಸ್ಟಾಫ್​ ಸೆಲೆಕ್ಷನ್ ಕಮೀಷನ್ ಮತ್ತು ಕೆ.ಪಿ.ಎಸ್.​ಸಿ, ಎಸ್.ಡಿ.ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಹುರಿದುಂಬಿಸಿದ್ದರು. ಕೊನೆಗೆ ಕೆ.ಎಸ್.ಆರ್​.ಟಿ.ಸಿ ಲಿಖಿತ ಪರೀಕ್ಷೆ ಪಾಸಾಗಿದ್ದೆ.

ನಂತರ ನನ್ನ ತಂದೆ ಹುಬ್ಬಳ್ಳಿಯಲ್ಲಿರುವ ಪ್ರಭಾವೀ ಮಹಿಳಾ ರಾಜಕಾರಣಿ ಸಾವಿತ್ರಿ ಗುಂಡಿ ಎಂಬುವವರ ಮನೆಗೂ ಕರೆದೊಯ್ದಿದ್ದರು. ಹೊರಗೆಲ್ಲೋ ಹೋದ ಅವರನ್ನು ಕಾಯುತ್ತ ಅವರ ಮನೆಯೆದಿರು ಕಲ್ಲುಬೆಂಚಿನ ಮೇಲೆ ದಣಿವಾರಿಸಿಕೊಳ್ಳುತ್ತ ಕೂತ ನನ್ನ ತಂದೆ, ಸಿಂಡರಿಸಿಕೊಂಡ ನನ್ನ ಮುಖವನ್ನೇ ದಿಟ್ಟಿಸುತ್ತ ‘ಕಷ್ಟ ನೋವು ಬೇಸರ ಇಲ್ಲದೇ ಯಾವ ಸುಖವೂ ಸಿಗೂದಿಲ್ಲ ಮಗಳೇ’ ಎಂದಿದ್ದರು. ನನಗೆ ಆಗ ಆ ಮಾತಿನ ಅರ್ಥ ಹಿಡಿಯಲಾಗಿರಲಿಲ್ಲ. ಯಾಕೋ ಆ ನೌಕರಿಗೆ ಆ ಮಹಿಳೆಯ ಪ್ರಭಾವ ಫಲಕಾರಿಯಾಗಲಿಲ್ಲ. ತಂದೆಯವರ ತೀವ್ರ ಅನಾರೋಗ್ಯದ ಕಾರಣ ಅದೇ ವರ್ಷ ಅಂದರೆ ನನ್ನ ಇಪ್ಪತ್ತೊಂದನೇ ವಯಸ್ಸಿಗೇ, ಬಿ.ಕಾಂ ಫೈನಲ್ ಪರೀಕ್ಷೆಗೆ ಒಂದು ತಿಂಗಳ ಮೊದಲು 1988, ಫೆಬ್ರುವರಿಯಲ್ಲಿ ನನ್ನ ಮದುವೆಯಾಯಿತು. ಅನಿವಾರ್ಯ ಕಾರಣದಿಂದ ಪರೀಕ್ಷೆಗೆ ಹೋಗಲಾಗಲಿಲ್ಲ. ಅದೇ ವರ್ಷ ನನ್ನ ದೊಡ್ಡ ಮಗಳು ಹುಟ್ಟಿದಳು. ಬದುಕನ್ನು ಅಷ್ಟೆಲ್ಲ ಸೀರಿಯಸ್ ಆಗಿ ತೆಗೆದುಕೊಳ್ಳುವ ವಯಸ್ಸಲ್ಲ, ಆದರೆ ಹೆಣ್ಣುಮಕ್ಕಳಿಗೆ ಮದುವೆ ಗ೦ಡ ಮಕ್ಕಳು ಇವೆಲ್ಲ ಅನಿವಾರ್ಯ ಎಂದು ಎಲ್ಲರೂ ಭಾವಿಸಿದ ಮತ್ತು ಅದನ್ನೇ ನಮ್ಮ ತಲೆಯಲ್ಲೂ ನಾಜೂಕಾಗಿ ತುಂಬಿದ ಕಾಲಘಟ್ಟವದು, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಕ್ಷಣ ಕ್ಷಣವೂ ಜೀವಿಸಲು ಆರಂಭಿಸಿದ ನಂತರ ಒಂದೊoದೇ ಭ್ರಮೆ ಕಳಚಲು ಆರಂಭ.

ಚಿಕ್ಕಮಗು ಬಂದ ಮನೆ ಮತ್ತು ತಾಯಿ ಸದಾ ಜಾಗ್ರತ ಅವಸ್ಥೆಯಲ್ಲಿರುವುದು ಅಂದಿನ ಅಗತ್ಯ. ಅಸಹಾಯಕ ಮಗು. ಚಿಂತೆ ಬಿಟ್ಟು ಒಂದು ಘಳಿಗೆ ನಿದ್ದೆ ಮಾಡುವ ಹಾಗೂ ಇಲ್ಲ. ನಮ್ಮ ಮೂಲಭೂತ ಸಮಯವನ್ನೆಲ್ಲ ಅದಕ್ಕೇ ಮೀಸಲಿಡಬೇಕು. ದಿನದ ಇಪ್ಪತ್ನಾಲ್ಕು ಗಂಟೆಗಳೂ ನನ್ನವಲ್ಲ. ಮನೆಯ ಸ್ವಚ್ಛತೆಗಾಗಿ, ಅಡುಗೆಗಾಗಿ, ಅತಿಥಿ ಅಭ್ಯಾಗತರ ಸತ್ಕಾರಕ್ಕಾಗಿ ಮತ್ತು ಮಗುವಿನ ದೇಖರೇಖಿಗಾಗಿಯೇ ಮೀಸಲು. ತಲೆಗೂದಲ ಒಪ್ಪ ಹೋಗಲಿ ಸ್ವಂತ ಕಕ್ಕಸ್ಸಿಗೆ ಹೋಗಲೂ ಅವಸರದಲ್ಲೇ ಸಮಯ ಹೊಂದಿಸಿಕೊಳ್ಳಬೇಕಾದ ಪರಿಸ್ಥಿತಿ. ಎಲ್ಲ ತಾಯಂದಿರಿಗೂ ಇವು ಮಾಮೂಲು ಅಂತ ಅಮ್ಮನ ಬುದ್ಧಿಮಾತು. ಸಮಯಕ್ಕೆ ಸರಿಯಾಗಿ ವೇಳಾಪಟ್ಟಿಯ ಪ್ರಕಾರವೇ ಕೆಲಸ ಕಾರ್ಯಗಳು ಜರುಗಬೇಕು. ಸ್ನಾನಕ್ಕೆ ಎರಡು ನಿಮಿಷ ಹೆಚ್ಚು ತೆಗೆದುಕೊಂಡರೆ ಮಗು ಎದ್ದು ಬಿಟ್ಟಿರುತ್ತದೆ. ಸರಿಯಾಗಿ ಕೂತು ಊಟ ಮಾಡುವುದಕ್ಕೂ ವ್ಯವಧಾನವಿಲ್ಲ, ಊಟದ ಸರೀ ಹೊತ್ತಿಗೆ ಅದು ಕಕ್ಕ ಮಾಡಿಕೊಂಡು ಬಿಡುತ್ತದೆ ಅಯ್ಯೋ, ಯಾಕಾಗಿ ಯಾರಿಗಾಗಿ ಉಸಿರಾಡುತ್ತಿದ್ದೇನೆ ನಾನು?

ಆ ನಡುವೆ ‘ಒಂದು ಡಿಗ್ರಿಯನ್ನೂ ಮುಗಿಸಿಲ್ಲ, ಏನುಪಯೋಗ?’ ಎಂಬೆಲ್ಲ ಮಾತುಗಳು ಸುತ್ತ ತೇಲಿತೇಲಿ ಬಂದಂತೆನ್ನಿಸಿ, ಅರ್ಧಕ್ಕೆ ಬಿಟ್ಟಿದ್ದ ಬಿ.ಕಾಂ ಪರೀಕ್ಷೆಗೆ ಕಟ್ಟಿದೆ. ಮಗುವನ್ನು ಕಂಕುಳಲ್ಲಿಟ್ಟುಕೊoಡು ಹೇಗೆ ಅಕೌಂಟೆನ್ಸಿ, ಕಮರ್ಷಿಯಲ್ ಪ್ರ್ಯಾಕ್ಟೀಸ್, ಅರ್ಥಮೆಟಿಕ್ ಅಂತೆಲ್ಲಾ ಮಾಡಿದೆ? ಮಗು ಚಾಪೆಯಿಂದ ಹೊರಹೋಗಿ ಕಸಕಡ್ಡಿ ಬಾಯಲ್ಲಿ ಹಾಕದ ಹಾಗೆ ಅದರ ಕಾಲಿಗೆ ಒಂದು ಬಳ್ಳಿ ಹಾಕಿ ಸನಿಹದ ಕುರ್ಚಿಗೆ ಕಟ್ಟುತ್ತಿದ್ದೆ. ಡಿಗ್ರಿಯನ್ನೂ ಪೂರ್ತಿ ಮಾಡುವ ಸಾಮರ್ಥ್ಯ ಇಲ್ಲ ಎಂಬ ಮಾತು ಅವಹೇಳನದಂತೆ ಎದೆಗೆ ಇರಿಯುತ್ತಿತ್ತು. ಒಮ್ಮೆಲೇ ಆರೂ ವಿಷಯಗಳಲ್ಲಿ ಪಾಸೂ ಆದೆ. ಕೆಲ ಕುಹಕಿಗಳು ನಂಬಲಿಲ್ಲ, ಬಿ.ಕಾಂ ವಿಷಯಗಳನ್ನು ಮನೆಯಲ್ಲಿ ಕೂತು ಅಭ್ಯಸಿಸಿ ಬರೆಯಲು ಹೇಗೆ ಸಾಧ್ಯ? ಪಾಸಾಗಿದ್ದೇ ಸುಳ್ಳು ಅಂದರು. ಹಾಗಂತ ಎಲ್ಲರಿಗೂ ಅಂಕಪಟ್ಟಿಯ ಝೆರಾಕ್ಸ್ ಪೋಸ್ಟ್ ಮಾಡಲು ಸಾಧ್ಯವೇ, ನಾನು ಡಿಗ್ರಿ ಮುಗಿಸಿದ್ದು ಸತ್ಯ ಅಂತ ಅವರಿಗೆಲ್ಲ ತೋರಿಸಲೆಂದೇ ನಂತರ ಕೆ.ಯು.ಡಿಯಲ್ಲಿ ಕರೆಸ್ಪಾಂಡೆನ್ಸ್​ನಲ್ಲಿ ಕನ್ನಡ ಎಂ.ಎ ಮಾಡಿಕೊಂಡೆ. ಆ ಸಂದರ್ಭದಲ್ಲೇ ನನಗೆ ಕನ್ನಡ ಸಾಹಿತ್ಯದ ಓದಿನ ರುಚಿ ಹೆಚ್ಚಾದದ್ದು. ದೊಡ್ಡ ಮಗಳಿಗೆ ಐದು ತುಂಬಿದಾಗ ಎರಡನೇ ಮಗು ಹೊಟ್ಟೆಯಲ್ಲಿದ್ದಾಗ, ಆಗಲೇ ಕೆಲವರು ‘ತೋರಿಸಿಕೊಂಡಿಲ್ಲವೇ? ಇದೂ ಹೆಣ್ಣಾಗಿದ್ದರೆ?’ ಅಂತ ತಾವೇ ಚಿಂತಾಕ್ರಾoತ ಮುಖಭಾವ ಹೊತ್ತು ಆತಂಕ ವ್ಯಕ್ತಪಡಿಸುತ್ತಿದ್ದರು, ಇದೆಲ್ಲವೂ ನನಗೆ ಒಂದು ರೀತಿಯ ತಮಾಷೆಯಾಗಿ ಕಾಣುತ್ತಿತ್ತು.

ಆ ಮೊದಲು ದೊಡ್ಡ ಮಗಳ ಜೊತೆಗೆ ಆಡಿಕೊಂಡು ಬೆಳೆಯಲು ಇನ್ನೊಂದು ಮಗು ಬೇಕು ಎಂಬ ಪ್ರಾಮಾಣಿಕ ಭಾವವಷ್ಟೇ ನನ್ನ ಮನಸ್ಸನ್ನು ಆವರಿಸಿತ್ತು, ಅದರ ಹೊರತಾಗಿ ಹುಟ್ಟುವ ಮಗು ಹೆಣ್ಣೋ ಗಂಡೋ ಎಂಬ ಅಲೋಚನೆ ಕಿಂಚಿತ್ತೂ ಸುಳಿದಿರಲಿಲ್ಲ. ಆದರೆ ಎರಡನೇ ಮಗಳು ಹುಟ್ಟಿದಾಗ ಸುತ್ತಣ ಸಮಾಜ ನನ್ನನ್ನು ನೋಡುವ ದೃಷ್ಟಿಯೇ ಬದಲಾದಂತೆನಿಸಿತು. ನನ್ನ ಸಂಬಂಧಿಗಳಲ್ಲೇ ಒಬ್ಬಳು ಸುದ್ದಿ ಕೇಳಿದ್ದೇ ಎಂಥದೋ ಕುಹಕವಾಡಿ ಚಪ್ಪಾಳೆ ತಟ್ಟಿ ಸಂಭ್ರಮಪಟ್ಟಳು ಎಂಬ ವಿಷಯವೂ ನನ್ನ ಕಿವಿಗೆ ಬಿತ್ತು. ಆದರೆ ನನಗಂತೂ ನಿಜಕ್ಕೂ ಸಂಭ್ರಮವೇ ಆಗಿತ್ತು, ನನ್ನ ಎರಡನೇ ಮಗಳು ಎಷ್ಟು ಮುದ್ದಾಗಿದ್ದಳೆಂದರೆ, ಆಸ್ಪತ್ರೆಯಲ್ಲಿ ನಾನವಳನ್ನು ಹೆಚ್ಚು ತೊಟ್ಟಿಲಿಗೇ ಹಾಕದೇ ಎತ್ತಿಕೊಂಡು ಮುದ್ದಿಸುತ್ತ ಕೂತಿರುವುದನ್ನು ಗಮನಿಸಿದ ಅಲ್ಲಿಯ ದಾದಿಗಳೂ ಅಚ್ಚರಿ ಪಡುತ್ತಿದ್ದರು. ಆ ಸಮಯಕ್ಕೆ ಆಸ್ಪತ್ರೆಯ ನಮ್ಮ ವಾರ್ಡಿನಲ್ಲಿ ಎಡ್ಮಿಟ್ ಆದ ಎಲ್ಲರಿಗೂ ಕಾಕತಾಳೀಯವೆಂಬoತೆ ಸಾಲಾಗಿ ಹೆಣ್ಣುಮಕ್ಕಳೇ ಹುಟ್ಟಿದ್ದರು, ಕೆಲವರಿಗೆ ಎರಡನೆಯದ್ದು ಕೆಲವರಿಗೆ ಮೂರನೇಯದ್ದು ಹೀಗೆ, ಅವರ ಮನೆಯರ‍್ಯಾರೂ ನೋಡಲು ಬರುತ್ತಿಲ್ಲ ಎಂಬ ಸಂಗತಿ ಹಾಗೂ ಬಾಣಂತಿಯರು ಅತ್ತುಕರೆದು ಮಾಡುತ್ತ ತಮ್ಮ ಕೂಸಿಗೆ ಹಾಲನ್ನೂ ನೀಡದೇ ಕಡೆಗಣಿಸುತ್ತಿರುವ ದೃಶ್ಯ ಕಣ್ಣಿಗೆ ರಾಚುತ್ತಿತ್ತು. ಆಗೆಲ್ಲ ಅವರಿಗೆ ದಾದಿಗಳು ನನ್ನನ್ನು ತೋರಿಸಿ ಬುದ್ದಿ ಹೇಳುತ್ತಿದ್ದರು, ಏನೂ ಅರಿಯದ ನಮ್ಮ ಹಸುಳೆಯನ್ನು ನಾವೇ ತಿರಸ್ಕರಿಸುವುದೆಂದರೆ ಏನರ್ಥ? ಇವೆಲ್ಲ ಏನು ನಡೆಯುತ್ತಿದೆ ಅಂತಲೇ ನನಗೆ ಸೋಜಿಗ.

ನಿನಗೆ ಬರೀ ಹೆಣ್ಮಕ್ಕಳೇ ಅಂತಲ್ವೇ?

ಸಾಂದರ್ಭಿಕ ಚಿತ್ರ

ನಂತರದ ದಿನಗಳಲ್ಲಿ ನನ್ನ ಪರಿಚಿತರು ಮತ್ತು ಸಂಬಂಧಿಗಳಲ್ಲಿ ಕೆಲವರು ‘ಮೂರನೆಯದ್ದು ಗಂಡಾಗ್ತದೆ, ಬೇಸರ ಮಾಡ್ಬೇಡ’ ಅನ್ನುತ್ತಿದ್ದರು. ಯಾರದಾದರೂ ಮದುವೆ ಮುಂಜಿಗಳಿಗೆ ಹೋದರೆ ಅಲ್ಲಿ ನೆರೆದ ಒಬ್ಬರಾದರೂ ‘ಇವಳಿಗೆ ಇಬ್ಬರು ಹೆಣ್ಣುಮಕ್ಕಳೇ, ಅಯ್ಯೋ ಪಾಪ’ ಅನ್ನದೇ ಇರುತ್ತಿರಲಿಲ್ಲ. ನಾನು ಯಾವುದೋ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಹಾಗೆ ಇವರುಗಳೇಕೆ ಪಾಪ ಪಾಪ ಅನ್ನುತ್ತ ಕನಿಕರ ತೋರುತ್ತಾರೆ? ಎಂದೇ ನನಗೆ ತಿಳಿಯದಾಗಿತ್ತು. ಬಹುವರ್ಷಗಳ ನಂತರ ಯಾರದೋ ಮದುವೆಯಲ್ಲಿ ಭೇಟಿಯಾದ ನಮ್ಮ ದೂರದ ಸಂಬಂಧಿಯೊಬ್ಬಳು ನನ್ನನ್ನು ಕಂಡವಳೇ ‘ಓಹ್! ನಿನಗೆ ಬರೀ ಹೆಣ್ಮಕ್ಕಳೇ ಅಂತಲ್ವೇ?’ ಅಂತ ಕೇಳಿದ್ದಳು. ಹೌದು ಅಂದಿದ್ದೆ ಹೆಮ್ಮೆಯಿಂದಲೇ. ನಾನು ಎತ್ತಿಕೊಂಡ ನನ್ನ ಎರಡನೇ ಮಗಳನ್ನು ನೋಡುತ್ತ ‘ಇವಳು ಮೂರನೆಯವಳೋ ?’ ಅಂತ ಕೇಳಿದ್ದಳು. ನಾನು ‘ಇಲ್ಲಿಲ್ಲ ಇಬ್ಬರೇ ಮಕ್ಕಳು ನನಗೆ, ಇವಳು ಎರಡನೆಯವಳು’ ಅಂದೆ. ‘ಅಯ್ಯೋ ಹೌದೇ ಯಾರೋ ಅಂದ ಹಾಗಿತ್ತಲ್ಲ, ಮೂರೂ ಹೆಣ್ಣೇ ಹುಟ್ಟಿದೆ ನಿನಗೆ ಅಂತ’ ಅನ್ನುತ್ತ ಮುಖದಲ್ಲಿ ಬೇಸರದ ಭಾವ ತುಂಬಿಕೊoಡಳು. ಆಗ ನಾನೇ ತಮಾಷೆಯಾಗಿ ‘ಛೆ ಅಷ್ಟು ಬೇಸರ ಮಾಡ್ಕೋಬೇಡ, ನಿನಗೋಸ್ಕರ ಇನ್ನೊಂದು ಹಡೆಯುತ್ತೇನೆ ಬಿಡು’ ಅಂದಿದ್ದೆ.

ಯಾವುದಾದರೂ ಗರ್ಭಿಣಿಯರ ಕುಬುಸ ಅಥವಾ ತೊಟ್ಟಿಲ ಶಾಸ್ತ್ರದ ಸಮಯದಲ್ಲಿ ನನ್ನನ್ನು ವಿನಾಕಾರಣ ದೂರ ತಳ್ಳಿ ತಾತ್ಸಾರ ತೋರಿದಂತೆ ಭಾಸವಾಗುತ್ತಿತ್ತು. ಎಲ್ಲೆಡೆಗೂ ನಾನು ಕಾಲುಕಸಕ್ಕಿಂತ ಕೀಳು ಎಂಬ ಭಾವನೆ ಬರುವಂತೆ ನನ್ನನ್ನು ತೀರ ತುಚ್ಛವಾಗಿ ಕಂಡಂತೆ ಅನಿಸುತ್ತಿತ್ತು. ಅದು ನಿಜವೇ ಆಗಿತ್ತೋ ಅಥವಾ ನನ್ನ ಮನಸ್ಸಿಗೇ ಹಾಗೆನ್ನಿಸುತ್ತಿತ್ತೋ ಗೊತ್ತಾಗುತ್ತಿದ್ದಿಲ್ಲ. ‘ಏನೆಲ್ಲವೂ ಇದ್ರೆ ಏನು ಬಂತು? ಒಂದು ಗಂಡು ಮಗ ಆದ್ರೂ ಬೇಕೇಬೇಕು, ಇಲ್ಲದಿದ್ರೆ ಮುಕ್ತಿ ಇಲ್ವಂತೆ’ ಅಂತೆಲ್ಲ ಅಕ್ಕಪಕ್ಕದ ಹೆಂಗಸರು ಆಡಿಕೊಳ್ಳುವುದೂ ಆಗಾಗ ಕಿವಿಗೆ ಬೀಳುತ್ತಿತ್ತು. ಇಂಥ ಮನಸ್ಸುಗಳಿಗೆ ವೈಚಾರಿಕತೆಯ ಮಾತಾಡಿ ಅರ್ಥ ಮಾಡಿಸುವುದೂ ವ್ಯರ್ಥ ಅನ್ನಿಸಿತ್ತು. ಎಲ್ಲ ಸಮಜಾಯಿಸಿ ಕೊಟ್ಟುಕೊಂಡ ನಂತರವೂ ‘ಸಿಗದ ದ್ರಾಕ್ಷಿ ಹುಳಿ’ ಎಂದು ಕುಟುಕಿದ್ದೂ ಕೇಳಿದ್ದೆ. ಆ ದಿನಗಳಲ್ಲೇ ನನಗೆ ನನ್ನ ಅಸ್ತಿತ್ವದ ಪ್ರಶ್ನೆ ಕಾಡತೊಡಗಿದ್ದು. ಎಂಥದೋ ನೋವಿನ ಎಳೆ ಸದಾ ನನ್ನನ್ನು ಇರಿಯುತ್ತಿತ್ತು. ಶಾಸ್ತ್ರ ಸಂಪ್ರದಾಯಗಳ ಕುರುಡು ನಂಬಿಕೆಗಳ ಕುರಿತು ಆಗಲೇ ಮನಸ್ಸಿನಲ್ಲಿ ವಿರೋಧ ಹುಟ್ಟಲು ಆರಂಭಗೊಂಡಿದ್ದು ಅನಿಸುತ್ತದೆ.

ಕೇವಲ ಗೃಹಿಣೀ ಕೃತ್ಯಗಳಲ್ಲೇ ಹತ್ತರಲ್ಲಿ ಹನ್ನೊಂದನೆಯವಳಾಗಿ ಹೇಳಹೆಸರಿಲ್ಲದೇ ಸತ್ತು ಮಣ್ಣಾದರೆ ಹುಟ್ಟಿನ ಸಾರ್ಥಕತೆ ಏನು ಎಂಬ ಪ್ರಶ್ನೆ ಕಾಡುತ್ತಿತ್ತು. ಇಬ್ಬರೂ ಮಕ್ಕಳು ಶಾಲೆಗೆ ಸೇರಿದ ನಂತರದಲ್ಲಿ ಕೊಂಚ ಬಿಡುವು ದೊರೆತು, ಇದರ ಹೊರತಾಗಿ ಏನಾದರೂ ಆಗಬೇಕು, ಏನಾದರೂ ಮಾಡಬೇಕು ಎಂಬ ತುಡಿತ ದಟ್ಟವಾಯಿತು. ಈ ಎಲ್ಲ ಕಸಿವಿಸಿ, ಮುಜುಗರ, ಕೀಳರಿಮೆಗಳನ್ನು ಮೀರಲು ಹೆಚ್ಚು ಹೆಚ್ಚು ಪುಸ್ತಕಗಳ ಓದಿನ ಮೊರೆಹೋದೆ, ನನ್ನ ಗಂಡ ಪ್ರಕಾಶ್ ಆ ಮೊದಲೇ ಒಂದು ಕವನ ಸಂಕಲನವನ್ನು ಹೊರತಂದಿದ್ದುದರಿಂದ ನಮ್ಮ ಉತ್ತರಕನ್ನಡ ಜಿಲ್ಲೆಯ ಹಲವು ಸಾಹಿತಿಗಳ ಪರಿಚಯವೂ ಆಗಿತ್ತು.  ಕೆಲವು ಕನ್ನಡ ಪುಸ್ತಕಗಳ ಸಂಗ್ರಹ ಮನೆಯಲ್ಲೂ ಇತ್ತು. ಪ್ರಕಾಶ್‌ನ ನೌಕರಿ ನಿಮಿತ್ತ ಆ ಸಮಯದಲ್ಲಿ ಧಾರವಾಡದಲ್ಲಿ ನೆಲೆಸಿರುವುದರಿಂದ ಮನೆಯ ಸನಿಹವೇ ಇದ್ದ ಗ್ರಂಥಾಲಯದಿoದ ವಾರಕ್ಕೆ ಎರಡು ಪುಸ್ತಕಗಳ ತಂದು ಓದುವ ರೂಢಿ ಮಾಡಿಕೊಂಡಿದ್ದೆ. ನಂತರ ಬರವಣಿಗೆ ಕೈಹಿಡಿದು ನಡೆಸಿತು. ಓದು ಬರಹಗಳು ಎಲ್ಲದರಿಂದ ಬಿಡುಗಡೆ ಹೊಂದುವ ಸಾಧನಗಳಾಗಿ ದಕ್ಕಿದವು. ಆದರೆ ಕಂಬಳಿ ಹುಳವೊಂದು ಚಿಟ್ಟೆಯಾಗಿ ಪರಿವರ್ತಿತವಾಗುವ ಆ ಘಳಿಗೆಗಳು ತೀರಾ ಅಸಹನೀಯವಾಗಿದ್ದವು ಎಂಬುದು ಮಾತ್ರ ಸತ್ಯ.

***

ಪರಿಚಯ: ಕಥೆಗಾರ್ತಿ ಸುನಂದಾ ಕಡಮೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು.  ಸಮಕಾಲೀನ ವಿಷಯಗಳಿಗೆ ಸೃಜನಶೀಲ ಸಾಹಿತ್ಯದ ಮೂಲಕ ಹೆಚ್ಚು ಸ್ಪಂದಿಸುವ  ಸುನಂದಾ ಅವರು, ‘ಪುಟ್ಟ ಪಾದದ ಗುರುತು‘, ‘ಗಾಂಧಿ ಚಿತ್ರದ ನೋಟು’, ‘ಕಂಬಗಳ ಮರೆಯಲ್ಲಿ’, ‘ತುದಿ ಮಡಚಿಟ್ಟ ಪುಟ’ ಕಥಾಸಂಕಲನಗಳನ್ನು ಹೊರತಂದಿದ್ದಾರೆ. ‘ಬರೀ ಎರಡು ರೆಕ್ಕೆ’, ‘ದೋಣಿ ನಡೆಸೊ ಹುಟ್ಟು’, ‘ಹೈವೇ ನಂ. 63’, ‘ಎಳೆನೀರು’ ಇವು ನಾಲ್ಕು ಕಾದಂಬರಿಗಳು. ‘ಪಿಸುಗುಡುವ ಬೆಟ್ಟಸಾಲು’, ‘ಪಡುವಣದ ಕಡಲು’, ‘ಕತೆಯಲ್ಲದ ಕತೆ‘ ಮೂರು ಪ್ರಬಂಧ ಸಂಕಲನಗಳು ಮತ್ತು ‘ಸೀಳು ದಾರಿ’ ಎಂಬ ಕವನ ಸಂಕಲನಗಳು. ಇವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಛಂದ ಪುಸ್ತಕ ಬಹುಮಾನ, ಎಂ.ಕೆ. ಇಂದಿರಾ ಬಹುಮಾನ, ಕಲೇಸಂ ಸುಧಾಮ ದತ್ತಿನಿಧಿಯ ‘ತ್ರಿವೇಣಿ’ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ದೊರೆತಿದೆ.

ಇಂದು ರೈತ ಮಹಿಳಾ ದಿನ: ಕೇಂದ್ರ ಸರ್ಕಾರದ ವಿರುದ್ಧ ರೈತ ಮಹಿಳೆಯರ ಆಕ್ರೋಶದ ಕೂಗು

Published On - 2:43 pm, Wed, 20 January 21