ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com
ಪರಿಕಲ್ಪನೆ: ಶ್ರೀದೇವಿ ಕಳಸದ
ಶುಭ್ರಾ ಎಸೆನ್ಶಿಯಲ್ಸ್ನ ಅಪರ್ಣಾ ರಾವ್ ಮುಂಬೈನಲ್ಲಿ ವಾಸವಾಗಿದ್ದಾರೆ. ಉದ್ಯಮಶೀಲತೆಯಲ್ಲಿ ಆಸಕ್ತಿ ಇರುವ ಇವರು ಧೃತಿ ಮಹಿಳಾ ಮಾರುಕಟ್ಟೆಯ ಸ್ಥಾಪಕರೂ ಹೌದು. ತಮ್ಮ ಗೃಹೋದ್ಯಮದ ಕುರಿತು ಹೊರಳು ನೋಟವನ್ನಿಲ್ಲಿ ಕಟ್ಟಿಕೊಟ್ಟಿದ್ದಾರೆ.
ಮುಂದೆ ಮಾಡುವುದೇನು? ಹೇಗೂ ಪ್ರತೀ ನೋಟ್ಟ್ಬುಕ್ನ ಕಡೇ ಪೇಜಿನಲ್ಲಿ ಚಿತ್ರವಿಚಿತ್ರ ಗೀಚುತ್ತಿದ್ದ ಅಭ್ಯಾಸ ಇದ್ದ ಕಾರಣ ಅದನ್ನು ಫ್ರಂಟ್ ಪೇಜಿಗೆ ತರುವ ಆಲೋಚನೆ ಬಂದು ತುಮಕೂರಿನ ರವೀಂದ್ರ ಕಲಾನಿಕೇತನ ಸೇರಿಕೊಂಡೆ. ಮುಕ್ಕಾಲುವರ್ಷ ಪೆನ್ಸಿಲ್ ಶೇಡಿಂಗ್ ಅಲ್ಲೇ ಕಳೆದು ಬಣ್ಣಗಳ ಪರಿಚಯ ಮಾಡಿಕೊಳ್ಳುವ ಹೊತ್ತಿಗೆ ಮೊದಲ ವರ್ಷ ಕಳೆದಿತ್ತು. ಎರಡನೇ ವರ್ಷ ಸರಿಯಾದ ತರಬೇತಿ ಅಂದರೇನು ಎಂದು ಅರಿಯುವ ಸಮಯ. ಅರ್ಧ ವರ್ಷ ಕಳೆಯುವುದರೊಳಗಾಗಿ ಮದುವೆ ಪ್ರಸ್ತಾವ. ಕೋರ್ಸ್ ಮುಂದುವರೆಸಬೇಕು ಅನ್ನುವ ಆಸೆ ಇದ್ದರೂ ನೆರವೇರದೆ ವಿನಯ್ ಅವರನ್ನು ಮದುವೆಯಾಗಿ ಆಗಿ ಮುಂಬೈ ಸೇರಿದೆ. ಅವತ್ತು ನಾನೇನಾದರೂ ಹಠ ಮಾಡಿ ಬೆಂಗಳೂರಿಗೆ ಬಂದು ಹಾಸ್ಟಲ್ ಸೇರಿ ನನ್ನ ಆಸೆ ಪೂರೈಸಿಕೊಂಡಿದ್ದರೆ ಆ ಕತೆಯೇ ಬೇರೆ ಆಗುತ್ತಿತ್ತು.
ಮುಂಬೈಯಲ್ಲಿ ಒಟ್ಟು ಕುಟುಂಬ. ಮದುವೆಗೆ ಮೂರು ದಿನ ಇರುವಾಗಲೂ ಕ್ಲಾಸ್ ಅಟೆಂಡ್ ಮಾಡುತ್ತಿದ್ದ ನನಗೆ ಮನೆಯಲ್ಲಿ ಸದಾ ಇರುವುದೆಂದರೇನು ಅನ್ನುವುದರ ಅರಿವೂ ಇರಲಿಲ್ಲ. ಮುಂಬೈಯಲ್ಲಿ ಭಿನ್ನ ಹವಾಮಾನ, ಹೊಸ ಜನ, ಹೊಸ ಪದ್ಧತಿ, ವ್ಯವಸ್ಥೆ, ಎಲ್ಲಕ್ಕೂ ಹೊಂದಿಕೊಳ್ಳುವುದು ಸುಲಭ ಸಾಧ್ಯವಾಗಿರಲಿಲ್ಲ. ಹೀಗೆ ನಾಟಕ ಸ್ಟೇಜು ಕಲೆ ಅಂತೆಲ್ಲಾ ಮುಳುಗಿದ್ದವಳಿಗೆ ಮದುವೆ, ಮನೆ ಜವಾಬ್ದಾರಿ ಅತೀ ದೊಡ್ಡ ಬದಲಾವಣೆ. ನನ್ನ ಗಂಡ ಮನೆಯ ಮೊದಲ ಮಗ. ಮನೆ ಒಳಗೂ ಹೊರಗೂ ಅವರಿಗೂ ಹೆಚ್ಚಿನ ಜವಾಬ್ಧಾರಿ. ಮದುವೆಗೆ ಮುಂಚೆ ಮನೆಯಲ್ಲಿ ಬೆಳಗ್ಗೆ ಎಂಟುಗಂಟೆಗೆ ‘ಅಮ್ಮಾ ತಿಂಡಿ ಆಯ್ತಾ’ ಅಂತ ಕಿರುಚುತ್ತಿದ್ದವಳು ಇಲ್ಲಿ ಬಂದು ಬೆಳಗ್ಗೆ ಕಾಫಿ ತಿಂಡಿ ಅಡಿಗೆಮನೆಯ ಇತರ ಕೆಲಸಗಳ ಜವಾಬ್ಧಾರಿ ಹೊತ್ತು ಎಲ್ಲರಿಗೂ ಕೇಳಿ ಕೇಳಿ ಉಪಚರಿಸಬೇಕಾದ ಪರಿಸ್ಥಿತಿ.
ಬದುಕು ನಮ್ಮನ್ನು ಮದುವೆ ನಂತರದ ಇಂಥಹ ಪರಿಸ್ಥಿತಿಗಳ ನಿಭಾವಣೆಗೆ ತಯಾರು ಮಾಡಿಯೇ ಇರುವುದಿಲ್ಲ. ಅಸಲಿಗೆ ನಾವು ತಯಾರಿ ಮಾಡಿಕೊಂಡಿರುವುದಿಲ್ಲ. ‘ಇಪ್ಪತ್ತೆರಡು’ ಪೆದ್ದುತನವನ್ನೇ ಮುದ್ದು ಮುದ್ದು ಎಂದುಕೊಂಡಿರುವ ವಯಸ್ಸು. ನಮಗೇನು ಬೇಕು, ಬೇಕಿದ್ದನ್ನು ಪಡೆಯುವ ಬಗೆ ಹೇಗೆ? ನಮ್ಮ ಆದ್ಯತೆ ಯಾವುದಕ್ಕಿರಬೇಕು, ಜೀವನ ಕೌಶಲಗಳು ಎಷ್ಟು ಮುಖ್ಯ, ಸಂಬಂಧ ಸೂಕ್ಷ್ಮಗಳ ಬಗ್ಗೆ ಅರಿವು… ಇದಕ್ಕೆಲ್ಲಾ ನಿಜ ಜೀವನದಲ್ಲಿ ಸುಲಭಕ್ಕೆ ಯಾವ ನಿರ್ದೇಶಕರೂ ಸಿಗುವುದಿಲ್ಲ. ಮದುವೆಯಾದ ಮರುವರ್ಷದೊಳಗೆ ಮಗ ಹುಟ್ಟಿ ಮನೆ ಮನ ತುಂಬಿ ಬೇರೆ ಯಾವುದಕ್ಕೂ ಬಿಡುವಿಲ್ಲದಂತಾಗಿ ಮಮತೆಯ ಮಾಯೆಯೊಳಗೆ ಮುಳುಗೇಳುವ ಸಂಭ್ರಮ. ಮತ್ತೆ ಮೂರು ವರ್ಷಕ್ಕೆ ಮತ್ತೊಬ್ಬ ಮಗನ ಆಗಮನ. ಮತ್ತಷ್ಟು ಜವಾಬ್ಧಾರಿ.
ಇದೇ ಪರಿಸ್ಥಿತಿಯಲ್ಲಿ ಹತ್ತು ವರ್ಷ ಕಳೆದುಹೋಯಿತು. ಈ ಮಧ್ಯೆ ಹವ್ಯಾಸಗಳನ್ನು ಜೀವಂತವಾಗಿರಿಸಿಕೊಳ್ಳಲು ಶತ ಪ್ರಯತ್ನ ನಡೆದೇ ಇತ್ತು. ನನ್ನ ಮಾವನವರು ಶಂಕರ್ ರಾವ್ ಗೋರೇಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಕಾರಣ ಆಗಾಗ ಕಾರ್ಯಕ್ರಮಗಳಿಗೆ ಹೋಗಲು ಅವಕಾಶ ಒದಗಿ ಬರುತ್ತಿತ್ತು. ಆಗಾಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನ್ನ ಗಂಡನ ಸಹಕಾರವೂ ಸಾಕಷ್ಟಿತ್ತು. ನನ್ನ ಮಾವನಿಗೆ ನಾನು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಗರ್ವದ ವಿಷಯವಾಗಿದ್ದರೂ ಕುಟುಂಬದ ಜವಾಬ್ಧಾರಿ ಮೊದಲ ಆದ್ಯತೆ. ಇಂಥ ಸಮಯದಲ್ಲೇ ನಾನು ನನ್ನ ಬಗ್ಗೆ ಹೆಚ್ಚು ಯೋಚಿಸಲು ಪ್ರಾರಂಭಿಸಿದ್ದರು.
ಇಪ್ಪತ್ತು ವರ್ಷಗಳು ಕಳೆಯುವ ಹೊತ್ತಿಗೆ ಜವಾಬ್ಧಾರಿಗಳು ಕಡಿಮೆಯಾಗಿ ಸ್ನಾತಕೋತ್ತರ ಪದವಿ ಓದಬೇಕೆಂಬ ಎಷ್ಟೋ ವರ್ಷಗಳ ಆಸೆಯನ್ನು ಕನ್ನಡ ಎಂ. ಎ. ಮಾಡುವುದರ ಮೂಲಕ ಪೂರೈಸಿಕೊಂಡೆ. ಅದರ ನಡುವೆಯೇ ಕಂಡಿದ್ದನ್ನೆಲ್ಲಾ ಕಲಿಯುವ ಚಂಚಲ ಮನಸ್ಸು ಆಸೆ ಬೇರೆ. ಐಸ್ಕ್ರೀಂ ಕ್ಲಾಸ್ , ಕ್ಯಾಂಡಲ್ ಮೇಕಿಂಗ್ ಕ್ಲಾಸ್, ರೇಖಿ ಎಲ್ಲದರಲ್ಲೂ ತೊಡಗಿಕೊಂಡಿದ್ದೆ. ಇದಕ್ಕೆಲ್ಲಾ ಗಂಡನ ಹಣವನ್ನೇ ಸುರಿಯುತ್ತಿದ್ದೆ, ಇದರಿಂದ ನಯಾಪೈಸೆ ಆದಾಯವೂ ಇರುತ್ತಿರಲಿಲ್ಲ. ಆದರೆ ಒಮ್ಮೆ ಕೂಡಾ ನನ್ನ ಗಂಡ ಯಾತಕ್ಕಾಗಿ ಸಿಕ್ಕಸಿಕ್ಕ ಕಡೆ ದುಡ್ಡು ಸುರಿಯುತ್ತಿಯಾ ಎಂದು ಕೇಳಲಿಲ್ಲ. ಇದರೊಂದಿಗೆ ಎಲ್ಲೆಲ್ಲೋ ದಾನ ಮಾಡಿಬರುವುದು. ಯಾರಿಗೋ ಕಷ್ಟ ಎಂದಾಗ ಮನೆಯ ಮಕ್ಕಳ ಅವಶ್ಯಕತೆಯನ್ನೂ ಗಮನಿಸದೆ ದುಡ್ಡು ಕೊಡುವುದು ಹೀಗೇ ಲೆಕ್ಕ ಇಲ್ಲ ಬುಕ್ಕ ಇಲ್ಲ ಖರ್ಚು ಮಾಡಲು ಎನ್ನುವ ರೀತಿಯಲ್ಲೇ ಬದುಕಿದ್ದ ಸಮಯದಲ್ಲೇ ಬದುಕು ಸರಿಯಾಗಿ ಬುದ್ದಿ ಕಲಿಸಿತ್ತು. ಗಂಡನ ಧಾರಾಳತನ ದುರುಪಯೋಗ ಮಾಡಿಕೊಂಡ ಅವರ ಕೆಲ ಸ್ನೇಹಿತರು ಲಕ್ಷಾಂತರ ರುಪಾಯಿ ಸಾಮಾನು ಪಡೆದು ಪಂಗನಾಮ ಹಾಕಿದ್ದರು.
ಅಷ್ಟರ ನಡುವೆಯೇ ಹೊಸ ಮನೆಗೆಂದು ಇದ್ದಬದ್ದ ಹಣವೆಲ್ಲಾ ಸೇರಿಸಿದೆವು. ಅಲ್ಲೇನೋ ಸ್ಥಳಿಯ ರಾಜಕೀಯ ನಾಯಕರ ಕೈವಾಡದಿಂದಾಗಿ ಮನೆ ಕಟ್ಟುವ ಕಾರ್ಯ ಅರ್ಧಕ್ಕೇ ನಿಲ್ಲುವಂತಾಗಿ ಅದರಲ್ಲಿ ರಾಜ್ಯ ರಾಷ್ಟ್ರ ರಾಜಕೀಯವೂ ಸೇರಿ ಒಟ್ಟಿನಲ್ಲಿ ನಮ್ಮ ಜೊತೆ ಇತರ ಆರುನೂರು ಕುಟುಂಬಗಳ ಜೀವಮಾನದ ದುಡಿಮೆ ಸಿಕ್ಕಿಹಾಕಿಕೊಂಡಿತು. ಒಂದೂವರೆ ಕೋಟಿ ಕಳೆದುಕೊಂಡ ಮೇಲೆ ಜೀವನದಲ್ಲಿ ಮೊದಲ ಬಾರಿ ಗಂಡನ ಹಣದ ಬೆಲೆ ಗೊತ್ತಾಗಿದ್ದು. ಅಷ್ಟು ವರ್ಷಗಳ ಕಾಲ ಖರ್ಚು ಮಾಡಿ ಗೊತ್ತಿತ್ತೇ ವಿನಃ ದುಡಿದು ಗೊತ್ತಿರಲಿಲ್ಲ. ಆಮೇಲೆ ಸಹ ಹೊಟ್ಟೆ ಬಟ್ಟೆ ಓಡಾಟಗಳಿಗೆ ಕೊರತೆ ಇಲ್ಲದಿದ್ದರೂ ಮುಷ್ಟಿ ಬಿಚ್ಚಿ ಕೊಟ್ಟ ಕೈಗೆ ಹಿಡಿತ ಮಾಡುವುದು ಕಷ್ಟ ಅನ್ನಿಸಹತ್ತಿತು. ಅದಕ್ಕಾಗಿಯಾದರೂ ಸ್ವಂತದ ದುಡಿಮೆ ಬೇಕು ಅನ್ನಿಸಿತು.
ಅದುವರೆಗೂ ಹವ್ಯಾಸವಾಗಿದ್ದ ಸೋಪಿನ ತಯಾರಿಕೆಯನ್ನು ಸಣ್ಣ ಆದಾಯದ ಮೂಲವನ್ನಾಗಿಸಿಕೊಳ್ಳುವ ಪ್ರಯತ್ನ ಶುರುವಾಗಿ, ಅದನ್ನು ಗಂಭೀರವಾಗಿ ಪರಿಗಣಿಸುವಂತಾದದ್ದು ಕೊರೊನಾ ದಿನಗಳಲ್ಲಿ. ಖರ್ಚು ಮಾಡುವಾಗಲು ಅಡ್ಡ ಬರದ ಗಂಡ ಈಗ ನಾನೇ ಏನೋ ದುಡಿಯುವ ಪ್ರಯತ್ನ ಮಾಡುತ್ತೇನೆ ಅಂದಾಗಲೂ ವಯಸ್ಸು ಆರೋಗ್ಯ ಅನ್ನುವ ನೆವ ಒಡ್ಡಿ ತಡೆಯಲಿಲ್ಲ. ಈಗ ನನ್ನ ಹವ್ಯಾಸಗಳ ಖರ್ಚಿಗಾಗುವಷ್ಟು ನಾನೇ ಹೊಂದಿಸಿಕೊಂಡು ಸಣ್ಣ ಮಟ್ಟದಲ್ಲಿ ಬೆಳೆಯುತ್ತಿದ್ದೇನೆ. ನನ್ನ ಈ ಬೆಳವಣಿಗೆಯಲ್ಲಿ ನನ್ನ ಫೇಸ್ಬುಕ್ ಸ್ನೇಹಿತೆಯರ ಪಾಲೂ ಇದೆ. ಪ್ರತೀ ಹಂತದಲ್ಲೂ ಅವರುಗಳ ಪ್ರೋತ್ಸಾಹ ಇಲ್ಲದಿದ್ದರೆ ನನಗೆ ಇಷ್ಟು ಆತ್ಮವಿಶ್ವಾಸ ಬೆಳೆಯುತ್ತಿರಲಿಲ್ಲ. ಹೆಣ್ಣುಮಕ್ಕಳು ಒಂದಾಗಿ ನಿಂತರೆ ಏನಾದರೂ ಸಾಧನೆ ಸಾಧ್ಯ ಎಂಬ ನಂಬಿಕೆಗೆ ಬಲ ಕೊಟ್ಟಿದ್ದು ಇವರುಗಳೇ.
ಧೃತಿ ಮಹಿಳಾ ಮಾರುಕಟ್ಟೆ
ಹೊಸ ಹೊಸ ಕನಸು ಕಾಣಲು ಇವರಲ್ಲನೇಕರು ಪ್ರೇರಣೆ ನನಗೆ. ಕೌಶಲ ಮತ್ತು ಆಸಕ್ತಿ ಇರುವವರಿಗೆ, ಸ್ವಾಭಿಮಾನದಿಂದ ಬದುಕಬೇಕು ಎನ್ನುವವರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಆಲೋಚನೆಯಲ್ಲಿಯೇ ಹುಟ್ಟಿಕೊಂಡಿದ್ದು ಫೇಸ್ ಬುಕ್ ನ ‘ಮಹಿಳಾ ಮಾರುಕಟ್ಟೆ’ ಗ್ರೂಪ್. ಈಗ ಇದು ‘ಧೃತಿ ಮಹಿಳಾ ಮಾರುಕಟ್ಟೆ’ಯಾಗಿ ನೋಂದಣಿಯಾಗಿದೆ. ಮಹಿಳಾ ಮಾರುಕಟ್ಟೆ ಶುರು ಆಗಿದ್ದು 2020ರ ಮೇ 25. ಸದ್ಯ ಇದು 35,000 ಸದಸ್ಯರನ್ನು ಒಳಗೊಂಡಿದ್ದು ಈವರೆಗೆ ನೂರಾರು ಮಹಿಳಾ ಮಾರಾಟಗಾರರನ್ನು ಪೋಷಿಸಿದೆ. ಆರುನೂರಕ್ಕೂ ಹೆಚ್ಚು ಮಾರಾಟಗಾರರು ರಿಜಿಸ್ಟರ್ ಆಗಿದ್ದರೂ ಎಲ್ಲಾ ಒತ್ತಡಗಳಲ್ಲೂ ಕೆಲಸ ಮಾಡಬಲ್ಲಂತ ನೂರೈವತ್ತರಷ್ಟು ಮಾರಾಟಗಾರರು ತಮ್ಮ ಅಸ್ತಿತ್ವ ಸ್ಥಾಪಿಸಿಕೊಂಡಿದ್ದಾರೆ. ಸಾಕಷ್ಟು ಮಹಿಳೆಯರು ತಮ್ಮ ಉದ್ಯಮ ಶುರು ಮಾಡಿದ್ದೇ ಇಲ್ಲಿಂದ. ಇಂದು ಅನೇಕ ಮಹಿಳೆಯರು ಯಶಸ್ವಿ ಉದ್ಯಮಿಯಾಗಿ ಗುಂಪಿನಾಚೆಯೂ ಗುರುತಿಸಲ್ಪಟ್ಟು ಸಾಕಷ್ಟು ಗ್ರಾಹಕರನ್ನು ಹೊಂದಿರುವುದು ಸಂತೋಷದ ವಿಷಯ. ಈ ಗುಂಪಿನ ಪ್ರತಿಯೊಬ್ಬರೂ ಆಹಾರ ಸಂಬಂಧಿ ಮಾರಾಟಗಾರರು ಎಫ್ಎಸ್ಎಸ್ಎಐ ಲೈಸೆನ್ಸ್ ಪಡೆದು, ಯಾವುದೇ ಕಲಬೆರಕೆ ಇಲ್ಲದ, ಕೆಮಿಕಲ್ ಬಳಸದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಕೈಮಗ್ಗದ ಬಟ್ಟೆಗಳು, ರೆಡಿಮೇಡ್ ಬಟ್ಟೆಗಳು, ಹೇರ್ ಆಯಿಲ್-ಶಾಂಪೂ, ಆಭರಣ, ಸೀರೆ, ಮರದ ಉಪಕರಣ, ಆಟಿಕೆ, ಗುಡಿ ಕೈಗಾರಿಕೆ ಸಂಬಂಧಿ ವಸ್ತುಗಳು, ಕಲೆ, ಆಯುರ್ವೇದ ಒಟ್ಟಾರೆ ಜೀವನಾವಶ್ಯಕವಾದ ಯಾವ ವಸ್ತುಗಳನ್ನು ಮಾರಾಟ ಮಾಡುವ ಮತ್ತು ಕೊಳ್ಳುವವರ ದೊಡ್ಡ ಬಳಗವೇ ಇಲ್ಲಿದೆ.
ಕಟ್ಟಿದ್ದು ನಾನಾದರೂ ಸಂಘಟಿಸುವಲ್ಲಿ ನನ್ನ ಎಲ್ಲಾ ಸ್ನೇಹಿತೆಯರ ಪಾಲೂ ಇದೆ. ಶುರುವಿನ ತಿಂಗಳುಗಳಲ್ಲಿ ಒಬ್ಬಂಟಿಯಾಗಿ ನಿರ್ವಹಿಸಿದ್ದೆ. ನಂತರದ ದಿನಗಳಲ್ಲಿ ಪ್ರತೀ ಹಂತದಲ್ಲೂ ಜೊತೆಯಾಗಿ ಎಚ್ಚರದಿಂದ ಕೆಲಸ ಮಾಡುವ ಶೋಭಾ ರಾವ್ ಇದ್ದಾರೆ. ತಾಂತ್ರಿಕ ಕೆಲಸಗಳನ್ನು ನಿರ್ವಹಿಸುತ್ತಿರುವ ಕಾವ್ಯ ಮಹೇಶ್, ಉಪಯುಕ್ತ ಸಲಹೆ ನೀಡಿದ್ದ ನೀಲೂ ಸಿದ್ಧಾರ್ಥ, ಜವಾಬ್ಧಾರಿ ಹಂಚಿಕೊಂಡ ಅಂಜಲಿ ಹೆಗ್ಡೆ, ಈಗಷ್ಟೇ ಸೇರಿಕೊಂಡ ಶ್ರೀವಿದ್ಯಾ ಕಾಮತ್, ರೋಹಿಣಿ ರಾವ್ ಇವರೆಲ್ಲರೂ ಧೃತಿ ಮಹಿಳಾ ಮಾರುಕಟ್ಟೆಯ ಹೊಸ ಭರವಸೆಯ ಕಿರಣಗಳಾಗಿದ್ದಾರೆ. ನಮ್ಮ ಇನ್ನಷ್ಟು ಹೊಸ ಆಲೋಚನೆಗಳಿಗೆ ರೆಕ್ಕೆ ಕಟ್ಟಿ ಹಾರುವ ಪ್ರಯತ್ನ ಈಗಷ್ಟೇ ಶುರುವಾಗಬೇಕಿದೆ.
ನಾನೆಂಬ ಪರಿಮಳದ ಹಾದಿಯಲಿ: ನಾನೊಬ್ಬ ರೈತ ಮಹಿಳೆ ಮತ್ತಿದೇ ನನ್ನ ಅಸ್ತಿತ್ವ
Published On - 1:26 pm, Sat, 30 January 21