ನಾನೆಂಬ ಪರಿಮಳದ ಹಾದಿಯಲಿ: ಇಷ್ಟೆಲ್ಲವಾದರೂ ನನಗೆ ನಾನಾರೆಂಬುದು ಬೇಕು

|

Updated on: Jan 29, 2021 | 1:56 PM

‘ಅಮ್ಮ ಆಗುತ್ತಿದ್ದೀರಿ ಖುಷಿಪಡಿ! ಮಗು ಬೇಗ ದೊಡ್ಡದಾಗುತ್ತದೆ, ಪುನಃ ಪ್ರಪಂಚ ನಿಮ್ಮ ತೆಕ್ಕೆಯಲ್ಲಿರುತ್ತದೆ, ಬಹಳ ಚಿಂತೆ ಮಾಡಬೇಡಿ ಎಂದು ಡಾಕ್ಟರ್ ನಗುತ್ತಾ ಸಮಾಧಾನ ಮಾಡಿದ್ದರು. ಸುಮಾರು ಐದು ತಿಂಗಳಾಗುವವರೆಗೆ ತನ್ನಿಂತಾನೇ ಮಗು ಹೋದರೆ ಹೋಗಿಬಿಡಲಿ ಎಂದುಕೊಳ್ಳುತ್ತಾ ಜೋರಾಗಿ ಸ್ಕೂಟಿ ಓಡಿಸುತ್ತಿದ್ದೆ. ಹಂಪ್ಸ್ ಮೇಲೆ ಹಾರಿಸುತ್ತಿದ್ದೆ. ಅದಕ್ಕೆಲ್ಲಾ ಕಾರಣ ಬಹುಶಃ ನನಗೆ ನನ್ನ ಬದುಕನ್ನು ಬದುಕುವ ಅದಮ್ಯ ಆಸೆ ಇದ್ದಿರಬಹುದು.‘ ಸಿಂಧುಚಂದ್ರ ಹೆಗಡೆ

ನಾನೆಂಬ ಪರಿಮಳದ ಹಾದಿಯಲಿ: ಇಷ್ಟೆಲ್ಲವಾದರೂ ನನಗೆ ನಾನಾರೆಂಬುದು ಬೇಕು
Follow us on

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ 

ಕವಿ ಲೇಖಕಿ ಸಿಂಧುಚಂದ್ರ ಹೆಗಡೆ ಅವರ ಆತ್ಮಾವಲೋಕನದ ಪಕಳೆಗಳು ನಿಮ್ಮ ಓದಿಗೆ…

ಅಗಾಧ ನೀಲಿ ಸಮುದ್ರ ಅದು, ನೋಡಿದಷ್ಟೂ ಉದ್ದಕ್ಕೂ ಸಮುದ್ರವೇ ಕಾಣುತ್ತದೆ ಅಲ್ಲಿ. ಉಡುಪಿ ಮತ್ತು ಭಟ್ಕಳದ ನಡುವೆ ಸಿಗುವ ಮರವಂತೆ ಬೀಚ್‍ ಅದು. ರಸ್ತೆಯ ಬದಿಯಲ್ಲೇ ಸಮುದ್ರ ನೋಡುವ ಸುಖ ಅಲ್ಲಿ. ಮಂಗಳೂರಿಗೆ ತೆರಳುವಾಗಲೆಲ್ಲಾ ಆ ಸಮುದ್ರ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದೆ ಹತ್ತಾರು ವರ್ಷಗಳ ಹಿಂದೆ. ಆದರೆ ಅದೇ ಸಮುದ್ರದ ದಂಡೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತೇನೆಂಬ ಕಲ್ಪನೆ ಚೂರೂ ಸುಳಿದಿರಲಿಲ್ಲ ಇಷ್ಟು ವರ್ಷಗಳಲ್ಲಿ. ಲಾಕ್‍ಡೌನ್‍ ಎಲ್ಲಾ ಮುಗಿದ ನಂತರ ಮಗಳನ್ನು ಮಂಗಳೂರಿನ ದೇರ್ಲಕಟ್ಟೆ ಹಾಸ್ಟೆಲ್​ನಲ್ಲಿ ಬಿಟ್ಟು ವಾಪಾಸಾಗುವ ಮಾರ್ಗದಲ್ಲಿ, ಮರವಂತೆ ಸಮುದ್ರದಂಡೆಯ ಮೇಲೆ ಕುಳಿತು ಸುಮಾರು ಹೊತ್ತು ಅಳುತ್ತಲೇ ಇದ್ದೆ. ಸಮುದ್ರ ಒಮ್ಮೆ ಸಂತೈಸುತ್ತಿತ್ತು, ಒಮ್ಮೆ ತಟ್ಟಿ ಬುದ್ದಿವಾದ ಹೇಳುತ್ತಿತ್ತು. ಏನಾದರೂ ಮಾಡಿಕೋ ಎಂಬಂತೆ ತನ್ನಷ್ಟಕ್ಕೆ ತಾನು ಬಂದು ಹೋಗಿ ಮಾಡುತ್ತಿತ್ತು. ನಾನು ಮಾತ್ರ ಮೂಗು ಕಣ್ಣು ಕೆಂಪು  ಮಾಡಿಕೊಂಡು ಅಳುತ್ತಲೇ ಇದ್ದೆ. ಆಚೀಚೆ ಕುಳಿತವರು ನೋಡಿಯಾರು ಎಂಬ ಪರಿವೆಯೂ ನನಗಿರಲಿಲ್ಲ. ಎಂತಹ ಸಂಕಟ ಅದು ಹದಿನೆಂಟು ವರ್ಷ ನನ್ನ ನೆರಳಿನಲ್ಲಿಟ್ಟುಕೊಂಡು ಸಾಕಿದ ಮಗಳನ್ನು ಹಾಸ್ಟೆಲ್ ಗೆ ಕಳಿಸುವುದು. ಇನ್ನು ಆಫೀಸ್ ಮುಗಿಸಿ ನಾನು ಮನೆಗೆ ಹೋದಾಗ ಅಲ್ಲಿ ಅವಳಿರುವುದಿಲ್ಲ ಎಂಬ ಸತ್ಯ ಅರಗಿಸಿಕೊಳ್ಳಲು ಸುಮಾರು ದಿನ ಬೇಕಾಯಿತು ನನಗೆ.

ವಿಚಿತ್ರ ಎನಿಸುತ್ತದೆ ನನಗೆ. ಮಕ್ಕಳು ಸಣ್ಣವರಿದ್ದಾಗ ಯಾವಾಗ ನನ್ನ ಸಮಯ ಅನ್ನುವುದು ಸಿಗುತ್ತದೋ ಎಂದು ಗೊಣಗಾಡುವ ನಾವು, ಅವರು ನಮ್ಮನ್ನು ಬಿಟ್ಟು ಹೊರಡುತ್ತಿದ್ದಂತೆ ಖಾಲಿಯಾಗತೊಡಗುತ್ತೇವೆ. ನನಗೆ ಯಾವಾಗಲೂ ಕಾಡುವ ನೆನಪೆಂದರೆ, ಮಗಳು ಹುಟ್ಟುವ ಪೂರ್ವದಲ್ಲಿ ನನಗೀಗಲೇ ಮಗು ಬೇಡ ಎಂದು ಡಾಕ್ಟರ್ ಎದುರು ಅತ್ತವಳು ನಾನು. ಇದೇನಿದು ವಿವಾಹಪೂರ್ವದಲ್ಲಿ ಗರ್ಭಿಣಿಯರಾಗುವ ಕಾಲೇಜ್ ಹುಡುಗಿಯರು ಅತ್ತಂತೆ ಅಳುತ್ತಿದ್ದೀರಲ್ಲಾ? ಇಪ್ಪತ್ತೆರಡನೇ ವಯಸ್ಸಿಗೆ ಅಮ್ಮಆಗುತ್ತಿದ್ದೀರಿ ಖುಷಿ ಪಡಿ! ಮಗು ಬೇಗ ದೊಡ್ಡದಾಗುತ್ತದೆ, ಪುನಃ ಪ್ರಪಂಚ ನಿಮ್ಮ ತೆಕ್ಕೆಯಲ್ಲಿರುತ್ತದೆ. ಬಹಳ ಚಿಂತೆ ಮಾಡಬೇಡಿ ಎಂದು ಡಾಕ್ಟರ್ ನಗುತ್ತಾ ಸಮಾಧಾನ ಮಾಡಿದ್ದರು. ಸುಮಾರು ಐದು ತಿಂಗಳಾಗುವವರೆಗೆ ತನ್ನಿಂತಾನೇ ಮಗು ಹೋದರೆ ಹೋಗಿಬಿಡಲಿ ಎಂದುಕೊಳ್ಳುತ್ತಾ ಜೋರಾಗಿ ಸ್ಕೂಟಿ ಓಡಿಸುತ್ತಿದ್ದೆ. ಹಂಪ್ಸ್ ಮೇಲೆ ಹಾರಿಸುತ್ತಿದ್ದೆ. ಅದಕ್ಕೆಲ್ಲಾ ಕಾರಣ ಬಹುಶಃ ನನಗೆ ನನ್ನ ಬದುಕನ್ನು ಬದುಕುವ ಅದಮ್ಯ ಆಸೆ ಇದ್ದಿರಬಹುದು.

ಹೈಸ್ಕೂಲಿನ ದಿನಗಳಿಂದ ಕವಿತೆ ಬರೆಯುತ್ತಾ ಬೆಳೆದವಳು, ಕಾಲೇಜಿನ ವೇದಿಕೆಗಳಲ್ಲಿ ಚರ್ಚಾಪಟು ಎನಿಸಿಕೊಂಡವಳು, ಮದುವೆಯ ಯಕಶ್ಚಿತ್ ಕಲ್ಪನೆಯನ್ನೂ ತಲೆಯಲ್ಲಿ ಹೊಂದದವಳು, ಏಕೆ ಚಂದ್ರನನ್ನು ಭೇಟಿಯಾದ ಕೂಡಲೇ ಬದಲಾದೆ? ಜರ್ನಲಿಸಂ ಎಂ. ಎ ಮಾಡಿ ಬರೆದು ಗುಡ್ಡ ಹಾಕಬೇಕೆಂದುಕೊಂಡವಳು, ಡಿಗ್ರಿ ಮುಗಿದ ವರ್ಷವೇ ಏಕೆ ಮದುವೆ ಆದೆ? ಎಂಬುದು ಇಂದಿಗೂ ಉತ್ತರ ಸಿಗದ ಪ್ರಶ್ನೆ. ಇಪ್ಪತ್ತೊಂದು ವರ್ಷಗಳ ಹಿಂದೆಯೇ ಅಪ್ಪನ ಅಭಿಲಾಷೆಯಂತೆ ರಿಜಿಸ್ಟರ್ ಮದುವೆಯಾದ ನನಗೆ, ಮದುವೆಯ ದಿನವೇ ಯಾರೋ ಹಿರಿಯರು, ಚಂದ್ರನನ್ನು ಹಾಗೇ ಚಂದ್ರು, ಚಂದ್ರು ಎಂದು ಹೆಸರಿಡಿದು ಕರೆಯಬೇಡ. ಇಷ್ಟು ದಿನ ಪರವಾಗಿರಲಿಲ್ಲ, ಇನ್ನುಇದು ಚಂದ ಕಾಣಿಸುವುದಿಲ್ಲ ಎಂದು ಹೇಳಿದಾಗ ಮದುವೆಯ ಹೆಬ್ಬಾಗಿಲ ಪಟ್ಟಿ ಹೆಬ್ಬೆರೆಳಿಗೆ ಜಪ್ಪಿದಂತಾಗಿತ್ತು.

ಡಿಗ್ರಿ ಮುಗಿದ ವರ್ಷವೇ ಬ್ಯಾಂಕಿನಲ್ಲಿ ಕೆಲಸ, ನಂತರ ಮದುವೆ, ಮಾರನೇ ವರ್ಷವೇ ಮಗಳು, ಹೀಗೆ ಯಾವುದಕ್ಕೂ ಕೊರತೆ ಇಲ್ಲದ ಆದರೆ ನನ್ನ ಬರವಣಿಗೆಯ ಕನಸು ಅಟ್ಟಕ್ಕೆ ಸೇರಿದ ಬದುಕು ನಗುತ್ತಿತ್ತು. ಸಣ್ಣದಾಗಿ ಅಣಕಿಸುತ್ತಿತ್ತು. ಮಗಳು ಸಣ್ಣವಳಿದ್ದಾಗ ಅವಳಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ, ಮಗಳು ಅಜ್ಜಅಜ್ಜಿಯ ಬಳಿ ಬೆಳೆಯಲಿ ಎಂದು ಶಿರಸಿ ಪಟ್ಟಣದಿಂದ ಎಂಟು ಕಿಮೀ ದೂರ ಇರುವ ಹಳ್ಳಿಗೆ ಶಿಫ್ಟ್ ಆದೆವು. ಆಗ ಬದುಕು ಸಾವಕಾಶವಾಗಿ ತನ್ನ ರಂಗನ್ನು ಬಿಡತೊಡಗಿತ್ತು. ಮಗಳಿಗಾಗ ಒಂಬತ್ತು ತಿಂಗಳು. ನಾನು ಬೆಳಿಗ್ಗೆ ಬ್ಯಾಂಕಿಗೆ ಹೋದರೆ ಸಂಜೆ ಏಳಾಗುತ್ತಿತ್ತು ಮನೆ ತಲುಪುವುದು. ಬ್ಯಾಂಕಿನಲ್ಲಿ ಕೆಲಸದ ಒತ್ತಡ, ಮನೆಗೆ ಬಂದಕೂಡಲೇ ಹಳ್ಳಿಮನೆಯ ವಿಶೇಷತೆಗಳು, ಮಗಳ ಆಟ, ಊಟ. ಒಟ್ಟಾರೆಯಾಗಿ ನನಗಾಗಿ ಎಂದೂ ಒಂದು ಕ್ಷಣವೂ ಇರುತ್ತಿರಲಿಲ್ಲ. ಬರಹ, ಓದು ಅಂತೂ ಮರೆತೇ ಹೋಗಿತ್ತು. ಶಿರಸಿಯಲ್ಲಿ ನಡೆಯುತ್ತಿದ್ದ ಯಾವುದಾದರೂ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೋಗೋಣವೆಂದರೂ ರಾತ್ರಿಯಾದ ನಂತರ ಹಳ್ಳಿಹಾದಿಯಲ್ಲಿ ಒಬ್ಭಳೇ ಸ್ಕೂಟಿಯಲ್ಲಿ ಬರುವುದು ಸೂಕ್ತವಲ್ಲ ಎಂಬ ಪುಕ್ಕಟೆ ಸಲಹೆಗಳು ತೂರಿ ಬಂದವು. ಜೊತೆಗೆ ಮಗಳ ಮೋಹ ಒಂದೆಡೆ ಸೆಳೆಯುತ್ತಿತ್ತು. ಆಗಾಗ ಸಿಡಿಮಿಡಿಗೊಳ್ಳುತ್ತಿದ್ದ ಮನಸ್ಸುಅಲ್ಲಿಯೇ ತಣ್ಣಗೂ ಆಗುತ್ತಿತ್ತು. ಈ ಜಂಜಾಟದ ನಡುವೆಯೇ ಒಂದಷ್ಟು ಕವಿತೆಗಳನ್ನು ಬರೆದು ಜಯಂತ ಕಾಯ್ಕಿಣಿ ಅವರ ಸಂಪಾದಕತ್ವದ ‘ಭಾವನಾ’ ಗೆ ಕಳಿಸಿದೆ. ನಾಲ್ಕು ಕವಿತೆಗಳು ಒಟ್ಟಿಗೆ ಪ್ರಕಟವಾಗಿದ್ದವು.

ಅದರಲ್ಲಿ ವಜ್ಜೆ ಎನ್ನುವ ಕವಿತೆಯ ಸಾಲು ಹೀಗಿತ್ತು

ಅಂದಿನಷ್ಟು ನನ್ನ ಹೆಜ್ಜೆಗಳು ಚುರುಕಾಗಿಲ್ಲಇಂದು
ಕಾಲುಂಗುರಗಳು ಕಚ್ಚುತ್ತಿರಬೇಕು.
ನಿನ್ನೆಯಷ್ಟು ನನ್ನ ಕೈ ಗೀಚುವುದಿಲ್ಲ ಇಂದು
ಗಾಜಿನ ಬಳೆಗಳ ಕಿರಿಕಿರಿ ಹೆಚ್ಚಾಗಿರಬೇಕು
ಕುತ್ತಿಗೆಯೂ ನೆಟ್ಟಗೆ ದಿಟ್ಟವಾಗಿಲ್ಲವಲ್ಲಾ
ಕರಿಮಣಿಗಳ ವಜ್ಜೆಗಲ್ಲವಷ್ಟೇ?

ಈ ಕವಿತೆಯನ್ನು ಓದಿದ್ದ ಸುನಂದಾ ಕಡಮೆಯವರು ‘ಭಾವನಾ’ದ ನಂತರದ ಸಂಚಿಕೆಯ ಓದುಗರ ವಿಭಾಗದಲ್ಲಿ ಚಂದದ ಪ್ರತಿಕ್ರಿಯೆ ನೀಡಿದ್ದರು. ನಾನು ಹೇಳಿಕೊಳ್ಳಲಾರದ ಒಳನೋವನ್ನು ಸಿಂಧುರವರ ಕವಿತೆಗಳು ಸರಳವಾಗಿ ಹೊರಗೆಡಹಿವೆ ಎಂದು ಅವರು ಬರೆದಿದ್ದರು. ಅವರ ಪ್ರತಿಕ್ರಿಯೆ ನನ್ನನ್ನು ಮತ್ತಷ್ಟು ಬರೆಯಲು ಪ್ರೇರೇಪಿಸಿದರೂ, ಬೇರೆಯವರ ನೋವಿಗೂ ನಲಿವಿಗೂ ನಮ್ಮೊಳಗಿಗೂ ಅಕ್ಷರರೂಪ ನೀಡಬಲ್ಲಂತಹ ಶಕ್ತಿ ನನ್ನ ಬಳಿ ಇದೆ ಎಂಬುದು ಗೊತ್ತಿದ್ದೂ ಏನನ್ನೂ ಬರೆಯಲಾಗದಂತಹ ಸ್ಥಿತಿ. ಕವಿತೆ ಬರೆಯಲು, ಕತೆ ಬರೆಯಲು ಧ್ಯಾನಸ್ಥರಾಗಬೇಕು ಎನ್ನುತ್ತಾರೆ, ಮೆದುಳನ್ನು ಹಿಂಡುವಂತಹ ಕಾರ್ಯಕ್ಷೇತ್ರ, ಪುಟ್ಟ ಮಗಳು, ಬೇರೆ ಊರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರ, ಮನೆ ಮತ್ತು ಬ್ಯಾಂಕ್ ನಡುವೆ ಈ ಸಾಹಿತ್ಯ, ಕಾರ್ಯಕ್ರಮ ಎಂದೆಲ್ಲಾ ಒದ್ದಾಡುವ ಅಗತ್ಯವಾದರೂ ಏನು ಅಂದು ಪ್ರಶ್ನಿಸುವ ಅತ್ತೆ ಮಾವ. ಇವರೆಲ್ಲರ ಮಧ್ಯೆ ಕುಳಿತು ಕವಿತೆ ಬರೆಯುವುದೆಂದರೆ ನನಗದು ಸುಲಭದ ಕೆಲಸವಾಗಿರಲಿಲ್ಲ ನನಗೆ.

ಪೇಟೆಯಲ್ಲಿ ಹುಟ್ಟಿ ಬೆಳೆದಿದ್ದ ನನಗೆ ಹಳ್ಳಿಮನೆ ಬದುಕಿನ ಮತ್ತೊಂದು ಮಗ್ಗುಲನ್ನು ಪರಿಚಯಿಸಿತ್ತು. ಮಳೆಗಾಲದಲ್ಲಿ ಮನೆಯವರೆಗೆ ಸ್ಕೂಟಿ ಹೋಗುತ್ತಿರಲಿಲ್ಲ, ಅದನ್ನು ಬೇರೆಯವರ ಮನೆಯಲ್ಲಿಟ್ಟು ಗದ್ದೆಯಲ್ಲಿ ನಡೆದುಕೊಂಡು ಹೋಗುವಂತೆ ಮಣ್ಣಿನ ರಸ್ತೆಯಲ್ಲಿ ಪಚಪಚ ಮಾಡುತ್ತಾ ನಡೆಯುವಾಗ, ಬಿಳಿಹುಲ್ಲಿನ ಲಾರಿ ರಸ್ತೆಗಡ್ಡವಾಗಿ ನಿಂತು ಹುಲ್ಲನ್ನು ಇಳಿಸಿ ಮುಗಿಯುವವರೆಗೆ ನಾನು ಬ್ಯಾಂಕಿಗೆ ಹೊತ್ತಾಯಿತೆಂದು ವಿಲವಿಲ ಒದ್ದಾಡುವಾಗ, ನೀನೇಕೆ ಕಾಲುಂಗುರ ಧರಿಸುವುದಿಲ್ಲ ಎಂದು ವಿಚಿತ್ರವಾಗಿ ನೋಡುವ ಹಳೇ ಅಜ್ಜಿಯಂದಿರ ಕೈಗೆ ಸಿಲುಕಿಕೊಂಡಾಗ, ಹೀಗೆ ಬಹಳ ತಿರುವುಗಳಲ್ಲಿ ನನ್ನ ಒಳಮನಸ್ಸು ಬರವಣಿಗೆಯ ಬೇಗುದಿಯಲ್ಲಿ ಬೇಯುತ್ತಲೇ ಇತ್ತು. ಮಧ್ಯೆ ಮಧ್ಯೆ ‘ಓ ಮನಸೇ’, ‘ಹಾಯ್ ಬೆಂಗಳೂರ್’ ವಾರಪತ್ರಿಕೆಗಳಲ್ಲಿ ಏನೇನೋ ಬರೆದೆ. ಸಮಾಜಶಾಸ್ರ್ತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದೆ. ಆದರೂ ಸಮಾಧಾನವಿರಲಿಲ್ಲ. ಬಹುಶಃ 2005ರಲ್ಲಿ ಈಟಿವಿ ಆಯೋಜಿಸಿದ್ದ ಪರಿಪೂರ್ಣ ಮಹಿಳೆ ಕಾರ್ಯಕ್ರಮದಲ್ಲಿ ಫೈನಲ್ ಹಂತ ತಲುಪಿದ್ದೆ. ಅಲ್ಲಿ ಪ್ರತಿಭಾ ನಂದಕುಮಾರ್, ಮತ್ತಿತರ ಯಶಸ್ವಿ ಮಹಿಳೆಯರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅಲ್ಲಿ ಸ್ಫರ್ಧೆಗಾಗಿ ಬಂದಂತಹ ಬೇರೆ ಬೇರೆ ರೀತಿಯ ಮಹಿಳೆಯರು, ಅವರ ಹಿನ್ನೆಲೆ, ಅವರ ನೋವು ಇವೆಲ್ಲವನ್ನೂ ಕೇಳುತ್ತಾ, ನನ್ನ ಬದುಕು ನನ್ನ ಮೇಲೆ ಅಷ್ಟೇನೂ ಮುನಿಸಿಕೊಂಡಿಲ್ಲಎಂದು ಸಮಾಧಾನಪಟ್ಟುಕೊಂಡೆ.

ಮಗಳು ಸಣ್ಣವಳಿದ್ದಾಗ, ಬೆಳಿಗ್ಗೆ ಮನೆ ಬಿಟ್ಟರೆ ಸಂಜೆ ಮನೆ ಸೇರುತ್ತಿದ್ದೆಎಂದು ಮೊದಲು ಹೇಳಿದ್ದೇನೆ, ಆ ಸಮಯದಲ್ಲಿ ಆದ ದೊಡ್ಡ ತೊಂದರೆ ಎಂದರೆ ಎದೆ ಹಾಲಿನದು. ಮಧ್ಯಾಹ್ನ ಮನೆಗೆ ಹೋಗುವಂತಿಲ್ಲ, ಹೋಗದಿದ್ದರೆ ಎದೆ ಕಟ್ಟಿಕೊಂಡು ಹಾಲು ಹರಿದು ಆಫೀಸಿನಲ್ಲಿ ಮುಜುಗರ ಎನಿಸುತ್ತಿತ್ತು. ಅದಕ್ಕಾಗಿ ನಾನು ತೆಗೆದುಕೊಂಡ ತೀರ್ಮಾನವೇ ವಿಚಿತ್ರವಾಗಿತ್ತು. ಮಗಳಿಗೆ 9ನೇ ತಿಂಗಳಿಗೇ ಎದೆಹಾಲನ್ನು ಬಿಡಿಸಬೇಕೆಂದು ತೀರ್ಮಾನಿಸಿ, ಎದೆಹಾಲು ಬತ್ತುವಂತೆ ಮಾಡಲು ಗೈನಕಾಲಜಿಸ್ಟ್ ಬಳಿ ಹೋಗಿ ಒಂದು ಇಂಜೆಕ್ಷನ್ನನ್ನು ತೆಗೆದುಕೊಂಡಿದ್ದೆ. ಅದರಿಂದ ಎದೆಯ ನರಗಳೆಲ್ಲಾ ಗಂಟುಗಂಟಾಗಿ ಸಿಕ್ಕಾಪಟ್ಟೆ ನೋವು ಅನುಭವಿಸಬೇಕಾಗಿ ಬಂದಿತು. ಮಗಳು ಬೇರೆ ಬಾಟಲಿ ಹಾಲನ್ನುಕುಡಿಯದೇ, ನಿಪ್ಪಲ್ ಹಾಕಿದ ಬಾಟಲಿ ನೀಡಿದರೆ ದೂರ ಬಿಸಾಕಿ ಘನಘೋರ ಚಳವಳಿ ನಡೆಸಿದ್ದಳು. ಅದ್ಹೇಗೆ ಈ ಎಲ್ಲಾ ಘಟ್ಟಗಳನ್ನು ದಾಟಿದೆ ಎಂದು ಹಿಂದಿರುಗಿ ನೋಡಿದಾಗ, ನನಗರಿವಿಲ್ಲದಂತೆ ಮುಗುಳ್ನಗು ಹಾಜರಾಗುತ್ತದೆ.

ಮುಂದೆ ಮಗಳನ್ನು ಮೂರು ವರ್ಷಕ್ಕೇ ಪ್ರಿ ನರ್ಸರಿಗೆ ಹಾಕಿದೆ. ಬ್ಯಾಂಕಿಗೆ ಹೋಗುವ ಗಡಿಬಿಡಿಯಲ್ಲಿ ಕಾಲುಚೀಲದೊಳಗೆ ಕಂಬಳಿಹುಳವಿದ್ದುದ್ದನ್ನು ಗಮನಿಸದೇ ಅವಳಿಗೆ ತೊಡಿಸಿ, ಬೂಟು ಹಾಕಿಬಿಟ್ಟಿದ್ದೆ. ಅವಳು ಅನುಭವಿಸಿದ್ದ ಆ ನೋವಿಗೆ, ನಾನು ನನ್ನನ್ನು ಎಂದಿಗೂ ಕ್ಷಮಿಸಿಕೊಳ್ಳುವದಿಲ್ಲ. ನೆನಪಾದಾಗೆಲ್ಲಾ ಕಣ್ಣಲ್ಲಿ ನೀರಾಡುತ್ತದೆ. ಧಾವಂತದ ಬದುಕೆಂಬುದು ನಮ್ಮಿಂದ ಏನೆಲ್ಲಾ ತಪ್ಪುಗಳನ್ನು ಮಾಡಿಸುತ್ತದೆ ಎಂದು ನೆನೆದು ಒಮ್ಮೊಮ್ಮೆ ಅಸಹಾಯಕಳಾಗಿಬಿಡುತ್ತೇನೆ. ನಾನು ಮರೆಯಲಾರದ ಮತ್ತೊಂದು ಸಂಗತಿಯೆಂದರೆ, ಮಗಳು ಒಂದನೇ ಕ್ಲಾಸ್‍ ಇದ್ದಾಗ ಶಾಲೆಯ ವ್ಯಾನ್​ ಡ್ರೈವರ್ ಅವಳನ್ನು ಶಾಲೆಯಲ್ಲಿಯೇ ಬಿಟ್ಟು ಹೋಗಿದ್ದು. ಮಗಳನ್ನು ನಿತ್ಯ ಹಳ್ಳಿಯಿಂದ ಪೇಟೆ ಶಾಲೆಗೆ ಕರೆದೊಯ್ಯಲು ಒಂದು ವ್ಯಾನ್ ಬರುತ್ತಿತ್ತು. ಒಂದು ದಿನ ಅವನು ಮಗಳನ್ನು ಶಾಲೆಯಲ್ಲಿಯೇ ಬಿಟ್ಟು ಹೊರಟುಹೋಗಿದ್ದ. ಐದೂವರೆ ವರ್ಷದ ಪೋರಿಯ ಕೈ ಹಿಡಿದುಕೊಂಡು ಶಾಲೆಯ ಆಫೀಸ್‍ ಕ್ಲರ್ಕ್​ ನನ್ನ ಬ್ಯಾಂಕಿಗೆ ಮಗಳನ್ನು ಕರೆತಂದಿದ್ದ. ಇವಳು ಶಾಲೆಯ ಮೆಟ್ಟಿಲ ಮೇಲೆ ಒಬ್ಬಳೇ ಕುಳಿತಿದ್ದಳು ಎಂದು ಹೇಳಿದ್ದ ಆತ. ಇಂತಹ ಘಟನೆಗಳೆಲ್ಲಾ ಜರುಗಿದಾಗ ನಾನು ಮಗಳನ್ನು ಸರಿಯಾಗಿ ನೋಡಿಕೊಳ್ಳಲಾರದ ತಾಯಿ ಆದೆನೆ? ನಾನೇ ಮಗಳನ್ನು ಶಾಲೆಯಿಂದ ಕರೆತರುವ ಹಾಗಿದ್ದರೆ ಇಂತಹ ಘಟನೆ ಆಗುತ್ತಿರಲಿಲ್ಲ ಅಲ್ಲವೇ? ಎಂದೆಲ್ಲಾ ಪ್ರಶ್ನಿಸಿಕೊಳ್ಳುತ್ತಾ ಸರಿಯಾದ ಉತ್ತರ ಸಿಗದೆ ವಿಲವಿಲ ಒದ್ದಾಡುತ್ತಾ ನನ್ನ ಬರವಣಿಗೆ, ನನ್ನ ಪುಸ್ತಕ, ನನ್ನಕಾರ್ಯ ಒತ್ತಡಗಳ ನಡುವೆ ಮಗಳಿಗೆ ಪೂರ್ತಿ ದಕ್ಕಲಿಲ್ಲವಲ್ಲ ನಾನು ಎಂಬ ವಿಷಾದದಲ್ಲಿ ಕುಗ್ಗಿ ಹೋಗುವುದು ಕೂಡ ಸುಳ್ಳಲ್ಲ.

ಒಮ್ಮೆ ರಂಗಕರ್ಮಿ ಶ್ರೀಪಾದ ಭಟ್ಟರು ಚಿತ್ರಾಂಗದಾ ನಾಟಕಕ್ಕಾಗಿ ನನಗೊಂದು ಪಾತ್ರ ನೀಡಿ ಆಹ್ವಾನಿಸಿದ್ದರು. ನಾನು ನಾಟಕದಲ್ಲಿ ನಟಿಸುವ ಉಮೇದಿಯಲ್ಲಿ ಹಿಂದೆಮುಂದೆ ಯೋಚಿಸದೇ ಒಪ್ಪಿಕೊಂಡು ಬಂದಿದ್ದೆ. ಆಗ ಮಗಳು 6ನೇ ತರಗತಿಯಲ್ಲಿದ್ದಳು. ಮನೆಗೆ ಬಂದ ಕೂಡಲೇ ಇನ್ನೊಂದು ವಾರ ನಾನು ಬ್ಯಾಂಕಿನ ಅವಧಿಯ ನಂತರ ನಾಟಕ ಪ್ರಾಕ್ಟೀಸಿಗಾಗಿ ತೆರಳುವುದಾಗಿ ಹೇಳಿದ ಕೂಡಲೇ ಇವಳು ನನಗೆ ವಾರ್ಷಿಕ ಪರೀಕ್ಷೆಯಿದೆ, ನೀನಿಲ್ಲದೆ ನಾನು ರಿವಿಜನ್ ಹೇಗೆ ಮಾಡುವುದು? ಎಂದು ಕಣ್ಣಲ್ಲಿ ನೀರು ತುಂಬಿಕೊಂಡಳು. ನನಗೆ ಆಗ ಅನಿಸಿದ್ದು, ಓರ್ವ ಮಹಿಳೆ ಸಂಪೂರ್ಣವಾಗಿ ಎಲ್ಲಾ ನಿರ್ಣಯಗಳನ್ನು ಒಬ್ಬಳೇ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ, ಎಲ್ಲವನ್ನೂ ತಾಯಿಯಾಗಿ ಕೂಡ ಯೋಚಿಸಬೇಕಾದ ಅನಿವಾರ್ಯತೆ ಇರುತ್ತದೆ ಎಂದು. ಕಡೆಗೆ ನಾನು ಆ ನಾಟಕದಿಂದ ಹಿಂದೆ ಸರಿದುಕೊಂಡೆ.

ಫಾರ್ಮಾಸ್ಯುಟಿಕಲ್‍ ಕಂಪನಿಯಲ್ಲಿಏರಿಯಾ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರ, ಊರಿಂದ ಊರಿಗೆ ಹೋಗುತ್ತಾ ಕಂಪನಿಯವರು ಹೇಳಿದಾಗಲೆಲ್ಲಾ ಬೆಂಗಳೂರಿನಲ್ಲೋ, ಹೈದರಾಬಾದಿನಲ್ಲೋ ಮೀಟಿಂಗ್​ಗಳನ್ನು ನಿರಾಳವಾಗಿ ಅಟೆಂಡ್ ಮಾಡುತ್ತಿದ್ದರು. ಆದರೆ, ಅಪರೂಪಕ್ಕೊಮ್ಮೆ ನಾನು ದೂರದೂರಿಗೆ ತರಬೇತಿಗೆ ಹೋಗುವ ಸಂದರ್ಭ ಬಂದಾಗ, ಮಗಳನ್ನು ಬಿಟ್ಟು ಹೋಗಬೇಕಲ್ಲಾ ಎಂದು ತಹತಹಿಸುತ್ತ ನಿಟ್ಟುಸಿರು ಹಾಕಿದ್ದಿದೆ.

ಇದೆಲ್ಲಾ ಹಳಹಳಿಕೆಗಳ ನಡುವೆ ಬರೆಯಬೇಕಿದೆ, ಓದಬೇಕಿದೆ, ಸಿನೇಮಾ ನೋಡಬೇಕಿದೆ, ಟ್ರೆಕ್ಕಿಂಗ್ ಮಾಡಬೇಕಿದೆ, ದೇಶ ಸುತ್ತಬೇಕಿದೆ. ಓಹ್ ಬದುಕು ಎಷ್ಟು ವೇಗವಾಗಿ ಸಾಗುತ್ತಿದೆ ಎನಿಸುತ್ತಿದೆ. ಈಗ ಮಗಳು ಹಾಸ್ಟೆಲ್​ನ ಮೆಟ್ಟಿಲಲಿ ನಿಂತು, ನನ್ನಂತೆಯೇ ಇಲ್ಲಿ ಬಹಳ ಹುಡುಗಿಯರಿದ್ದಾರೆ, ನಾನೊಬ್ಬಳೇ ಅಲ್ಲ, ನೀ ಹೋಗು ಮಾರಾಯ್ತಿ ಎಂದು ಹೇಳುವಾಗ, ರಸ್ತೆ ಮಧ್ಯೆ ಸಿಗುವ ಸಮುದ್ರ ನಸುನಗುತ್ತಾ ಸಂತೈಸುವಾಗ, ರಾಶಿ ಟೈಮಿದೆ ಈಗ ನಿನ್ನ ಬಳಿ ತಗೋ ಎಂದು ಬದುಕು ವ್ಯಂಗ್ಯ ಮಾಡುತ್ತಿದೆಯೇನೋ ಅನಿಸುತ್ತಿದೆ.

ಅಲ್ಲಿದೆ ಅಮ್ಮನ ಮನೆ, ಇಲ್ಲಿದೆ ಗಂಡನ ಮನೆ
ನನಗೆ ನನ್ನ ಮನೆ ಬೇಕು
ನನಗೊಂದು ಕಾಯಂ ವಿಳಾಸ ಬೇಕು
ಅವನ ಹೆಂಡತಿ, ಇವನ ಮಗಳು
ಪುಟ್ಟಿಯ ಅಮ್ಮಎಲ್ಲವೂ ಹೌದು
ಆದರೂ ನನಗೆ ನಾನಾರೆಂಬುದು ಬೇಕು

ಹೀಗೆ ಬರೆಯುತ್ತ ಭಾವನಾತ್ಮಕ ನೆಲೆಯ ನಡುವೆ ನಿಂತು ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದೆಂದರೆ ಅಷ್ಟು ಸುಲಭವಲ್ಲಎಂದೇ ನನಗನಿಸುತ್ತದೆ.

***

ಪರಿಚಯ: ಸಿಂಧುಚಂದ್ರ ಹೆಗಡೆ ಅವರು ಸದ್ಯ ಶಿರಸಿಯ ಕೆಡಿಸಿಸಿ ಬ್ಯಾಂಕ್​ನಲ್ಲಿ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ನಗುತ್ತೇನೆ ಮರೆಯಲ್ಲಿ’, ‘ರಸ್ತೆಯಲ್ಲಿಯೇ ಮೇ ಫ್ಲವರ್’, ‘ಸೂಜುಮೆಣಸು ಕೆಸುವಿನೆಲೆ’ ಇವು ಮೂರು ಕವನ ಸಂಕಲನಗಳು. ‘ಕನಸಿನ ಕಾಡಿಗೆ’ ಕಥಾ ಸಂಕಲನ.  ‘ಬಿಳಿ ಜುಮಕಿ ಮತ್ತು ಹರಳುಗಳು’ ಲೇಖನಗಳ ಸಂಗ್ರಹ. ಕಥಾ ಸಂಕಲನಕ್ಕೆ ಕರ್ನಾಟಕ ಸಂಘದ ಎಂ. ಕೆ. ಇಂದಿರಾ ಪ್ರಶಸ್ತಿ ಹಾಗೂ ಧಾರವಾಡ ಅವನಿ ರಸಿಕರ ರಂಗದ ದೇವಾಂಗನಾ ಪ್ರಶಸ್ತಿ ದೊರೆತಿದೆ. ಬರವಣಿಗೆಯೊಂದಿಗೆ ಸಂಗೀತ,ನೃತ್ಯ, ಚಿತ್ರಕಲೆ, ಪ್ರವಾಸ, ಇನ್ನಿತರ ಹವ್ಯಾಸಗಳು ಇವರವು.

ನಾನೆಂಬ ಪರಿಮಳದ ಹಾದಿಯಲಿ: ಯಾವುದೂ ಥಟ್ ಅಂತ ನಮ್ಮ ಉಡಿಗೆ ಬಂದು ಬೀಳದು

Published On - 1:51 pm, Fri, 29 January 21