ಇತಿಹಾಸದ ಮೇಲೆ ಬೆಳಕು ಚೆಲ್ಲುವ ದೀಪಸ್ತಂಭ ನಡುಗಡ್ಡೆ ಲೈಟ್ ಹೌಸ್.. ಇದು ಪ್ರವಾಸಿಗರ ನೆಚ್ಚಿನ ತಾಣ

|

Updated on: Jan 30, 2021 | 5:50 PM

ಸ್ತಂಭವು ಗೋಲಾಕರದಲ್ಲಿದ್ದು 157 ವರ್ಷದ ಹಿಂದೆ ನಿರ್ಮಿಸಿದ್ದಾಗಿದೆ. ಇದಕ್ಕೆ ಮೆಟ್ಟಿಲುಗಳನ್ನೇರಿ ಮೇಲೆ ಸಾಗಬೇಕಾಗಿದ್ದು, ಅದರ ತುದಿಗೆ ತಲುಪಿದಾಗ ವಿಶಾಲವಾಗಿ ಕಾಣುವ ನೀಲಿ ಬಣ್ಣದ ಸಮುದ್ರ ಎಲ್ಲರನ್ನ ಮಂತ್ರಮುಗ್ಧಗೊಳಿಸುತ್ತದೆ. ದೀಪಸ್ತಂಭದ ನಿರ್ವಹಣೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಲೈಟ್ ಶಿಫ್​ಗಳು ಮತ್ತು ಲೈಟ್ ಹೌಸ್​ಗಳ ನಿರ್ದೇಶನಾಲಯದಂತೆ ಕಾರ್ಯನಿರ್ವಹಿಸುತ್ತದೆ.

ಇತಿಹಾಸದ ಮೇಲೆ ಬೆಳಕು ಚೆಲ್ಲುವ ದೀಪಸ್ತಂಭ ನಡುಗಡ್ಡೆ ಲೈಟ್ ಹೌಸ್.. ಇದು ಪ್ರವಾಸಿಗರ ನೆಚ್ಚಿನ ತಾಣ
ಲೈಟ್ ಹೌಸ್ ದ್ವೀಪ
Follow us on

ಉತ್ತರ ಕನ್ನಡ: ನಡುಗಡ್ಡೆಯ ಲೈಟ್ ಹೌಸ್ ನಿತ್ಯ ನೂರಾರು ಹಡಗು, ದೋಣಿಗಳಿಗೆ ದಾರಿ ತೋರುತ್ತಿತ್ತು. ಆದರೆ ಕಾಲಕ್ರಮೇಣ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಇದರ ಅವಲಂಬನೆ ಕಡಿಮೆಯಾಯಿತು. ಸದ್ಯ ಇದು ಪ್ರವಾಸಿ ತಾಣವಾಗಿ ಭಾರೀ ಜನಸ್ತೋಮವನ್ನ ಆಕರ್ಷಿಸುತ್ತಿದೆ.

ಉತ್ತರ ಕನ್ನಡ ಜಿಲ್ಲೆ ಕಾರವಾರ ಪಟ್ಟಣದ ರವೀಂದ್ರನಾಥ್ ಕಡಲತೀರದಿಂದ 12 ಕಿಮೀ ದೂರದಲ್ಲಿರುವ ದೇವಗಡ ನಡುಗಡ್ಡೆಯೇ ಈ ಲೈಟ್ ಹೌಸ್ ದ್ವೀಪ ಎಂದು ಪ್ರಸಿದ್ಧಿಯಾಗಿದೆ. 25 ಎಕರೆಗೂ ಅಧಿಕ ವಿಸ್ತೀರ್ಣವಾಗಿರುವ ಲೈಟ್ ಹೌಸ್ ನಡುಗಡ್ಡೆಯು ಕೆಲ ಮೂಲಭೂತ ಸೌಕರ್ಯಗಳ ನಡುವೆಯೂ ಪ್ರವಾಸಿಗರಿಗೆ ಭಾರೀ ಮುದ ನೀಡುತ್ತದೆ.

ಬ್ರಿಟಿಷರು ನಿರ್ಮಿಸಿದ ಈ ದೀಪ ಸ್ತಂಭದ ತುದಿಯಲ್ಲಿ ಆಗಿನ ಕಾಲದಲ್ಲಿ ಸೀಮೆಎಣ್ಣೆ ದೀಪ ಉರಿಸಲಾಗುತ್ತಿತ್ತು. ಈಗ ಸೌರ ವಿದ್ಯುತ್ ಬಳಕೆ ಮಾಡಿಕೊಂಡು ಪ್ರಖರವಾದ ಬೆಳಕು ಸೂಸುವ ಬಲ್ಬ್​ಗಳ ಬಳಕೆಯಾಗುತ್ತಿದೆ. ಸದ್ಯ ಸ್ಪಟಿಕದ ಫಲಕಗಳ ಮುಖಾಂತರ ಬೆಳಕು ಹೊರಬಂದು 20 ನಾಟಿಕಲ್ ಮೈಲು ದೂರದವರೆಗೆ ಬೆಳಕು ಕಾಣಿಸುತ್ತಿದೆ.

ನಡುಗಡ್ಡೆಯ ಲೈಟ್ ಹೌಸ್​ನ ಚಿತ್ರಣ

ವಿವಿಧ ಮಾಪಕಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧವಾಗಿದ್ದ ಬ್ರಿಟಿಷ್ ಕಂಪನಿ ಲಾರೆನ್ಸ್ ಆಂಡ್ ಮೇಯೊ ನಿರ್ಮಾಣದ ಬ್ಯಾರೋ ಮೀಟರ್ (ಗಾಳಿಯ ಒತ್ತಡದ ಮಾಪಕ) ದುರ್ಬೀನು ಈಗಲೂ ಇಲ್ಲಿದೆ. ಅಲ್ಲದೇ ತಂತ್ರಜ್ಞಾನ ಬಳಕೆಗೂ ಮೊದಲು ನಿಶಾನೆ ತೋರಲು ಬಳಸುತ್ತಿದ್ದ ಸೀಮೆಎಣ್ಣೆ ದೀಪಗಳನ್ನೂ ಇಲ್ಲಿ ಇಡಲಾಗಿದೆ. ಇನ್ನು ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ಫಿರಂಗಿಯೊಂದನ್ನ ದೀಪಸ್ತಂಭದ ಆವರಣದಲ್ಲಿ ಸ್ಥಾಪಿಸಲಾಗಿದೆ.

ನಡುಗಡ್ಡೆಯ ಸಮುದ್ರದ ತೀರದಲ್ಲಿನ ಚಿತ್ರಣ

157 ವರ್ಷದ ಹಿಂದೆ ನಿರ್ಮಾಣವಾದ ದ್ವೀಪಸ್ತಂಭ:
ಸ್ತಂಭವು ಗೋಲಾಕರದಲ್ಲಿದ್ದು 157 ವರ್ಷದ ಹಿಂದೆ ನಿರ್ಮಿಸಿದ್ದಾಗಿದೆ. ಇದಕ್ಕೆ ಮೆಟ್ಟಿಲುಗಳನ್ನೇರಿ ಮೇಲೆ ಸಾಗಬೇಕಾಗಿದ್ದು, ಅದರ ತುದಿಗೆ ತಲುಪಿದಾಗ ವಿಶಾಲವಾಗಿ ಕಾಣುವ ನೀಲಿ ಬಣ್ಣದ ಸಮುದ್ರ ಎಲ್ಲರನ್ನ ಮಂತ್ರಮುಗ್ಧಗೊಳಿಸುತ್ತದೆ. ದೀಪಸ್ತಂಭದ ನಿರ್ವಹಣೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಲೈಟ್ ಹೌಸ್​ಗಳ ನಿರ್ದೇಶನಾಲಯದಂತೆ ಕಾರ್ಯನಿರ್ವಹಿಸುತ್ತದೆ.

ಬೃಹದಾಕಾರದ ಕಪ್ಪು ಬಂಡೆಗಳಿದ್ದು ಸಮುದ್ರದ ಅಲೆ

ಅದರ ಕೇಂದ್ರ ಕಚೇರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದ್ದು, ದೇವಗಢದಲ್ಲಿ ಸದ್ಯ ಓರ್ವ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ದೇವಗಢಕ್ಕೆ ಕಾರವಾರದಿಂದ ದೋಣಿಯಲ್ಲಿ ಸಾಗಿ ತಲುಪಬಹುದಾಗಿದ್ದು, ನಡುಗಡ್ಡೆಯ ತಳಭಾಗದಿಂದ ಸುಮಾರು 20 ನಿಮಿಷಗಳ ಕಾಲ ಏರುದಾರಿಯಲ್ಲಿ ಸಾಗಬೇಕಾಗುತ್ತದೆ. ಬಿಸಿಲು ಹೆಚ್ಚಾದಂತೆ ವಾತಾವರಣದ ತೇವಾಂಶವೂ ಇಲ್ಲಿ ಹೆಚ್ಚಿದಂತೆ ಭಾಸವಾಗುತ್ತದೆ. ಹಾಗಾಗಿ ದಾಹ ನಿವಾರಣೆಗೆ ಜೊತೆಯಲ್ಲೊಂದು ಕುಡಿಯುವ ನೀರಿನ ಬಾಟಲ್ ಹೊಂದುವುದು ಉತ್ತಮ.

ಬ್ರಿಟೀಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ಪಿರಂಗಿ

ಕಲ್ಲಿನಿಂದ ಮಾಡಿದ ವಿಶಿಷ್ಟ ಪಟ್ಟಿ:
ನಡುಗಡ್ಡೆಯ ಇನ್ನೊಂದು ಭಾಗದಲ್ಲಿ ಕಲ್ಲಿನ ರಾಶಿ ಸುತ್ತುವರೆದಿದ್ದು, ಬೃಹದಾಕಾರದ ಕಪ್ಪು ಬಂಡೆಗಳಿದ್ದು ಸದಾ ಸಮುದ್ರದ ಅಲೆಗಳು ಅಪ್ಪಳಿಸಿ ವಿವಿಧ ಆಕಾರದಲ್ಲಿ ಇವುಗಳ ಮಧ್ಯೆ ಹಾದುಹೋಗಿರುವ ಕಲ್ಲಿನ ಪಟ್ಟಿಯೊಂದು ಗಮನ ಸೆಳೆಯುತ್ತದೆ. ಸಿಮೆಂಟ್ ಕಾಮಗಾರಿ ಮಾಡುವಾಗ ಎರಡು ಭಾಗಗಳನ್ನ ಪ್ರತ್ಯೇಕಿಸಲು ಇಡುವ ಪಟ್ಟಿಯಂತೆ ಇದು ಗೋಚರಿಸುತ್ತದೆ.

ನಡುಗಡ್ಡೆಯ ಸುಂದರ ಚಿತ್ರಣ

ಸುಮಾರು 50 ಮೀಟರ್ ಉದ್ದಕ್ಕೆ ನೇರವಾದ ಗೆರೆಯಂತೆ ಹಾಗೂ ಒಂದೇ ಅಳತೆಯಲ್ಲಿ ಇದು ಸಾಗಿದ್ದು, ಕಲ್ಲುಗಳ ರಾಶಿಯಿಂದಾಗಿ ನೈಸರ್ಗಿಕ ಕೊಳದಂತೆ ನಿರ್ಮಾಣವಾಗಿದೆ. 3 ಅಡಿ ನೀರು ನಿಂತಿದ್ದು ಮಕ್ಕಳು ಮಹಿಳೆಯರೆನ್ನದೆ ಎಲ್ಲರೂ ಈಜಾಡುವುದಕ್ಕೂ ಪ್ರಶಸ್ತವಾಗಿದೆ. ಇನ್ನು ಸಮುದ್ರದ ಮಧ್ಯದಲ್ಲಿ ಇದ್ದರೂ ನಡುಗಡ್ಡೆಯಲ್ಲಿ ಸಿಹಿ ನೀರಿನ ಬಾವಿಗಳೂ ಕೂಡ ಇರುವುದು ಆಶ್ಚರ್ಯಕರವಾಗಿದೆ.

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ನಡುಗಡ್ಡೆ ತಾಣ

ಭುವಿಗಿಳಿದ ದೇವರಲೋಕ..! ಪ್ರವಾಸಿಗರ ಹಾಟ್ ಸ್ಪಾಟ್ ಆಯ್ತು ಭೂ ಲೋಕದ ಸ್ವರ್ಗ..!